ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್ರಬ್ರಹ್ಮ’ನ ಹೆಜ್ಜೆ ಜಾಡು ಹಿಡಿದು...

Last Updated 18 ಆಗಸ್ಟ್ 2019, 10:51 IST
ಅಕ್ಷರ ಗಾತ್ರ

ಮನುಷ್ಯ ತಾನು ಕಣ್ಣಾರೆ ಕಂಡ ಒಂದು ಮನಕಲಕುವ ಅಥವಾ ಮನಸ್ಸನ್ನು ಅರಳಿಸುವ ದೃಶ್ಯವನ್ನು ಬೇರೆಯವರಿಗೆ ಕಣ್ಣಿಗೆ ಕಟ್ಟಿದಂತೆ ಹೇಳಿದರೂ ಕಾಲಾಂತರದಲ್ಲಿ ಆ ಘಟನೆಯ ತೀವ್ರತೆ ಹೇಳಿದವರ ಹಾಗೂ ಕೇಳಿದವರ ಸ್ಮೃತಿಪಟಲದಿಂದ ಮರೆಯಾಗುತ್ತದೆ. ಅದೇ ಕ್ಯಾಮೆರಾದಲ್ಲಿ ಚಿತ್ರಿಸಿಕೊಂಡ ಚಿತ್ರಗಳು ಮುಂದಿನ ಪೀಳಿಗೆಗೆ ಜೀವಂತ ಸಾಕ್ಷಿಯಾಗಿ ಉಳಿಯುತ್ತವೆ...

ಇತಿಹಾಸಕಾರರು ಆಯಾ ಕಾಲಘಟ್ಟದಲ್ಲಿ ಕಂಡ ಪ್ರಮುಖ ಘಟನೆಗಳನ್ನು ಬರವಣಿಗೆ ರೂಪದಲ್ಲಿ ದಾಖಲಿಸುತ್ತಾ ಬಂದಿರುವುದು ರೂಢಿ. ಹೀಗೆ ದಾಖಲಿಸುವ ಎಲ್ಲಾ ಘಟನೆಗಳಿಗೆ ಇವರೇ ಪ್ರತ್ಯಕ್ಷ ಸಾಕ್ಷಿಗಳಾಗಿರಲು ಸಾಧ್ಯವಿರಲಿಲ್ಲ. ಕಂಡವರಿಂದ, ಕೇಳಿದವರಿಂದ ಪಡೆದ ಹಾಗೂ ಇತರರು ದಾಖಲಿಸಿದ ಮಾಹಿತಿ ಆಧರಿಸಿ ಇತಿಹಾಸವನ್ನು ಚಿತ್ರಿಸಿದರೆ, ಛಾಯಾಚಿತ್ರಗ್ರಾಹಕ ತಾನೇ ಪ್ರತ್ಯಕ್ಷ ಸಾಕ್ಷಿಯಾಗಿ ತನ್ನ ಕ್ಯಾಮೆರಾದ ಮೂಲಕ ಘಟನೆಯ ದೃಶ್ಯವನ್ನು ನೋಡುಗನ ಕಣ್ಣಿಗೆ ಕಟ್ಟುವಂತೆ ದಾಖಲಿಸುತ್ತಾನೆ.

ಹಾಗಾಗಿ ಛಾಯಾಚಿತ್ರಗಳು ಎಲ್ಲಾ ಕಾಲಕ್ಕೂ ಪ್ರತ್ಯಕ್ಷ ಸಾಕ್ಷಿಗಳಂತೆಯೇ ಉಳಿದು ನೋಡುಗರ ಕಣ್ಣಮುಂದೆ ಆ ಘಟನೆಗಳನ್ನು ಮರು ಸೃಷ್ಟಿಸುತ್ತವೆ.

ಗಾಂಧೀಜಿ ಅವರ ಬದುಕು ಮತ್ತು ಹೋರಾಟವನ್ನು ಪರಿಚಯಿಸುವ ಲೇಖನವನ್ನು ಓದಿದಾಗ ಒಂದು ಐತಿಹಾಸಿಕ ಕಥೆಯಂತೆ ನಮ್ಮ ಕಲ್ಪನಾಶಕ್ತಿಗೆ ಅನುಗುಣವಾಗಿ ಅರ್ಥೈಸಿಕೊಳ್ಳುತ್ತೇವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಸಾಕ್ಷ್ಯಚಿತ್ರವನ್ನು ತೆರೆಯ ಮೇಲೆ ವೀಕ್ಷಿಸುವಾಗ ನಮ್ಮ ಕಣ್ಣಮುಂದೆಯೇ ನಡೆದ ಘಟನೆ ಎಂಬಂತೆ ಭಾಸವಾಗುತ್ತದೆ. ಅತಿಮಾನುಷ ವ್ಯಕ್ತಿಯಂತೆ ಜನಮಾನಸದಲ್ಲಿ ಬಿಂಬಿತಗೊಂಡಿದ್ದ ಕಾಡುಗಳ್ಳ ವೀರಪ್ಪನ್ ಕುರಿತ ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡ ಮೇಲೆಯೇ ಆತ ನಮ್ಮನಿಮ್ಮಂತೆ ಸಾಮಾನ್ಯ ವ್ಯಕ್ತಿಯೆಂಬ ವಾಸ್ತವವನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಛಾಯಾಗ್ರಹಣ ಅನೇಕ ಮಿಥ್ಯಗಳನ್ನು ಕಪೋಲಕಲ್ಪಿತ ಚಿತ್ರಗಳನ್ನು ಭಂಗಗೊಳಿಸಿ ವಾಸ್ತವವನ್ನು ಅನಾವರಣಗೊಳಿಸುವ ವಿಶ್ವಸನೀಯ ಸಾಧನ. ತೊಂಬತ್ತರ ದಶಕದಲ್ಲಿ ನಡೆದ ಕೊಲ್ಲಿ ಯುದ್ಧದ ಜೀವಂತ ದೃಶ್ಯಗಳು ನೇರವಾಗಿ ಟಿ.ವಿ. ಪರದೆ ಮೇಲೆ ಮೂಡಿದಾಗ ಇಡೀ ಲೋಕವೇ ಆ ಚಾರಿತ್ರಿಕ ಘಟನೆಗೆ ಸಾಕ್ಷಿಯಾಯಿತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಬೃಹತ್ ವಾಣಿಜ್ಯ ಕಟ್ಟಡಗಳು ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾಗಿ ಧರೆಗುರುಳಿದ ಸನ್ನಿವೇಶ ಯಥಾವತ್ತಾಗಿ ಮೂಡಿಬಂದಿದ್ದರಿಂದ ಜಗತ್ತಿನ ಜನಸಾಮಾನ್ಯರ ನೆನಪಿನಲ್ಲಿ ಸ್ಥಿರವಾಗಿ ಉಳಿಯಲು, ಹಲವು ಬಗೆಯ ಚಿಂತನೆಗಳಿಗೆ ದಾರಿ ಮಾಡಿಕೊಡಲು ಕಾರಣವಾಯ್ತು.

1968ರಲ್ಲಿ ವಿಯೆಟ್ನಾಂನಲ್ಲಿ ಆಂತರಿಕ ಕಲಹ ನಡೆಯುತ್ತಿತ್ತು. ವಿಯೆಟ್‍ಕಾಂಗ್ ಮತ್ತು ಉತ್ತರ ವಿಯೆಟ್ನಾಂನ ಪಡೆಗಳು ದಕ್ಷಿಣ ವಿಯೆಟ್ನಾಂ ಸರ್ಕಾರದ ವಿರುದ್ಧ ಆಕ್ರಮಣ ನಡೆಸಿದ್ದವು. ಅಮೆರಿಕದ ಸೇನೆ ದಕ್ಷಿಣ ವಿಯೆಟ್ನಾಂ ಜೊತೆ ಯುದ್ಧದಲ್ಲಿ ಭಾಗಿಯಾಗಿತ್ತು. ದಕ್ಷಿಣ ವಿಯೆಟ್ನಾಂನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಸೈಗಾನ್ ಪಟ್ಟಣದ ಬೀದಿಯೊಂದರಲ್ಲಿ, ಅಮೆರಿಕದ ಸೈನ್ಯಾಧಿಕಾರಿಗಳ ಎದುರಿನಲ್ಲಿಯೇ ವಿಯೆಟ್‌ಕಾಂಗ್‌ ಸಂಘಟನೆಯ ಹೋರಾಟಗಾರ ನುಯಾನ್ ವ್ಯಾನ್‍ಲೆಮ್‍ನನ್ನು ಅತಿ ಸಮೀಪದಿಂದ ಗುಂಡಿಕ್ಕಿ ಕೊಂದ. ಅಲ್ಲಿದ್ದ ಅಸೋಸಿಯೇಟ್‌ ಪ್ರೆಸ್ ಸುದ್ದಿಸಂಸ್ಥೆಯ ಛಾಯಾಗ್ರಾಹಕ ಎಡ್ಡಿ ಆಡಮ್ ಈ ದೃಶ್ಯವನ್ನು ತನ್ನ ಕ್ಯಾಮೆರಾದಿಂದ ಕ್ಲಿಕ್ಕಿಸಿದ. ಮಾರನೆಯ ದಿನ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಯಿತು; ಯುದ್ಧದ ಕ್ರೌರ್ಯವನ್ನು, ಅಸಹಾಯಕರನ್ನು ನಿರ್ದಯೆಯಿಂದ ಕೊಲ್ಲುವ ಯುದ್ಧವನ್ನು ನಿಲ್ಲಿಸಬೇಕೆಂಬ ಯುದ್ಧ ವಿರೋಧಿ ಚಳವಳಿಯನ್ನೇ ಆ ಚಿತ್ರ ಹುಟ್ಟುಹಾಕಿತು. ತನ್ನ ದೇಶದ ನಾಗರಿಕರ ವಿರೋಧ ಎದುರಿಸಲಾಗದೆ ಅಮೆರಿಕ ಅನಿವಾರ್ಯವಾಗಿ ವಿಯೇಟ್ನಾಂನಲ್ಲಿ ಯುದ್ಧವನ್ನು ನಿಲ್ಲಿಸಿತು.

ಮನುಷ್ಯ ತಾನು ಕಣ್ಣಾರೆ ಕಂಡ ಒಂದು ಮನಕಲಕುವ ಅಥವಾ ಮನಸ್ಸನ್ನರಳಿಸುವ ದೃಶ್ಯವನ್ನು ಬೇರೆಯವರಿಗೆ ಕಣ್ಣಿಗೆ ಕಟ್ಟಿದಂತೆ ಹೇಳಿದರೂ ಕಾಲಾಂತರದಲ್ಲಿ ಆ ಘಟನೆಯ ತೀವ್ರತೆ ಹೇಳಿದವರ ಹಾಗೂ ಕೇಳಿದವರ ಸ್ಮೃತಿಪಟಲದಿಂದ ಮರೆಯಾಗುತ್ತದೆ. ಅದೇ ಕ್ಯಾಮೆರಾದಲ್ಲಿ ಚಿತ್ರಿಸಿಕೊಂಡ ಚಿತ್ರಗಳು ಮುಂದಿನ ಪೀಳಿಗೆಗೆ ಜೀವಂತ ಸಾಕ್ಷಿಯಾಗಿ ಉಳಿಯುತ್ತವೆ.

ಛಾಯಾಗ್ರಹಣದ ಪರಿಕಲ್ಪನೆ ವಿಶ್ವದ ಯಾವ ವಿಜ್ಞಾನಿಗೂ ಹೊಳೆದದ್ದಲ್ಲ. ಬದಲಿಗೆ, ಅದು ಮೂಲತಃ ಚಿತ್ರಕಲಾವಿದರ ಆವಿಷ್ಕಾರ! 15ನೇ ಶತಮಾನದ ಚೀನಾ ದೇಶದ ಕಲಾವಿದರು ತಮ್ಮ ಕಲಾಕೃತಿ ರಚಿಸಲು ಬಳಸುತ್ತಿದ್ದ ‘ಕ್ಯಾಮೆರಾ ಅಬ್ಸ್‌ಕುರ’ ಎಂಬ ಸಾಧನವೇ ಛಾಯಾಗ್ರಹಣ ಕ್ಯಾಮೆರಾ ಹುಟ್ಟಿಗೆ ಮೂಲವಾಗಿದೆ.

ಕ್ಯಾಮೆರಾ ಅಬ್ಸ್‌ಕುರ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕತ್ತಲ ಕೋಣೆ ಎಂದರ್ಥ. ಇದನ್ನು ಪಿನ್‍ಹೋಲ್ ಕ್ಯಾಮೆರಾ ಎಂದೂ ಕರೆಯುತ್ತಿದ್ದರು. ಕೋಣೆಯ ಒಂದು ಗೋಡೆಯ ಮೇಲೆ ಒಂದು ಸಣ್ಣ ರಂಧ್ರವಿರುತ್ತಿತ್ತು. ಅದರ ಎದುರು ಗೋಡೆಯ ಮೇಲೆ ಒಂದು ಪಾರದರ್ಶಕ ಕಾಗದವನ್ನು ಅಳವಡಿಸುತ್ತಿದ್ದರು. ಚೀನಾ ಕಲಾವಿದರು ಪರಿಣತಿ ಹೊಂದದೆಯೂ ದೊಡ್ಡ ದೊಡ್ಡ ಅಳತೆಯ ಕಲಾಕೃತಿಗಳನ್ನು ರಚಿಸಲು ಕ್ಯಾಮೆರಾ ಅಬ್ಸ್‌ಕುರವನ್ನು ಬಳಸುತ್ತಿದ್ದರು. ವಿಶೇಷವಾಗಿ ಭೂದೃಶ್ಯ ಹಾಗೂ ಅಪರೂಪದ ಪಾರಂಪರಿಕ ಕಟ್ಟಡಗಳ ಕಲಾಕೃತಿಗಳನ್ನು ಯಥಾರೂಪದಲ್ಲಿ ರಚಿಸುವಾಗ, ತಮಗೆ ಬೇಕಾದ ಅಳತೆಯ ಸ್ಪಷ್ಟಚಿತ್ರ ಮೂಡುವ ನಿರ್ದಿಷ್ಟ ಸ್ಥಳದಲ್ಲಿ ಕ್ಯಾಮೆರಾ ಅಬ್ಸ್‌ಕುರವನ್ನು ಸ್ಥಾಪಿಸುತ್ತಿದ್ದರು.

ಕ್ಯಾಮೆರಾ ಮುಂದಿನ ದೃಶ್ಯದ ವರ್ಣಪ್ರತಿಬಿಂಬ ತಲೆಕೆಳಕಾಗಿ ಕ್ಯಾಮೆರಾ ಅಬ್ಸ್‌ಕುರದ ಲೆನ್ಸ್‌ನ ಎದುರಿನ ಗೋಡೆಯ ಮೇಲೆ ಮೂಡುತ್ತಿತ್ತು. ಕಲಾವಿದರು ಆ ಪ್ರತಿಬಿಂಬದ ಮೇಲೆ ಗೆರೆಗಳನ್ನು ಎಳೆದು ಸ್ಕೆಚ್ ಮಾಡಿಕೊಂಡು ನಂತರ ತಾವೇ ತಯಾರಿಸಿದ ಬಣ್ಣಗಳನ್ನು ತುಂಬಿ ಕಲಾಕೃತಿಯನ್ನು ಸಿದ್ಧಪಡಿಸುತ್ತಿದ್ದರು. ಮುಂದೆ ಅರೇಬಿಯನ್ ದೇಶದವರು ಸೂರ್ಯಗ್ರಹಣ ವೀಕ್ಷಿಸಲು ಕ್ಯಾಮೆರಾ ಅಬ್ಸ್‌ಕುರವನ್ನು ಬಳಸುತ್ತಿದ್ದರು. ಆದರೆ, ಕ್ಯಾಮೆರಾ ಅಬ್ಸ್‌ಕುರದಲ್ಲಿ ತಾತ್ಕಾಲಿಕವಾಗಿ ಮೂಡುವ ವಸ್ತುವಿನ ಪ್ರತಿಬಿಂಬವನ್ನು ಬೇರೊಂದು ಮಾಧ್ಯಮದ ಮೇಲೆಯೂ ಶಾಶ್ವತವಾಗಿ ಮೂಡುವಂತೆ ಏಕೆ ಮಾಡಬಾರದು ಎಂಬುದರ ಬಗ್ಗೆ ಯಾರಿಗೂ ಹೊಳೆದಿರಲಿಲ್ಲ.

ಜರ್ಮನ್ ದೇಶದ ಭೌತವಿಜ್ಞಾನಿ ಜೋಹನ್ 1725ರಲ್ಲಿ ಬೆಳಕಿಗೆ ಸಂವೇದಿಸುವ ವಸ್ತುವನ್ನು ಶೋಧಿಸುವುದರಲ್ಲಿ ಯಶಸ್ವಿಯಾದ. ಬೆಳ್ಳಿಯ ಲವಣಗಳನ್ನು ಬೆಳಕಿನಲ್ಲಿ ಪ್ರದರ್ಶಿಸಿದಾಗ ಅವುಗಳ ಬಣ್ಣ ಬದಲಾಯಿತು. ಆಗ ಅವನು ಸುಣ್ಣಕಲ್ಲು ಹಾಗೂ ಬೆಳ್ಳಿಯ ಮಿಶ್ರಣವನ್ನು ಒಂದು ಸ್ಪಷ್ಟ ಗಾಜಿನ ಕಂಟೈನರ್‌ನಲ್ಲಿ ಹಾಕಿ ಅದರ ಮೇಲೆ ಬೆಳಕನ್ನು ಹಾಯಿಸಿದ. ಮಿಶ್ರಣ ಕಪ್ಪುನೇರಳೆ ಬಣ್ಣಕ್ಕೆ ತಿರುಗಿತು. ಗಾಜಿನ ಕಂಟೈನರ್‌ನ ಹೊರಕವಚದ ಮೇಲೆ ಸ್ಟೆನ್‍ಸಿಲ್ ಕಾಗದವನ್ನು ಇಟ್ಟು ಅಕ್ಷರಗಳ ಮತ್ತು ವಸ್ತುವಿನ ಆಕೃತಿಯನ್ನು ಮುದ್ರಿಸಿಕೊಳ್ಳಬಹುದೆಂದು ಕಂಡುಕೊಂಡ. ಆದರೆ, ಹಾಗೆ ಮಾಡಿದ ಪ್ರತಿಬಿಂಬ ಶಾಶ್ವತವಾಗಿ ಕಾಗದದ ಮೇಲೆ ಉಳಿಯಲಿಲ್ಲ. ಬೆಳ್ಳಿ ಮತ್ತು ಸುಣ್ಣದ ಕಲ್ಲಿನ ದ್ರಾವಣ ಒಣಗಿದ ಕೂಡಲೇ ಕಾಗದದ ಮೇಲೆ ಮೂಡಿದ್ದ ಪ್ರತಿಬಿಂಬ ಮಾಯವಾಗಿತ್ತು.

ಛಾಯಾಗ್ರಹಣದ ಬಗ್ಗೆ ಪ್ರಥಮ ಬಾರಿಗೆ ಪ್ರಯೋಗ ಮಾಡಿದವನು ಫ್ರೆಂಚ್ ದೇಶದ ಜೋಸೆಫ್ ನೆಫ್ಸಿ. ಸಿಲ್ವರ್ ಸಾಲ್ಟ್ ಲೇಪಿತ ವಸ್ತುವಿನ ಮೇಲೆ ಪ್ರತಿಬಿಂಬವನ್ನು ಮೂಡಿಸುವಲ್ಲಿ ಆತ ಯಶಸ್ವಿಯಾದ; 1861ರಲ್ಲಿ ಕ್ಯಾಮೆರಾ ಅಬ್ಸ್‌ಕುರದಲ್ಲಿ ನೆಗೆಟಿವ್ ಇಮೇಜ್‌ ಸೃಷ್ಟಿಸಿದ. ಹಾಗೆ ಮೂಡಿದ ಇಮೇಜ್‌ ಅನ್ನು ಸಿಲ್ವರ್ ಕ್ಲೋರೈಡ್ ರಾಸಾಯನಿಕ ದ್ರಾವಣದಲ್ಲಿ ನೆನೆಹಾಕಿದ ಮೇಲೆ ತಾನು ಚಿತ್ರಿಸಿದ ವಸ್ತುವಿನ ಪ್ರತಿಬಿಂಬ ಮೂಡಿತು. ಆದರೆ, ಹಾಗೆ ಮೂಡಿದ ಪ್ರತಿಬಿಂಬ ಅಸ್ಪಷ್ಟವಾಗಿತ್ತಲ್ಲದೆ ಹೆಚ್ಚು ಸಮಯ ಉಳಿಯದೆ ಮರೆಯಾಗುತ್ತಿತ್ತು.

ನೆಫ್ಸಿಯುಮುಂದೆ ಒಂದು ವಿಧದ ಕಲ್ಲರಗನ್ನು ಕಂಡುಹಿಡಿದ. ಇದನ್ನು ದ್ರಾವಕವೊಂದರಲ್ಲಿ ಕರಗಿಸಿ ಬೆಳಕಿಗೆ ಸಂವೇದಿಸುವಂತಹ ವಾರ್ನಿಷ್‌ ತಯಾರಿಸಿದ. ನಯಗೊಳಿಸಿದ ಲೋಹದ ತಟ್ಟೆಯ ಮೇಲೆ ವಾರ್ನಿಷ್‌ ಅನ್ನು ತೆಳುವಾಗಿ ಕತ್ತಲ ಕೋಣೆಯಲ್ಲಿ ಲೇಪಿಸಿ, ಸುಧಾರಿತ ಕ್ಯಾಮೆರಾದಲ್ಲಿರಿಸಿ, ಆ ಕ್ಯಾಮೆರಾವನ್ನು ಕಟ್ಟಡದ ಎದುರುಗಡೆ ಅಲುಗಾಡದಂತೆ ಇಟ್ಟು ಎಂಟು ಗಂಟೆಗಳ ಕಾಲ ಎಕ್ಸ್‌ಪೋಸ್ ಮಾಡಿದ. ಆಗ ಮೂಡಿದ ಇಮೇಜ್ ವಿಶ್ವದ ಪ್ರಥಮ ಛಾಯಾಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೀಗೆ ಶುರುವಾದ ಛಾಯಾಗ್ರಹಣದ ಯಾತ್ರೆ ಕಾಲನ ಕುಲುಮೆಯಲ್ಲಿ ಹಾಯ್ದು, ಹಲವು ರೂಪಾಂತರಗಳನ್ನು ಕಾಣುತ್ತಾ ಬಂದಿದೆ. ಸುಧಾರಿತ ಕ್ಯಾಮೆರಾಗಳ ಸೃಷ್ಟಿಯಲ್ಲಿ ಜಾರ್ಜ್‌ ಈಸ್ಟ್‌ಮನ್‌ ಪಾತ್ರ ಹಿರಿದು.

ಕೆಲವೇ ದಶಕಗಳ ಹಿಂದೆ ಶ್ರೀಮಂತರ, ಕೇವಲ ವೃತ್ತಿಪರ ಛಾಯಾಚಿತ್ರಗಾರರ ಸ್ವತ್ತಾಗಿದ್ದ ಕ್ಯಾಮೆರಾ ಇಂದು ಸಾಧಾರಣ ವ್ಯಕ್ತಿಯ ಕಿಸೆಯಲ್ಲಿಯೂ ಸುಲಭವಾಗಿ ಸ್ಥಾನ ಗಿಟ್ಟಿಸಿಕೊಂಡಿದೆ. ಕ್ಯಾಮೆರಾ ಅಬ್ಸ್‌ಕುರ ಎಂಬ ‘ಮನೆ ಗಾತ್ರ’ದ ಸಾಧನಗಳು, ಬಾಕ್ಸ್ ಕ್ಯಾಮೆರಾಗಳೂ, ಅಂಗೈಯಲ್ಲೇ ಹಿಡಿಯಬಹುದಾದ ಹಾಟ್‌ಶಾಟ್‌ಗಳೂ ಹಳತಾಗಿ ಇಂದು ಮೊಬೈಲ್‌ಗಳೇ ಕ್ಯಾಮೆರಾ ಸಹಿತದ ಹಲವು ಕೆಲಸ ಮಾಡುತ್ತಿವೆ. ಪೆನ್ನುಗಳಲ್ಲಿ ಅಡಗಿಕೂರುವ ಪತ್ತೇದಾರಿ ಕ್ಯಾಮೆರಾಗಳ ಹಾಗೇ, ಎಲ್ಲಿ ಬೇಕಾದರೂ ಹಾರಿ ಅದ್ಭುತವಾಗಿ ಚಿತ್ರೀಕರಿಸುವ ಡ್ರೋಣ್ ಕ್ಯಾಮೆರಾಗಳೂ, ನಮ್ಮ ಹೊಟ್ಟೆಯ ಒಳಹೊಕ್ಕು ಅಲ್ಲಿನ ಸ್ಥಿತಿಗತಿ ತೋರುವ ಸೂಕ್ಷ್ಮ ದೇಹಿ ಕ್ಯಾಮೆರಾಗಳೂ ಬಂದಿವೆ.

ನಮ್ಮ ಕಣ್ಣುಗಳನ್ನೇ ಕ್ಯಾಮೆರಾ ರೀತಿ ತಿರುಗಿಸಿ ಕಂಡದ್ದನ್ನು ಕ್ಲಿಕ್ಕಿಸಿಕೊಳ್ಳುವುದೂ ಈಚಿನ ಆವಿಷ್ಕಾರವಂತೆ! ಇದೆಲ್ಲಾ ಸಾಧ್ಯವಾದದ್ದು ಡಿಜಿಟಲ್ ತಂತ್ರಜ್ಞಾನದಿಂದ. ಕ್ಯಾಮೆರಾಗಳೂ ಡಿಜಿಟಲ್ ರೂಪಿ ಆದುದರಿಂಲೇ ಈಗ ಫಿಲಂ ನೆಗೆಟಿವ್ ಕೊಳ್ಳುವ, ಅದನ್ನು ಸಂಸ್ಕರಿಸುವ, ಅದಕ್ಕಾಗಿ ಅಪಾರ ಹಣ ಖರ್ಚು ಮಾಡುವ ಗೋಜೇ ಇಲ್ಲವಾಗಿದೆ! ಹೀಗೇ ಮುಂದುವರೆದಲ್ಲಿ ಕ್ಯಾಮೆರಾ ಎಂಬ ಪರಿಕರ ಮತ್ತಾವ ಅವತಾರಗಳಲ್ಲಿ ನಮ್ಮನ್ನು ಆಳಬಹುದೋ ಊಹೆ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT