ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಮಾರಣಾಂತಿಕ ಕೊರೊನಾವೈರಸ್‌; ಬಾವಲಿ, ಹಾವುಗಳ ಪ್ರಮುಖ ಪಾತ್ರ!

Last Updated 23 ಜನವರಿ 2020, 7:03 IST
ಅಕ್ಷರ ಗಾತ್ರ
ADVERTISEMENT
""

ಬೀಜಿಂಗ್‌:ಶ್ವಾಸಕೋಶದ ಸೋಂಕು ಉಂಟು ಮಾಡಿ ನ್ಯುಮೋನಿಯಾದಿಂದ ಸಾವಿಗೆ ತಳ್ಳುತ್ತಿರುವ ಹೊಸ ಕೊರೊನಾವೈರಸ್ ಬಾವಲಿಗಳು ಅಥವಾ ಹಾವುಗಳಿಂದ ಹರಡುತ್ತಿರಬಹುದು ಎಂದು ವೈರಸ್‌ನ ಜೆನೆಟಿಕ್‌ ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ.

ಚೀನಾದಲ್ಲಿ ಹರಡುತ್ತಿರುವ ಕೊರೊನಾವೈರಸ್‌ಗೆ ಈಗಾಗಲೇ 17 ಜನರು ಬಲಿಯಾಗಿದ್ದಾರೆ. ವೈರಸ್‌ನ ಡಿಎನ್‌ಎ ಒಳಗೊಂಡಿರುವ ಜಿನೋಮ್‌ ಕ್ರಮಾಗತಿ ಪರೀಕ್ಷೆಗಳ ಮೂಲಕ ವೈರಸ್‌ ಮೂಲವನ್ನು ತಿಳಿಯುವ ಪ್ರಯತ್ನ ನಡೆಸಲಾಗಿದೆ. ಎರಡು ಅಧ್ಯಯನಗಳಲ್ಲಿ ವೈರಸ್‌ ಹರಡಲುಬಾವಲಿಗಳ ಪಾತ್ರ ಪ್ರಮುಖ ಎನ್ನಲಾಗಿದೆ.

ಚೀನಾದ ವುಹಾನ್‌ನಲ್ಲಿ ಪಸರಿಸಿರುವ ಕೊರೊನಾವೈರಸ್‌ಗೂ ಬಾವಲಿಗಳಲ್ಲಿರುವ ವೈರಸ್‌ ತಳಿಗೂ ಸಾಮ್ಯತೆ ಇರುವುದನ್ನು ಗುರುತಿಸಲಾಗಿದೆ. ಈ ಕುರಿತು ಅಧ್ಯಯನ ವರದಿಯನ್ನು 'ಸೈನ್ಸ್‌ ಚೈನಾ ಲೈಫ್‌ ಸೈನ್ಸಸ್‌' ಜರ್ನಲ್‌ನಲ್ಲಿ ಮಂಗಳವಾರ ಪ್ರಕಟಿಸಲಾಗಿದೆ.

'ವುಹಾನ್‌ ಕೊರೊನಾವೈರಸ್‌ ಬಾವಲಿಗಳಿಂದ ಹೊರಬಂದು ವ್ಯಾಪಿಸಿದೆ ಎಂಬುದನ್ನು ಸಮರ್ಥಿಸಿಕೊಳ್ಳಬಹುದಾಗಿದೆ. ಆದರೆ, ಬಾವಲಿಗಳಿಂದ ಮನುಷ್ಯರಿಗೆ ರವಾನೆಯಾಗಲು ನಡುವಿನ ಯಾವುದೇ ಪ್ರಾಣಿಗಳು ಕಾರಣವಾಗಿರಬಹುದು' ಎಂದು ಚೀನಾದ ಹಲವು ಸಂಶೋಧನಾ ಸಂಸ್ಥೆಗಳು ವಿಶ್ಲೇಷಿಸಿವೆ.

ಬುಧವಾರ 'ಮೆಡಿಕಲ್‌ ವೈರೋಲಜಿ' ಜರ್ನಲ್‌ನಲ್ಲಿ ಪ್ರಕಟಣಗೊಂಡಿರುವ ಎರಡನೇ ಅಧ್ಯಯನದ ಪ್ರಕಾರ, 'ಹಲವು ಹೋಲಿಕೆ ಮತ್ತು ವಿಶ್ಲೇಷಣೆಗಳಿಂದ ಬಾವಲಿ ಮತ್ತು ಮನುಷ್ಯರ ನಡುವೆ ವೈರಸ್‌ ಹರಡಲುಕಾರಣವಾಗಿರಬಹುದಾದ ಮತ್ತೊಂದು ಜೀವಿ ಹಾವು' ಎನ್ನಲಾಗಿದೆ.

ಆದರೆ, ಪ್ರಾಣಿಗಳಿಂದ ಮನುಷ್ಯನಿಗೆ ವೈರಸ್‌ ಹೇಗೆ ಹರಡುತ್ತಿರಬಹುದು ಎಂಬುದನ್ನು ಎರಡೂ ಅಧ್ಯಯನಗಳಲ್ಲಿ ವಿಶ್ಲೇಷಿಸಿಲ್ಲ.

ವನ್ಯ ಜೀವಿಗಳನ್ನು ಮಾರಾಟ ಮಾಡುವ ಆಹಾರ ಮಾರುಕಟ್ಟೆಯಲ್ಲಿ ಮಾರಣಾಂತಿಕವಾದ ಕೊರೊನಾವೈರಸ್‌ ಹರಡಿರುವುದನ್ನು ತಿಳಿಯಲಾಗಿದೆ. ಜೀವಂತ ನರಿಗಳು, ಮೊಸಳೆಗಳು, ತೋಳದ ಮರಿಗಳು, ಹಾವು, ಇಲಿಗಳು, ನವಿಲುಗಳು, ಮುಳ್ಳು ಹಂದಿ, ಹಲ್ಲಿಜಾತಿಯ ಜೀವಿಗಳು ಹಾಗೂ ಒಂಟೆ ಮಾಂಸ ಸೇರಿದಂತೆ ವಿವಿಧ ಪ್ರಾಣಿಗಳನ್ನು ಮಾರುವ ಮಾರುಕಟ್ಟೆಗಳಲ್ಲಿ ವೈರಸ್‌ ಪಸರಿಸಿರಬಹುದು ಎಂದು ಅಂದಾಜಿಸಲಾಗಿದೆ.

ಬೀಜಿಂಗ್‌ನ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸಾಗರೋತ್ಪನ್ನ ಮಾರುಕಟ್ಟೆಯಲ್ಲಿ ವನ್ಯ ಜೀವಿಗಳಿಂದ ವೈರಸ್‌ ಹರಡಿದೆ. ನಿಖರವಾದ ಮೂಲ ಇನ್ನಷ್ಟೇ ಪತ್ತೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT