ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಅಂಬೇಡ್ಕರ್ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ!

ಶತಕ ಮುಟ್ಟಿದ ‘ಅಂಬೇಡ್ಕರ್‌ ಓದು’ ಸರಣಿ: ಡಿ.6 ಪರಿನಿರ್ವಾಣ ದಿನ ವಿಶೇಷ
Last Updated 5 ಡಿಸೆಂಬರ್ 2020, 8:26 IST
ಅಕ್ಷರ ಗಾತ್ರ
ADVERTISEMENT
""

ಡಾ.ಬಿ.ಆರ್‌.ಅಂಬೇಡ್ಕರ್‌ ಮೊದಲ ಬಾರಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದಾರೆ!

ಯೂಟ್ಯೂಬ್‌ನಲ್ಲಿ ಅಂಬೇಡ್ಕರ್‌ ಬರಹ ಮತ್ತು ಭಾಷಣಗಳನ್ನು ಕನ್ನಡದಲ್ಲೇ ಕೇಳಿಸಿಕೊಳ್ಳುವ ಅವಕಾಶ ಇದುವರೆಗೆ ಇರಲಿಲ್ಲ. ಅದನ್ನು ಬಳ್ಳಾರಿಯ ಜಾನಪದ ಲೇಖಕ ಅರುಣ್‌ ಜೋಳದ ಕೂಡ್ಲಿಗಿ ಸಾಧ್ಯ ಮಾಡಿದ್ದಾರೆ. ಈ ಓದು ಒಂದು ಲಕ್ಷಕ್ಕೂ ಹೆಚ್ಚು ಬಾರಿ ಯೂಟ್ಯೂಬ್‌ ನೋಡುಗರ ಗಮನ ಸೆಳೆದಿದೆ.

‘ಅಂಬೇಡ್ಕರ್‌ ಓದು–ಕೇಳು’ವ ಸರಣಿಗಾಗಿಯೇ ರಾಜ್ಯದ ವಿವಿಧ ಭಾಗಗಳ ಲೇಖಕರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು, ಉಪನ್ಯಾಸಕರು, ಪತ್ರಕರ್ತರು, ಕಲಾವಿದರು, ರಂಗಕರ್ಮಿಗಳು, ರೈತರು ಸೇರಿದಂತೆ ಹಲವು ಕ್ಷೇತ್ರಗಳ ಅಂಬೇಡ್ಕರ್‌ ಅಭಿಮಾನಿಗಳು ಒಟ್ಟುಗೂಡಿದ್ದಾರೆ. ಅವರಲ್ಲಿ ಮಹಿಳೆಯರು ಹೆಚ್ಚಿರುವುದು ವಿಶೇಷ.

ಈ ಸರಣಿಯು ಪರಿನಿರ್ವಾಣ ದಿನವಾದ ಡಿ.6ಕ್ಕೆ ಶತಕ ಮುಟ್ಟುವ ಸಂಭ್ರಮದಲ್ಲಿರುವುದು ಇನ್ನೊಂದು ವಿಶೇಷ. 100ನೇ ಕಂತಿನಲ್ಲಿ ಚಿಂತಕ ದೇವನೂರ ಮಹಾದೇವ ಅವರು ಓದಿರುವುದು ವಿಶೇಷ. ಎರಡೂವರೆ ತಿಂಗಳ ಹಿಂದೆ ಓದು ಶುರುವಾದಾಗ ಮೊದಲಿಗೆ ಲೇಖಕಿ ಎಚ್‌.ಎಸ್‌.ಅನುಪಮಾ ಓದಿದ್ದರು.

ಅಂಬೇಡ್ಕರ್‌ ಬರಹ–ಭಾಷಣಗಳು ಸದ್ಯ ಕನ್ನಡದಲ್ಲಿ ಸುಮಾರು 15 ಸಾವಿರ ಪುಟದಷ್ಟಿದ್ದು, 1 ಸಾವಿರ ಪುಟದಷ್ಟನ್ನಾದರೂ 2021ರ ಅಂಬೇಡ್ಕರ್‌ ಜಯಂತಿ ಹೊತ್ತಿಗೆ ಓದಿಸಿ ದಾಖಲಿಸುವ ಉದ್ದೇಶ ಅರುಣ್‌ ಅವರದ್ದು. ಯೂಟ್ಯೂಬ್‌ಗಿಂತಲೂ ಹೆಚ್ಚು ಜನಪ್ರಿಯ ಮಾಧ್ಯಮ ಎನ್ನಲಾಗಿರುವ ಪಾಡ್‌ಕಾಸ್ಟ್‌ನಲ್ಲೂ ಅಂಬೇಡ್ಕರ್ ಓದಿನ ಆಡಿಯೋಗಳನ್ನು ಅಳವಡಿಸಲು ಆರಂಭಿಸಿದ್ದಾರೆ. ಕಳೆದ ಅಂಬೇಡ್ಕರ್‌ ಜಯಂತಿಯ ದಿನ ಅಂಬೇಡ್ಕರ್‌ ಓದು ಲೈವ್‌ ಸರಣಿಯನ್ನೂ ಪ್ರಕಟಿಸಿದ್ದರು.

‘ಅಂಬೇಡ್ಕರ್‌ ಅವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಝೀ ವಾಹಿನಿಯಲ್ಲಿ ಶುರುವಾದ ಬಳಿಕ ವಿಕಿಪೀಡಿಯಾದಲ್ಲಿ ಅವರ ಕುರಿತು ಹೆಚ್ಚು ಮಂದಿ ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿಯೇ ಈ ಅಭಿಯಾನಕ್ಕೆ ಪ್ರೇರಣೆ. ಇದುವರೆಗೆ ಕೆಲವು ಸಂಸ್ಥೆಗಳಷ್ಟೇ ನವ ಮಾಧ್ಯಮಗಳಲ್ಲಿ ಮರಾಠಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಂಬೇಡ್ಕರ್‌ ಓದು ದಾಖಲೀಕರಣ ಪ್ರಯತ್ನವನ್ನು ಮಾಡಿವೆ’ ಎಂದು ಅರುಣ್‌ ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

ಅರುಣ್‌ ಜೋಳದ ಕೂಡ್ಲಿಗಿ

‘ಕುತೂಹಲಕ್ಕಾಗಿ, ಯೂಟ್ಯೂಬ್‌ನಲ್ಲಿ ಅಂಬೇಡ್ಕರ್‌ ಬರಹ, ಭಾಷಣದ ಕನ್ನಡ ಮಾಹಿತಿಗಾಗಿ ಹುಡುಕಾಡಿದಾಗ ಒಂದೇ ಒಂದು ಆಡಿಯೋ ಅಥವಾ ವೀಡಿಯೋ ಮಾಹಿತಿಯೂ ಸಿಗಲಿಲ್ಲ. ಹೀಗಾಗಿ ಯೂಟ್ಯೂಬ್‌ನಲ್ಲಿ ಅಂಬೇಡ್ಕರ್‌ ಅವರನ್ನು ದಾಖಲಿಸುವ ಪ್ರಯತ್ನವನ್ನು ಶುರು ಮಾಡಿದೆ’ ಎಂದು ಸ್ಮರಿಸಿದರು.

‘500 ಕಂತಿನವರೆಗೂ ನಾನೊಬ್ಬನೇ ಓದುವ ಉದ್ದೇಶವಿತ್ತು. ಗೆಳೆಯರೊಡನೆ ಚರ್ಚಿಸಿದಾಗ ಹೆಚ್ಚು ಮಂದಿಗೆ ಅಂಬೇಡ್ಕರ್‌ ಬರಹ–ಭಾಷಣಗಳನ್ನು ತಲುಪಿಸಲು ಹಲವರು ಓದುವುದು ಅಗತ್ಯ ಎಂಬ ಸಲಹೆ ಬಂತು, ಅದನ್ನೇ ಅನುಸರಿಸಿದೆ’ ಎಂದು ತಿಳಿಸಿದರು.

‘ಅಂಬೇಡ್ಕರ್‌ ಬರಹಗಳನ್ನು ಓದಬೇಕೆಂಬ ಆಸಕ್ತಿಯನ್ನು ಸಾಮಾನ್ಯರಲ್ಲಿ ಮೂಡಿಸುವುದು ಈ ಓದಿನ ಹಿಂದಿರುವ ಉದ್ದೇಶ. ಈಗ ಓದಿನ ಸರಣಿಯಲ್ಲಿ ಪಾಲ್ಗೊಂಡವರು ಮೊದಲ ಬಾರಿಗೆ ಅಂಬೇಡ್ಕರ್ ಕೃತಿಗಳನ್ನು ಓದಿದ್ದಾರೆ. ಆ ಬಗ್ಗೆ ಅವರಿಗೆ ಸಂತೋಷ ಮತ್ತು ಹೆಮ್ಮೆ ಇದೆ’ ಎಂದು ಹೇಳಿದರು.

ಓದುವರದ್ದೇ ಆಯ್ಕೆ: ‘ಓದಿನ ಸರಣಿಯಲ್ಲಿ ಪಾಲ್ಗೊಳ್ಳುವವರೇ ಅಂಬೇಡ್ಕರ್ ಬರಹಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ವ್ಯಾಪಕ ಓದು ಸಾಧ್ಯವಿಲ್ಲದ ಕೆಲವರಿಗಷ್ಟೇ ಓದಿನ ಪಠ್ಯವನ್ನು ಆಯ್ಕೆ ಮಾಡಿಕೊಡಲಾಗಿದೆ. ತೃತೀಯ ಲಿಂಗಿಗಳಿಂದಲೂ ಓದಿಸುವ ಪ್ರಯತ್ನ ನಡೆದಿದೆ’ ಎಂದು ತಮ್ಮ ಆಶಯದ ಕುರಿತು ಗಮನ ಸೆಳೆದರು.

‘ಸಂಸತ್ತಿನ ಅಧಿವೇಶನದ ಚರ್ಚೆಗಳು, ಸಂವಿಧಾನ ಸಿದ್ಧತೆಯ ಸಂದರ್ಭದ ಚರ್ಚೆಗಳು ಸುದೀರ್ಘವಾಗಿರುವುದರಿಂದ ಅವುಗಳನ್ನು ಕಿರು ಓದಿನಲ್ಲಿ ಮಂಡಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಅಂಬೇಡ್ಕರ್‌ ಅವರು ಪ್ರಮುಖ ವಿಷಯಗಳ ಕುರಿತು ಕಾಲಕಾಲಕ್ಕೆ ಮಾಡಿರುವ ಭಾಷಣಗಳು ಹಾಗೂ ಬರಹಗಳ ಮುಖ್ಯ ಭಾಗಗಳನ್ನಷ್ಟೇ ಓದಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಓದು ಕನಿಷ್ಠ 15ರಿಂದ 20ನಿಮಿಷವಿರುತ್ತದೆ’ ಎಂದು ಮಾಹಿತಿ ನೀಡಿದರು.

ಓದು ಸರಣಿಗಾಗಿ ಲಿಂಕ್: https://www.youtube.com/playlist?list=PL8Efuak007bLINgguH_YVMFgCCQN6gC7g

***

ಸಂವಿಧಾನದ ಮೂರನೇ ಸುತ್ತಿನ ಕರಡು ಪಠಣಲ್ಲಿ ಅಂಬೇಡ್ಕರ್‌ ಅವರ ಮಾತುಗಳೊಳಗಿನ ಆತಂಕ, ವಿವೇಕ ಮತ್ತು ಎಚ್ಚರಗಳು ಇಂದು ನಮ್ಮನ್ನು ಕೈಹಿಡಿದು ನಡೆಸಲು ಇರುವ ಬೆಳಕಿನಂತೆ ಗೋಚರಿಸುತ್ತದೆ. ಹೀಗಾಗಿ ಸರಣಿಯ 100ನೇ ಕಂತಿನಲ್ಲಿ ಅದನ್ನೇ ಓದಿರುವೆ

–ದೇವನೂರು ಮಹಾದೇವ, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT