ಶನಿವಾರ, ಮಾರ್ಚ್ 25, 2023
28 °C
‘ವಿಮಾನ ಪತನವಾಗುತ್ತಿಲ್ಲ. ಗುರುತ್ವಾಕರ್ಷಣೆಯು ಕೆಳಕ್ಕೆ ಎಳೆಯುತ್ತಿದೆ’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ವ್ಯಂಗ್ಯ ಮಾಡಿದ್ದಾರೆ

ರೂಪಾಯಿ ಕುಸಿಯುತ್ತಿಲ್ಲ, ಡಾಲರ್‌ ಬಲವಾಗುತ್ತಿದೆ ಎಂಬ ನಿರ್ಮಲಾ ಹೇಳಿಕೆ ಟ್ರೋಲ್‌!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರೂಪಾಯಿ ಕುಸಿಯುತ್ತಿದೆ ಎನ್ನುವುದಕ್ಕಿಂತಲೂ ಡಾಲರ್‌ ಬಲಗೊಳ್ಳುತ್ತಿದೆ ಎನ್ನುವ ದೃಷ್ಟಿಕೋನ ನನ್ನದು. ಡಾಲರ್‌ ಮೌಲ್ಯವು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ...’

ಅಮೆರಿಕದಲ್ಲಿ ನಡೆದ ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನೀಡಿದ ಉತ್ತರವಿದು.

ನಿರ್ಮಲಾ ಅವರು ಅತ್ತ ಈ ಹೇಳಿಕೆ ನೀಡುತ್ತಲೇ, ಇತ್ತ ಅವರ ಹೇಳಿಕೆಗೆ ಸಂಬಂಧಿಸಿದಂತೆ ಟೀಕೆಗಳು ವ್ಯಕ್ತವಾಗಿವೆ. ಇನ್ನೊಂದೆಡೆ, ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ಮಲಾ ಅವರು ಟ್ರೋಲ್‌ಗೆ ಗುರಿಯಾಗಿದ್ದಾರೆ.

ಸಚಿವೆ ಹೇಳಿಕೆಯನ್ನು ವಿವಿಧ ಪ್ರಸಂಗಗಳಿಗೆ ಹೊಂದಿಸಿ ಗೇಲಿ ಮಾಡಲಾಗಿದೆ.

ಮೋದಿ ಜಿ ಅವರ ‘ಸ್ಕೂಲ್ ಆಫ್ ಲಾಜಿಕ್‌’ನ ಹೆಮ್ಮೆಯ ವಿದ್ಯಾರ್ಥಿ' ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ವಿಡಿಯೊವೊಂದನ್ನು ಹಂಚಿಕೊಂಡು ಕುಹಕವಾಡಿದೆ.

ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು! ಎಂದು ಡಿಎಂಕೆಯ ಐಟಿ ವಿಭಾಗದ ರಾಜ್ಯ ಕಾರ್ಯದರ್ಶಿ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಭೂಮಿಯ ಮೇಲೆ ರೂಪಾಯಿ ಸ್ಥಿರವಾಗಿದೆ, ಡಾಲರ್ ಏರುತ್ತಿದೆ’ ಎಂದು ಬಿಆರ್‌ಎಸ್‌ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಯತೀಶ್‌ ರೆಡ್ಡಿ ಗೇಲಿ ಮಾಡಿದ್ದಾರೆ.

'ವಿಮಾನ ಪತನವಾಗುತ್ತಿಲ್ಲ. ಗುರುತ್ವಾಕರ್ಷಣೆಯು ಕೆಳಕ್ಕೆ ಎಳೆಯುತ್ತಿದೆ' ಎಂದು ‘ಹ್ಯೂಮನ್‌’ ಎಂಬ ಖಾತೆಯೊಂದರ ಮೂಲಕ ನಿರ್ಮಲಾ ಅವರ ಹೇಳಿಕೆಯನ್ನು ಟೀಕಿಸಲಾಗಿದೆ.

‘ನಿರ್ಮಲಾ ಅವರ ಮಾತು ಸಂಪೂರ್ಣವಾಗಿಯೂ ನಿಜ. ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಅಥವಾ ಪಕ್ಷ ಯಾವಾಗಲೂ ಹೇಳೋದು ಏನು ಗೊತ್ತೆ? ನಾವು ಚುನಾವಣೆಯಲ್ಲಿ ಸೋತಿಲ್ಲ ಆದರೆ ಇನ್ನೊಂದು ಪಕ್ಷ ಚುನಾವಣೆಯಲ್ಲಿ ಗೆದ್ದಿದೆ ಎನ್ನುತ್ತಾರೆ’ ಎಂದು ಮಾಜಿ ವಿತ್ತ ಸಚಿವ ಚಿದಂಬರಂ ವ್ಯಂಗ್ಯವಾಡಿದ್ದಾರೆ.

ಪೌಂಡ್ ಬೆಲೆ ದಶಕಗಳ ಕನಿಷ್ಠ ಮಟ್ಟವನ್ನು ತಲುಪಿದ ಹಿನ್ನೆಲೆಯಲ್ಲಿ ಬ್ರಿಟಿಷ್ ಪ್ರಧಾನಿ ಹಣಕಾಸು ಸಚಿವರನ್ನು ವಜಾ ಮಾಡಿದರು. ರೂಪಾಯಿ ಬೆಲೆ ದಾಖಲೆಯ ಕುಸಿತವಾಗುವುದು ನಿತ್ಯದ ರೋದನೆಯಾಗಿದೆ. ವಿತ್ತ ಸಚಿವರು ಈಗಲೂ ಈ ವಿಷಯವಾಗಿ ದೂರವೇ ಉಳಿದಿದ್ದಾರೆ. ಈ ಬಗ್ಗೆ ಪ್ರಧಾನಿ ಕಾಳಜಿ ವಹಿಸುತ್ತಾರಾ? ಆದರೆ, ಅದಕ್ಕಾಗಿ ಅವರು ಕನಿಷ್ಠ ಜ್ಞಾನವನ್ನಾದರೂ ಹೊಂದಿರಬೇಕು...’ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

‘ಮಹಾನ್ ರಾಷ್ಟ್ರ ಭಾರತವನ್ನು ಯಾರು ಆಳುತ್ತಿದ್ದಾರೆ ಎಂಬುದನ್ನು ಖಾತ್ರಿಪಡಿಸುವ ಮೂಲಕ, ಭಾರತವನ್ನು ಗೇಲಿ ಮಾಡಲು ಭಾರತದ ಹಣಕಾಸು ಸಚಿವೆ ಜಗತ್ತಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ’ ಎಂದು ಎಐಸಿಸಿಯ ಕಾರ್ಯದರ್ಶಿ ಆಶಿಶ್‌ ದುವಾ ಟ್ವೀಟ್‌ ಮಾಡಿದ್ದಾರೆ.

ಇವಿಷ್ಟೇ ಆಲ್ಲದೇ, #RupeevsDollar #RupeeFalls #Rupee #NirmalaSitharaman #Nirmala ಹ್ಯಾಷ್‌ ಟ್ಯಾಗ್‌ಗಳ ಅಡಿಯಲ್ಲಿ ಹಲವಾರು ಪೋಸ್ಟರ್‌, ಮೀಮ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಈ ಹಿಂದೆ ಟ್ರೋಲ್‌ ಆಗಿದ್ದ ನಿರ್ಮಲಾ ಮಾತುಗಳಿವು

ಕುದುರೆ ವ್ಯಾಪಾರಕ್ಕೆ ಜಿಎಸ್‌ಟಿ!
ಕಳೆದ ಜೂನ್‌ನಲ್ಲಿ ಜಿಎಸ್‌ಟಿ ಮಂಡಳಿ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಕುದುರೆ ವ್ಯಾಪಾರ’ದ ಮೇಲೆ ಜಿಎಸ್‌ಟಿ ವಿಧಿಸುವ ವಿಚಾರವನ್ನು ಪ್ರಸ್ತಾಪಿಸಿ ಪೇಚಿಗೀಡಾಗಿದ್ದರು. ಆದರೆ, ಅದು ‘ಕುದುರೆ ರೇಸ್‌’ ಆಗಬೇಕಿತ್ತು. ಅದೇ ಹೊತ್ತಲ್ಲೇ ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಶಿವಸೇನೆಯ ಒಂದು ಬಣ ಸಿಡಿದು, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿತ್ತು.

ಈರುಳ್ಳಿ ತಿನ್ನಲಾರೆ

ಈರುಳ್ಳಿ ಬೆಲೆಯೇರಿಕೆಯ ಕುರಿತು 2019ರಲ್ಲಿ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಮಾತನಾಡುವ ವೇಳೆ ಕೆಲವು ವಿರೋಧ ಪಕ್ಷದ ಸದಸ್ಯರು ಮಾಡಿದ ಅಡೆತಡೆಗಳಿಗೆ ಪ್ರತಿಕ್ರಿಯಿಸಿದ್ದ ಅವರು, ‘ಹೆಚ್ಚಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನಾನು ತಿನ್ನುವುದಿಲ್ಲ. ಹಾಗಾಗಿ ಚಿಂತಿಸಬೇಡಿ. ನಾನು ಈರುಳ್ಳಿಯನ್ನು ಹೆಚ್ಚಾಗಿ ಬಳಸದ ಕುಟುಂಬದಿಂದ ಬಂದಿದ್ದೇನೆ' ಎಂದು ಹೇಳಿದರು. ನಿರ್ಮಲಾರ ಈ ಹೇಳಿಕೆಯು ಸದನವನ್ನು ನಗೆ ಕಡಲಲ್ಲಿ ತೇಲಿಸಿತು. ಇದೇ ವೇಳೆ ಸಂಸದರೊಬ್ಬರು ಹೆಚ್ಚು ಈರುಳ್ಳಿ ತಿನ್ನುವುದು ಒಬ್ಬರನ್ನು ಕೆರಳಿಸುವಂತೆ ಮಾಡುತ್ತದೆ ಎಂದು ಹೇಳಿದರು.

ಇತರೆ ದೇಶಗಳಿಗಿಂತ ನಾವು ಚೆನ್ನಾಗಿದ್ದೇವೆ

ಭಾರತದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂಬ ವರದಿಗಳ ಬಗ್ಗೆ ಕಳೆದ ಆಗಸ್ಟ್‌ನಲ್ಲಿ ಸಂಸತ್‌ ಕಲಾಪದಲ್ಲಿ ಮಾತನಾಡಿದ್ದ ನಿರ್ಮಲಾ, ‘ಭಾರತದ ಆರ್ಥಿಕತೆಯು ಹಲವು ದೇಶಗಳಿಗಿಂತ ಉತ್ತಮವಾಗಿದೆ’ ಎಂದು ಹೇಳಿದ್ದರು. ಬೇರೆ ದೇಶಗಳೊಂದಿಗಿನ ಹೋಲಿಕೆಯ ಮೂಲಕ ಭಾರತದ ಆರ್ಥಿಕತೆಯನ್ನು ಸಮರ್ಥಿಸಿಕೊಂಡ ನಿರ್ಮಲಾ ಅವರ ನಡೆಯನ್ನು ಟೀಕಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು