ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಫೇಸ್‌ಬುಕ್ ಮೂಲಕ ಪ್ರ್ಯಾಂಕ್‌ ಮಾಡಲು ಹೋಗಿ ಮೂವರ ಸಾವು

Last Updated 5 ಜುಲೈ 2021, 10:13 IST
ಅಕ್ಷರ ಗಾತ್ರ

ತಿರುವನಂತಪುರಂ: ಸಂಬಂಧಿಕ ಮಹಿಳೆಯೊಬ್ಬರಿಗೆ ಫೇಸ್‌ಬುಕ್ ಮೂಲಕ ಪ್ರ್ಯಾಂಕ್‌ ಮಾಡಲು ಹೋಗಿ ನವಜಾತ ಶಿಶು ಸೇರಿ ಮೂವರು ಸಾವಿಗೀಡಾಗಿದ್ದಾರೆ ಎಂದು ಕೇರಳ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದುಬಂದಿದೆ.

ಈ ವರ್ಷದ ಜನವರಿಯಲ್ಲಿ ಕೆಲವು ಗಂಟೆಗಳ ಹಿಂದಷ್ಟೇ ಜನಿಸಿದ್ದ ನವಜಾತ ಗಂಡು ಶಿಶು ಒಣಗಿದ ಎಲೆಗಳ ರಾಶಿಯಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಚಿಕಿತ್ಸೆಗಾಗಿ ಸಾಗಿಸಿದ್ದಾಗ ಶಿಶು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಕೊಲ್ಲಂನ ಕಲ್ಲುವಾತುಕ್ಕಲ್ ಗ್ರಾಮದ ನಿವಾಸಿ ರೇಷ್ಮಾ ಎಂಬುವವರು ಶಿಶುವಿನ ತಾಯಿಯಾಗಿದ್ದು, ಇದೇ ವಿಚಾರವಾಗಿ ಜೂನ್‌ನಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ, ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಆದರೆ ಭೇಟಿಯಾಗದ ಆನಂದು ಎಂಬ ವ್ಯಕ್ತಿಯೊಂದಿಗೆ ಓಡಿ ಹೋಗಲು ನವಜಾತ ಶಿಶುವನ್ನು ಬಿಟ್ಟು ಬಂದಿದ್ದಾಗಿ ರೇಷ್ಮಾ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಪ್ರಕಾರ, ಮಹಿಳೆಯ ಫೇಸ್‌ಬುಕ್ ಸ್ನೇಹಿತನನ್ನು ಕಂಡುಹಿಡಿಯಲು ನಡೆಸಿದ ತನಿಖೆ ವೇಳೆ, ಮಹಿಳೆಯ ಅತ್ತಿಗೆ ಆರ್ಯ ಮತ್ತು ಸೊಸೆ ಗ್ರೀಷ್ಮಾ ಎಂಬ ಇಬ್ಬರು ಸಂಬಂಧಿಕರನ್ನು ವಿಚಾರಣೆಗಾಗಿ ಕರೆತಂದಿದ್ದಾರೆ.

ಹಲವು ಫೇಸ್‌ಬುಕ್ ಖಾತೆಗಳನ್ನು ಬಳಸುತ್ತಿದ್ದ ಗ್ರೀಷ್ಮಾ ಅವರು ಒಂದು ಖಾತೆಯನ್ನು ನಿರ್ವಹಿಸಲು ಆರ್ಯ ಎಂಬ ಹೆಸರಿನಲ್ಲಿರುವ ಮೊಬೈಲ್ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದರಿಂದ ಪೊಲೀಸರು ಅವರನ್ನು ಕರೆಸಿದ್ದರು. ಇದರಿಂದಾಗಿ ನೊಂದಿದ್ದ ಈ ಇಬ್ಬರು ಮಹಿಳೆಯರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ವಿಚಾರವಾಗಿ, ಗ್ರೀಷ್ಮಾ ಅವರ ಸ್ನೇಹಿತನನ್ನು ಪೊಲೀಸರು ಪ್ರಶ್ನಿಸಿದ್ದು, ರೇಷ್ಮಾಳೊಂದಿಗೆ ಫ್ರ್ಯಾಂಕ್ ಮಾಡಲು ತಾನು ಮತ್ತು ಆರ್ಯ ಸೇರಿ ಆನಂದು ಎನ್ನುವ ಹೆಸರಿನ ಫೇಸ್‌ಬುಕ್ ಖಾತೆಯನ್ನು ರಚಿಸಿರುವುದಾಗಿ ತಿಳಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೂಡ ಪ್ರ್ಯಾಂಕ್‌ ಬಗ್ಗೆ ತನ್ನ ಅತ್ತೆಗೆ ಹೇಳಿದ್ದಳು ಎನ್ನಲಾಗಿದೆ.

ಆರ್ಯ ಅವರ ಪತಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಪತ್ನಿ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದನ್ನು ಕಂಡುಹಿಡಿದ ಪೊಲೀಸರಿಗೆ ಧನ್ಯವಾದಗಳು. ಫ್ರ್ಯಾಂಕ್ ಮಾಡುವ ಕುರಿತು ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ವಿದೇಶದಲ್ಲಿದ್ದ ಮತ್ತು ಆಕೆಯ ಬಂಧನವನ್ನು ಕೇಳಿದ ನಂತರ ಹಿಂತಿರುಗಿದ ರೇಷ್ಮಾ ಅವರ ಪತಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಘಟನೆಯ ಕುರಿತು ಯಾರಾದರೂ ಹೇಳಿದ್ದರೆ, ಅದನ್ನು ನಿಲ್ಲಿಸಬಹುದಿತ್ತು ಎಂದು ತಿಳಿಸಿದ್ದಾರೆ.

ಸದ್ಯ, ಕೋವಿಡ್-19 ಪಾಸಿಟಿವ್ ಆಗಿದ್ದ ರೇಷ್ಮಾ ಅವರು ಕ್ವಾರಂಟೈನ್ ಕೇಂದ್ರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT