ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಪತಿಯ ಮಧ್ಯೆಯೂ ನುಸುಳಿದೆ ಸೈಬರ್‌ ಗೂಢಚಾರಿಕೆ!

Last Updated 9 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಸಾಫ್ಟ್‌ವೇರ್‌ ಉದ್ಯೋಗಿಗಳಾದ ಸ್ಪಂದನಾ ಹಾಗೂ ವಿನೋದ್ ಮದುವೆ ಹಿರಿಯರ ನಿಶ್ಚಯದಂತೆ ನಡೆದಿತ್ತು. ಮದುವೆ ಆಗಿ ಆರು ತಿಂಗಳವರೆಗೆ ಚೆನ್ನಾಗಿಯೇ ಇದ್ದ ವಿನೋದ್ ವರ್ತನೆ ಇದ್ದಕ್ಕಿದ್ದ ಹಾಗೇ ಬದಲಾಗಿತ್ತು. ಸದಾ ಸ್ಪಂದನಾಳನ್ನು ಅನುಮಾನದಿಂದ ನೋಡುವುದು, ಕದ್ದು ಮೊಬೈಲ್ ನೋಡುವುದು ಮಾಡುತ್ತಿದ್ದ. ಕ್ಯಾಬ್‌ನಲ್ಲಿ ಬಂದರೂ ಬೈಯುವುದು, ಕಚೇರಿ ಸಿಬ್ಬಂದಿ ಜೊತೆ ಬೈಕ್‌ ಅಥವಾ ಕಾರಿನಲ್ಲಿ ಬಂದರೂ ಬೈಯುವುದು ಮಾಡುತ್ತಿದ್ದ. ಇದರಿಂದ ಪ್ರತಿದಿನ ಮನೆಯಲ್ಲಿ ಜಗಳವಾಗುತ್ತಿತ್ತು. ಜಗಳ ವಿಪರೀತವಾದಾಗ ಇಬ್ಬರ ತಂದೆ–ತಾಯಿ ಸಂಧಾನಕ್ಕೆ ಕರೆದರು.

‘ಸ್ಪಂದನಾಳ ಹಿಂದಿನ ಪ್ರೀತಿಯ ಬಗ್ಗೆ ಗೊತ್ತು. ಮದುವೆ ಆದ ಮೇಲೂ ಅವನ ಬಗ್ಗೆ ಮಾತನಾಡುವುದು ಕೂಡ ನನಗೆ ಗೊತ್ತಿದೆ’ ಎಂದು ವಿನೋದ್‌ ದೂರಿದ್ದಲ್ಲದೇ ಆಕೆ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ತನ್ನ ಬಗ್ಗೆ ದೂರಿದ್ದು.. ಹಳೆಯ ಗೆಳೆಯನನ್ನೇ ಮದುವೆಯಾಗಬೇಕಿತ್ತು ಎಂದು ಹಳಹಳಿಸಿದ್ದು.. ಎಲ್ಲವನ್ನೂ ಹೇಳಿದಾಗ ಇವೆಲ್ಲ ಆತನಿಗೆ ಗೊತ್ತಾಗಿದ್ದು ಹೇಗೆ ಎಂದು ಸ್ಪಂದನಾಳ ಕುಟುಂಬದವರಿಗೆ ಅಚ್ಚರಿಯಾಗಿತ್ತು. ಶಂಕೆಗೊಂಡ ಸ್ಪಂದನಾ ಕೊಂಚ ವಿಚಾರಿಸಿದಾಗ ಗೊತ್ತಾಗಿದ್ದು, ವಿನೋದ್‌ ಮೊಬೈಲ್‌ ಅಪ್ಲಿಕೇಶನ್‌ವೊಂದರ ಮೂಲಕ ಅವಳ ಮೊಬೈಲ್ ಮೇಲೆ ಗೂಢಚಾರಿಕೆ ಮಾಡಿದ್ದ! ಮದುವೆ ನಂತರ ಆತ ಉಡುಗೊರೆ ಕೊಟ್ಟಿದ್ದ ಫೋನ್‌ನಲ್ಲಿ ಇದಕ್ಕೆ ಸಂಬಂಧಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿಟ್ಟಿದ್ದ. ರಾಜಿ– ಸಂಧಾನ ಯಾವುದೂ ಫಲ ಕಾಣದೆ ಈಗ ಇಬ್ಬರೂ ವಿಚ್ಛೇದನದ ಹಾದಿಯಲ್ಲಿದ್ದಾರೆ.

ಇದು ಸೈಬರ್‌ ಗೂಢಚಾರಿಕೆ. ಪುರುಷರು ತಾವು ಮದುವೆಯಾಗುವ ಹುಡುಗಿ ಅಥವಾ ಹೆಂಡತಿಯ ವರ್ತನೆ, ಚಾರಿತ್ರ್ಯದ ಮೇಲೆ ಅನುಮಾನ ಪಟ್ಟು ಮೊಬೈಲ್‌ ಅಪ್ಲಿಕೇಶ್‌ನಗಳ ಮೂಲಕ ಅವರಿಗೆ ತಿಳಿಯದಂತೆ ಖಾಸಗಿ ವಿಷಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ ಎಂದಿದೆ ಇತ್ತೀಚೆಗೆ ಪ್ರಕಟವಾದ ಸಮೀಕ್ಷೆ. ಖಾಸಗಿ ಗೂಢಚಾರಿ ಸಂಸ್ಥೆಗಳ ಏಜೆಂಟ್‌ಗಳ ಮೂಲಕ ಅವರ ಹಿನ್ನೆಲೆ ಹಾಗೂ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಪ್ರಕರಣಗಳೂ ಜಾಸ್ತಿಯಾಗುತ್ತಿವೆ. ಈ ಹಿಂದೆ ಹಿಂದಿಯ ಖಾಸಗಿ ವಾಹಿನಿಯೊಂದರಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದು ಕೂಡ ಪ್ರಸಾರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಈಗಿನ ಯುವಕರು ಹೆಂಡತಿ ಅಥವಾ ಪ್ರೇಯಸಿ ಮೇಲೆ ಗೂಢಚಾರಿಕೆ ನಡೆಸಲು ಸ್ಪೈ ಏಜೆಂಟ್ ಅಥವಾ ಪತ್ತೇದಾರಿ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನೀಡುತ್ತಿದ್ದಾರೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಬೆಂಗಳೂರು ಮೂಲದ ಪತ್ತೇದಾರಿ ಸಂಸ್ಥೆಯೊಂದರ ಏಜೆಂಟ್‌. ಗಂಡನ ಮೇಲೂ ಹೆಂಡತಿ ಗೂಢಚಾರಿಕೆ ನಡೆಸುವ ಪ್ರಕರಣಗಳೂ ಸಾಕಷ್ಟಿವೆ. ಆದರೆ ಶೇಕಡಾವಾರು ನೋಡಿದರೆ ಗಂಡಸರೇ ಹೆಣ್ಣುಮಕ್ಕಳ ಮೇಲೆ ಗೂಢಚಾರಿಕೆ ನಡೆಸುವುದು ಹೆಚ್ಚು ಎನ್ನುವ ಏಜೆಂಟ್‌, ಆಧುನಿಕ ತಂತ್ರಜ್ಞಾನ ಅಂದರೆ ಮೊಬೈಲ್‌ ಆ್ಯಪ್‌ಗಳನ್ನು ಬಳಸಿ ಗ್ರಾಹಕರ ಕೆಲಸ ಮಾಡಿಕೊಡಲಾಗುವುದು ಎನ್ನುತ್ತಾರೆ.

‘ಆದರೆ ಈ ರೀತಿ ನಮಗೆ ತಿಳಿಯದಂತೆ ನಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವುದು, ನಮ್ಮ ವಿಷಯವನ್ನು ರಹಸ್ಯವಾಗಿ ತಿಳಿದುಕೊಳ್ಳುವುದು ಆ ಮೂಲಕ ಸಂಸಾರದಲ್ಲಿ ನಂಬಿಕೆ ಕಳೆದುಹೋಗುವಂತೆ ಮಾಡುವುದು ಕೂಡ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ’ ಎನ್ನುತ್ತಾರೆ ವಕೀಲರಾದ ಶಾಂಭವಿ ಅರ್ಕೇಶ್‌.

ಬದಲಾದ ಉದ್ಯೋಗ ಸಂಸ್ಕೃತಿಯೂ ಕಾರಣ
ನಗರಗಳಲ್ಲಿ ಬದಲಾಗುತ್ತಿರುವ ಜನರ ಮನಸ್ಥಿತಿ ಹಾಗೂ ಉದ್ಯೋಗ ಸಂಸ್ಕೃತಿಯು ಸಂಬಂಧದಲ್ಲಿ ನಂಬಿಕೆ ಕಳೆದು ಹೋಗುವಂತೆ ಮಾಡುತ್ತಿದೆ. ಅತಿಯಾದ ಸ್ವೇಚ್ಛಾಚಾರ, ಸ್ವಾತಂತ್ರ್ಯವೂ ಗಂಡನಿಗೆ ಹೆಂಡತಿಯ ಮೇಲೆ ಅನುಮಾನ ಹುಟ್ಟುವಂತೆ ಮಾಡಿರುವುದು ಸುಳ್ಳಲ್ಲ. ಹಲವು ಶ್ರೀಮಂತರ ಮಕ್ಕಳು, ಸೆಲೆಬ್ರಿಟಿಗಳು ತಮ್ಮ ಭವಿಷ್ಯದ ಜೀವನ ಚೆನ್ನಾಗಿರಬೇಕು ಎಂಬ ಕಾರಣಕ್ಕೂ ಮದುವೆ ಫಿಕ್ಸ್ ಆದ ಕೂಡಲೇ ಪತ್ತೇದಾರ ಏಜೆನ್ಸಿಗಳ ಮೂಲಕ ತಮ್ಮ ಸಂಗಾತಿಯಾಗುವವರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತಾರಂತೆ. ಹಲವರು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ ಮೇಲೆ ಸುಳಿವೇ ಸಿಗದಂತೆ ಅದನ್ನು ಅಳಿಸಿ ಹಾಕಲೂ ತಿಳಿಸುತ್ತಾರಂತೆ.

ಹೆಣ್ಣುಮಕ್ಕಳಿಗೇ ಶಿಕ್ಷೆ
‘ಹೆಣ್ಣು ಗಂಡಿನೊಂದಿಗೆ ಸ್ನೇಹಪರತೆಯಿಂದ ಇರುವುದನ್ನು ಸಮಾಜ ಸಹಿಸುವುದಿಲ್ಲ. ಗಂಡು ಏನೇ ಮಾಡಿದರೂ ಸರಿ ಎಂಬ ಭಾವನೆ ಇದೆ. ತನ್ನ ಹೆಂಡತಿ ಅಥವಾ ಪ್ರೇಮಿಯ ಮೇಲೆ ಗಂಡಸರು ಅನುಮಾನ ಪಡುವುದು ಜಾಸ್ತಿ. ಈಗಂತೂ ಹಲವರು ಉದ್ಯೋಗಸ್ಥರಾದ ಕಾರಣ ಉದ್ಯೋಗ ಸ್ಥಳದಲ್ಲಿ ಅಥವಾ ಕಾಲೇಜು ದಿನಗಳಲ್ಲಿ ತನ್ನ ಹೆಂಡತಿ ಹೇಗಿದ್ದಳು, ಉದ್ಯೋಗ ಸಿಕ್ಕಿದ ಮೇಲೆ ಯಾರ ಜೊತೆಗೆಲ್ಲಾ ತಿರುಗಾಡುತ್ತಾಳೆ, ಮಾತನಾಡುತ್ತಾಳೆ ಎಂಬುದನ್ನೆಲ್ಲಾ ತಿಳಿಯಲು ಹೆಂಡತಿಯ ಮೇಲೆ ಗೂಢಚಾರಿಕೆ ನಡೆಸುತ್ತಾರೆ’ ಎನ್ನುವುದು ಬ್ಯಾಂಕ್ ಉದ್ಯೋಗಿ ಶಾಲಿನ ಮಹೇಶ್ ಅವರ ಅಭಿಪ್ರಾಯ.

ಸಂಬಂಧದಲ್ಲಿ ನಂಬಿಕೆಯೇ ಬುನಾದಿ
‘ನಂಬಿಕೆ ಇಲ್ಲ ಎಂದ ಮಾತ್ರಕ್ಕೆ ಅನುಮಾನ ಪಟ್ಟು ಗೂಢಚಾರಿಕೆ ನಡೆಸುವುದು ಸರಿಯಲ್ಲ. ಅನುಮಾನ ಬಂದಾಗ ಕುಳಿತು ಮಾತನಾಡಿ ಪರಿಹರಿಸಿಕೊಳ್ಳಬೇಕು. ಅದು ಬಿಟ್ಟು ಆ್ಯಪ್‌ಗಳ ಮೂಲಕವೋ ಏಜೆನ್ಸಿಗಳ ಮೂಲಕವೋ ವೈಯಕ್ತಿಕ ವಿಷಯಗಳನ್ನು ತಿಳಿದುಕೊಂಡು ಅದನ್ನು ಜಗಜ್ಜಾಹೀರು ಮಾಡುವುದು ಸರಿಯಲ್ಲ’ ಎನ್ನುವ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌., ‘ಇದರಿಂದಾಗಿ ಹೆಣ್ಣುಮಕ್ಕಳು ಬಹಳ ಬೇಗ ಖಿನ್ನತೆಗೆ ಒಳಗಾಗುತ್ತಾರೆ. ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಮಾಡಿದ ಉದಾಹರಣೆಗಳೂ ಇವೆ’ ಎನ್ನುತ್ತಾರೆ. ಗೂಢಚಾರಿಕೆಯಿಂದ ಪರಸ್ಪರ ನಂಬಿಕೆಯ ಕೊಂಡಿ ಕಳಚುವುದಲ್ಲದೇ ವಿಚ್ಛೇದನಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸುತ್ತಾರೆ ಅವರು.

**

ತಂತ್ರಜ್ಞಾನದ ಅಭಿವೃದ್ಧಿ, ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಈಗ ಸುಲಭವಾಗಿ ಸಿಗುತ್ತಿರುವುದು ಸಂಬಂಧದಲ್ಲಿ ಗೂಢಚಾರಿಕೆ ಹೆಚ್ಚಲು ಮುಖ್ಯ ಕಾರಣ. ಇದರಿಂದ ಸಂಬಂಧದಲ್ಲಿ ಜಗಳ, ಮನಸ್ತಾಪಗಳು ನಡೆಯುತ್ತಲೇ ಇವೆ. ಹಿಂದೆಲ್ಲಾ ಫೋನ್‌, ತಂತ್ರಜ್ಞಾನ ಏನೂ ಇರಲಿಲ್ಲ. ಆಗೆಲ್ಲಾ ಸಂಬಂಧ ಅನ್ನುವುದು ನಡೆಯುತ್ತಿದ್ದದ್ದೇ ನಂಬಿಕೆ ಮೇಲೆ. ಈಗ ಒಬ್ಬರಿಗೊಬ್ಬರು ನಂಬಿಕೆಯನ್ನೇ ಕಳೆದುಕೊಂಡಿರುವುದರಿಂದ ಪತ್ತೇದಾರಿಕೆ ಮಾಡುವುದು ಸಾಮಾನ್ಯವಾಗಿದೆ. ನಮ್ಮ ರಾಜ್ಯದಲ್ಲಿ ಅದರಲ್ಲೂ ಯುವಕರಲ್ಲಿ ಇಂತಹ ಗೂಢಚಾರಿಕೆ ನಡೆಸುವ ಮನಸ್ಥಿತಿ ಹೆಚ್ಚಿದೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಇವೆಲ್ಲವೂ ಕಾನೂನುಬಾಹಿರವಾದದ್ದು. ಇದರೊಂದಿಗೆ ಏಜೆಂಟ್‌ ಅಥವಾ ಅಪ್ಲಿಕೇಶನ್‌ ನೀಡಿದ ಮಾಹಿತಿಯನ್ನೇ ನಿಜ ಎಂದು ನಂಬುವುದು ಹೇಗೆ? ಮದುವೆಗಿಂತ ಮುಂಚೆ ಅಥವಾ ಮದುವೆ ಆದ ಮೇಲೆ ಪತ್ತೇದಾರಿಕೆ ಮಾಡಿ ಮುಂದೆ ಸರಿ ಹೋಗಬಹುದು ಎಂದು ಸಂಬಂಧ ಸರಿದೂಗಿಸಲು ಹೊರಟರೆ ಅದು ಸಾಧ್ಯವಿಲ್ಲ. ಯಾಕೆಂದರೆ ಮುಂದೆ ಎಂದೋ ಜಗಳವಾದಾಗ ಈ ವಿಷಯ ಬಂದಾಗ ಮತ್ತೆ ಸಂಬಂಧ ಹದಗೆಡುತ್ತದೆ.
-ಶುಭಾಮಂಗಳ ರಮೇಶ್‌, ಸೈಬರ್ ಸೆಕ್ಯೂರಿಟಿ ತಜ್ಞೆ, ಗ್ಲೋಬಲ್‌ ಸೈಬರ್‌ ಸೆಕ್ಯೂರಿಟಿ ರೆಸ್ಪಾನ್ಸ್ ಟೀಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT