ಮಂಗಳವಾರ, ಮಾರ್ಚ್ 2, 2021
19 °C
ಉಚಿತ ಆ್ಯಪ್‌: ಗೂಗಲ್‌ ಪ್ಲೇಸ್ಟೋರ್‌ನಲ್ಲಿ 15ನೇ ಸ್ಥಾನದಲ್ಲಿ ವಾಟ್ಸ್‌ಆ್ಯಪ್‌

ಸಿಗ್ನಲ್‌ ಆ್ಯಪ್‌: ಖಾಸಗಿತನ ಸುರಕ್ಷಿತವೇ?

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೂಗಲ್‌ನ ಪ್ಲೇಸ್ಟೋರ್‌ ನಲ್ಲಿ ಉಚಿತವಾಗಿ ಸಿಗುವ ಆ್ಯಪ್‌ಗಳ ಪಟ್ಟಿಯಲ್ಲಿ ‘ಸಿಗ್ನಲ್’ ಆ್ಯಪ್‌ ಭಾನುವಾರ ಮೊದಲ ಸ್ಥಾನದಲ್ಲಿತ್ತು. ಸಂವಹನಕ್ಕಾಗಿ ಬಳಸುವ ಜನಪ್ರಿಯ ವಾಟ್ಸ್‌ಆ್ಯಪ್‌ ಹದಿನೈದನೆಯ ಸ್ಥಾನದಲ್ಲಿ ಇತ್ತು. ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಇಲಾನ್ ಮಸ್ಕ್‌, ಭಾರತದ ಉದ್ಯಮಿ ಆನಂದ ಮಹೀಂದ್ರ ಅವರು ತಾವು ಸಿಗ್ನಲ್ ಆ್ಯಪ್ ಬಳಸುವುದಾಗಿ ಘೋಷಿಸಿದ್ದಾರೆ.

ಸಿಗ್ನಲ್ ಆ್ಯಪ್ ಕಡೆ ಮುಖ ಮಾಡಿರುವುದಕ್ಕೆ ಕಾರಣ ‘ಖಾಸಗಿತನದ ರಕ್ಷಣೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬರೆದುಕೊಂಡಿದ್ದಾರೆ. ಲಾಭದ ಉದ್ದೇಶವಿಲ್ಲದ ‘ಸಿಗ್ನಲ್ ಪ್ರತಿಷ್ಠಾನ’ ಅಭಿವೃದ್ಧಿಪಡಿಸಿರುವ ಈ ಆ್ಯಪ್‌, ಬಳಕೆದಾರರ ಖಾಸಗಿತನವನ್ನು ನಿಜಕ್ಕೂ ಕಾಪಾಡುತ್ತದೆಯೇ? ‘ಹೌದು, ಖಾಸಗಿತನಕ್ಕೆ ಹೆಚ್ಚಿನ ಗೌರವ ನೀಡುವ ಆ್ಯಪ್‌ ಇದು’ ಎನ್ನುತ್ತಾರೆ ತಂತ್ರಜ್ಞರು.

‘ನಮ್ಮ ಮೂಲಕ ನಡೆಯುವ ಸಂವಹನಗಳ ಗೋಪ್ಯತೆಯನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳಲಾಗುತ್ತದೆ. ಇಬ್ಬರ ನಡುವೆ ನಡೆಯುವ ಸಂಭಾಷಣೆ, ಸಂದೇಶ ವಿನಿಮಯವನ್ನು ಮೂರನೆಯ ವ್ಯಕ್ತಿ ಕದ್ದಾಲಿಸಲು ಸಾಧ್ಯವೇ ಇಲ್ಲ (ಎನ್‌ಕ್ರಿಪ್ಟೆಡ್) ಎಂದು ವಾಟ್ಸ್‌ಆ್ಯಪ್‌ ಹೇಳುತ್ತದೆ. ವಾಟ್ಸ್‌ಆ್ಯಪ್‌ ಬಳಸುವ ಎನ್‌ಕ್ರಿಪ್ಷನ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇ ಸಿಗ್ನಲ್. ಸಿಗ್ನಲ್‌ ತನ್ನ ಬಳಕೆದಾರರ ಮೊಬೈಲ್‌ ದೂರವಾಣಿ ಸಂಖ್ಯೆ, ಇ–ಮೇಲ್‌ ವಿಳಾಸಗಳನ್ನು ತನ್ನಲ್ಲಿ ಉಳಿಸಿಕೊಳ್ಳುವುದಿಲ್ಲ. ಬಳಕೆದಾರರ ಸಂದೇಶಗಳನ್ನು ಕೂಡ ತಾನು ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ’ ಎಂದು ತಿಳಿಸಿದರು ಸಾಫ್ಟ್‌ವೇರ್‌ ತಂತ್ರಜ್ಞ ಎಚ್.ಎಲ್. ಓಂಶಿವಪ್ರಕಾಶ್.

‘ತನ್ನ ಮೂಲಕ ನಡೆಯುವ ಸಂವಹನಗಳು ಆರಂಭದಿಂದ ಕೊನೆಯವರೆಗೂ ಎನ್‌ಕ್ರಿಪ್ಟೆಡ್ ಆಗಿರುತ್ತವೆ ಎಂದು ವಾಟ್ಸ್‌ಆ್ಯಪ್‌ ಹೇಳಿದ್ದರೂ, ಅದನ್ನು ಪರಿಶೀಲಿಸಲು ಆಗದು. ಆದರೆ, ಸಿಗ್ನಲ್‌ನ ಎಲ್ಲ ತಂತ್ರಾಂಶಗಳು ಮುಕ್ತವಾಗಿವೆ. ಹಾಗಾಗಿ, ಸಿಗ್ನಲ್‌ನವರು ಹೇಳಿಕೊಳ್ಳುವುದನ್ನು ತಂತ್ರಜ್ಞರು ಪರಿಶೀಲಿಸಿ ನೋಡಿದ್ದಾರೆ, ಅವು ಎನ್‌ಕ್ರಿಪ್ಟೆಡ್ ಆಗಿವೆ. ಹಾಗಾಗಿ ಖಾಸಗಿತನದ ವಿಚಾರ
ದಲ್ಲಿ ಸಿಗ್ನಲ್ ಆ್ಯಪ್‌ ಮೇಲೆ ನಂಬಿಕೆ ಜಾಸ್ತಿ’ ಎಂದು ತಂತ್ರಜ್ಞ ಹಾಗೂ ಡೇಟಾಮೀಟ್ ಟ್ರಸ್ಟ್‌ನ ಅಧ್ಯಕ್ಷ ಜಿ.ಎನ್. ತೇಜೇಶ್ ತಿಳಿಸಿದರು.

ಸಿಗ್ನಲ್ ಆ್ಯಪ್‌ಅನ್ನು ನಡೆಸುತ್ತಿರುವುದು ವಾಣಿಜ್ಯ ಹಿತಾಸಕ್ತಿಗಳು ಇಲ್ಲದ ಒಂದು ಪ್ರತಿಷ್ಠಾನವಾಗಿರುವ ಕಾರಣ, ಅದು ದೇಣಿಗೆಗಳನ್ನು ಆಧರಿಸಿ ನಡೆಯುತ್ತಿರುವ ಕಾರಣ, ಸಿಗ್ನಲ್‌ ಆ್ಯಪ್‌ನವರು ಬಳಕೆದಾರರ ಖಾಸಗಿ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವುದಿಲ್ಲ ಎಂಬ ನಂಬಿಕೆ ಹೊಂದಬಹುದು ಎಂದು ತೇಜೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಖಾಸಗಿತನಕ್ಕೆ ತಲೆಕೆಡಿಸಿ ಕೊಳ್ಳುತ್ತಾರೆಯೇ?: ಭಾರತದಲ್ಲಿ ಖಾಸಗಿತನದ ರಕ್ಷಣೆಗೆ ಪ್ರತ್ಯೇಕ ಕಾಯ್ದೆ ಇಲ್ಲ. ‘ದೇಶದ ಜನ ತಮ್ಮ ಖಾಸಗಿತನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆಯೇ’ ಎಂಬ ಪ್ರಶ್ನೆಗೆ ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಣಯ್ ಕೋಟಸ್ಥಾನೆ ಅವರು, ‘ಜನ ದೊಡ್ಡ ಸಂಖ್ಯೆಯಲ್ಲಿ ಸಿಗ್ನಲ್ ಆ್ಯಪ್‌ ಬಳಕೆ ಆರಂಭಿಸಿದ್ದು, ವಾಟ್ಸ್‌ಆ್ಯಪ್‌ ಕಂಪನಿಯು ಗೋಪ್ಯತೆಗೆ ಸಂಬಂಧಿಸಿದ ತನ್ನ ನೀತಿಗಳ ಅನುಷ್ಠಾನವನ್ನು ಮುಂದಕ್ಕೆ ಹಾಕಬೇಕಾಗಿದ್ದು ಭಾರತೀಯರು ತಮ್ಮ ಖಾಸಗಿತನದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎನ್ನಲು ಸಾಕ್ಷಿ’ ಎಂದು ಉತ್ತರಿಸಿದರು. ‘ಭಾರತೀಯರ ದತ್ತಾಂಶವು ಜವಾಬ್ದಾರಿಯಿಂದ ಬಳಕೆಯಾಗಬೇಕು ಎಂದಾದರೆ ಸರ್ಕಾರವು ಖಾಸಗಿತನದ ವಿಚಾರವಾಗಿ ಆದಷ್ಟು ಬೇಗ ಕಾಯ್ದೆಯೊಂದನ್ನು ಜಾರಿಗೆ ತರಬೇಕು’ ಎಂದು ಹೇಳಿದರು.

***
ತಮ್ಮ ಜೀವನವು ಹೆಚ್ಚೆಚ್ಚು ಆನ್‌ಲೈನ್‌ ಆದಂತೆಲ್ಲ, ಜನ ತಮಗೆ ಸಂಬಂಧಿಸಿದ ಮಾಹಿತಿ, ಖಾಸಗಿ ವಿವರಗಳ ಬಗ್ಗೆ ಹೆಚ್ಚು ಬೆಲೆ ಕೊಡಲು ಆರಂಭಿಸಿದ್ದಾರೆ. 
-ಪ್ರಣಯ್ ಕೋಟಸ್ಥಾನೆ, ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ

***
ಟೆಲಿಗ್ರಾಂನಲ್ಲಿನ ಚಾನೆಲ್‌ಗಳು ಎನ್‌ಕ್ರಿಪ್ಟೆಡ್ ಅಲ್ಲ. ಟೆಲಿಗ್ರಾಂ ಆ್ಯಪ್‌ಅನ್ನು ನಡೆಸುತ್ತಿರುವುದು ವಾಣಿಜ್ಯ ಹಿತಾಸಕ್ತಿಗಳನ್ನು ಹೊಂದಿರುವ ಒಂದು ಕಂಪನಿ
–ಜಿ.ಎನ್. ತೇಜೇಶ್, ತಂತ್ರಜ್ಞ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು