ಜಾಗತಿಕ ತಾಪಮಾನ ಹೆಚ್ಚಳ ಮಹಾ ವಿಪ್ಲವದ ಸಂಕೇತ ಎಂದ ವಿಶ್ವಸಂಸ್ಥೆ ಕಾರ್ಯದರ್ಶಿ

ವಿಶ್ವಸಂಸ್ಥೆ: 'ಈ ಶತಮಾನದ ಅಂತ್ಯದ ವೇಳೆಗೆ ಭೂಮಿಯ ಮೇಲಿನ ಜಾಗತಿಕ ತಾಪಮಾನ ಅತ್ಯಂತ ಅಪಾಯಕಾರಿ ಮಟ್ಟ ತಲುಪಲಿದೆ' ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಮೇಲಿನ ಫ್ರೇಮ್‌ವರ್ಕ್ ಕನ್ವೆನ್ಷನ್ ವರದಿ (UNFCCC) ಎಚ್ಚರಿಕೆ ನೀಡಿದೆ.
ವರದಿಯ ಪ್ರಕಾರ '21 ನೇ ಶತಮಾನದ ಅಂತ್ಯದ ವೇಳೆಗೆ ತಾಪಮಾನ ಹೆಚ್ಚಳವು ಕೈಗಾರಿಕಾ ಯುಗದ ಆರಂಭದ ಪೂರ್ವಮಟ್ಟಕ್ಕಿಂತ 2.7 ಡಿಗ್ರಿ ಸೆಲ್ಸಿಯಸ್ ವೃದ್ಧಿಯಾಗಲಿದೆ.
'ಜಾಗತಿಕ ತಾಪಮಾನ ಕೈಗಾರಿಕಾ ಯುಗದ ಪೂರ್ವದಲ್ಲಿ ನಿಗದಿ ಮಾಡಿದ ಪ್ರಮಾಣಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಒಳಗೆ ಇರಬೇಕು. ಜಾಗತಿಕ ತಾಪಮಾನ ಹೆಚ್ಚಳದಿಂದ ಆಗಬಹುದಾದ ಅಪಾಯಗಳನ್ನು ಇದರಿಂದ ತಪ್ಪಿಸಬಹುದು' ಎಂದು ವಿಜ್ಞಾನಿಗಳು ವರದಿಯಲ್ಲಿ ಹೇಳಿದ್ದಾರೆ.
ಯುಎನ್‌ಎನ್‌ಎಫ್‌ಸಿಸಿ ವರದಿ ಹಂಚಿಕೊಂಡು ಟ್ವೀಟ್ ಮಾಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ‘ಪ್ರಸ್ತುತ ಜಾಗತಿಕ ತಾಪಮಾನದ ಬಗ್ಗೆ ಬಂದಿರುವ ವರದಿಯು ಮಹಾ ವಿಪ್ಲವದ ಸಂಕೇತ‘ ಎಂದು ಅಭಿಪ್ರಾಯಪಟ್ಟಿದ್ದಾರೆ.
The @UNFCCC report shows we are breaking the #ParisAgreement promise to keep global heating to 1.5°C.
We can still achieve that target, but are almost out of time. We need real ambition & cooperation to win the race against the climate crisis. https://t.co/dxPD60jQh8 pic.twitter.com/Z1EWVA1aga
— António Guterres (@antonioguterres) September 18, 2021
‘ಕೈಗಾರಿಕಾ ಪೂರ್ವ ಜಾಗತಿಕ ತಾಪಮಾನದ 1.5 ಡಿಗ್ರಿ ಸೆಲ್ಸಿಯಸ್ ಗುರಿಯನ್ನು ಮುಂದುವರಿಸಲು ಆರು ವರ್ಷಗಳ ಹಿಂದೆ ಪ್ಯಾರಿಸ್ ಒಪ್ಪಂದದಲ್ಲಿ ವಾಗ್ದಾನವನ್ನು ಮಾಡಲಾಗಿದ್ದು, ಈಗ ಅದನ್ನು ಮೀರಿ ತಾಪಮಾನ ಏರುತ್ತಿದೆ ಎಂದು ವರದಿ ಸ್ಪಷ್ಟವಾಗಿ ತಿಳಿಸುತ್ತದೆ. ಈ ಗುರಿಯನ್ನು ನಾವು ತಲುಪಲು ವಿಫಲವಾದರೆ ಭೂಮಿಯ ಮೇಲೆ ಭಾರೀ ಪ್ರಮಾಣದ ಜೀವಹಾನಿ ಹಾಗೂ ಜೀವನೋಪಾಯದ ದಾರಿಯನ್ನು ಕಳೆದುಕೊಳ್ಳಬೇಕಾಗುತ್ತದೆ‘ ಎಂದು ಗುಟೆರಸ್ ಎಚ್ಚರಿಸಿದ್ದಾರೆ.
‘ಈ ಗುರಿಯನ್ನು ಸಾಧಿಸಲು ನಮ್ಮಲ್ಲಿ ಮಾರ್ಗಗಳಿವೆ. ಆದರೆ, ಸಮಯವಿಲ್ಲ‘ ಎಂದು ಗುಟೆರಸ್ ಹೇಳಿದ್ಧಾರೆ.
‘2030 ರ ವೇಳೆಗೆ ಭೂಮಿಯ ಮೇಲಿನ ವಾಯುಮಾಲಿನ್ಯದ ಪ್ರಮಾಣವನ್ನು ಶೇ 45 ರಷ್ಟು ತಗ್ಗಿಸಬೇಕಿದೆ. ಅಂದರೆ ಮಾತ್ರ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ ಕಾಪಾಡುವಿಕೆ ಗುರಿಯನ್ನು ಸಾಧಿಸಲು ಸಾಧ್ಯ‘ ಎಂದು ವಿಜ್ಞಾನಿಗಳು UNFCCC ವರದಿಯಲ್ಲಿ ಹೇಳಿದ್ದಾರೆ.
‘2010ಕ್ಕೆ ಹೋಲಿಸಿದರೆ 2030 ರಲ್ಲಿ ವಾಯುಮಾಲಿನ್ಯದ ಪ್ರಮಾಣ ಶೇ 16 ರಷ್ಟು ಹೆಚ್ಚಳವಾಗಲಿದೆ. ಇದು ಜಾಗತಿಕ ತಾಪಮಾನ ಶತಮಾನದ ಅಂತ್ಯದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಲು ಪ್ರಮುಖ ಕಾರಣ‘ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
‘ಜಾಗತಿಕ ತಾಪಮಾನವು ಈಗಾಗಲೇ ನಿಗದಿಗಿಂತ 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಳ ಕಂಡಿದೆ‘ ಎಂದು ವರದಿ ಹೇಳಿದೆ. ‘ಇದರ ಸೂಚನೆಗಳು ಭೂಮಿಯ ಮೇಲೆ ಈಗಾಗಲೇ ಪ್ರಕಟಿತಗೊಂಡಿದ್ದು, ಈ ವರ್ಷ ದಕ್ಷಿಣ ಯುರೋಪ್ ಹಾಗೂ ಪಶ್ಚಿಮ ಅಮೆರಿಕದಲ್ಲಿ ಸಂಭವಿಸಿದ ಭೀಕರ ಕಾಳ್ಗಿಚ್ಚು ಮತ್ತು ಚೀನಾ ಹಾಗೂ ಜರ್ಮನಿಯಲ್ಲಿ ಉಂಟಾದ ಇತ್ತೀಚಿನ ವಿನಾಶಕಾರಿ ಪ್ರವಾಹಗಳು ಕಣ್ಣಮುಂದಿರುವ ಉದಾಹರಣೆ‘ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶುಕ್ರವಾರ ನಡೆದ ವಿಶ್ವಸಂಸ್ಥೆಯ ಆರ್ಥಿಕ ವೇದಿಕೆಯಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿರುವ ಗುಟೆರಸ್, ‘ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಜಾಗತಿಕ ಹವಾಮಾನ ಸಮಾವೇಶವು, ವೈಫಲ್ಯದ ಅಪಾಯವನ್ನು ಎದುರು ನೋಡುತ್ತಿದೆ. ಈ ಸಮ್ಮೇಳನದಲ್ಲಿ ವಿಶ್ವ ನಾಯಕರು ವಾಯುಮಾಲಿನ್ಯದ ಗುರಿಗಳ ಕುರಿತು ಪ್ರಮುಖವಾಗಿ ಚರ್ಚಿಸಲಿದ್ದಾರೆ‘ ಎಂದಿದ್ದಾರೆ.
‘ಪ್ರಸ್ತುತ ವರದಿಯ ಆತಂಕಕಾರಿ ಮಾಹಿತಿಯನ್ನು ನೋಡಿದರೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಮಾತ್ರ ನಾವು ಭೂಮಿಯನ್ನು ವಾಸಯೋಗ್ಯ ಗ್ರಹವನ್ನಾಗಿ ಉಳಿಸಿಕೊಳ್ಳಬಹುದು‘ ಎಂದು ಗುಟೆರಸ್ ಹೇಳಿದ್ದಾರೆ.
ಅಭಿವೃದ್ದಿ ಹೊಂದಿದ ದೇಶಗಳು ಈ ಹಿಂದೆ ಅಭಿವೃದ್ಧಿಶೀಲ ದೇಶಗಳಿಗೆ ನೀಡಿದ ಭರವಸೆಗಳನ್ನು ಪೂರ್ಣಗೊಳಿಸುವಂತೆಯೂ ಗುಟೆರಸ್ ಮನವಿ ಮಾಡಿದ್ಧಾರೆ.
ಇನ್ನೊಂದೆಡೆ ಈ ವರದಿಯ ಬಗ್ಗೆ ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ‘2030 ರ ವೇಳೆಗೆ ಮಿಥೇನ್ ಹೊರಸೂಸುವಿಕೆಯನ್ನು ಸುಮಾರು ಶೇ 30 ರಷ್ಟು ಕಡಿಮೆ ಮಾಡಲು ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಜಾಗತಿಕ ಪ್ರತಿಜ್ಞೆ ಮಾಡಿವೆ‘ ಎಂದು ಶುಕ್ರವಾರ ಘೋಷಿಸಿದ್ದಾರೆ.
ಡೆನ್ಮಾರ್ಕ್ ಮತ್ತು ಕೋಸ್ಟರಿಕಾದ ಇಂಧನ ಮಂತ್ರಿಗಳು ತೈಲ ಮತ್ತು ಅನಿಲ ಉತ್ಪಾದನೆಯಿಂದ ದೂರ ಸರಿಯುವಂತೆ ಅನೇಕ ರಾಷ್ಟ್ರಗಳನ್ನು ಪ್ರೋತ್ಸಾಹಿಸುವ ಉಪ ಕ್ರಮವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಒಡಿಶಾದ ಬ್ಲ್ಯಾಕ್ ಟೈಗರ್ ರಹಸ್ಯ ಬಹಿರಂಗಪಡಿಸಿದ ವಿಜ್ಞಾನಿಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.