ಚಿತ್ರದುರ್ಗ: ರಾಜ್ಯದ ಬೆಳೆಗಾರರ ಗಮನ ಸೆಳೆದ ಅಡಿಕೆ ಮಾರುಕಟ್ಟೆಯು ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದಲ್ಲಿದೆ. ಹಲವು ದಶಕಗಳಿಂದ ಈ ಭಾಗದಲ್ಲಿ ಅಡಿಕೆ ಪ್ರಧಾನ ಬೆಳೆಯಾಗಿದೆ ಎಂಬುದರ ಸೂಚಕದಂತೆ ಇದು ಗೋಚರಿಸುತ್ತಿದೆ. ಆದರೂ, ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹಾಗೂ ಹನಿ ನೀರಾವರಿಯ ಸಹಾಯಧನಕ್ಕೆ ಅಡಿಕೆ ಬೆಳೆಯನ್ನು ಪರಿಗಣಿಸುತ್ತಿಲ್ಲ.
ತೋಟಗಾರಿಕೆ ಇಲಾಖೆಯ ಸಾಂಪ್ರದಾಯಿಕ ಬೆಳೆಯ ವ್ಯಾಪ್ತಿಯಲ್ಲಿ ಅಡಿಕೆ ಸೇರಿಲ್ಲ. ಜಿಲ್ಲೆಯ 53,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ನಡೆಸಲಾಗುತ್ತಿದ್ದರೂ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗು ಬೆಳೆಗಾರರನ್ನು ಕಾಡುತ್ತಿದೆ. ಕರಾವಳಿ, ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ನೀಡುವ ಸಹಾಯಧನವನ್ನು ಚಿತ್ರದುರ್ಗ ಜಿಲ್ಲೆಯ ಬೆಳೆಗಾರರಿಗೂ ಕಲ್ಪಿಸಬೇಕು ಎಂಬ ಕೂಗು ಬಲವಾಗುತ್ತಿದೆ.
ಕೃಷಿ ಭೂಮಿಯಲ್ಲಿ ಗುಂಡಿ ತೋಡಿ ಸಸಿ ನಾಟಿ ಮಾಡಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶವಿದೆ. ತೋಟಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಸಹಾಯಧನ ಒದಗಿಸುತ್ತಿದೆ. ಆದರೆ, ಈ ಸೌಲಭ್ಯ ಜಿಲ್ಲೆಯ ರೈತರಿಗೆ ಲಭ್ಯವಾಗುತ್ತಿಲ್ಲ. ಸಹಾಯಧನದ ವ್ಯಾಪ್ತಿಗೆ ಅಡಿಕೆ ಬೆಳೆಯನ್ನೂ ಸೇರಿಸುವಂತೆ ರೈತರು ಬೇಡಿಕೆ ಸಲ್ಲಿಸುತ್ತಏ ಇದ್ದಾರೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗ ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನ ಬೆಳೆಗಾರರನ್ನು ಕಾಡುತ್ತಿದೆ.
ತೆಂಗು ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆ. ದಾಳಿಂಬೆಯತ್ತ ರೈತರು ಒಲವು ತೋರಿದ್ದರೂ ಬೆಲೆಯ ಅನಿಶ್ಚಿತತೆಯಿಂದ ಬೆಳೆಯಿಂದ ವಿಮುಖರಾಗಿದ್ದಾರೆ. ತೆಂಗಿಗೆ ನಿರೀಕ್ಷಿತ ಬೆಲೆ ಲಭ್ಯವಾಗದ ಕಾರಣಕ್ಕೂ ಬೆಳೆ ವಿಸ್ತರಣೆಗೆ ರೈತರು ಆಸಕ್ತಿ ತೋರುತ್ತಿಲ್ಲ. ಮೆಕ್ಕೆಜೋಳ, ಶೇಂಗಾ, ಸಿರಿಧಾನ್ಯ ಬೆಳೆಯುತ್ತಿದ್ದ ರೈತರೂ ಅಡಿಕೆಯತ್ತ ಆಕರ್ಷಿತರಾಗಿದ್ದಾರೆ. ಅಡಿಕೆಗೆ ಸಿಗುತ್ತಿರುವ ಬೆಲೆ, ಬೆಳೆ ನಿರ್ವಹಣೆಗೆ ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂಬ ಕಾರಣಕ್ಕೂ ಕೃಷಿಕರು ಅಡಿಕೆಯತ್ತ ವಾಲುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ ಅಡಿಕೆ ಬೆಳೆ ಹೆಚ್ಚಾಗುತ್ತಿದೆ.
ಜಿಲ್ಲೆಯ ಜನರ ಬಹುದಿನಗಳ ನೀರಾವರಿ ಕನಸಾಗಿದ್ದ ಭದ್ರಾ ಮೇಲ್ದಂಡೆ ಸಾಕಾರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ನಾಲೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ವೇದಾವತಿ ನದಿಯ ಮೂಲಕ ವಿ.ವಿ.ಸಾಗರಕ್ಕೆ ಭದ್ರಾ ಜಲಾಶಯದ ನೀರು ತರಲಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂಬ ಕಾರಣಕ್ಕೂ ಅಡಿಕೆ ತೋಟಗಳನ್ನು ನಿರ್ಮಿಸಲಾಗುತ್ತಿದೆ. ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಡಿಕೆ ಬೆಳೆ ನಾಲ್ಕು ವರ್ಷದಿಂದ ಹೆಚ್ಚು ವಿಸ್ತರಣೆಯಾಗಿದೆ.
‘ಅಡಿಕೆ ಬೆಳೆಯ ಸಹಾಯಧನವನ್ನು ಕರಾವಳಿ ಮತ್ತು ಮಲೆನಾಡಿಗೆ ಸೀಮಿತಗೊಳಿಸಿದ ಸರ್ಕಾರದ ನಿರ್ಧಾರ ಸರಿಯಲ್ಲ. ಬೆಳೆ ವಿಸ್ತೀರ್ಣವಾಗದಂತೆ ತಡೆಯುವ ಲಾಬಿ ಕೂಡ ಇದರಲ್ಲಿ ಅಡಗಿರುವ ಗುಮಾನಿ ಕಾಡುತ್ತಿದೆ. ಕಡಿಮೆ ಮಳೆ ಬೀಳುವ ಪ್ರದೇಶದ ಕೃಷಿಕರಿಗೆ ಹನಿ ನೀರಾವರಿ ಸೌಲಭ್ಯಕ್ಕೆ ಸಹಾಯಧನ ನೀಡಿದರೆ ಅನುಕೂಲವಾಗುತ್ತದೆ. ಮಧ್ಯ ಕರ್ನಾಟಕ ಭಾಗದ ರೈತರತ್ತಲೂ ಸರ್ಕಾರ ಗಮನ ಹರಿಸಬೇಕು’ ಎಂದು ಚಳ್ಳಕೆರೆ ತಾಲ್ಲೂಕಿನ ಭರಮಸಾಗರದ ಧನ್ಯಪ್ರಸಾದ್ ಒತ್ತಾಯಿಸುತ್ತಾರೆ.Quote - ಅಡಿಕೆಗಷ್ಟೇ ಸಹಾಯಧನ ನೀಡುವುದಿಲ್ಲವೆಂದು ತೋಟಗಾರಿಕೆ ಇಲಾಖೆ ಹೇಳಿದೆ. ಎಲೆಬಳ್ಳಿ ಬಾಳೆ ಮೆಣಸನ್ನು ಮಿಶ್ರ ಬೆಳೆಯಾಗಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ ಧನ್ಯಪ್ರಸಾದ್ ಭರಮಸಾಗರ ಚಳ್ಳಕೆರೆ ತಾಲ್ಲೂಕು
ಜಿಲ್ಲೆಯ ಸಾಂಪ್ರದಾಯಿಕ ಬೆಳೆಯ ವ್ಯಾಪ್ತಿಯಲ್ಲಿ ಅಡಿಕೆ ಇಲ್ಲ. ರೈತರ ಸಹಾಯಧನ ಬೇಡಿಕೆಯನ್ನು ಸಚಿವರ ಗಮನಕ್ಕೆ ತರಲಾಗಿದೆ– ಸವಿತಾ, ಉಪ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಅಡಿಕೆಗಷ್ಟೇ ಸಹಾಯಧನ ನೀಡುವುದಿಲ್ಲವೆಂದು ತೋಟಗಾರಿಕೆ ಇಲಾಖೆ ಹೇಳಿದೆ. ಎಲೆಬಳ್ಳಿ ಬಾಳೆ ಮೆಣಸನ್ನು ಮಿಶ್ರ ಬೆಳೆಯಾಗಿ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ– ಧನ್ಯಪ್ರಸಾದ್ ಭರಮಸಾಗರ, ಚಳ್ಳಕೆರೆ ತಾಲ್ಲೂಕು
ಸಲಿಕೆ ಹಿಡಿದು ಶ್ರಮವಹಿಸಿ ಬೆಳೆಗೆ ನೀರುಣಿಸುವ ಅಗತ್ಯವಿಲ್ಲ. ಹನಿ ನೀರಾವರಿಯಿಂದ ಸುಲಭವಾಗಿ ಬೆಳೆ ಬೆಳೆಯಬಹುದು. ಸಹಾಯಧನ ನೀಡಿದರೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ– ಶ್ರೀನಿವಾಸರೆಡ್ಡಿ ರಂಗವ್ವನಹಳ್ಳಿ ಚಳ್ಳಕೆರೆ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.