ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಕ್ ಸುದ್ದಿಗಳ ವೈರಸ್: ಡಾ. ದೇವಿ ಶೆಟ್ಟಿ ಹೆಸರಿನಲ್ಲೂ ಫೇಕ್ ಆಡಿಯೋ

Last Updated 30 ಮಾರ್ಚ್ 2020, 5:48 IST
ಅಕ್ಷರ ಗಾತ್ರ

ಕೊರೊನಾ ವೈರಸ್ ತಡೆಗಾಗಿ ಲಾಕ್‌ಡೌನ್ ಘೋಷಿಸಿದ ಕೆಲವೇ ದಿನಗಳಲ್ಲಿ ದೇಶಾದ್ಯಂತ ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಸುದ್ದಿಗಳು ವೈರಸ್‌ಗಿಂತಲೂ ವೇಗವಾಗಿ ಹರಡುತ್ತಿವೆ. ಸುಳ್ಳು ಸಂದೇಶಗಳ ಜೊತೆಗೆ, ಕೋವಿಡ್-19 ಕಾಯಿಲೆಗೆ ಸಂಬಂಧಿಸಿದ ವೀಡಿಯೊ, ಫೋಟೋ, ಜಿಫ್ ಫೈಲುಗಳು, ಸರ್ಕಾರಿ ಸೂಚನೆಗಳಂತೆಯೇ ಕಾಣಿಸುವ ಮಾಹಿತಿಯನ್ನು ನಾಗರಿಕ ಸಮಾಜ, ವಿಶೇಷವಾಗಿ ಮನೆಯಲ್ಲೇ ಇರಬೇಕಾದ ಸುಶಿಕ್ಷಿತರೂ ಫಾರ್ವರ್ಡ್ ಮಾಡುತ್ತಾ ಕಾಲ ಕಳೆಯುತ್ತಿರುವುದು, ಈಗಾಗಲೇ ಭಯಗೊಂಡಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಖ್ಯಾತ ವೈದ್ಯರಾದ ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ.ದೇವಿ ಶೆಟ್ಟಿ ಹಾಗೂ ‘ಮೇದಾಂತ ಮೆಡಿಸಿಟಿ’ಯ ಡಾ.ನರೇಶ್ ಟ್ರೆಹಾನ್ ಹೆಸರಿನಲ್ಲಿಯೂ ಸಾಕಷ್ಟು ಸುಳ್ಳು ಮಾಹಿತಿಗಳು ಹರಿದಾಡುತ್ತಿರುವುದು ಮತ್ತು ಅಂಥವನ್ನು ಫಾರ್ವರ್ಡ್ ಮಾಡುತ್ತಿರುವುದು ಸುಶಿಕ್ಷಿತ ವರ್ಗದವರನ್ನೇ ನಾಚುವಂತೆ ಮಾಡಿದೆ. ಇತ್ತೀಚೆಗಷ್ಟೇ ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಅವರ ಹೆಸರಿನ ಆಡಿಯೋ ಕ್ಲಿಪ್ ಒಂದು ಫೇಸ್‌ಬುಕ್, ವಾಟ್ಸ್ಆ್ಯಪ್, ಟ್ವಿಟರ್ - ಹೀಗೆ ಎಲ್ಲೆಡೆ ಹರಿದಾಡಿತು. ಕೆಲವೊಂದು ಸುದ್ದಿ ವಾಹಿನಿಗಳು ಕೂಡ ಡಾ.ಶೆಟ್ಟಿ ಹೆಸರಿನಲ್ಲಿ ಈ ಸಂದೇಶವನ್ನು ಪ್ರಸಾರ ಮಾಡಿದವು. ಕೊನೆಗೆ ಡಾ.ಶೆಟ್ಟಿ ಅವರೇ ‘ಈ ಆಡಿಯೋ ತಮ್ಮದಲ್ಲ’ ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಬೇಕಾಯಿತು.

ಇಷ್ಟೇ ಅಲ್ಲದೆ, ಕೋವಿಡ್-19ಗೆ ಹಳ್ಳಿ ಮದ್ದು, ಆಯುರ್ವೇದ, ಹೋಮಿಯೋ ಔಷಧಿ ಮುಂತಾದ ಹೆಸರಿನಲ್ಲಿಯೂ ಸಾಕಷ್ಟು ಫಾರ್ವರ್ಡೆಡ್ ಸಂದೇಶಗಳು ಹರಿದಾಡುತ್ತಿವೆ. ಇದುವರೆಗೂ ದೃಢೀಕೃತ ಚಿಕಿತ್ಸೆ ಇಲ್ಲ, ಆದರೆ ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು, ಮನೆಯೊಳಗೇ ಇರುವುದು, ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಕ್ರಮದಿಂದ ಮಾತ್ರವೇ ಈ ವೈರಸ್ ವಿರುದ್ಧ ಸದ್ಯಕ್ಕೆ ಹೋರಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರ್ಕಾರಗಳು ಸಂದೇಶ ನೀಡುತ್ತಲೇ ಬಂದಿವೆ.

ಇವನ್ನಷ್ಟೇ ಗಮನದಲ್ಲಿರಿಸಿಕೊಂಡು, ಸರ್ಕಾರ, ಆರೋಗ್ಯ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ ಒದಗಿಸುವ ಅಧಿಕೃತ ಮಾಹಿತಿಯನ್ನಷ್ಟೇ ಫಾರ್ವರ್ಡ್ ಮಾಡುವುದು ಎಲ್ಲರ ಹೊಣೆಗಾರಿಕೆ. ಇಲ್ಲವಾದಲ್ಲಿ, ಫೇಕ್ ಸುದ್ದಿಗಳಿಂದ ಅಮಾಯಕರು ಮತ್ತಷ್ಟು ಭಯಭೀತರಾಗುವ ಆತಂಕವಿದೆ.

ಹೊಸ ಮೊಬೈಲ್ ಬಿಡುಗಡೆ ಮುಂದಕ್ಕೆ

‘ಕೊರೊನಾ ಲಾಕ್‌ಡೌನ್’ ಸ್ಮಾರ್ಟ್ ಫೋನ್ ಕಂಪನಿಗಳ ಮೇಲೂ ಪರಿಣಾಮ ಬೀರಿದೆ. ಸೈಬರ್ ಮೀಡಿಯಾ ರಿಸರ್ಚ್ ಸಂಸ್ಥೆಯ ಅಂದಾಜಿನ ಪ್ರಕಾರ, ಈ ವರ್ಷದ ಪ್ರಥಮಾರ್ಧದಲ್ಲಿ ಭಾರತದಲ್ಲಿನ ಮೊಬೈಲ್ ಉತ್ಪಾದನೆಯ ಪ್ರಮಾಣವು ಶೇ.38ರಿಂದ ಶೇ.40ರಷ್ಟು ಕುಸಿತ ಕಾಣಲಿದೆ.

ಈಗಾಗಲೇ ಶವೋಮಿ, ವಿವೋ ಹಾಗೂ ರಿಯಲ್‌ಮಿ ಸಹಿತ ಹಲವಾರು ಮೊಬೈಲ್ ಕಂಪನಿಗಳು ತಮ್ಮ ಹೊಸ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ಮುಂದೂಡಿವೆ. ಈ ಹಿನ್ನೆಲೆಯಲ್ಲಿ ಆಫ್‌ಲೈನ್ ಮಾರಾಟಗಾರರ ಮೇಲೂ ಇದು ಭಾರೀ ಪರಿಣಾಮವನ್ನು ಬೀರಿದೆ. ಯಾವುದೇ ಕೊಡುಗೆಗಳ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುವ ಮಾರಾಟ ತಂತ್ರಕ್ಕೂ ಕಡಿವಾಣ ಬಿದ್ದಿರುವುದರಿಂದ, ಈಗಾಗಲೇ ಇರುವ ಸ್ಮಾರ್ಟ್ ಫೋನ್‌ಗಳನ್ನು ಯಾವ ರೀತಿ ಮಾರಾಟ ಮಾಡುವುದೆಂಬ ಚಿಂತೆ ಆವರಿಸಿದೆ. ಲಾಕ್‌ಡೌನ್ ತೆರವಾಗುವ ಸಂದರ್ಭದಲ್ಲಿ ಹೊಸ ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನದ ಸೌಕರ್ಯಗಳೊಂದಿಗೆ ಮಾರುಕಟ್ಟೆಗೆ ಬರುವಾಗ, ಸ್ಟಾಕ್ ಇರುವ ಫೋನ್‌ಗಳಿಗೆ ಬೇಡಿಕೆ ಕುಸಿತವಾಗಬಹುದೆಂಬ ಆತಂಕ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT