ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ | ಬ್ರೌಸರಲ್ಲಿ 'ಟ್ಯಾಬ್ ಗ್ರೂಪ್ಸ್' ಮಾಡಿ, ಕೆಲಸ ವೇಗವಾಗಿಸಿ

ಏಕಕಾಲಕ್ಕೆ ವಿಭಿನ್ನ ವಿಷಯಗಳ ಮೇಲೆ ಕೆಲಸ ಮಾಡುವಲ್ಲಿ ‘ಟ್ಯಾಬ್‌ ಗ್ರೂಪ್ಸ್‌’ ಸಹಕಾರಿ
Published : 4 ಸೆಪ್ಟೆಂಬರ್ 2024, 0:30 IST
Last Updated : 4 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

ಪೈಪೋಟಿಯ ಈ ಕಾಲದ ಉದ್ಯೋಗ ಕ್ಷೇತ್ರದಲ್ಲಿ ವಿಶೇಷವಾಗಿ ಏಕಕಾಲದಲ್ಲಿ ಹಲವು ಕೆಲಸಗಳನ್ನು ನಿಭಾಯಿಸಬೇಕಾದ 'ಮಲ್ಟಿಟಾಸ್ಕಿಂಗ್' ಅನಿವಾರ್ಯತೆಯಿದೆ. ಇದು ವೃತ್ತಿಪರತೆಯ ಮೂಲಭೂತ ಆವಶ್ಯಕತೆಯೂ ಹೌದು. ಕಂಪ್ಯೂಟರಲ್ಲಿ ಕೆಲಸ ಮಾಡುವವರಿಗಂತೂ ಹಲವು ಜಾಲತಾಣಗಳು, ಹಲವು ಹೆಚ್‌ಟಿಎಂಎಲ್ ಫೈಲುಗಳನ್ನೆಲ್ಲ ತೆರೆದಿಡುವುದು ಅತ್ಯಗತ್ಯ. ಗೂಗಲ್ ಕ್ರೋಮ್, ಮೈಕ್ರೋಸಾಫ್ಟ್ ಎಡ್ಜ್, ಆ್ಯಪಲ್ ಸಫಾರಿ, ಮೋಝಿಲಾ ಫೈರ್‌ಫಾಕ್ಸ್ ಮುಂತಾದ ಬ್ರೌಸರ್‌ಗಳು ಈ ಕಾರಣಕ್ಕಾಗಿಯೇ ಹಲವು ಟ್ಯಾಬ್‌ಗಳನ್ನು ತೆರೆದಿಟ್ಟು ಕೆಲಸ ಮಾಡಬಹುದಾದ ವೈಶಿಷ್ಟ್ಯಗಳನ್ನು ಜನರಿಗೆ ಉಚಿತವಾಗಿಯೇ ನೀಡುತ್ತಿದೆ. ಇದು ನಮ್ಮ ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುವುದಕ್ಕೆ ಅನುಕೂಲ.

ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಈ ಟ್ಯಾಬ್‌ಗಳನ್ನು ತೆರೆದಿಟ್ಟು, ಅದನ್ನೊಂದು ಗುಂಪು ಮಾಡಿ 'ಪಿನ್' ಮಾಡಿಟ್ಟುಕೊಂಡರೆ ಇವತ್ತು ಕೆಲಸ ಮುಗಿಸುವುದು ಕಷ್ಟವಾದರೂ, ನಾಳೆಗೆ ಅವನ್ನೆಲ್ಲ ಪುನಃ ಹುಡುಕುವಂತಾಗದೆ, ಕ್ಷಿಪ್ರವಾಗಿ ತೆರೆದು ಕೆಲಸ ಮುಂದುವರಿಸಲು ಅನುಕೂಲ ಮಾಡುವ ವೈಶಿಷ್ಟ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಸಾಫ್ಟ್‌ವೇರ್ ಉದ್ಯಮದಲ್ಲಿರುವ ಕೆಲವರಿಗೆ ಇದು ಗೊತ್ತಿದೆಯಾದರೂ, ಜನಸಾಮಾನ್ಯರಿಗೂ ಏಕಕಾಲದಲ್ಲಿ ಹಲವು ಬ್ರೌಸರ್ ಟ್ಯಾಬ್‌ಗಳನ್ನು ತೆರೆದಿಟ್ಟು ಕೆಲಸ ಮಾಡಲು ಉಪಯೋಗವಾಗಬಹುದಾದ ಕುರಿತ ಮಾಹಿತಿ ಇಲ್ಲಿದೆ.

ಏನಿದು ಟ್ಯಾಬ್ ಗ್ರೂಪ್ಸ್?

ಬ್ರೌಸರ್‌ನಲ್ಲಿ ಹೊಸ ವಿಂಡೋದ ಬದಲು, ಒಂದೇ ವಿಂಡೋದಲ್ಲಿ ಹಲವು ಟ್ಯಾಬ್‌ಗಳನ್ನು ತೆರೆಯಲು ಅಡ್ರೆಸ್ ಬಾರ್ ಬಲತುದಿಯಲ್ಲಿ ‘+’ ಚಿಹ್ನೆ ಎಲ್ಲರೂ ನೋಡಿರುತ್ತೀರಿ. ಈ ಟ್ಯಾಬ್‌ಗಳಲ್ಲಿ ಜಾಲತಾಣದ ಪುಟಗಳನ್ನು ಒಂದೊಂದಾಗಿ ತೆರೆಯುತ್ತಾ ಹೋದರೆ, ಒಂದೇ ವಿಂಡೋದಲ್ಲಿ ಎಲ್ಲವೂ ಇರುವಂತಾಗುತ್ತದೆ. ಅದರ ಮುಂದುವರಿದ ಭಾಗವೇ ಈ ‘ಟ್ಯಾಬ್ ಗ್ರೂಪ್ಸ್’. ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಜಾಲತಾಣಗಳನ್ನು ಬೇರೆ ಬೇರೆ ಟ್ಯಾಬ್‌ಗಳಲ್ಲಿ ತೆರೆದಿಟ್ಟು, ಅವುಗಳನ್ನು ಒಟ್ಟುಗೂಡಿಸಿ, ಬೇಕೆಂದಾಗ ಮಾತ್ರ ಎಲ್ಲವನ್ನೂ ಏಕಕಾಲಕ್ಕೆ ತೆರೆಯುವ ವೈಶಿಷ್ಟ್ಯವಿದು. ಉದಾಹರಣೆಗೆ, ಹಣಕಾಸುವಿಷಯ, ಷೇರುಗಳ ವಿಚಾರ, ಇತರ ಯಾವುದೇ ನಿರ್ದಿಷ್ಟ ವಿಷಯಗಳ ಬಗೆಗೆ ಹಲವು ಜಾಲತಾಣಗಳನ್ನು ಏಕಕಾಲದಲ್ಲಿ ವಿಭಿನ್ನ ಟ್ಯಾಬ್‌ಗಳಲ್ಲಿ ತೆರೆದಿಟ್ಟು, ಅವಲೋಕನ ಮಾಡಬೇಕಾಗಬಹುದು. ತೆರೆದಿಟ್ಟ ವಿಭಿನ್ನ ವಿಷಯಗಳ ಟ್ಯಾಬ್‌ಗಳನ್ನು ವ್ಯವಸ್ಥಿತವಾಗಿಟ್ಟರೆ, ಕೆಲಸಕ್ಕೆ ವೇಗ ದೊರೆಯುತ್ತದೆ.

ಟ್ಯಾಬ್ ಗ್ರೂಪ್ಸ್ ರಚಿಸಲು ಬ್ರೌಸರ್ ವಿಂಡೋದ ಬಲ ಮೇಲ್ತುದಿಯಲ್ಲಿ ರೈಟ್-ಕ್ಲಿಕ್ ಮಾಡಿದಾಗ ಕಾಣಿಸುವ ಮೆನು. ಹಾಗೂ ಈಗಾಗಲೇ ರಚಿಸಲಾಗಿರುವ ಗ್ರೂಪ್ಸ್ (ಬೇರೆ ಬೇರೆ ಬಣ್ಣಗಳಲ್ಲಿ).

ಟ್ಯಾಬ್ ಗ್ರೂಪ್ಸ್ ರಚಿಸಲು ಬ್ರೌಸರ್ ವಿಂಡೋದ ಬಲ ಮೇಲ್ತುದಿಯಲ್ಲಿ ರೈಟ್-ಕ್ಲಿಕ್ ಮಾಡಿದಾಗ ಕಾಣಿಸುವ ಮೆನು. ಹಾಗೂ ಈಗಾಗಲೇ ರಚಿಸಲಾಗಿರುವ ಗ್ರೂಪ್ಸ್ (ಬೇರೆ ಬೇರೆ ಬಣ್ಣಗಳಲ್ಲಿ).

ಟ್ಯಾಬ್ ಗ್ರೂಪ್ಸ್ ರಚಿಸುವುದು ಹೇಗೆ?
ಕ್ರೋಮ್ ಬ್ರೌಸರ್‌ನಲ್ಲಿ ತೆರೆದಿಟ್ಟ ಟ್ಯಾಬ್‌ನ ಮೇಲ್ಭಾಗದ ಬಾರ್‌ನಲ್ಲಿ ಮೌಸ್ ಬಲ-ಕ್ಲಿಕ್ ಮಾಡಿ. ಆಗ ಕಾಣಿಸಿಕೊಳ್ಳುವ ವಿಂಡೋದಲ್ಲಿ 'Add Tab to New Group' ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಆ ಗ್ರೂಪ್‌ಗೆ ಹೆಸರು ಮತ್ತು ನಿರ್ದಿಷ್ಟ ಬಣ್ಣ ಕೊಡುವ ಆಯ್ಕೆಯೂ ಅಲ್ಲೇ ಕಾಣಿಸುತ್ತದೆ. ತೆರೆದಿರುವ ಬೇರೊಂದು ಬ್ರೌಸರ್ ವಿಂಡೋ ಅಥವಾ ಟ್ಯಾಬ್ ಮೇಲೆ ಬಲ-ಕ್ಲಿಕ್ ಮಾಡಿದಾಗ, Add to Tab Groups ಅಥವಾ Add Tab To New Group ಅಂತನೂ ಕಾಣಿಸಿಕೊಳ್ಳುತ್ತದೆ. ಆಯ್ಕೆ ಮಾಡಿಕೊಳ್ಳಿ. ಹೀಗೆ, ನಮಗೆ ಬೇಕಾದ ವಿಷಯದ ಕುರಿತಾಗಿ ಹಲವಾರು ಟ್ಯಾಬ್ ಗ್ರೂಪ್‍ಗಳನ್ನು ರಚಿಸಿ, ಅದಕ್ಕೆ ತತ್ಸಂಬಂಧಿತ ಹೆಸರುಗಳನ್ನು ಕೊಡುತ್ತಾ ಹೋಗಬಹುದು. ನಂತರ, ಅಲ್ಲೇ (ಮೇಲ್ಭಾಗದಲ್ಲಿ ಟ್ಯಾಬ್ ಮೇಲೆ) ಬಲ-ಕ್ಲಿಕ್ ಮಾಡಿ, 'Save Group' ಒತ್ತಲು ಮರೆಯಬೇಡಿ. ಹಾಗಿದ್ದರೆ ಮಾತ್ರ, ಕ್ರೋಮ್ ಬ್ರೌಸರ್ ಮುಚ್ಚಿದರೂ, ಮತ್ತೊಮ್ಮೆ ತೆರೆದಾಗ ಆ ಗ್ರೂಪ್ ತೆರೆಯಲು ನಿಮಗೆ ಸಾಧ್ಯವಾಗುತ್ತದೆ.

ಮುಂದೆ, ಬೇರೆ ಟ್ಯಾಬ್‌ಗಳನ್ನು ಈ ಗ್ರೂಪ್‌ಗೆ ಸೇರಿಸಬೇಕಿದ್ದರೆ, ಟ್ಯಾಬ್ ಮೇಲ್ಭಾಗದಲ್ಲಿ ಬಲ-ಕ್ಲಿಕ್ ಮಾಡಿದರೆ ಸಿಗುವ ಆಯ್ಕೆಯನ್ನು ಕ್ಲಿಕ್ ಮಾಡಬಹುದು, ಅಲ್ಲದೆ ಇಡೀ ಟ್ಯಾಬ್ ಅನ್ನೇ ಎಳೆದು ಗ್ರೂಪ್‌ನ ಮೇಲೆ ಬಿಡಬಹುದು (ಡ್ರ್ಯಾಗ್ ಆ್ಯಂಡ್ ಡ್ರಾಪ್).

ಇನ್ನು, ನಾವು ಗುರುತು ಮಾಡಿಕೊಂಡ ಟ್ಯಾಬ್ ಮೇಲೆ ಒಂದು ಸಲ ಕ್ಲಿಕ್ ಮಾಡಿದಾಗ, ಅದರೊಳಗಿರುವ ಎಲ್ಲ ಟ್ಯಾಬ್‌ಗಳೂ ಒಂದೇ ಟ್ಯಾಬ್‌ನಲ್ಲಿ ಗುಂಪಾಗಿ ಕೂಡಿಕೊಳ್ಳುತ್ತವೆ (ಮಿನಿಮೈಸ್); ಮತ್ತೊಮ್ಮೆ ಕ್ಲಿಕ್ ಮಾಡಿದರೆ, ಎಲ್ಲವೂ ಪ್ರತ್ಯೇಕ ಟ್ಯಾಬ್‌ಗಳಲ್ಲಿ ತೆರೆದುಕೊಳ್ಳುತ್ತವೆ. ಇದರಿಂದ ಒಂದು ಸಮಯಕ್ಕೆ ಒಂದು ವಿಷಯದ ಬಗೆಗೆ ಮಾತ್ರವೇ ಗಮನ ಕೇಂದ್ರೀಕರಿಸಿ, ಅದಕ್ಕೆ ಸಂಬಂಧಿಸಿದ ಕೆಲಸ ಮಾಡಿ ಮುಗಿಸುವಲ್ಲಿ ಅನುಕೂಲ ಒದಗಿಸುತ್ತದೆ.

ಆ ದಿನದ ಕೆಲಸ ಮುಗಿಸಿ ಬ್ರೌಸರ್ ಮುಚ್ಚಿ, ನಂತರ ಪುನಃ ಅದನ್ನು ತೆರೆದಾಗ ಈ ಟ್ಯಾಬ್ ಗ್ರೂಪ್‌ಗಳು ನಮಗೆ ಬ್ರೌಸರ್‌ನ ಎಡ-ಮೇಲ್ಭಾಗದಲ್ಲಿ ಗೋಚರಿಸುತ್ತವೆ. ಅದನ್ನು ಕ್ಲಿಕ್ ಮಾಡಿ ಪುನಃ ತೆರೆದು ಕೆಲಸ ಮುಂದುವರಿಸಬಹುದು.

ನಿರ್ದಿಷ್ಟ ಟ್ಯಾಬ್ ಗ್ರೂಪ್‌ನ ಕೆಲಸ ಮುಗಿಯಿತು ಎಂದಾದಾಗ, ಅದೇ ಟ್ಯಾಬ್ ಗ್ರೂಪ್ ಮೇಲೆ ಬಲ-ಕ್ಲಿಕ್ ಮಾಡಿ 'Ungroup' ಕ್ಲಿಕ್ ಮಾಡಿದರಾಯಿತು.

ಸ್ಮಾರ್ಟ್ ಫೋನ್‌ಗಳಲ್ಲಿ ಹೇಗೆ?
ಮೊಬೈಲ್ ಫೋನ್‌ನ ಕ್ರೋಮ್ ಬ್ರೌಸರ್‌ನಲ್ಲಿಯೂ ಈ ರೀತಿ ಟ್ಯಾಬ್ ಗ್ರೂಪ್‌ಗಳನ್ನು ಮಾಡಬಹುದು. ಟ್ಯಾಬ್‌ಗಳನ್ನು ನೋಡಲು ಬ್ರೌಸರ್ ವಿಳಾಸ ದಾಖಲಿಸುವ ಅಡ್ರೆಸ್ ಬಾರ್ ಪಕ್ಕದಲ್ಲೇ ತೆರೆದಿರುವ ಟ್ಯಾಬ್‌ಗಳ ಸಂಖ್ಯೆ ತೋರಿಸುವ ಚೌಕಾಕಾರದ ಒಂದು ಐಕಾನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿ, ತೆರೆದಿರುವ ಟ್ಯಾಬ್‌ಗಳನ್ನು ಸ್ಪರ್ಶಿಸಿ ಒಂದರ ಮೇಲೊಂದು ಎಳೆದು ಬಿಡಿ (ಡ್ರ್ಯಾಗ್ ಆ್ಯಂಡ್ ಡ್ರಾಪ್). ಆಗ ಗ್ರೂಪ್ ರಚನೆಯಾಗುತ್ತದೆ ಮತ್ತು ಅದಕ್ಕೆ ಹೆಸರು ಕೂಡ ಕೊಡಬಹುದು. ಡೀಫಾಲ್ಟ್ ಆಗಿ ಟ್ಯಾಬ್‌ಗಳ ಸಂಖ್ಯೆಯನ್ನು ಅದು ತಿಳಿಸುತ್ತದೆ. ಅದನ್ನು ಅಳಿಸಿ ನಮಗೆ ಬೇಕಾದ ಹೆಸರು ನಮೂದಿಸಬಹುದು.

ಈ ರೀತಿ ಟ್ಯಾಬ್‌ಗಳನ್ನು ಗ್ರೂಪ್ ಮಾಡಿಟ್ಟುಕೊಳ್ಳುವುದು ವಿದ್ಯಾರ್ಥಿಗಳಿಂದ ಹಿಡಿದು, ಉದ್ಯೋಗಸ್ಥರಿಗೆ, ಸಂಶೋಧಕರಿಗೆ, ಟೆಕಿಗಳಿಗೆ... ಹೀಗೆ ಎಲ್ಲರಿಗೂ ಉಪಯೋಗ. ಆದರೆ, ಇದಕ್ಕೆ ಗೂಗಲ್ ಕ್ರೋಮ್ ಬ್ರೌಸರ್‌ಗೆ ಜಿಮೇಲ್ ಮೂಲಕ ಲಾಗಿನ್ ಆಗಿರಬೇಕಾಗುತ್ತದೆ ಎಂಬುದು ನೆನಪಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT