ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ರಷ್ಯಾ ನಡೆಸಿದ್ದ 1961ರ ಹೈಡ್ರೋಜನ್ ಬಾಂಬ್‌ ಪರೀಕ್ಷೆ ಬಹಿರಂಗ

ಸ್ಫೋಟದ ಅಪರೂಪದ ದೃಶ್ಯಾವಳಿಗಳು ಬಿಡುಗಡೆ
Last Updated 4 ಸೆಪ್ಟೆಂಬರ್ 2020, 15:13 IST
ಅಕ್ಷರ ಗಾತ್ರ

ಸೋವಿಯತ್‌ ಒಕ್ಕೂಟ ಒಂದು ಕಾಲಕ್ಕೆ ಜಗತ್ತಿನ ಪ್ರಬಲ ಒಕ್ಕೂಟ ರಾಷ್ಟ್ರ.ಆಗ ಜಗತ್ತಿನ ದೊಡ್ಡಣ್ಣಗಳೆನ್ನಿಸಿದ್ದ ಅಮೆರಿಕಾ ಮತ್ತು ಸೋವಿಯತ್‌ ರಷ್ಯಾದ ಶಸ್ತ್ರಾಸ್ತ್ರಗಳ ತಾಕತ್ತಿನ ಪಾರಮ್ಯದ ಜಿದ್ದಾಜಿದ್ದಿನಿಂದ ಉಳಿದ ರಾಷ್ಟ್ರಗಳು ಮಂಕಾಗಿದ್ದವು. ಈ ಮುಸುಕಿನ ಗುದ್ದಾಟದ ಉತ್ತುಂಗದಲ್ಲೇ, ಅಂದರೆ 1961 ರ ಅಕ್ಟೋಬರ್‌ನಲ್ಲಿ ಸೋವಿಯತ್‌ ಒಕ್ಕೂಟಆರ್ಕ್ಟಿಕ್ ವೃತ್ತದ ಉತ್ತರದ ದ್ವೀಪವೊಂದರ ಮೇಲೆ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ಬಾಂಬ್‌ವೊಂದನ್ನು ಎಸೆದು ಪರೀಕ್ಷೆ ನಡೆಸಿತು!

ಅಂದಿನ ದಿನಗಳಲ್ಲಿ ಸೋವಿಯತ್‌ ರಷ್ಯಾ ಈಗಿನ ಚೀನಾದಂತೆ ತನ್ನ ದೇಶದಿಂದ ಯಾವುದೇ ಸುದ್ದಿ ಸೋರಿಕೆ ಆಗದಂತೆ ‘ಉಕ್ಕಿನ ಪರದೆ’ ಎಳೆದುಕೊಂಡಿತ್ತು. ಅದು ಸಾಮಾಜಿಕ ಮಾಧ್ಯಮಗಳು ಇಲ್ಲದ ಯುಗ. ಹೀಗಾಗಿ ಯಾವುದೇ ರಹಸ್ಯ ಮಾಹಿತಿ ಅಥವಾ ಸುದ್ದಿ ಹೊರ ಜಗತ್ತಿಗೆ ಬರುವ ಪ್ರಶ್ನೆಯೇ ಇರಲಿಲ್ಲ. ಕಮ್ಯುನಿಷ್ಟ್‌ ವ್ಯವಸ್ಥೆಯ ಉಕ್ಕಿನ ಹಿಡಿತ ಬಿಡಿಸಿಕೊಂಡು ಬರುವುದು ಅಷ್ಟು ಸುಲಭವೂ ಆಗಿರಲಿಲ್ಲ.

ಅಂದು ನಡೆಸಿದ ಹೈಡ್ರೋಜನ್ ಬಾಂಬ್‌ ಪರೀಕ್ಷೆಯ ಆರಂಭದ ಹಂತದಿಂದ ಸ್ಫೋಟದವರೆಗಿನ ದೃಶ್ಯವಳಿಗಳನ್ನು ರಷ್ಯಾ ಇತ್ತೀಚೆಗಷ್ಟೇ ತನ್ನ ಆರ್ಕೈವ್‌ನಿಂದ ಹೊರ ಜಗತ್ತಿಗೆ ತೆಗೆದಿರಿಸಿದೆ. ಅತ್ಯಂತ ಸ್ವಾರಸ್ಯಕರ 40 ನಿಮಿಷಗಳ ದೃಶ್ಯಾವಳಿಗಳನ್ನು ಒಳಗೊಂಡಿದೆ.

ಅಂದ ಹಾಗೇ, ಹೈಡ್ರೋಜನ್ ಬಾಂಬ್‌ ಅನ್ನು ಭೂಮಿಯ ಮೇಲ್ಭಾಗ ಅಂದರೆ, ನೆಲದಿಂದ 4 ಕಿ.ಮೀ ಎತ್ತರದಲ್ಲೇ ಸ್ಫೋಟಿಸಲಾಯಿತು. ಅದರ ಆಘಾತ ತರಂಗಗಳಿಂದ ದ್ವೀಪವು ಚರ್ಮವನ್ನು ಸುಲಿದಿಟ್ಟ ಪಶುವಿನಂತೆ ಬೋರಲು ಬಿದ್ದಿತ್ತು. ಸ್ಫೋಟದ ವೇಳೆ ಹೊಮ್ಮಿದ ಪ್ರಖರ ಬೆಳಕು ಸುಮಾರು 965 ಕಿ.ಮೀ.ಗಳಷ್ಟು ದೂರದವರೆಗೆ ಕಾಣಿಸಿತ್ತು. 250 ಕಿ.ಮೀ ವ್ಯಾಪ್ತಿಯವರೆಗೆ ಅದರ ಶಾಖದ ತೀವ್ರತೆ ಇತ್ತು. ನಭದ ತುತ್ತ ತುದಿಯವರೆಗೆ ಅಣಬೆಯಾಕಾರದ ಮೋಡ, ಧೂಳು ಆವರಿಸಿತ್ತು.

ಆರ್‌ಡಿಎಸ್‌ 220 ಬಾಂಬ್‌ ಅನ್ನು ‘ತ್ಸಾರ್‌ ಬಾಂಬಾ(Tsar Bomba) ಎಂದೂ ಇದನ್ನು ಕರೆಯಲಾಗುತ್ತಿತ್ತು. ಈ ಭಯಾನಕ ಸ್ಫೋಟ ಆಗಿ 60 ವರ್ಷಗಳು ಕಳೆದಿವೆ. ಇದರ ವಿಧ್ವಂಸಕತೆಯನ್ನು ಸರಿಗಟ್ಟುವ ಮತ್ತೊಂದು ಬಾಂಬ್‌ ತಯಾರು ಆಗಿಲ್ಲ ಎಂದೇ ಹೇಳಲಾಗುತ್ತಿದೆ. ರೊಸ್ತೋಮ್ ಸ್ಟೇಟ್‌ ಅಟೊಮಿಕ್‌ ಎನರ್ಜಿ ಕಾರ್ಪೊರೇಷನ್ (ರಷ್ಯಾದ ಅಣುಶಕ್ತಿ ಏಜೆನ್ಸಿ) ಮೊದಲೇ ವರ್ಗೀಕರಿಸಿದ್ದ ದೃಶ್ಯಾವಳಿಗಳಲ್ಲಿ 40 ನಿಮಿಷಗಳಷ್ಟು ಬಿಡುಗಡೆ ಮಾಡಿದೆ. ತಯಾರಾದ ಬಾಂಬ್‌ನ ಸಾಗಣೆಯಿಂದ ಹಿಡಿದು, ಸ್ಫೋಟದ ಹಂತದವರೆಗಿನ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

60 ರ ದಶಕದಲ್ಲಿ ಸೋವಿಯತ್ ರಷ್ಯಾದ ಅಧ್ಯಕ್ಷರಾಗಿದ್ದ ನಿಕಿಟ ಖ್ರುಶ್ಚೇವ್‌ ವ್ಯಕ್ತಿಗತವಾಗಿ ಈ ಬೃಹತ್‌ ಬಾಂಬ್‌ನ (ತ್ಸಾರ್‌ ಬಾಂಬಾ) ತಯಾರಿಕೆ ಉಸ್ತುವಾರಿ ವಹಿಸಿದ್ದರು. 100 ಮೆಗಾ ಟನ್‌ ಅಣು ಬಾಂಬ್‌ ತಯಾರಿಸಬೇಕು ಎಂಬುದು ಖ್ರುಶ್ಚೇವ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅದಕ್ಕಾಗಿ ಹುಕುಂ ಹೊರಡಿಸಿದ್ದರು. ಆದರೆ, ಎಂಜಿನಿಯರ್‌ಗಳು 50 ಮೆಗಾಟನ್‌ ಆವೃತ್ತಿಯನ್ನು ಖ್ರುಶ್ಚೇವ್‌ ಮುಂದಿಟ್ಟರು. 50 ಮೆಗಾಟನ್‌ ಎಂದರೆ 5 ಕೋಟಿ ಟನ್‌ಗಳು. ಅಧ್ಯಕ್ಷರು ಹೇಳಿದ್ದಕ್ಕಿಂತ ತೂಕಅರ್ಧದಷ್ಟು ಕಡಿಮೆಯದ್ದಾದರೂ ಅದರ ಶಕ್ತಿ, ವಿಧ್ವಂಸಕತೆಗೆ ಸರಿಸಾಟಿ ಇರಲಿಲ್ಲ. ಅಮೆರಿಕಾ ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನಾಗಸಾಕಿ ಮತ್ತು ಹಿರೊಷಿಮಾ ಮೇಲೆ ಎಸೆದಿದ್ದ ಅಣುಬಾಂಬ್‌ಗಳಿಗಿಂತ ಸಾವಿರ ಪಟ್ಟುಗಳಷ್ಟು ಶಕ್ತಿಶಾಲಿಯಾಗಿತ್ತು.

ಆದರೆ, ಪರೀಕ್ಷೆ ನಡೆಸಿದ್ದು ಅದರ ಅರ್ಧದಷ್ಟು ಅಂದರೆ, 27 ಟನ್‌ ತೂಕದ (24 ಮೆಟ್ರಿಕ್‌ ಟನ್‌ನದು) ಹೈಡ್ರೋಜನ್ ಬಾಂಬ್‌. ರಷ್ಯಾ ಬಿಡುಗಡೆ ಮಾಡಿರುವ ದೃಶ್ಯಾವಳಿಗಳು ಇದೇ ಬಾಂಬ್‌ ಸ್ಫೋಟದ್ದು. ಈ ಬಾಂಬ್‌ ಅನ್ನು ಬಾಂಬರ್‌ಗಳ ವಾಹಕ ಯುದ್ಧ ವಿಮಾನದಲ್ಲಿ ಒಯ್ದು ರಷ್ಯಾದಆರ್ಕ್ಟಿಕ್ ಪ್ರದೇಶದ ‘ನೊವಾಯ ಝೆಮ್ಲ್ಯಾ’ದಲ್ಲಿ ಪ್ಯಾರಾಶೂಟ್‌ ಮೂಲಕ ನೆಲಕ್ಕೆ ಎಸೆಯಲಾಯಿತು. ಹೀಗೆ ಬಾಂಬ್‌ ಅನ್ನು ಸ್ಫೋಟಿಸಲು ನೆಲಕ್ಕೆ ಇಳಿಸಿ ಮುಂದಕ್ಕೆ ಹಾರಿ ಹೋದ ವಿಮಾನ ಸಾಕಷ್ಟು ದೂರದಲ್ಲಿದ್ದರೂ ಸ್ಫೋಟದ ಹೊಡೆತಕ್ಕೆ ಆಗಸದಲ್ಲಿ ಬಹು ದೂರ ಹಾರಿಹೋಗಿತ್ತು. ಮೊದಲೇ ಸಾಕಷ್ಟು ಎಚ್ಚರಿಕೆ ವಹಿಸಿದ್ದರಿಂದ ಈ ಸ್ಫೋಟದಿಂದ ಯಾರೊಬ್ಬರೂ ಸಾಯಲಿಲ್ಲ. ಈ ಪರೀಕ್ಷೆಯ ಪರಿಣಾಮ 1963 ರಲ್ಲಿ ಅಮೆರಿಕಾ, ಬ್ರಿಟನ್‌ ಮತ್ತು ಸೋವಿಯತ್‌ ಒಕ್ಕೂಟ (ಯುಎಸ್‌ಎಸ್‌ಆರ್‌) ಸೇರಿ ಅಣು ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಅಲ್ಲದೆ, ವಿಮಾನದ ಮೂಲಕ ಅಣ್ವಸ್ತ್ರ ದಾಳಿ ಮಾಡುವುದಕ್ಕೂ ನಿಷೇಧ ವಿಧಿಸಲಾಯಿತು. ಆ ಬಳಿಕ ಬಹಿರಂಗ ಅಣ್ವಸ್ತ್ರ ಪರೀಕ್ಷೆ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT