ಭಾನುವಾರ, ಸೆಪ್ಟೆಂಬರ್ 27, 2020
27 °C

ರಾಮನಿಗಿಂತ ಮೋದಿ ದೊಡ್ಡವರೇ? ಚರ್ಚೆ ಹುಟ್ಟುಹಾಕಿದ ಸಂಸದೆ ಶೋಭಾ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಬುಧವಾರ ಭೂಮಿಪೂಜೆ ನಡೆಯುವುದಕ್ಕೂ ಮೊದಲು, ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಡಿರುವ ಟ್ವೀಟ್‌ವೊಂದು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಯೋಧ್ಯೆ ತನ್ನ ಪ್ರೀತಿಯ ರಾಜನನ್ನು ಮರಳಿ ಮನೆಗೆ ಸ್ವಾಗತಿಸಲು ಸಜ್ಜಾಗಿದೆ! ಎಂಬ ಸಾಲುಗಳ ಮೂಲಕ ಶೋಭಾ ಕರಂದ್ಲಾಜೆ ಅವರು ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ, ಮೋದಿ ರಾಮನ ಕೈಹಿಡಿದು ದೇಗುಲಕ್ಕೆ ಕರೆದುಕೊಂಡು ಹೋಗುತ್ತಿರುವಂತೆ ಬಿಂಬಿಸಲಾಗಿದೆ. ಆದರೆ, ಚಿತ್ರದಲ್ಲಿ ರಾಮನನ್ನು ಬಾಲಕನನ್ನಾಗಿಯೂ, ಪ್ರಧಾನಿ ಮೋದಿಯವರನ್ನು ಹಿರಿಯರಂತೆಯೂ ತೋರಿಸಲಾಗಿದೆ.

ಈ ಚಿತ್ರ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೋದಿ ರಾಮನಿಗಿಂತಲೂ ದೊಡ್ಡವರೇ? ಮೋದಿ ರಾಮನನ್ನು ಮೀರಿದವರೇ ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೆ, ಚಿತ್ರವನ್ನು ಅಳಿಸುವಂತೆಯೂ ಹಲವರು ಸಲಹೆ ನೀಡಿದ್ದಾರೆ. ಕೆಲ ಮಂದಿ ಚಿತ್ರವನ್ನು ಮೆಚ್ಚಿದ್ದಾರೆ. ಆದರೆ, ಬಹುತೇಕರು ಚಿತ್ರದ ಸನ್ನಿವೇಶವನ್ನು ವಿರೋಧಿಸಿದ್ದಾರೆ.

ಹಲವರಿಂದ ಮೆಚ್ಚುಗೆ

ಸಂಸದೆ ಶೋಭಾ ಕರಂದ್ಲಾಜೆ ಅವರ ಈ ಚಿತ್ರವನ್ನು 2771 ಮಂದಿ ಯಾವುದೇ ಅಭಿಪ್ರಾಯವಿಲ್ಲದೇ, ವಿರೋಧವಿಲ್ಲದೇ ರೀಟ್ವೀಟ್‌ ಕೂಡ ಮಾಡಿಕೊಂಡಿದ್ದಾರೆ. ಈ ಮೂಲಕ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ಇಲ್ಲಿದೆ ಚರ್ಚೆಗಳು 

‘ಅಂದಹಾಗೆ, ಹಿಂದುತ್ವದ ಪ್ರಕಾರ ಮೋದಿ ರಾಮನನ್ನು ಮುನ್ನಡೆಸುತ್ತಾನೆ. ರಾಮ ಮೋದಿಯನ್ನು ಮುನ್ನಡೆಸುವುದಿಲ್ಲ?ಇದು ಹಿಂದೂ ಧರ್ಮವಲ್ಲ,’ ಎಂದು ಲೇಖಕ, ಇತಿಹಾಸ ತಜ್ಞ ದೇವದತ್ತ ಪಟ್ಟನಾಯಕ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಪ್ರೀತಿಯನ್ನೂ ಕಲಿತಿಲ್ಲ, ತ್ಯಾಗವನ್ನು ಕಲಿತಿಲ್ಲ
ಕರುಣೆ , ಪ್ರೇಮವನ್ನೂ ಕಲಿತಿಲ್ಲ
ರಾಮನಿಗಿಂತಲೂ ಮೇಲು ಎಂದು ತೋರಿಸುವ ನೀನು
ಶ್ರೀ ರಾಮಚರಿತ ಮಾನಸದ ಯಾವ ಭಾಗ ಕಲಿತಿರುವೆ?
ಹೀಗೆಂದು ಕಾಂಗ್ರೆಸ್‌ ನಾಯಕ ಶಶಿತರೂರ್‌ ಅವರು ಪ್ರಶ್ನೆ ಮಾಡಿದ್ದಾರೆ.

‘ಇದು ಹಿಂದೂಗಳ ನಂಬಿಕೆಗೆ ಸಂಪೂರ್ಣ ಅಪಮಾನ. ಸ್ವೀಕಾರಾರ್ಹವಾದುದಲ್ಲ,’ ಎಂದು ದೆಹಲಿ ಸರ್ಕಾರದ ಹೆಚ್ಚುವರಿ ಕಾನೂನು ಸಲಹೆಗಾರ ರಿಷಿಕೇಶ್‌ಕುಮಾರ್‌ ಹೇಳಿದ್ದಾರೆ.

‘ನಾಚಿಕೆಯಾಗಬೇಕು ಶೋಭಾ ಅವರಿಗೆ. ಇಂದು ಶ್ರೀರಾಮನ ದೇವಾಲಕ್ಕೆ ಅಡಿಪಾಯ ಹಾಕಲಾಗುತ್ತಿದೆ. ಮೋದಿ ವೈಭವದ ದಿನಗಳಿಗೆ ಅಲ್ಲ,’ ಎಂದು ಹಿಂದಿ ಲೇಖಕ ಅಭಿಸಾರ್‌ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಇದು ಅಸಹ್ಯ, ಅಪಮಾನಕಾರಿ,’ ಎಂದು ಪತ್ರಕರ್ತ ಅಭಿಷೇಕ್‌ ಬಕ್ಸಿ ಟ್ವೀಟ್‌ ಮಾಡಿದ್ದಾರೆ.

‘ಹಾಗಾದರೆ ನಾವೆಲ್ಲ ಇಲ್ಲಿ ಏನನ್ನು ಹೇಳಲು ಹೊರಟಿದ್ದೇವೆ? ಸರ್ವೋಚ್ಚ ನಾಯಕನು ದೇವರಿಗಿಂತಲೂ ಮಿಗಿಲು ಎಂದಲ್ಲವೇ ಎಂದು ಲಾಡಾ ಗುರುದೇನ್‌ ಸಿಂಗ್‌ ಎಂಬ ಯುವ ಸಿನಿಮಾ ನಿರ್ದೇಶಕ ಪ್ರಶ್ನೆ ಮಾಡಿದ್ದಾರೆ.

ಶೀಘ್ರದಲ್ಲೇ ಪ್ರಧಾನಿ ಕ್ಯಾಬಿನೆಟ್ ಪುನರಚನೆ ಮಾಡುತ್ತಿದ್ದಾರೆಯೇ? ಬಿಜೆಪಿ ಸಂಸದರು ಹೋರಾಟ ನಡೆಸುತ್ತಿರುವಂತೆ ಕಾಣುತ್ತಿದೆ. ಶ್ರೇಷ್ಠ ರಾಮ ಭಕ್ತರು ಎಂಬ ಖ್ಯಾತಿಗಾಗಿ ಅಲ್ಲ. ಆದರೆ ಶ್ರೇಷ್ಠ ವ್ಯಕ್ತಿಪೂಜಕ ಎಂದು ಕರೆಸಿಕೊಳ್ಳಲು!
ಆದರೆ ಇದು ವ್ಯಕ್ತಿ ಪೂಜೆಯನ್ನೂ ಮೀರಿದ್ದಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಇದು ನಾಚಿಕೆಗೇಡಿನ ಸಂಗತಿ. ಮೋದಿ ರಾಮನಿಗಿಂತಲೂ ದೊಡ್ಡವರಲ್ಲ. ಇದು ಅಗ್ಗದ ರಾಜಕೀಯ ಮತ್ತು ವ್ಯಕ್ತಿಪೂಜೆ ಎಂದು ಪತ್ರಕರ್ತೆ ಸ್ವಾತಿ ಚತುರ್ವೇದಿ ಹೇಳಿದ್ದಾರೆ.

ಇಂದು, ಭಗವಂತ ರಾಮನನ್ನು ಚಿಕ್ಕವನನ್ನಾಗಿ ಮಾಡಲಾಗಿದೆ. ಇಂದು ರಾಮನೂ ಕೂಡ ಮೋದಿಯ ಬೆರಳನ್ನು ಹಿಡಿದು ನಡೆಯುವಂತಾಯಿತು ಎಂದು ಪತ್ರಕರ್ತೆ ರೋಹಿಣಿ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು