ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ: ಟೇಬಲ್ ಟೆನಿಸ್ ಆಡುವ ರೋಬಾಟ್

Published : 13 ಆಗಸ್ಟ್ 2024, 16:02 IST
Last Updated : 13 ಆಗಸ್ಟ್ 2024, 16:02 IST
ಫಾಲೋ ಮಾಡಿ
Comments

ರೋಬಾಟು ಮಾನವನನ್ನು ಸರಿಗಟ್ಟುವಂತೆ ಆಟಗಳನ್ನು ಆಡಬಲ್ಲುದೇ? ಪ್ಯಾರಿಸ್ಸಿನಲ್ಲಿ ಒಲಿಂಪಿಕ್‌ ಸ್ಪರ್ಧೆಗಳು ಈಗಷ್ಟೆ ಮುಕ್ತಾಯವಾಗಿದೆ. ‘ಗೂಗಲ್‌’ ಸಂಸ್ಥೆ ಮನುಷ್ಯನ ಜೊತೆಗೆ ಸರಿಸಾಟಿಯಾಗಿ ಟೇಬಲ್‌ ಟೆನಿಸ್‌ ಆಟವಾಡಬಲ್ಲ ರೋಬಾಟನ್ನು ಸಿದ್ಧಪಡಿಸಿದೆ – ಎನ್ನುವ ಸುದ್ದಿಯನ್ನು ‘ಆರ್ಕ್ಸೈವ್‌’ ಪತ್ರಿಕೆ ವರದಿ ಮಾಡಿದೆ. ಟೇಬಲ್‌ ಟೆನ್ನಿಸನ್ನು ತರಬೇತಿ ನೀಡುವವರ ಜೊತೆಗೆ ನಡೆದ ಪಂದ್ಯಗಳಲ್ಲಿ ಅರ್ಧಕ್ಕರ್ಧದಷ್ಟನ್ನು ಈ ರೋಬಾಟುಗಳು ಗೆದ್ದುವು ಎನ್ನುತ್ತದೆ, ಆರ್ಕ್ಸೈವ್‌ ವರದಿ. ಟೇಬಲ್‌ ಟೆನಿಸ್‌ ಆಡುವ ಯಂತ್ರವನ್ನು ಗೂಗಲ್‌ನ ಡೇವಿಡ್‌ ಆಂಬ್ರೋಸಿಯೋ ಹಾಗೂ ಪನ್ನಗ ಸಂಕೇತಿ ತಮ್ಮ ಸಂಗಡಿಗರ ಜೊತೆಗೆ ರೂಪಿಸಿದ್ದಾರೆ.

ಸ್ಪರ್ಧೆಗಳು, ತರಬೇತಿಯಲ್ಲಿ ಯಂತ್ರಗಳನ್ನು ಬಳಸುವುದು ಹೊಸತೇನಲ್ಲ. ಕ್ರಿಕೆಟ್ಟಿನಲ್ಲಿ ಆಟವಾಡುವಾಗ ಚೆಂಡು ಹಾರಿದತ್ತಲೇ ಕಣ್ಣು ಹಾಯಿಸುವ ಕ್ಯಾಮೆರಾ ಇಲ್ಲವೇ? ಬ್ಯಾಟ್ಸ್‌ಮನ್‌ಗಳಿಗೆ ಚೆಂಡನ್ನು ಎಸೆಯುವ ಯಂತ್ರಗಳೂ ಇವೆ. ಇನ್ನು ಚದುರಂಗದಲ್ಲಿಯಂತೂ ಮನುಷ್ಯನ ಜೊತೆಗೆ ಸ್ಪರ್ಧಿಸಿದ ‘ಡೀಪ್‌ ಮೈಂಡ್‌’, ‘ಡೀಪ್‌ ಬ್ಲೂ’ ಎನ್ನುವ ಗಣಕಯಂತ್ರ, ತಂತ್ರಾಂಶಗಳ ಬಗ್ಗೆಯೂ ಕೇಳಿದ್ದೀರಿ. ಹಾಗಿದ್ದ ಮೇಲೆ ಇದೇನು ವಿಶೇಷ ಎಂದಿರಾ?

ಇದೆ. ಕೆಲವು ವರ್ಷಗಳ ಹಿಂದೆ ‘ಡೀಪ್‌ ಬ್ಲೂ’ ಎನ್ನುವ ಮೆಶೀನ್‌ ಲರ್ನಿಂಗ್‌ ತಂತ್ರಜ್ಙಾನವು ಚದುರಂಗದಾಟದಲ್ಲಿ ಗ್ರಾಂಡ್‌ ಚಾಂಪಿಯನನ್ನು ಸೋಲಿಸಿ ಸುದ್ದಿ ಮಾಡಿತ್ತು. ಇದು ಚದುರಂಗದ ನಡೆಗಳನ್ನು ಊಹಿಸಿ, ಆಲೋಚಿಸಿ ಮುನ್ನಡಿ ಇಡುತ್ತಿತ್ತು.  ಚೆಸ್‌ನಲ್ಲಿ ಎದುರಾಳಿಯ ನಡೆಯನ್ನು ವಿಶ್ಲೇಷಿಸಿ, ಅದಕ್ಕೆ ತಕ್ಕಂತ ಯಾವ ನಡೆಯನ್ನು ನಡೆಸಬೇಕು ಎನ್ನುವುದು ಲೆಕ್ಕಾಚಾರದ ವಿಚಾರ. ಕ್ಷಣದಲ್ಲಿ ಲಕ್ಷಾನುಗಟ್ಟಲೆ ಲೆಕ್ಕಗಳನ್ನು ಮಾಡಬಲ್ಲ ಗಣಕಯಂತ್ರಗಳಿಗೆ ಇದು ಸುಲಭ. ಹಾಗೆಯೇ ಕ್ರಿಕೆಟ್ಟಿನಲ್ಲಿ ಚೆಂಡನ್ನು ಇಂತಿಷ್ಟು ವೇಗದಿಂದ, ಇಂತಹ ದಿಕ್ಕಿನಲ್ಲಿ ಎಸೆಯುವಂತೆ ಯಂತ್ರಕ್ಕೆ ನಿರ್ದೇಶಿಸುವುದು ಕಷ್ಟವೇನಲ್ಲ.

ಆದರೆ ಅದೇ ಯಂತ್ರ, ತಾನು ಎಸೆದ ಚೆಂಡು ಮರಳಿ ಬರುವಾಗ ಅದನ್ನು ಹಿಡಿಯಬಲ್ಲುದೇ? ಇದು ಪ್ರಶ್ನೆ. ಏಕೆಂದರೆ ಯಂತ್ರ ಎಷ್ಟೇ ವೇಗದಿಂದ ಚೆಂಡನ್ನು ಎಸೆದರೂ, ಅದರ ದಿಕ್ಕು, ವೇಗವನ್ನು ಗುರುತಿಸಿ, ಅದು ಯಾವ ಕ್ಷಣದಲ್ಲಿ ಎಲ್ಲಿರುತ್ತದೆ ಎಂದು ಮನುಷ್ಯನ ಮಿದುಳು ಲೆಕ್ಕ ಹಾಕಬಲ್ಲುದು. ಅದು ಬ್ಯಾಟಿನ ಬಳಿಗೆ ಬರುವ ಕ್ಷಣವನ್ನು ಊಹಿಸಿ, ಬಾರಿಸಿ, ಸಿಕ್ಸರ್‌ ಕೂಡ ಹೊಡೆಯಬಹುದು. ಈ ಕ್ಷಣಾರ್ಧದ ಕೆಲಸವನ್ನು ಯಂತ್ರಗಳು ನಿರ್ವಹಿಸುವುದು ಸ್ವಲ್ಪ ಕಷ್ಟವೇ. ಗೂಗಲ್‌ ಸಂಸ್ಥೆಯ ಡೀಪ್‌ ಮೈಂಡ್‌ ತಂತ್ರಾಂಶವನ್ನು ಬಳಸಿ ಆಂಬ್ರೋಸಿಯೋ ಮತ್ತು ಸಂಕೇತಿ ತಂಡ ಈ ಸಾಧನೆಯನ್ನು ಮಾಡಿದೆ. 

ಮೆಶೀನ್‌ ಲರ್ನಿಂಗ್‌ ಎಂದರೆ ಕೃತಕ ಬುದ್ದಿಮತ್ತೆಯ ಮೂಲ ಸ್ವರೂಪ ಎನ್ನಿ. ರೋಬಾಟುಗಳು ಕಾರ್ಯನಿರ್ವಹಿಸುವಾಗ ಎದುರಾಗುವ ಅಡೆತಡೆಗಳನ್ನು ಗುರುತಿಸಿ, ಅವನ್ನು ನಿವಾರಿಸಿಕೊಳ್ಳುವ ವಿಧಾನವನ್ನು ಒಮ್ಮೆ ತೋರಿಸಿದರೆ, ನೆನಪಿಟ್ಟುಕೊಂಡು ಮುಂದೆ ಆ ಅಡೆತಡೆಗಳನ್ನು ಸರಾಗವಾಗಿ ದಾಟುವ ತಂತ್ರಜ್ಞಾನ ಎನ್ನಬಹುದು. ಯಂತ್ರಗಳೇ ಕಲಿಯುವಂತೆ ಮಾಡುವ ತಂತ್ರಜ್ಞಾನ. ಇದರಲ್ಲಿ ಅತಿ ಉನ್ನತ ಸ್ತರದ ತಂತ್ರಜ್ಞಾನವನ್ನು ‘ಡೀಪ್‌ ಮೈಂಡ್‌’ ಎನ್ನುತ್ತಾರೆ. ಆ ಕ್ಷಣದಲ್ಲಿ ತನಗೆ ದೊರೆತ ಮಾಹಿತಿ, ಸಂವೇದನೆಯನ್ನು ಬಳಸಿಕೊಂಡು ಮುಂದಿನ ಕ್ಷಣದ ನಡೆಯನ್ನು ಇಡುವ ಚಾಲಾಕಿತನ ಇದರಲ್ಲಿ ಇದೆ. ಸಾಮಾನ್ಯವಾಗಿ ಕಾರು, ರೋಬಾಟುಗಳನ್ನು ಚಾಲಿಸಲು ಇದು ಸಾಕು. ಆದರೆ ಮನುಷ್ಯನನ್ನು ಎದುರು ಹಾಕಿಕೊಳ್ಳಬಲ್ಲುದೇ? ಅವನೊಟ್ಟಿಗೆ, ಅವನ ಸಂವೇದನೆ, ಸ್ಪಂದನೆಗಳೊಂದಿಗೆ ಸ್ಪರ್ಧಿಸಬಲ್ಲುದೇ?

ಹೀಗೆ ಆ ಕ್ಷಣದಲ್ಲಿ ಸ್ಪಂದಿಸಿ, ತಿದ್ದಿಕೊಳ್ಳುವ ಸಾಮರ್ಥ್ಯವನ್ನು ‘ರಿಯಲ್‌ ಟೈಂ’ ಸಾಮರ್ಥ್ಯ ಎನ್ನುತ್ತೇವೆ. ಡೀಪ್‌ ಮೈಂಡ್‌ಗೆ ಈ ಸಾಮರ್ಥ್ಯ ಇದೆಯೇ ಎನ್ನುವ ಪರೀಕ್ಷೆ ನಡೆಯಬೇಕಿತ್ತು. ಅದಕ್ಕೆ ಆಂಬ್ರೋಸಿಯೋ-ಸಂಕೇತಿ ತಂಡ ಆಯ್ದುಕೊಂಡದ್ದು ಟೇಬಲ್‌ ಟೆನಿಸ್‌. ಇದರಲ್ಲಿ ಅತಿ ವೇಗವಾಗಿ ಬರುವ ಚೆಂಡನ್ನು ಅತಿ ಪುಟ್ಟ ಜಾಗದೊಳಗೆ ಬೀಳುವಂತೆ ಕ್ಷಣಾರ್ಧದಲ್ಲಿ ಆಡುತ್ತೇವಷ್ಟೆ. ನುರಿತ ತರಬೇತುದಾರರೊಟ್ಟಿಗೆ ಡೀಪ್‌ ಮೈಂಡ್‌ ಚಾಲಿಸುವ ರೋಬಾಟು ಕೈಯೊಂದನ್ನು ಟೇಬಲ್‌ ಟೆನಿಸ್‌ ಆಡುವಂತೆ ಆಂಬ್ರೊಸಿಯೋ-ಸಂಕೇತಿ ತಂಡ ರೂಪಿಸಿತು.

ರೋಬಾಟು ಕೈ ಟೇಬಲ್ಲಿನ ಒಂದು ಬದಿಯಲ್ಲಿ ಹಿಂದಕ್ಕೂ ಮುಂದಕ್ಕೂ ಚಲಿಸಲು ಗಾಲಿಯ ವ್ಯವಸ್ಥೆ ಮಾಡಿದ್ದರು. ಅದರ ಕೈಯಲ್ಲಿ ಕ್ಯಾಮೆರಾ ಹುದುಗಿಸಿದರು. ಈ ಕ್ಯಾಮೆರಾ ಟೀವಿ ರಿಮೋಟುಗಳಲ್ಲಿ ಅಥವಾ ಸ್ಮಾರ್ಟ್‌ ಫೋನಿನ ಕ್ಯಾಮೆರಾ ಬಳಸುವ ‘ಇನ್‌ಫ್ರಾರೆಡ್‌’ ಬೆಳಕನ್ನು ಚೆಂಡಿನ ಮೇಲೆ ಇಟ್ಟು, ಅದರ ಚಲನೆಯನ್ನು ಹಿಂಬಾಲಿಸುವಂತೆ ಮಾಡಿದರು. ಇದು ಒಂದೇ ಕೈ ಆದ್ದರಿಂದ ಚೆಂಡನ್ನು ಸರ್ವ್‌ ಮಾಡಲು ಆಗುವುದಿಲ್ಲವಷ್ಟೆ. ಆದ್ದರಿಂದ ಟೇಬಲ್‌ ಟೆನಿಸಿನ ಆಟದ ನಿಯಮವನ್ನು ತುಸು ಬದಲಿಸಿ, ಕೇವಲ ಎದುರಾಳಿಯನ್ನು ಸೋಲಿಸಲು ಈ ರೋಬಾಟು ಪ್ರಯತ್ನಿಸುವಂತೆ ಯೋಜಿಸಿದರು. ಎದುರಾಳಿಯ ಕೈಯಲ್ಲಿ ಇರುವ ಬ್ಯಾಟಿನಲ್ಲಿ ‘ಎಲ್‌ಇಡಿ’ ದೀಪಗಳಿದ್ದುದರಿಂದ ಅದರ ಚಲನೆಯನ್ನೂ ರೋಬಾಟು ಸುಲಭವಾಗಿ ಗಮನಿಸಬಹುದಾಗಿತ್ತು.

ಆರಂಭದಲ್ಲಿ ರೋಬಾಟಿಗೆ ಸ್ವಲ್ಪ ತರಬೇತಿ ನೀಡಿದರು. ಇದಕ್ಕಾಗಿ ಟೇಬಲ್‌ ಟೆನಿಸ್‌ ಆಟವಾಡುವಾಗ ಚೆಂಡು ಹಾರುವ ದಿಕ್ಕು, ಅದರ ವೇಗ, ಅದು ಟೇಬಲ್ಲನ್ನು ಯಾವ ದಿಕ್ಕಿನಿಂದ ತಾಕಿದರೆ ಹೇಗೆ ಹಾರುತ್ತದೆ, ಗಿರ್ರನೆ ತಿರುಗುತ್ತಾ ಬರುವಾಗ ಅದರ ಚಲನೆ ಹೇಗಿರುತ್ತದೆ ಮುಂತಾದುವುಗಳ ಲೆಕ್ಕಾಚಾರಗಳನ್ನು ಡೀಪ್‌ ಮೈಂಡ್‌ ತಂತ್ರಾಂಶಕ್ಕೆ ಕಲಿಸಿದರು. ಹೀಗೆ ಅದು ಮುಂದೆ ಚೆಂಡು ಯಾವ ದಿಕ್ಕಿನಿಂದ ಎಷ್ಟು ವೇಗದಿಂದ ಹಾರಿ ಬರುತ್ತಿದೆ ಎಂಬುದನ್ನು ಗಮನಿಸಿದರೆ, ಅದರ ಮುಂದಿನ ಹಾದಿ ಎಲ್ಲಿ ಇರುತ್ತದೆ ಎಂದು ಲೆಕ್ಕ ಹಾಕಬಹುದಿತ್ತು. ಈ ತಂತ್ರಾಂಶವನ್ನು ಬಳಸಿಕೊಂಡು ಎದುರಾಳಿಯ ಚೆಂಡನ್ನು ಹೊಡೆದ ಕ್ಷಣ ಅದನ್ನು ಗುರುತಿಸಿ ಲೆಕ್ಕಾಚಾರ ಹಾಕುವಂತೆ ರೋಬಾಟು ಕಲಿತಿತ್ತು. ತದನಂತರ ಇಪ್ಪತ್ತೊಂಬತ್ತು ನುರಿತ ಆಟಗಾರರ ಜೊತೆಗೆ ಇದನ್ನು ಆಡಲು ಬಿಡಲಾಯಿತು. ಈ ಎಲ್ಲ ಆಟಗಳಲ್ಲಿಯೂ ಎಷ್ಟು ಬಾರಿ ಅದು ಚೆಂಡನ್ನು ಹೊಡೆಯಲು ತಪ್ಪುತ್ತದೆ, ಎಷ್ಟು ಬಾರಿ ಎದುರಾಳಿಗೆ ಹೊಡೆಯಲು ಕಷ್ಟವಾಗುವಂತೆ ಮಾಡುತ್ತದೆ ಎಂದೂ ಲೆಕ್ಕ ಹಾಕಿದ್ದಾರೆ. ಡೀಪ್‌ ಮೈಂಡ್‌ ರೋಬಾಟು ನಲವತ್ತೊಂಬತ್ತು ಶತಾಂಶಕ್ಕಿಂತ ಹೆಚ್ಚು ಆಟಗಳಲ್ಲಿ ಗೆದ್ದಿತ್ತು. ಅಂದರೆ ಹೆಚ್ಚೂ ಕಡಿಮೆ ಮನುಷ್ಯನಿಗೆ ಸಾಟಿ ಎನ್ನಬಹುದು.

ಹೀಗೆಂದು ಈಗಲೇ ಇದನ್ನು ‘ವರ್ಲ್ಡ್ ಕಪ್‌’ ಅನ್ನು ಆಡಲು ಕಳಿಸಲಾಗುವುದಿಲ್ಲ ಬಿಡಿ! ಏಕೆಂದರೆ ಗಿರ್ರನೆ ತಿರುಗುವ ಚೆಂಡಿನ ಚಲನೆಯನ್ನು ಇದು ನಿಖರವಾಗಿ ಗುರುತಿಸುವುದಿಲ್ಲ. ಹಾಗೆಯೇ ಗಿರ್ರನೆ ಎಸೆಯುವುದೂ ಬರುವುದಿಲ್ಲ. ಅತಿ ವೇಗದ ಶಾಟ್‌ ಬಂದಾಗ ಹೆಚ್ಚು ತಪ್ಪು ಮಾಡುತ್ತದೆ. ಥೇಟ್‌ ಹೊಸ ಆಟಗಾರರಂತೆ ಎನ್ನುತ್ತಾರೆ, ಸಂಕೇತಿ. ಆದರೆ ಇದುವರೆಗಿನ ಫಲಿತಾಂಶ ರಿಯಲ್‌ ಟೈಂನಲ್ಲಿ ಮನುಷ್ಯರ ಜೊತೆ, ಜೊತೆಗೇ ವರ್ತಿಸುವಂತಹ ರೋಬಾಟುಗಳ ಸೃಷ್ಟಿ ಸಾಧ್ಯ ಎಂದು ತಿಳಿಸಿದೆ.

ಮುಂದೆ ಇದು ಟೇಬಲ್‌ ಟೆನಿಸ್‌ ಆಟಗಾರರಿಗೆ ತರಬೇತಿ ನೀಡುವ ಯಂತ್ರವಾಗಬಹುದು. ಇದ್ದಕ್ಕಿದ್ದ ಹಾಗೆ ದನ–ಕರುಗಳು ಎದುರಾದಾಗ ಸ್ವಯಂಚಾಲಿತ ಕಾರಿನಲ್ಲಿ ಏನು ಮಾಡಬೇಕು ಎನ್ನುವುದನ್ನು ರೂಪಿಸಲು ಸಹಾಯ ಮಾಡಬಹುದು. ಅಥವಾ ಚೀನಾದ ವಿಶ್ವಚಾಂಪಿಯನ್‌ ಫಾನ್‌ ತ್ಸೆ ತುಂಗರನ್ನು ಪಟ್ಟದಿಂದ ಕೆಳಗಿಳಿಸಲೂಬಹುದು. ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT