ಶುಕ್ರವಾರ, ಮೇ 29, 2020
27 °C

ಕೊರೊನಾ ಹ್ಯಾಕರ್‌ಗಳಿದ್ದಾರೆ ಹುಷಾರ್‌!

ಪುಷನ್‌ ಮಹಾಪಾತ್ರ Updated:

ಅಕ್ಷರ ಗಾತ್ರ : | |

ಮಾನವ ಕುಲವು ಹಿಂದೆಂದೂ ಕೇಳರಿಯದಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೊರೊನಾ ಮಹಾಮಾರಿಯು ಜಗತ್ತಿನಾದ್ಯಂತ ಜನರನ್ನು ತಮ್ಮ ಮನೆಯೊಳಗೇ ಬಂದಿಯಾಗಿಸಿದೆ. ಬಹುತೇಕ ಜನರು ಡಿಜಿಟಲ್‌/ ಆನ್‌ಲೈನ್‌ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸುವಂತಾಗಿದೆ. ಮನರಂಜನೆ, ಖರೀದಿ, ಸಾಮಾಜಿಕ ಸಂಪರ್ಕಗಳಿಗಷ್ಟೇ ಅಲ್ಲ, ಮನೆಯಿಂದಲೇ ಕೆಲಸಮಾಡುವುದು, ಅಗತ್ಯ ಹಣಕಾಸಿನ ವ್ಯವಹಾರಗಳಿಗೂ ಅದು ಅನ್ವಯವಾಗುತ್ತದೆ. ಅನೇಕ ಆ್ಯಪ್‌ ಹಾಗೂ ಆನ್‌ಲೈನ್‌ ಉಪಕರಣಗಳ ಬಳಕೆಯು ಈಚಿನ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರ ಜತೆಯಲ್ಲೇ ಸೈಬರ್‌ ಅಪರಾಧಗಳು ಹೆಚ್ಚಾಗುವ ಆತಂಕವೂ ಸೃಷ್ಟಿಯಾಗಿದೆ.

ಕೊರೊನಾ ವೈರಸ್‌ನ ಹರಡುವಿಕೆ ಮತ್ತು ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯು ಅನೇಕರಲ್ಲಿ ಆತಂಕ ಸೃಷ್ಟಿಸಿದೆ. ಕಂಪ್ಯೂಟರ್‌ ಮಾಹಿತಿ ಕದಿಯುವ ಹ್ಯಾಕರ್‌ಗಳು ಹಾಗೂ ಸೈಬರ್‌ ಕಳ್ಳರಿಗೆ ಇದು ವರವಾಗಿ ಪರಿಣಮಿಸಿದೆ. ಭಯ ಅಥವಾ ಆತಂಕದ ಲಾಭ ಪಡೆಯಲು ಅವರೆಲ್ಲ ಹೊಂಚು ಹಾಕಿಕೊಂಡು ಕುಳಿತಿದ್ದಾರೆ. 

‘ಕೊರೊನಾ ವೈರಸ್‌ ಕುರಿತ ಮಾಹಿತಿ, ಬ್ಯಾಂಕ್‌, ಆಸ್ಪತ್ರೆ, ವಿಮೆ ಹಾಗೂ ಇತರ ಕಂಪನಿಗಳಲ್ಲಿ ಲಭ್ಯವಿರುವ ಸೇವೆಗಳಿಗಾಗಿ ಇಲ್ಲಿ ಮಾಹಿತಿ ಪಡೆಯಿರಿ’ ಎಂಬ ಒಂದು ಲಿಂಕ್‌ ಸಹಿತವಾದ ಇ–ಮೇಲ್‌ ನಿಮಗೆ ಬರಬಹುದು. ಯಾವುದೇ ಸಂದೇಹಕ್ಕೆ ಒಳಗಾಗಿದೆ ನೀವು ಆ ‘ದುರುದ್ದೇಶಪೂರಿತ’ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಅವರ ಬಲೆಗೆ ಬಿದ್ದಂತೆಯೇ.

‘ಮನೆಯಲ್ಲಿದ್ದುಕೊಂಡು ಕೆಲಸ ಮಾಡುತ್ತಲೇ, ನಿಮ್ಮ ಫೈಲ್‌ಗಳನ್ನು ಹೇಗೆ ಸುರಕ್ಷಿತವಾಗಿ ಇರಿಸಬಹುದು ಎಂಬ ಮಾಹಿತಿ ಇಲ್ಲಿದೆ’ ಎಂಬ ಒಕ್ಕಣೆ ಇರುವ ಇ–ಮೇಲ್‌ ಒಂದು 48 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಬಂದಿತ್ತು. ಅದರ ಜತೆಗೆ ಬಂದಿದ್ದ ಲಿಂಕ್‌ ಅನ್ನು ಕ್ಲಿಕ್‌ ಮಾಡುತ್ತಲೇ ಅವರ ಕಂಪ್ಯೂಟರ್‌ಗೆ ವೈರಸ್‌  ಡೌನ್‌ಲೋಡ್‌ ಆಗಿ, ಕೆಲವೇ ಕ್ಷಣಗಳಲ್ಲಿ ಕಂಪ್ಯೂಟರ್‌ನಲ್ಲಿ ಇದ್ದ ಮಾಹಿತಿ ಎಲ್ಲವೂ ನಾಶವಾಯಿತು. ಇಂಥ ಅನೇಕ ಉದಾಹರಣೆಗಳಿವೆ. ಕ್ರಿಮಿನಲ್‌ಗಳು ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ. ಆದ್ದರಿಂದ ಹೆಚ್ಚು ಹೆಚ್ಚು ಜನರು ಇಂಥವರ ಬಲೆಗೆ ಬೀಳುವ ಸಾಧ್ಯತೆ ಇದೆ. ಬಡವರಿಗೆ ನೆರವಾಗುವ ನಿಧಿಗೆ ದೇಣಿಗೆ ಸಂಗ್ರಹದ ಹೆಸರಿನಲ್ಲಿ ಅಥವಾ ವಿಮೆಯನ್ನು ಕ್ಲೇಮ್‌ ಮಾಡುವ ಹೆಸರಿನಲ್ಲಿಯೂ ನಿಮ್ಮನ್ನು ಸೈಬರ್‌ ಅಪರಾಧಿಗಳು  ಬಲೆಗೆ ಬೀಳಿಸಬಹುದು.

ನಾವು ಆತಂಕದಲ್ಲಿರುವ ಸಮಯವನ್ನೇ ಬಳಸಿಕೊಂಡು, ದುರುದ್ದೇಶದ ಇ–ಮೇಲ್‌ಗಳನ್ನು ಕಳುಹಿಸುವ ಮೂಲಕ ಹ್ಯಾಕರ್‌ಗಳು ಮತ್ತು ಸೈಬರ್‌ ಅಪರಾಧಿಗಳು ನಮಗಾಗಿ ಗಾಳಹಾಕುತ್ತಲೇ ಇರುತ್ತಾರೆ. ಇಂತಹ ಅನಪೇಕ್ಷಿತ ಮೇಲ್‌ಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ಭಯ ಮತ್ತು ಆತಂಕಗಳು ನಮ್ಮನ್ನು ಅಧೀರರನ್ನಾಗಿಸದಂತೆ ನೋಡಿಕೊಳ್ಳುವುದು ಮುಖ್ಯ. ಹ್ಯಾಕರ್‌ಗಳು ಸಹ ಈಚೆಗೆ ಜಾಣತನ ಪ್ರದರ್ಶಿಸುತ್ತಿದ್ದಾರೆ. ‘ಕೋವಿಡ್‌–19’ ಕುರಿತ ಮಾಹಿತಿ ನೀಡುವ ರೂಪದಲ್ಲಿ ಅವರು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ, ಅವುಗಳ ಲಿಂಕ್‌ ಅನ್ನು ಮೇಲ್‌ ಮೂಲಕ ಕಳುಹಿಸುತ್ತಾರೆ. ಇಂಥವುಗಳ ಮೇಲೆ ಕ್ಲಿಕ್‌ ಮಾಡಿದರೆ ನೀವು ಗಾಳಕ್ಕೆ ಬಿದ್ದಂತೆಯೇ. ನಿಮ್ಮ ಕಂಪ್ಯೂಟರ್‌ನಲ್ಲಿರುವ ಸಂಪೂರ್ಣ ಮಾಹಿತಿಯು ಅವರ ಪಾಲಾಗುವ ಬಗ್ಗೆ ಎಚ್ಚರವಹಿಸಲು ಮರೆಯಬೇಡಿ.

ಇಂಥ ಅಪಾಯದಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಇಲ್ಲಿ ಒಂದಿಷ್ಟು ಸಲಹೆಗಳಿವೆ...

* ಬಂದಿರುವ ಇ–ಮೇಲ್‌ನ ವಿಳಾಸವು ಅದನ್ನು ಕಳುಹಿಸಿದಾತನ ಹೆಸರಿಗಿಂತ ಭಿನ್ನವಾಗಿ ಕಾಣಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ನೀವು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ರೂಪದಲ್ಲಿ ಮೇಲ್‌ನ ಒಕ್ಕಣೆ ಇದೆಯೇ ಎಂಬುದನ್ನು ಪರಿಶೀಲಿಸಿ.

* ‘ಹೆಚ್ಚಿನ ಮಾಹಿತಿಗಾಗಿ ಮೇಲ್‌ ಜೊತೆಗೆ ಕಳುಹಿಸಿರುವ ಅಟ್ಯಾಚ್‌ಮೆಂಟ್‌ ಡೌನ್‌ಲೋಡ್‌ ಮಾಡಿ’ ಎಂಬ ಸಲಹೆ ನೀಡುವುದು ವಂಚನೆಯ ಅತ್ಯಂತ ಸಾಮಾನ್ಯ ವಿಧಾನವಾಗಿದೆ. ನಿಮಗೆ ಬಂದಿರುವ ಮೇಲ್‌ನಲ್ಲೂ ಅಂಥ ಸೂಚನೆ ಇದೆಯೇ ಎಂಬುದನ್ನು ಪರಿಶೀಲಿಸಿ, ಅಂಥ ಲಿಂಕ್‌ಗಳನ್ನು ನಿರ್ಲಕ್ಷಿಸಿ.

* ಮೇಲ್‌ ಜೊತೆಗೆ ಬಂದಿರುವ ಯುಆರ್‌ಎಲ್‌ ಮೇಲೆ ಕ್ಲಿಕ್‌ ಮಾಡುವ ಮುನ್ನ,  ಅದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಹ್ಯಾಕರ್‌ಗಳು ಸಾಮಾನ್ಯವಾಗಿ ಜನಪ್ರಿಯ ಯುಆರ್‌ಎಲ್‌ಗಳನ್ನು ಹೋಲುವಂಥ, ನಕಲಿ ಯುಆರ್‌ಎಲ್‌ಗಳನ್ನು ಸೃಷ್ಟಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ವ್ಯತ್ಯಾಸವು ಗಮನಕ್ಕೇ ಬರುವುದಿಲ್ಲ. 

* ಮೇಲ್‌ನಲ್ಲಿ ಬಳಸಿದ ಭಾಷೆಯು ವೃತ್ತಿಪರವಾಗಿದೆಯೇ, ಕಾಗುಣಿತ, ವಾಕ್ಯರಚನಾ ದೋಷಗಳಿಂದ ಕೂಡಿದೆಯೇ ಎಂಬುದನ್ನು ಗಮನಿಸಿ. ವೃತ್ತಿಪರವಾದ ಮೇಲ್‌ಗಳನ್ನು ಪರಿಣತರು ಬರೆದಿರುತ್ತಾರೆ. ಅವುಗಳಲ್ಲಿ ತಪ್ಪುಗಳಿರುವುದಿಲ್ಲ. ಬಂದಿರುವ ಮೇಲ್‌ನಲ್ಲಿ ಕಾಗುಣಿತ ದೋಷ, ಚಿಹ್ನೆಗಳ ಬಳಕೆಯಲ್ಲಿ ಮತ್ತು ವಾಕ್ಯರಚನೆಯಲ್ಲಿ ದೋಷಗಳಿವೆ ಎಂದಾದರೆ ಅದು ಹ್ಯಾಕರ್‌ ಕಳುಹಿಸಿದ ಮೇಲ್ ಆಗಿರಬಹುದು

* ಯಾವುದೇ ಸಂಸ್ಥೆ ತನ್ನ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು, ಬ್ಯಾಂಕ್‌ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಕುರಿತ ಮಾಹಿತಿಯನ್ನು ಇ–ಮೇಲ್‌, ಎಸ್‌ಎಂಎಸ್‌ ಮೂಲಕ ಕೇಳುವುದಿಲ್ಲ. ನಿಮಗೆ ಬಂದಿರುವ ಮೇಲ್‌ನಲ್ಲಿ ಇಂಥ ಮಾಹಿತಿ ಕೇಳಿದ್ದರೆ ಅದು ಅಪಾಯಕಾರಿ ಮೇಲ್‌ ಎಂದು ತಿಳಿಯಬೇಕು

* ಮೇಲ್‌ನಲ್ಲಿ ಯಾವುದಾದರೂ ಗಡುವು ನೀಡಲಾಗಿದೆಯೇ ಎಂದು ಪರಿಶೀಲಿಸಿ. ಹ್ಯಾಕರ್‌ಗಳು ಸಾಮಾನ್ಯವಾಗಿ ಕೊನೆಗೊಳ್ಳುತ್ತಿರುವ ವಿಮಾ ಪಾಲಿಸಿಯನ್ನು ನವೀಕರಿಸಿಕೊಳ್ಳಿ ಎಂದೋ, ರಿಯಾಯಿತಿ ಯೋಜನೆಯು ಕೆಲವೇ ದಿನಗಳಿಗೆ ಅನ್ವಯಿಸುತ್ತದೆ ಎಂದೋ  ನಮೂದಿಸಬಹುದು. ಅಂಥವುಗಳನ್ನು ನಿರ್ಲಕ್ಷಿಸಿ

***

ಹ್ಯಾಕರ್‌ಗಳಿಗೆ ಬಲಿಯಾಗುವುದನ್ನು ತಪ್ಪಿಸುವುದು ಹೇಗೆ?

* ಮೇಲ್‌ ಜೊತೆಗೆ ಬಂದಿರುವ ಲಿಂಕ್‌ ನಿಜವಾದುದೇ ಎಂಬುದನ್ನು ಖಚಿತಪಡಿಸಲು ಕಂಪ್ಯೂಟರ್‌ ಮೌಸ್‌ಅನ್ನು ಲಿಂಕ್‌ ಮೇಲೆ ಆಡಿಸಿ. ಸಂದೇಹಾಸ್ಪದ ಎನಿಸಿದರೆ ಕ್ಲಿಕ್‌ ಮಾಡಬೇಡಿ

* ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಕೇಳಿ ಬಂದಿರುವ ಮೇಲ್‌ಗಳಿಗೆ ಯಾವತ್ತೂ ಪ್ರತಿಕ್ರಿಯೆ ನೀಡಬೇಡಿ.

* ಪಾಲಿಸಿ ನವೀಕರಣ ಅಥವಾ ಪ್ರೀಮಿಯಂ ಪಾವತಿಗೆ ಸಂಬಂಧಿಸಿದಂತೆ ಬಂದಿರುವ ಸಂದೇಹಾಸ್ಪದ ಮೇಲ್‌ಗಳಿಗೆ ಪ್ರತಿಕ್ರಿಯಿಸುವ ಮುನ್ನ ಎಚ್ಚರವಹಿಸಿ.

* ವಿಶ್ವ ಆರೋಗ್ಯ ಸಂಸ್ಥೆಯಂಥ (ಡಬ್ಲ್ಯುಎಚ್‌ಒ) ಸಂಸ್ಥೆಗಳ ಹೆಸರಿನಲ್ಲಿ ಬರುವ ಮೇಲ್‌ಗಳ ಬಗ್ಗೆ ಎಚ್ಚರದಿಂದಿರಿ. ಸಂದೇಹ ಬಂದಾಗ ಅಂಥ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿನೀಡಿ ಪರಿಶೀಲಿಸಿ

* ಎಚ್ಚರಿಕೆ ಅಥವಾ ಬೆದರಿಕೆಯ ಮೇಲ್‌ ಬಂದರೆ ಆತಂಕಕ್ಕೆ ಒಳಗಾಗಬೇಡಿ. ಮೇಲ್‌ ಅನ್ನು ಸಂಪೂರ್ಣವಾಗಿ ಓದಿ, ಆಮೇಲೆ ಪ್ರತಿಕ್ರಿಯಿಸಿ

* ಬೇರೆಬೇರೆ ವೆಬ್‌ಸೈಟ್‌ಗಳಿಗೆ ಬೇರೆಬೇರೆ ಪಾಸ್‌ವರ್ಡ್‌ಗಳನ್ನು ಬಳಸಿ. ಪಾಪ್‌ಅಪ್‌ಗಳಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ. ನಿರೀಕ್ಷಿತವಲ್ಲದ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯಬೇಡಿ.

* ಆ್ಯಂಟಿವೈರಸ್‌, ಪ್ಯಾಚಸ್‌ಗಳ ಮೂಲಕ ನಿಮ್ಮ ಕಂಪ್ಯೂಟರ್‌ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

ವಿಪತ್ತಿನ ದಿನಗಳಲ್ಲಿ ಜನರನ್ನು ಇನ್ನಷ್ಟು ಗೊಂದಲಕ್ಕೆ ದೂಡಿ, ಪರಿಸ್ಥಿತಿಯ ಲಾಭ ಪಡೆಯುವುದು ವಂಚಕರಿಗೆ ಸುಲಭವಾಗುತ್ತದೆ. ಇಂಥ ಇ–ಮೇಲ್‌ಗಳಿಗೆ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸುವುದೇ ನೀವು ನಿಮ್ಮ ಸುರಕ್ಷತೆಗೆ ತೆಗೆದುಕೊಳ್ಳಬಹುದಾದ ಕ್ರಮವಾಗಿದೆ.

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ

*****

(ಲೇಖಕ: ಎಸ್‌ಬಿಐ ಜನರಲ್‌ ಇನ್ಶುರೆನ್ಸ್‌ನ ಸಿಇಒ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು