‘ಮಂಗಳ‘ನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದಕ್ಕೆ ಸಾಕ್ಷ್ಯಾಧಾರ ಕೊಟ್ಟ ನಾಸಾ ರೋವರ್

ವಾಷಿಂಗ್ಟನ್: ಕೆಂಪುಗ್ರಹ 'ಮಂಗಳ'ನ ಅಧ್ಯಯನ ನಡೆಸುತ್ತಿರುವ ನಾಸಾದ ಪರ್ಸಿವಿರೆನ್ಸ್ ರೋವರ್ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಅಲ್ಲಿನ ಕಲ್ಲು, ಮಣ್ಣು ಮಾದರಿಯನ್ನು ಸಂಗ್ರಹಿಸಿದೆ.
ಈ ನಿಟ್ಟಿನಲ್ಲಿ ಮಂಗಳನಲ್ಲಿ ಹಿಂದೊಮ್ಮೆ ಜೀವಿಗಳು ಇದ್ದವು ಎಂಬುದರ ಅನುಮಾನಗಳಿಗೆ ಪರ್ಸಿವಿರೆನ್ಸ್ ರೋವರ್ ಬಗೆದಿರುವ ಕಲ್ಲಿನ ಮಾದರಿಯಲ್ಲಿ ಉತ್ತರ ದೊರಕಬಹುದು ಎಂಬ ಅಭಿಲಾಷೆಯನ್ನು ನಾಸಾ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
‘ಸದ್ಯ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪರ್ಸಿವಿರೆನ್ಸ್ ರೋವರ್ ಅಗೆದಿರುವ ಕಲ್ಲಿನ ಮಾದರಿಯಲ್ಲಿ ಮಂಗಳನ ಅಂಗಳದಲ್ಲಿ ಬಹಳ ಹಿಂದೆ ಭೂ ವಾತಾವರಣ ಇತ್ತು ಎಂಬ ನಮ್ಮ ಅನುಮಾನಕ್ಕೆ ಬಲವಾದ ಸಾಕ್ಷ್ಯಾಧಾರ ನೀಡಲಿದೆ. ಅಲ್ಲಿ ನೀರು ಕೂಡ ಇತ್ತು ಎಂಬ ಸಂದೇಹದ ಬಗ್ಗೆಯೂ ಉತ್ತರ ನೀಡಲಿದೆ ಎಂದು ನಾಸಾ ಯೋಜನಾ ವಿಜ್ಞಾನಿ ಕೆನ್ ಪಾರ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
This week...
🔴 @NASAPersevere collects its first Martian rock samples
🚀 @NASAWebb targets a Dec. 18, 2021 launch
👨🚀 @Space_Station crews perform two spacewalksAnd more! Dive into the details in this new episode of This Week at NASA: https://t.co/t5nTtqBXBJ pic.twitter.com/vNtfCocZ28
— NASA (@NASA) September 11, 2021
ಇದೇ ಮೊದಲ ಬಾರಿಗೆ ಅನ್ಯಗ್ರಹದಲ್ಲಿ ಬಂಡೆಯನ್ನು ಕೊರೆದು ಅದರ ಮಾದರಿಯನ್ನು ಸಂಗ್ರಹಿಸಿರುವ ಕಾರ್ಯಾಚರಣೆ ನಡೆಸಲಾಗಿದೆ. 'ನಾನು ಬಂಡೆಯನ್ನು ಕೊರೆದು ಮಾದರಿ ತೆಗೆದು, ಅದನ್ನು ಮುಚ್ಚಿಟ್ಟು ಸಂಗ್ರಹಿಸಿಟ್ಟಿರುವೆ' ಎಂದು ಪರ್ಸಿವಿರೆನ್ಸ್ ರೋವರ್‌ನ ಪರವಾಗಿ ನಾಸಾ ಹೇಳಿತ್ತು.
ಸೆಪ್ಟೆಂಬರ್ 1ರಂದೇ ರೋವರ್ ಕಲ್ಲಿನ ಮಾದರಿಯನ್ನು ಸಂಗ್ರಹಿಸಿದೆ. ಆದರೆ, ಮಂದ ಬೆಳಕಿನಲ್ಲಿ ತೆಗೆದಿರುವ ಚಿತ್ರಗಳು ಲಭ್ಯವಿದ್ದರಿಂದ ನಾಸಾ ಕಲ್ಲು ಸಂಗ್ರಹದ ಕುರಿತು ಖಚಿತ ಪಡಿಸಿರಲಿಲ್ಲ. ಈ ರೋವರ್ ಹೊಸ ಚಿತ್ರಗಳನ್ನು ಕಳುಹಿಸಿದ್ದು, ಕಲ್ಲಿನ ಮಾದರಿಯನ್ನುಒಳಗೊಂಡ ನಳಿಕೆಯನ್ನು ಪರ್ಸಿವಿರೆನ್ಸ್ ತನ್ನ ಪ್ರಯೋಗಾಲಯದ ಪೆಟ್ಟಿಗೆಯೊಳಗೆ ಸೇರಿಸಿದೆ. ಅಲ್ಲಿ ಕಲ್ಲಿನ ಚಿತ್ರಗಳನ್ನು ತೆಗೆಯುವುದು ಮತ್ತು ಅಳೆತೆ ಮಾಡಿ ಗಾಜಿನ ನಳಿಕೆಯಲ್ಲಿ ಮುಚ್ಚಿಡುತ್ತದೆ.
'ಇದು ಅದ್ಭುತ ಸಾಧನೆಯಾಗಿದೆ ಹಾಗೂ ಪರ್ಸಿವಿರೆನ್ಸ್ ಮತ್ತು ನಮ್ಮ ತಂಡ ನಡೆಸಿರುವ ಶೋಧನೆಗಳನ್ನು ಕಾಣಲು ಹೆಚ್ಚು ಕಾಯಲು ಸಾಧ್ಯವಾಗುತ್ತಿಲ್ಲ' ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಅಭಿಪ್ರಾಯ ಪಟ್ಟಿದ್ದಾರೆ.
ಏಳು ಅಡಿ ಉದ್ದದ ರೊಬೊಟಿಕ್ ಕೈಗಳ ಮೂಲಕ ಪರ್ಸಿವಿರೆನ್ಸ್ ಬಂಡೆಯನ್ನು ಕೊರೆದು ಮಾದರಿಯನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಮಂಗಳ ಗ್ರಹದ ಭೂಗರ್ಭ ಮತ್ತು ಹಿಂದಿನ ವಾತಾವರಣವನ್ನು ಮತ್ತಷ್ಟು ಚೆನ್ನಾಗಿ ಅರ್ಥೈಸುವ ಪ್ರಯತ್ನವನ್ನು ರೋವರ್ ನಡೆಸುತ್ತಿದೆ.
ಇದಕ್ಕಾಗಿ 2020 ಜುಲೈ 30 ರಂದು ನಾಸಾ ಅಟ್ಲಾಸ್ ವಿ 541 ರಾಕೆಟ್ ಮೂಲಕ ಪರ್ಸಿವಿರೆನ್ಸ್ ರೋವರ್‌ನ್ನು ಮಂಗಳನ ಮೇಲೆ ಫೆಬ್ರವರಿ 18, 2021 ರಂದು ಯಶಸ್ವಿಯಾಗಿ ಇಳಿಸಿತ್ತು.
ರೋವರ್ 2.5 ಕಿ.ಮೀನಿಂದ 5 ಕಿ.ಮೀ. ವರೆಗೂ ಸಂಚಾರ ನಡೆಸಲಿದ್ದು, 43 ಮಾದರಿ ಸಂಗ್ರಹ ನಳಿಕೆಗಳ ಪೈಕಿ ಎಂಟರಲ್ಲಿ ಮಾದರಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ. ಅದು ಸಂಗ್ರಹಿಸಿಟ್ಟಿರುವ ಮಾದರಿಗಳನ್ನು 2030ರ ಆಸುಪಾಸಿನಲ್ಲಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಸಹಭಾಗಿತ್ವದ ಯೋಜನೆಯಲ್ಲಿ ಭೂಮಿಗೆ ತರಲು ನಾಸಾ ಯೋಜನೆ ರೂಪಿಸಿದೆ.
ಇನ್ನು ಅಂಗಾರಕನ ಬಗ್ಗೆ ಅಧ್ಯಯನ ನಡೆಸುವಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ನವೆಂಬರ್ 5, 2013 ರಂದು ಮಂಗಳಯಾನ ಯೋಜನೆಯ ಅಂಗವಾಗಿ ಇಸ್ರೋ ಮಾರ್ಸ್ ಆರ್ಬಿಟರ್ ಮಿಷನ್ (MOM) ನ್ನು ಕಳಿಸಿತ್ತು. ಅದು ಯಶಸ್ವಿಯಾಗಿ 2014 ಸೆಪ್ಟೆಂಬರ್ 24 ರಂದು ಮಂಗಳನ ಕಕ್ಷೆ ಸೇರಿತ್ತು. ಇಂದಿಗೂ ಕೂಡ ಅದು ಕೆಲಸ ಮಾಡುತ್ತಿದ್ದು ಮಂಗಳನ ವಾತಾವರಣದ ಬಗ್ಗೆ ಇಸ್ರೋಕ್ಕೆ ಅದ್ಭುತ ಮಾಹಿತಿ ಕೊಡುತ್ತಿದೆ.
ಇದನ್ನೂ ಓದಿ: ‘ಮಂಗಳ’ನಲ್ಲಿ ಭೂಕುಸಿತದ ದೃಶ್ಯಗಳನ್ನು ಸೆರೆ ಹಿಡಿದ ಯೂರೋಪಿಯನ್ ಸ್ಪೇಸ್ ಏಜೆನ್ಸಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.