ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿ, ದ್ರಾವಣ, ಬಿಲ್ಲೆ ಬಿಡಿ: ಉಂಗುರ ಧರಿಸಿ ಸೊಳ್ಳೆ ಓಡಿಸಿ!

Last Updated 30 ನವೆಂಬರ್ 2022, 2:33 IST
ಅಕ್ಷರ ಗಾತ್ರ

ಮನುಷ್ಯ ಏನೆಲ್ಲಾ ಸಾಧನೆ ಮಾಡಿದ್ದರೂ ಪ್ರಕೃತಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ; ಅದು ಸುಲಭವೂ ಅಲ್ಲ. ಕೊರೊನಾ ಸೋಂಕು ಅದಕ್ಕೊಂದು ಉದಾಹರಣೆ. ಪ್ರಕೃತಿಯು ಮನುಷ್ಯನನ್ನು ನಿಯಂತ್ರಣಕ್ಕೆ ತೆಗೆದುಕೊಂಡು ‘ಮಾನವ ಪ್ರಕೃತಿಯ ಎದುರು ಕ್ಷುಲ್ಲಕ’ ಎಂದು ಋಜುವಾತು ಮಾಡಿದ ವಿಧಾನವದು. ಅಷ್ಟೆಲ್ಲಾ ದೊಡ್ಡ ಉದಾಹರಣೆಗಳೇಕೆ? ಕ್ರಿಮಿ-ಕೀಟಗಳಾದ ಸೊಳ್ಳೆ, ತಿಗಣೆ, ಜಿರಳೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮನುಷ್ಯನಿಗೆ ಇದುವರೆಗೂ ಸಾಧ್ಯವಾಗಿಲ್ಲ. ಪ್ರಯತ್ನಗಳೇನೋ ಸಾಕಷ್ಟಾಗಿವೆ; ಇದೀಗ ಈ ಪ್ರಯತ್ನಗಳ ಸಾಲಿಗೆ ಮತ್ತೊಂದು ಸಂಶೋಧನೆ ಸೇರಿದೆ. ಉಂಗುರವೊಂದನ್ನು ಬೆರಳಲ್ಲಿ ಧರಿಸಿ ಸೊಳ್ಳೆಗಳನ್ನು ಓಡಿಸುವ ಪ್ರಯತ್ನವಿದು!

ಈವರೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಲೆಕ್ಕವಿಲ್ಲದಷ್ಟು ವಿಧಾನಗಳ ಆವಿಷ್ಕಾರವಾಗಿದೆ. ಸೊಳ್ಳೆ ಓಡಿಸುವ ಬತ್ತಿ, ದ್ರಾವಣ, ಬಿಲ್ಲೆ ಇತ್ಯಾದಿ ಸಾಕಷ್ಟು ಸಾಧನಗಳ ಬಳಕೆ ಈಗಲೂ ಆಗುತ್ತಿದೆ. ಈಗಿನ ಹೊಸ ಸಂಶೋಧನೆಯಲ್ಲಿ ವಿಶೇಷವೊಂದಿದೆ. ಬೆರಳಿಗೆ ಧರಿಸುವ ಈ ಉಂಗುರವು ಈ ಮೇಲೆ ಉದಾಹರಿಸಿರುವ ಇತರ ಸಾಧನಗಳಂತೆ ಯಾವುದೇ ರೀತಿಯ ಹೊಗೆ, ವಾಸನೆಯನ್ನು ಹೊರಸೂಸುವುದಿಲ್ಲ. ಬದಲಿಗೆ ಈ ಉಂಗುರದಲ್ಲಿ ಇರಿಸಿರುವ ವಾಸನೆರಹಿತ ರಾಸಾಯನಿಕವೊಂದು ಆಚೆ ಬರುತ್ತಾ, ಸೊಳ್ಳೆಗಳು ಹತ್ತಿರ ಸುಳಿಯದಂತೆ ಕೆಲಸ ಮಾಡುತ್ತಿರುತ್ತದೆ. ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಈ ಸಾಧನದ ವಿಶೇಷವೆಂದರೆ, ಒಮ್ಮೆ ಈ ಉಂಗುರವನ್ನು ಧರಿಸಿದರೆ ಅದರಲ್ಲಿರುವ ರಾಸಾಯನಿಕವು ಖಾಲಿಯಾಗುವುದಿಲ್ಲ. ಸಂಪೂರ್ಣ ಉಂಗುರವೇ ಈ ರಾಸಾಯನಿಕದಿಂದ ರಚಿತವಾಗಿದೆ. ಹಾಗಾಗಿ, ಈಗಿನ ಸೊಳ್ಳೆ ಓಡಿಸುವ ಸಾಧನಗಳಂತೆ ದ್ರಾವಣದ ರೀಫಿಲ್, ಬಿಲ್ಲೆ, ಬತ್ತಿಗಳನ್ನು ಮತ್ತೆ ಕೊಂಡು ಬಳಸಬೇಕಾದ ಪ್ರಮೇಯವೇ ಬರುವುದಿಲ್ಲ. ಒಮ್ಮೆ ಉಂಗುರವನ್ನು ಖರೀದಿಸಿ ಬೆರಳಲ್ಲಿ ಧರಿಸಿಕೊಂಡರೆ ಸಾಕಷ್ಟೆ.

ಚರ್ಮದ ಕ್ಯಾನ್ಸರ್‌ ಇತ್ಯಾದಿ ಸಮಸ್ಯೆಗಳು ಬರುವ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು, ವೈದ್ಯಕೀಯ ಪ್ರಕರಣಗಳನ್ನು ಅಧ್ಯಯನ ಮಾಡಿ ಈ ಉಂಗುರವನ್ನು ಮಾರ್ಟಿನ್ ಲೂಥರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ನೋಡಲು ಮುತ್ತಿನ ಉಂಗುರದಂತೆ ಇದು ಕಾಣುತ್ತದೆ. ‘ಐಆರ್‌3535’ ಎಂಬ ರಾಸಾಯನಿಕವು ಇದರಲ್ಲಿ ಬಳಕೆಯಾಗುತ್ತಿದೆ. ಈ ರಾಸಾಯನಿಕವು ಈಗಾಗಲೇ ಸೊಳ್ಳೆಯನ್ನು ಓಡಿಸುವ ಸಿಂಪಡಣಾ ದ್ರಾವಣವಾಗಿ ಬಳಕೆಯಾಗಿದೆ. ಅಲ್ಲದೇ, ಈ ರಾಸಾಯನಿಕವು ಮಾನವನ ಆರೋಗ್ಯಕ್ಕೆ ಅಪಾಯಕಾರಿಯೂ ಅಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಉಂಗುರದಲ್ಲಿ ಇದನ್ನು ಬಳಸಲಾಗಿದೆ.

ಈ ಉಂಗುರವನ್ನು ಬೆರಳಲ್ಲಿ ಧರಿಸುವ ಕಾರಣ, ಮೈಶಾಖಕ್ಕೆ ಉಂಗುರದಲ್ಲಿನ ರಾಸಾಯನಿಕವು ನಿಧಾನವಾಗಿ ಆವಿಯಾಗುತ್ತಿರುತ್ತದೆ. ಈ ರಾಸಾಯನಿಕವನ್ನು ತಾಳಲಾರದ ಸೊಳ್ಳೆಗಳು ದೂರ ಓಡಿಹೋಗುತ್ತವೆ. ಇಷ್ಟೇ ಸರಳ ಈ ತಂತ್ರಜ್ಞಾನ. ‘3ಡಿ’ ಪ್ರಿಂಟರ್‌ ಬಳಸಿಕೊಂಡು ಈ ಉಂಗುರವನ್ನು ರಚಿಸಲಾಗಿದೆ. ಬೃಹ‌ತ್ ಪ್ರಮಾಣದಲ್ಲಿ ತಯಾರಿಸಬೇಕಾದಾಗ ಕೈಗಾರಿಕಾ ತಯಾರಿಕಾ ವಿಧಾನಗಳನ್ನು ಬಿಡುಗಡೆಗೊಳಿಸುವುದಾಗಿ ಮಾರ್ಟಿನ್ ಲೂಥರ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ. ರಿನೇ ಆಂಡ್ರಾಷ್ ಹಾಗೂ ಫ್ಯಾನ್ಫಾಫ್ ಡು ತಿಳಿಸಿದ್ದಾರೆ.

‘ಇದು ಧರಿಸಬಲ್ಲ ಸಾಧನವಾದ ಕಾರಣ, ಎಲ್ಲೇ ಹೋದರೂ ಉಂಗುರ ನಿಮ್ಮ ಜೊತೆಗೇ ಬರುತ್ತದೆ. ಹಾಗಾಗಿ, ಮನೆ–ಕಚೇರಿಗಳಿಂದ ಆಚೆ ಹೋದಲ್ಲಿ ಸೊಳ್ಳೆಯಿಂದ ಕಚ್ಚಿಸಿಕೊಳ್ಳಬೇಕಾದ ಭಯ ಇರುವುದಿಲ್ಲ. ಹೊಸತಾಗಿ ಸೊಳ್ಳೆ ಓಡಿಸುವ ಸಾಧನಗಳನ್ನು ಖರೀದಿಸಬೇಕಾದ ಅಥವಾ ಕೊಂಡೊಯ್ಯಬೇಕಾದ ಪ್ರಮೇಯವೂ ಇರುವುದಿಲ್ಲ. ನೋಡಲೂ ಅಂದವಾಗಿರುವ, ಆಭರಣ ಸ್ವರೂಪದ ಈ ಉಂಗುರವು ನಿಮ್ಮ ಜೊತೆಯೇ ಇದ್ದು ನಿಮ್ಮನ್ನು ಕಾಪಾಡುವ ಸಂಗಾತಿಯಾಗಲಿದೆ’ ಎಂದು ವಿಜ್ಞಾನಿಗಳು ಅಭಯ ನೀಡಿದ್ದಾರೆ.

ಜಿರಲೆ ತಿಗಣೆಗಳೂ ದೂರ

ಈ ಉಂಗುರದ ಮತ್ತೊಂದು ವಿಶೇಷವೆಂದರೆ, ಇದು ಕೇವಲ ಸೊಳ್ಳೆಗಳನ್ನು ಓಡಿಸಲು ಮಾತ್ರ ಬಳಕೆಯಾಗುವುದಿಲ್ಲ. ಬದಲಿಗೆ, ಜಿರಳೆ, ತಿಗಣೆ ಮಾದರಿಯ ಕೀಟಗಳನ್ನೂ ದೂರ ಇಡಬಹುದು. ಅಲ್ಲದೇ, ವಿಜ್ಞಾನಿಗಳು ಕೇವಲ ಧರಿಸುವ ಸಾಧನೆಗಳನ್ನು ಮಾತ್ರ ಅಭಿವೃದ್ಧಿ ಪಡಿಸದೇ ಕಪಾಟಿನಲ್ಲಿ ಇಡಬಹುದಾದ, ಗೋಡೆಗೆ ತಗುಲಿಹಾಕಬಹುದಾದ ಸಾಧನಗಳಾಗಿಯೂ ತಯಾರಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ರಾಸಾಯನಿಕವನ್ನು ಒಳಗೊಂಡ ಯಾವುದೇ ಆಕೃತಿಯ ಸಾಧನವನ್ನು ಬೇಕಾದರೂ ತಯಾರಿಸುವ ಸಾಧ್ಯತೆ ಇಲ್ಲಿದೆ. ಒಂದು ನಿಗದಿತ ತಾಪಮಾನದಲ್ಲಿ ಮಾತ್ರ ಈ ರಾಸಾಯನಿಕ ಆವಿಯಾಗುವ ಕಾರಣ, ಧರಿಸಲಾಗದ ಸಾಧನಗಳಿಗೆ ಕೃತಕವಾಗಿ ಶಾಖ ನೀಡಬೇಕಾಗುತ್ತದೆ. ಅಥವಾ, ಅಂತಹ ಶಾಖವಿರುವ ಜಾಗಗಳಲ್ಲಿ ಇಡಬಹುದಾದ ಸಾಧನಗಳನ್ನು ತಯಾರಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೃಷಿಯ ಬಳಕೆಗೂ ಅಭಿವೃದ್ಧಿ

ಕೃಷಿ ಉತ್ಪನ್ನಗಳನ್ನು ಬಾಧಿಸುವ ಕ್ರಿಮಿ–ಕೀಟಗಳ ನಿಯಂತ್ರಣಕ್ಕೂ ಇದೇ ಮಾದರಿಯ ಸಂಶೋಧನೆ ನಡೆಸಲಾಗುತ್ತಿದೆ ಎಂದು ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ‘ಕ್ರಿಮಿನಾಶಕಗಳ ಬಳಕೆ ಕಡಿಮೆ ಮಾಡುವ ಮೂಲಕ ಆರೋಗ್ಯಕಾರಿ ಆಹಾರ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ರೈತರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT