ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಏನಿದು ಟ್ವಿಟರ್ ಬ್ಲೂಟಿಕ್‌? ಇದಕ್ಕೆ ಯಾಕಿಷ್ಟು ಮಹತ್ವ?

Last Updated 6 ಜೂನ್ 2021, 6:45 IST
ಅಕ್ಷರ ಗಾತ್ರ

ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಬ್ಲೂಟಿಕ್‌‌ ಹೊಂದುವುದು ಪ್ರತಿಷ್ಠೆಯ ವಿಚಾರ. ನೀಲಿ ಬಣ್ಣದ ರೈಟ್‌ ಮಾರ್ಕ್‌ನ ಗುರುತು 'ಅಧಿಕೃತ ಖಾತೆ' ಎಂಬ ಮುದ್ರೆಯಿದ್ದಂತೆ. ರಾಜಕೀಯ ಮುಖಂಡರು, ಸರ್ಕಾರದ ಪ್ರಮುಖ ಅಧಿಕಾರಿಗಳು, ಸಿನಿಮಾ ತಾರೆಯರು, ಸೆಲೆಬ್ರಿಟಿಗಳು, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು, ಕ್ರೀಡಾಪಟುಗಳು ಹೀಗೆ ಹೆಚ್ಚಿನ ಸಂಖ್ಯೆಯ ಮಂದಿಗೆ ಬ್ಲೂಟಿಕ್‌ ಇದೆ. ಈ ಬ್ಲೂಟಿಕ್‌ ಯಾರಿಗೆ ಕೊಡಲಾಗುತ್ತದೆ, ಅದನ್ನು ಹೊಂದುವುದು ಹೇಗೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯೋಣ.

ಸೆಲೆಬ್ರಿಟಿಯೆಂದು ಗುರುತಿಸಿಕೊಂಡವರ ಅಧಿಕೃತ ಖಾತೆಯಿದು ಎಂಬ ವಿಶ್ವಾಸವನ್ನು ಹಿಂಬಾಲಕರಿಗೆ ಮೂಡಿಸುವ ದೃಷ್ಟಿಯಲ್ಲಿ ಟ್ವಿಟರ್‌ ಬ್ಲೂಟಿಕ್‌ ಎಂಬ ಗುರುತನ್ನು ನೀಡುತ್ತಿದೆ. ಸಾಮಾಜಿಕವಾಗಿ ಗುರುತಿಸಿಕೊಂಡ ವ್ಯಕ್ತಿಗೆ ತನ್ನದೇ ಅಧಿಕೃತ ಖಾತೆ ಎಂಬುದನ್ನು ತಿಳಿಯ ಪಡಿಸುವ ಇಚ್ಛೆ ಹೊಂದಿದ್ದರೆ ಬ್ಲೂಟಿಕ್‌ ಕೋರಿ ಮನವಿ ಸಲ್ಲಿಸಬಹುದು.

ಬ್ಲೂಟಿಕ್‌ ಹೊಂದಲು ಏನೇನು ಅಗತ್ಯ?
1. ಅಧಿಕೃತ ವೆಬ್‌ಸೈಟ್‌: ತನ್ನ ಅಧಿಕೃತ ವೆಬ್‌ಸೈಟ್‌ ಲಿಂಕ್‌ ಮತ್ತು ಟ್ವಿಟರ್‌ ಖಾತೆಯ ಲಿಂಕ್‌ಅನ್ನು ಕಳುಹಿಸಬೇಕು.
2. ತಮ್ಮ ಖಾತೆಯನ್ನು ಪರಿಶೀಲಿಸಲು ಸರ್ಕಾರ ನೀಡಿರುವ ಗುರುತಿನ ಚೀಟಿಯನ್ನು ನಮೂದಿಸಬೇಕು. ಉದಾ: ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌ ಇತ್ಯಾದಿ.
3. ಅಧಿಕೃತ ಇ-ಮೇಲ್‌ ವಿವರ: ಅಧಿಕೃತ ವೆಬ್‌ಸೈಟ್‌ಗೆ ಸಂಬಂಧಿಸಿದ ಅಧಿಕೃತ ಇಮೈಲ್‌ ವಿವರವನ್ನು ನೀಡಬೇಕು. ಇದರಲ್ಲಿ ಯಾವ ವಿಭಾಗವೆಂಬುದನ್ನು ಆಯ್ಕೆ ಮಾಡಬೇಕು.

ಪ್ರಮುಖವಾಗಿ ಗಮನಿಸಬೇಕಾದ ಅಂಶ: ಸರ್ಕಾರ, ಖ್ಯಾತ ಕಂಪನಿ, ಕ್ರೀಡೆ, ಸಿನಿಮಾ, ವ್ಯವಹಾರ ಹೀಗೆ ಒಂದು ಪ್ರಮುಖ ಸಂಸ್ಥೆಯ ಭಾಗವಾಗಿ ಅಥವಾ ಅಧಿಕೃತವಾಗಿ ಗುರುತಿಸಿಕೊಂಡವರು ಬ್ಲೂಟಿಕ್‌ಗೆ ಮನವಿ ಮಾಡಬಹುದು. ಇಷ್ಟೆಲ್ಲ ಅಧಿಕೃತ ಮಾಹಿತಿ ನಡುವೆ ಬ್ಲೂಟಿಕ್‌ ಕೊಡುವ ವಿಚಾರದಲ್ಲಿ ಸ್ವತಂತ್ರ ಆಯ್ಕೆಯನ್ನು ಟ್ವಿಟರ್‌ ಉಳಿಸಿಕೊಂಡಿದೆ.

ಸರ್ಕಾರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವಾಲಯಗಳು, ಕಚೇರಿಗಳು, ಮಂತ್ರಿಗಳು, ಆಯ್ಕೆಯಾದ ಜನಪ್ರತಿನಿಧಿಗಳು, ವಕ್ತಾರರು, ರಾಯಭಾರಿಗಳು, ರಾಜಕೀಯ ಪಕ್ಷಗಳು, ರಾಜಕೀಯ ಪಕ್ಷಗಳಲ್ಲಿ ಅಧಿಕೃತ ಹುದ್ದೆ ಹೊಂದಿರುವವರು ಟ್ವಿಟರ್‌ನ ಬ್ಲೂಟಿಕ್‌ ಹೊಂದಬಹುದು.

ಅಧಿಕೃತ ಕಂಪನಿ/ಬ್ರಾಂಡ್‌: ಟ್ವಿಟರ್‌ ಖಾತೆಗಳು ಒಂದು ಅಧಿಕೃತ ಕಂಪನಿ, ಬ್ರ್ಯಾಂಡ್‌ ಅಥವಾ ಎನ್‌ಜಿಒಗಳನ್ನು ಪ್ರತಿನಿಧಿಸುವಂತಿದ್ದರೆ ಅಂತಹ ಖಾತೆಗಳಿಗೆ ಬ್ಲೂಟಿಕ್ ಸಿಗುತ್ತದೆ. 0.05% ಹಿಂಬಾಲಕರು ಆ ಪ್ರದೇಶದಲ್ಲಿ ಕಾರ್ಯನಿರತವಾಗಿರ ಬೇಕು ಎಂಬ ನಿಯಮವನ್ನು ಟ್ವಿಟರ್‌ ಪಾಲಿಸುತ್ತಿದೆ.

ಹೊಸ ಸಂಸ್ಥೆಗಳು ಮತ್ತು ಪತ್ರಕರ್ತರು: ಸರ್ಕಾರದ ಪ್ರಮಾಣ ಪತ್ರದೊಂದಿಗೆ ಆರಂಭಗೊಂಡ ಹೊಸ ಸಂಸ್ಥೆಗಳು ಅಧಿಕೃತ ಮುದ್ರೆಗಾಗಿ ಮಾನವಿ ಮಾಡಬಹುದು. ಸರ್ಕಾರದ ಮಾನ್ಯತೆ ಇರುವ ಎಲ್ಲ ಮಾದರಿಯ ಮಾಧ್ಯಮಗಳ ಪ್ರಕಟಣೆಗಳಿಗೆ ಬ್ಲೂಟಿಕ್‌ ಸಿಗುತ್ತದೆ. ಅಧಿಕೃತ ಸಂಸ್ಥೆಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಾತ್ರವಲ್ಲ, ಸ್ವತಂತ್ರ ಪತ್ರಕರ್ತರೂ ಬ್ಲೂಟಿಕ್‌ ಸಂಪಾದಿಸಬಹುದು. ಆದರೆ 6 ತಿಂಗಳಲ್ಲಿ ಕನಿಷ್ಠ 3 ಬೈಲೈನ್‌ ಅಥವಾ ಕೃಪೆಯಲ್ಲಿ ಅಧಿಕೃತ ಮಾಧ್ಯಮದಲ್ಲಿ ಪ್ರಕಟಣೆ ಕಂಡಿರುವ ಸಾಕ್ಷಿ ಇರಬೇಕು.

ಮನರಂಜನೆ: ಫಿಲ್ಮ್‌ ಸ್ಟುಡಿಯೊ, ಟಿವಿ ನೆಟ್‌ವರ್ಕ್‌, ಮ್ಯೂಸಿಕ್‌ ಸಂಸ್ಥೆಗಳು ಹೀಗೆ ಹಲವು ಮನರಂಜನಾ ಸಂಸ್ಥೆಗಳು ಬ್ಲೂಟಿಕ್‌ ಹೊಂದಬಹುದು. ಇನ್ನು ಪ್ರಮುಖ ಮನರಂಜನಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಟ-ನಟಿಯರು, ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಕಾರ್ಯಕ್ರಮ ನಿರೂಪಣೆ ಮಾಡುವವರು ಹೀಗೆ ಹಲವು ಮಂದಿಗೆ ಬ್ಲೂಟಿಕ್‌ ಸಿಗುತ್ತದೆ. ಐಎಂಡಿಬಿಯ ಕನಿಷ್ಠ 50 ಪ್ರೊಡಕ್ಷನ್‌ಗಳಲ್ಲಿ ಗುರುತಿಸಿಕೊಂಡಿರಬೇಕು ಎಂಬ ನಿಯಮವೂ ಇದೆ.

ಕ್ರೀಡೆ: ಕ್ರಿಕೆಟ್‌, ಫುಟ್ಬಾಲ್‌, ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಎಲ್ಲರಿಗೂ ಬ್ಲೂಟಿಕ್‌ ಸಿಗುತ್ತದೆ. ಡಬ್ಳ್ಯೂಡಬ್ಳ್ಯೂಇ ಎಂಬಂತಹ ಮನರಂಜನಾ ಕುಸ್ತಿಪಟುಗಳಿಗೂ ಬ್ಲೂಟಿಕ್ ಇದೆ.

ದಿನನಿತ್ಯ 199 ಕೋಟಿ ಮಂದಿ ಟ್ವಿಟರ್‌ನಲ್ಲಿ ಕಾರ್ಯನಿರತರಾಗಿದ್ದಾರೆ. ಈ ಪೈಕಿ 3,60,000 ಮಂದಿಗೆ ಮಾತ್ರ ಬ್ಲೂಟಿಕ್‌ ನೀಡಲಾಗಿದೆ. ದುಡ್ಡುಕೊಟ್ಟರೆ ಯಾರು ಬೇಕಿದ್ದರೂ ಟ್ವಿಟರ್‌ ಖಾತೆ ಹೊಂದಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕವಾಗಿ ಗುರುತಿಸಿಕೊಳ್ಳದ, ಸರ್ಕಾರ ಅಥವಾ ಅಧಿಕೃತ ಸಂಸ್ಥೆಯ ಪ್ರತಿನಿಧಿಯಾಗಿರದ, ಕ್ರೀಡೆ, ಸಿನಿಮಾಗಳಲ್ಲಿ ಹೆಸರು ಮಾಡದ ಯಾವುದೇ ಸಾಮಾನ್ಯ ವ್ಯಕ್ತಿಗೆ ಬ್ಲೂಟಿಕ್‌ ನೀಡಿರುವ ನಿದರ್ಶನಗಳು ಕಂಡುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT