ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನವೂ ಮಾತಾದಾಗ!

ಮೌನದ ಹಿಂದಿರುವ ಅರ್ಥ ಮತ್ತು ಮಾಹಿತಿಯು ವ್ಯಕ್ತಿಗಳ ನಡುವೆ ಅತ್ಯಂತ ನಿಖರವಾಗಿ ವಿನಿಮಯವಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.
Published 9 ಆಗಸ್ಟ್ 2023, 0:20 IST
Last Updated 9 ಆಗಸ್ಟ್ 2023, 0:20 IST
ಅಕ್ಷರ ಗಾತ್ರ

ಮೌನವೂ ಮಾತಾಗುವುದೇ? ಹಾಗಂದರೆ ಅರ್ಥವೇನು? ಕೆಲವೊಂದು ಸಂದರ್ಭಗಳಲ್ಲಿ ಮೌನ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಾಕಷ್ಟು ವಿಚಾರಗಳನ್ನು ಮೌನವೇ ಬಿಡಿಸಿ ಹೇಳುತ್ತದೆ; ಅನೇಕ ವಿಚಾರಗಳನ್ನು ವ್ಯಾಖ್ಯಾನಿಸುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಮನಃವಿಜ್ಞಾನ. ಆದರೆ, ಇಲ್ಲೊಂದು ಹೊಸ ಸಂಶೋಧನೆಯಾಗಿದೆ. ಮೌನದ ಹಿಂದಿರುವ ಅರ್ಥ ಮತ್ತು ಮಾಹಿತಿಯು ವ್ಯಕ್ತಿಗಳ ನಡುವೆ ಅತ್ಯಂತ ನಿಖರವಾಗಿ ವಿನಿಮಯವಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.

ಇದು ಟೆಲಿಪತಿಯ ಮತ್ತೊಂದು ಸ್ವರೂಪವಿದ್ದಂತೆ. ಮಾತನ್ನು ಬಾಯಿ ಬಿಟ್ಟು ಹೇಳಬೇಕು ಎಂದೇನೂ ಇಲ್ಲ. ಶಬ್ದ, ಬರವಣಿಗೆ ಅಥವಾ ದೃಶ್ಯಾವಳಿಗಳ ಮೂಲಕವೇ ವಿಚಾರ ವಿನಿಮಯವಾಗಬೇಕು ಎಂಬುದು ಹಳೆಯ ವ್ಯಾಖ್ಯಾನ. ಜೀವವಿಕಾಸದಲ್ಲಿ ಮಾನವ ಪ್ರಭೇದಕ್ಕಿಂತ ಸುಧಾರಿಸಿದ ಕೆಲವು ಜೀವಿಗಳು ಮಾತನಾಡದೇ ಮೌನದಲ್ಲೇ ಎಲ್ಲ ರೀತಿಯ ಸಂವಹನ ಮಾಡುತ್ತವೆ ಎಂಬ ಮಾತಿದೆ. ಕೇವಲ ವಿಜ್ಞಾನದ ಕಥೆ–ಕಾದಂಬರಿಗಳಲ್ಲಿ ಮಾತ್ರವೇ ಇದ್ದ ಅನ್ಯಗ್ರಹಜೀವಿಗಳ ಬಗೆಗಿನ ಈ ಸಿದ್ಧಾಂತದ ಪ್ರಕಾರ, ಈ ಜೀವಿಗಳಿಗೆ ಬಾಯಿ ಕೇವಲ ಆಹಾರ ಸ್ವೀಕರಿಸುವ ಅಂಗವಾಗಷ್ಟೇ ಉಳಿದಿದ್ದು, ಮಾತನಾಡಲು ಅಲ್ಲ. ಅವು ಮನಸ್ಸಿನಲ್ಲೇ ಪರಸ್ಪರ ಮಾತನಾಡಿಕೊಳ್ಳುತ್ತವೆ. ಭೂಮಿಗೆ ಭೇಟಿ ನೀಡಿವೆ ಎನ್ನಲಾದ ಅನ್ಯಗ್ರಹ ಜೀವಿಗಳ ಬಗ್ಗೆ ಇರುವ ಕೆಲವು ವರದಿಗಳಲ್ಲಿ, ಕಥೆಗಳಲ್ಲಿ ಈ ಬಗೆಯ ವಿವರಣೆ ಇದೆ.

‘ಟೆಲಿಪತಿ’ ಎನ್ನುವುದು ಕೇವಲ ಅನ್ಯಗ್ರಹ ಜೀವಿಗಳಲ್ಲಿ ಮಾತ್ರವೇ ಅಲ್ಲ; ಮಾನವರಿಗೂ ಅನ್ವಯವಾಗುತ್ತದೆ. ಮೌನದಲ್ಲಿ ಸಾಕಷ್ಟು ವಿಚಾರ ವಿನಮಯ ಆಗುತ್ತದೆ ಎಂದು ಅಮೆರಿಕದ ಬಾಲ್ಟಿಮೋರ್‌ನ ಮೇರಿಲ್ಯಾಂಡ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್‌ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಮತ್ತು ಮನೋವಿಜ್ಞಾನ ವಿಭಾಗದ ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ. ಈ ಕುರಿತು ಅಲ್ಲಿಯ ಮುಖ್ಯ ವಿಜ್ಞಾನಿ ರುಯಿ ಝೀ ಗೋ ನೇತೃತ್ವದ ತಂಡದ ಸಂಶೋಧನಾ ವರದಿಯನ್ನು ಅಮೆರಿಕದ ಪ್ರತಿಷ್ಠಿತ ‘ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌’ ನಿಯತಕಾಲಿಕೆಗೆ ಮಂಡಿಸಲಾಗಿದೆ.

ಇದಕ್ಕಾಗಿ ಶಬ್ದಭ್ರಮೆಯೊಂದನ್ನು ಸೃಷ್ಟಿಸಿ ಪ್ರಯೋಗ ಮಾಡಲಾಗಿದೆ. ಒಂದು ಸುದೀರ್ಘ ಸಂಭಾಷಣೆಯೊಂದನ್ನು ಧ್ವನಿ ಮುದ್ರಿಸಿ ಅದನ್ನು ಮೊದಲು ತಂಡವೊಂದರ ಸದಸ್ಯರಿಗೆ ಕೇಳಿಸಲಾಗಿದೆ. ನಂತರ ಅದೇ ಧ್ವನಿಮುದ್ರಣದ ಒಟ್ಟು ಕಾಲಾವಧಿಯನ್ನು ಲಂಬಿಸಿ ಮತ್ತೆ ಅದೇ ಸದಸ್ಯರಿಗೆ ಕೇಳಿಸಲಾಗಿದೆ. ಬಳಿಕ, ಮೌನ ಭ್ರಮೆಯೊಂದನ್ನು ಸೃಷ್ಟಿಸಲಾಗಿದೆ. ಅಂದರೆ, ಕೆಲವು ಕಾಲ ಅದೇ ತಂಡದ ಸದಸ್ಯರನ್ನು ಧ್ವನಿಮುದ್ರಣದ ಮೂಲ ಕಾಲವಾಧಿಯನ್ನು ಕಾಲ ಮೌನದಲ್ಲಿ ಕೂರಿಸುವುದು. ಆಗ ಅಚ್ಚರಿ ಎಂಬಂತೆ, ಮೌನದ ಅವಧಿಯು, ಮೂಲ ಧ್ವನಿಮುದ್ರಣದ ಲಂಬಿಸಿದ ಅವಧಿಯಷ್ಟೇ ದಾಖಲಾಗಿದೆ. ಅದರರ್ಥ ಶಬ್ದ ಹಾಗೂ ಮೌನ ಸಂವಹನದಲ್ಲಿ ಸಮಾನ ಗುಣಲಕ್ಷಣಗಳನ್ನು ಹೊಂದಿವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಇದೇ ಸಂಶೋಧನಾ ತಂಡದ ಸದಸ್ಯ ಮನೋವಿಜ್ಞಾನ ಮತ್ತು ಮೆದುಳು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಚಾಸ್ ಫೈರ್‌ ಸ್ಟೋನ್‌ ಅವರ ಪ್ರಕಾರ, ‘ತತ್ವಜ್ಞಾನಿಗಳು ಮೌನವನ್ನು ಅತ್ಯಂತ ನಿಖರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ಬಹು ಹಿಂದೆಯೇ ವಾದ ಮಂಡಿದ್ದಾರೆ. ಆದರೆ, ಆ ವಾದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ನಮ್ಮ ಅರ್ಥೈಸುವಿಕೆ ಹಾಗೂ ಮನಸ್ಸು ಪ್ರಯೋಗಾಲಯದಲ್ಲಿ ಮಾಡಿರುವ ಪ್ರಯೋಗವು ಶಬ್ದ ಹಾಗೂ ಮೌನವನ್ನು ಸಮಾನಾಂತರವಾಗಿ ಪರೀಕ್ಷಿಸಿದ್ದೇವೆ. ಮೆದುಳಿಗೆ ಭ್ರಮೆಗಳನ್ನು ಸೃಷ್ಟಿಸಿ ಶಬ್ದ ಹಾಗೂ ಮೌನಕ್ಕೆ ಒಳಪಡಿಸಿದಾಗ ಎರಡೂ ಸನ್ನಿವೇಶಗಳನ್ನು ಮೆದುಳು ಸಮಾನವಾಗಿ ಅರ್ಥ ಮಾಡಿಕೊಂಡಿದೆ. ಆದ್ದರಿಂದ, ಮೌನದಲ್ಲಿ ನಡೆಯುವ ಸಂವಹನ ಅತಿ ನಿಖರವಾದುದು ಎಂಬುದಕ್ಕೆ ಈ ಪ್ರಯೋಗ ಹಾಗೂ ಸಂಶೋಧನೆಯು ಪ್ರಬಲವಾದ ಬುನಾದಿಯನ್ನು ಹಾಕಿಕೊಟ್ಟಿದೆ’ ಎಂದು ವ್ಯಾಖ್ಯಾನಿಸಿದ್ದಾರೆ.

ಇದಕ್ಕಾಗಿ ಒಟ್ಟು ಒಂದು ಸಾವಿರ ಮಂದಿಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ. ಶಬ್ದ ಹಾಗೂ ಮೌನ ಭ್ರಮೆಗಳ ಪೈಕಿ ಬಹುತೇಕರಿಗೆ ಸಮಾನವಾದ ಸಮಯದಲ್ಲಿ ಸಮಾನವಾದ ಅರ್ಥ ಪ್ರಾಪ್ತಿಯಾಗಿದೆ. ಅಲ್ಲದೇ, ಈ ಪ್ರಯೋಗಾರ್ಥಿಗಳಿಗೆ ಬೇರೆ ಬೇರೆ ಜಾಗಗಳಲ್ಲಿ ಪ್ರಯೋಗಕ್ಕೆ ಒಳಪಡುವಂತೆ ಅವಕಾಶ ಮಾಡಿಕೊಡಲಾಗಿತ್ತು. ಉದಾಹರಣೆಗೆ ಬಸ್‌ನಲ್ಲಿ ಸಂಚರಿಸುವಾಗ, ಹೊಟೇಲ್‌ನಲ್ಲಿ, ಮಾರುಕಟ್ಟೆಗಳಲ್ಲಿ, ರೈಲುನಿಲ್ದಾಣಗಳಲ್ಲಿ. ಈ ಎಲ್ಲ ಪ್ರದೇಶಗಳಲ್ಲಿ ಶಬ್ದ ಹಾಗೂ ಮೌನಸಂದೇಶಗಳು ಸಮಾನವಾದ ಸಂವಹನ ಪಾತ್ರ ವಹಿಸಿರುವುದನ್ನು ಪ್ರಯೋಗ ನಿರೂಪಿಸಿದೆ.

ಶಬ್ದವೊಂದು ಅಂತ್ಯಗೊಂಡಾಗ ಉಳಿಯುವ ಮೌನದ ಬಗ್ಗೆಯೂ ಸಂಶೋಧನೆ ನಡೆಲಾಗಿದೆ. ಆ ಮೌನವು ಸಂವಹನ ಪ್ರಕ್ರಿಯೆಯ ಅತಿ ಮುಖ್ಯ ಘಟ್ಟ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂದರೆ, ವಿಚಾರವೊಂದಕ್ಕೆ ತಾರ್ಕಿಕ ಅಂತ್ಯ ನೀಡುವುದು ಅಥವಾ ತೀರ್ಮಾನ ತೆಗೆದುಕೊಳ್ಳುವುದು ಈ ಮೌನಹಂತದಲ್ಲಿ. ಅಲ್ಲದೇ, ಈ ಹಂತದಲ್ಲೂ ವ್ಯಕ್ತಿಗಳ ನಡುವೆ ಸಂವಹನ ಮುಂದುವರೆದಿರುತ್ತದೆ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT