ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Solar Eclipse: ಕಂಕಣ ಸೂರ್ಯಗ್ರಹಣ ಎಷ್ಟು ಹೊತ್ತಿಗೆ, ನೋಡುವುದು ಹೇಗೆ?

ಅಕ್ಷರ ಗಾತ್ರ
ADVERTISEMENT
""
""

ಇಂದು (ಭಾನುವಾರ ಜೂನ್ 21) ಆಕಾಶದಲ್ಲಿ ಒಂದು ಅಪರೂಪದ ಖಗೋಳ ವಿದ್ಯಮಾನ ಕಂಕಣಸೂರ್ಯಗ್ರಹಣ ನಡೆಯಲಿದೆ. ಚಂದ್ರ ಸೂರ್ಯನ ಮುಂದೆ ಹಾದುಹೋಗಿ ಸೂರ್ಯ ಒಂದು ಬಳೆಯಂತೆ ಕಾಣುವ ಈ ವಿದ್ಯಮಾನ ಬೆಳಿಗ್ಗೆ 10:12ಕ್ಕೆ ಆರಂಭವಾಗಿ ಮಧ್ಯಾಹ್ನ 1:32ಕ್ಕೆ ಅಂತ್ಯವಾಗಲಿದೆ.

ಸೂರ್ಯಗ್ರಹಣ ಏನು ಎತ್ತ

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ ಸೂರ್ಯನನ್ನು ಚಂದ್ರ ಮರೆಮಾಚಿ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಇದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣದಲ್ಲಿ ಮೂರು ವಿಧಗಳಿವೆ. ಸೂರ್ಯ, ಭೂಮಿ, ಚಂದ್ರರ ನಡುವಿನ ಅಂತರ ಹಾಗೂ ದಿಕ್ಕಿನ ಆಧಾರದ ಮೇಲೆ ಪಾರ್ಶ್ವ, ಕಂಕಣ ಅಥವಾ ಪೂರ್ಣ ಗ್ರಹಣಗಳು ಸಂಭವಿಸುತ್ತವೆ.

ಈ ಬಾರಿಯ ಗ್ರಹಣ ಮಧ್ಯ ಆಫ್ರಿಕಾನಲ್ಲಿ ಆರಂಭವಾಗಿ ಸೌದಿ, ಇರಾನ್, ಪಾಕಿಸ್ತಾನ, ಭಾರತ, ಚೀನಾ ಇನ್ನಿತರ ದೇಶಗಳ ಮೂಲಕ ಹಾದುಹೋಗಲಿದೆ. ಭಾರತದಲ್ಲಿ ರಾಜಸ್ಥಾನ, ಹರ್ಯಾಣಾ, ಉತ್ತರಾಖಂಡದ ಹಲವು ಜಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಭಾರತದ ಅನ್ಯ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಲಿದೆ. ಬೆಂಗಳೂರಿನಲ್ಲಿ 36% ಗ್ರಹಣ ಉಂಟಾಗಲಿದೆ.

ಗ್ರಹಣದ ದಿನ ದಿನನಿತ್ಯದ ಕೆಲಸಗಳನ್ನು ಮಾಡಲು, ಅಡುಗೆ, ಊಟಗಳನ್ನು ಮಾಡಲು, ನೀರು ಕುಡಿಯಲು ಯಾವುದೇ ತೊಂದರೆಯಿಲ್ಲ ಎಂದು ವಿಜ್ಞಾನಿ ಡಾ. ಪ್ರಜ್ವಲ್ ಶಾಸ್ತ್ರಿ ಹೇಳಿದ್ದಾರೆ.

ಗ್ರಹಣದ ಸಮಯ

ಗ್ರಹಣದ ಸಮಯ ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ಬದಲಾಗಲಿದೆ. ಬೆಂಗಳೂರಿನಲ್ಲಿ ಗ್ರಹಣ 10:12ಕ್ಕೆ ಆರಂಭವಾಗುತ್ತದೆ. ಗರಿಷ್ಠ ಗ್ರಹಣ (36%) 11:48ಕ್ಕೆ. ಗ್ರಹಣ ಅಂತ್ಯವಾಗುವುದು ಮಧ್ಯಾಹ್ನ 1:32ಕ್ಕೆ.

ನೋಡುವುದು ಹೇಗೆ?

ಬರಿಗಣ್ಣಿನಿಂದ ಸೂರ್ಯನನ್ನು ನೋಡುವುದು ಅಪಾಯಕಾರಿ. ಸೂರ್ಯಗ್ರಹಣವನ್ನು ವಿಶೇಷವಾದ ಕನ್ನಡಕಗಳ ಮೂಲಕ ಮಾತ್ರ ನೋಡಬೇಕು. ಐ.ಎಸ್.ಓ.12312-2 ಮಾನದಂಡ ಹೊಂದಿರುವ ಕನ್ನಡಕಗಳು ಇನ್ನೂ ಉತ್ತಮ. ಪಿನ್ ಹೋಲ್ ಕ್ಯಾಮರಾ ಬಳಸಿ ಗ್ರಹಣದ ಬಿಂಬವನ್ನು ಕಾಗದದಮೇಲೆ ಅಥವಾ ಗೋಡೆಯ ಮೇಲೆ ಮೂಡಿಸಿ ನೋಡಬಹುದು.

ಗ್ರಹಣದ ಸಮಯದಲ್ಲಿ ಮಕ್ಕಳು ಅನೇಕ ಪ್ರಯೋಗಗಳನ್ನು ಮಾಡಬಹುದು. ಮರಗಳ ಎಲೆಗಳ ನಡುವೆ ಬೀಳುವ ಕಿರಣಗಳು ನೆಲದ ಮೇಲೆ ಮೂಡಿಸುವ ಸೂರ್ಯನ ಬಿಂಬವನ್ನು ನೋಡಬಹುದು. ಗ್ರಹಣದ ವೇಳೆ ಆಗುವ ಬೆಳಕಿನ, ತಾಪಮಾನದ ವ್ಯತ್ಯಾಸಗಳನ್ನು ಗುರುತಿಸಬಹುದು ಎಂದು ಖಭೌತ ಸಂಶೋಧಕ ಸುಂದರ್ ಹೇಳಿದ್ದಾರೆ.

ಈ ಬಾರಿಯ ಕಂಕಣ ಸೂರ್ಯಗ್ರಹಣದ ವೇಳೆ ಶೇಕಡಾ 99ರಷ್ಟು ಗ್ರಹಣ ಸಂಭವಿಸಲಿದ್ದು ಸೂರ್ಯ ಮಣಿಗಳ ಸರದಂತೆ ಗೋಚರಿಸಬಹುದು ಎಂದು ದೆಹಲಿಯ ಖಗೋಳ ವೀಕ್ಷಕ ಅಜಯ್ ತಲ್ವಾರ್ ಹೇಳಿದ್ದಾರೆ. ಚಂದ್ರನ ಮೈಮೇಲಿನ ಬೆಟ್ಟಗಳು ಸೂರ್ಯನ ಬೆಳಕನ್ನು ಮರೆಮಾಚಿ ಕಣಿವೆಗಳ ಮೂಲಕ ಬೆಳಕು ಗೋಚರಿಸುವುದರಿಂದ ಸೂರ್ಯನ ಅಂಚು ಮಣಿಗಳಂತೆ ಕಾಣುವ ಈ ವಿದ್ಯಮಾನಕ್ಕೆ Bailey's beads ಎಂದು ಹೆಸರು.

ಆಕಾಶದ ಈ ಸುಂದರ ಹಾಗೂ ವಿಸ್ಮಯಕಾರಿ ಘಟನೆಯನ್ನು ವೀಕ್ಷಿಸಲು ಭಾರತದ ಖಗೋಳಾಸಕ್ತರು ಹಾಗೂ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಲೇಖನ ಮತ್ತು ಚಿತ್ರಗಳು

- ಕೀರ್ತಿ ಕಿರಣ್,ಖಗೋಳ ವೀಕ್ಷಕ, ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT