ಶುಕ್ರವಾರ, ಜನವರಿ 22, 2021
28 °C
ಕ್ಯಾನ್ಸರ್‌ ಕೋಶವನ್ನೂ ಪತ್ತೆಹಚ್ಚಬಲ್ಲ ಕ್ರಾಂತಿಕಾರಿ ಸಂಶೋಧನೆ

ಮೈಕ್ರೋಸ್ಕೋಪ್‌ ಶೋಧನೆಯ ಹಿಂದೆ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೈಕ್ರೋಸ್ಕೋಪ್‌ ಗಳಲ್ಲಿ ಬಹಳಷ್ಟು ಆವಿಷ್ಕಾರಗಳಾಗಿವೆ. ಆದರೆ ಅತ್ಯಂತ ಸೂಕ್ಷ್ಮ ಜೀವಕೋಶ
ಗಳನ್ನು ಎಣಿಸಬಲ್ಲಂತಹ ಹಾಗೂ ಸ್ಪಷ್ಟ ವಾಗಿ ಗೋಚರಿಸುವ (ನ್ಯಾನೋಸ್ಕೇಲ್‌ ರೆಸಲ್ಯೂಷನ್‌) ಮೈಕ್ರೋಸ್ಕೋಪ್‌ ತಯಾ
ರಿಸಬೇಕು ಎಂಬ ನನ್ನ ಶೋಧನೆಯ ಹಿಂದೆ ಇದ್ದುದು ಹಸಿವು, ಉದ್ಯೋಗ ಭದ್ರತೆಯ ಆತಂಕ...’

ಜರ್ಮನಿಯ ನೊಬೆಲ್‌ ಪುರಸ್ಕೃತ ರಸಾಯನ ವಿಜ್ಞಾನಿ ಪ್ರೊ.ಸ್ಟೀಫನ್‌ ಡಬ್ಲ್ಯು.ಹೆಲ್‌ ಅವರು ಜಿಕೆವಿಕೆಯಲ್ಲಿ ಶುಕ್ರವಾರ ಆರಂಭವಾದ 107ನೇ ವಿಜ್ಞಾನ ಕಾಂಗ್ರೆಸ್‌ನ ಉಪನ್ಯಾಸದಲ್ಲಿ ಈ ವಿಷಯ ಹೇಳುತ್ತಿದ್ದಂತೆಯೇ ಸಭಿಕರು ಬೆರಗಾದರು.

ಜನಿಸಿದ್ದು ರೊಮಾನಿಯಾದಲ್ಲಾದರೂ, ಮುಕ್ತ ವಾತಾವರಣದಲ್ಲಿ ವಿಜ್ಞಾನ ಓದಬೇಕೆಂದು 13ನೇ ವರ್ಷದಲ್ಲಿ ಪೋಷಕರನ್ನು ಒತ್ತಾಯಿಸಿ ಜರ್ಮನಿಗೆ ಬಂದ ಅವರು ಸಂಶೋಧನೆಗೆ ಪಟ್ಟ ಕಷ್ಟವನ್ನು, ಎದುರಿಸಿದ ಸವಾಲನ್ನು ಎಳೆ ಎಳೆಯಾಗಿ ಹೇಳಿದರು.

‘ಉನ್ನತ ವ್ಯಾಸಂಗ ಮುಗಿದ ಬಳಿಕ ನಾನು ಸೇರಿಕೊಂಡದ್ದು ಮೈಕ್ರೋ ಸ್ಕೋಪ್‌ ತಯಾರಿಕೆಯ ಒಂದು ಸ್ಟಾರ್ಟ್‌ಅಪ್‌ನಲ್ಲಿ. ಮುಂದೆ ಅದುವೇ ಐಬಿಎಂಗೆ ಕಂಪ್ಯೂಟರ್‌ಗೆ ಸೂಕ್ಷ್ಮ ಉಪಕರಣಗಳನ್ನು ಪೂರೈಸುವ ಕಂಪನಿಯೂ ಆಯಿತು. ಆದರೆ ನಾನು ಅಲ್ಲಿ ಕಳೆದುಹೋಗುವವಿದ್ದೆ. ಮೈಕ್ರೋಸ್ಕೋಪ್‌ನಲ್ಲಿ ನೋಡಲು ಸಾಧ್ಯವಾಗದ ಅತ್ಯಂತ ಸೂಕ್ಷ್ಮ ಕಣಗಳನ್ನು ಮೈಕ್ರೋಸ್ಕೋಪ್‌ ನಲ್ಲೇ ನೋಡುವಂತೆ ಮಾಡುವ ನನ್ನ ಗುರಿ ಈಡೇರಿಸಲು ಜರ್ಮನಿ ಸರ್ಕಾರ ಮೊದಲು ನೆರವಾಗಲಿಲ್ಲ’ ಎಂದು ವಿವರಿಸಿದರು.

ಪ್ರೊಟೀನ್‌ ಎಣಿಕೆಗೆ ‘ಸ್ಟೆಡ್‌’
ಕೋಶದಲ್ಲಿ ಪ್ರೊಟೀನ್‌ ಸಂಗ್ರಹದ ಲೆಕ್ಕಾಚಾರವು ರೋಗಕ್ಕೆ ಔಷಧ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಪತ್ತೆಹಚ್ಚುವುದು ಸುಲಭವಲ್ಲ. ಸ್ಟೀಫನ್‌ ಕಂಡುಹಿಡಿದ ‘ಸ್ಟೆಡ್‌ ಮೈಕ್ರೋಸ್ಕೋಪಿ’ಯಲ್ಲಿ ಒಂದೊಂದು ಸೂಕ್ಷ್ಮ ಜೀವಕೋಶವನ್ನೂ ಸ್ಪಷ್ಟವಾಗಿ ನೋಡಬಹುದಾಗಿದ್ದು, ಅಂತಹ ಕೋಶಕ್ಕೆ ಯಾವುದರಿಂದ ಹಾನಿಯಾಗಿದೆ ಎಂಬುದನ್ನು ಮೈಕ್ರೊಸ್ಕೋಪಿಯ ಮೂಲಕ ಕಂಡುಹಿಡಿಯಬಹುದಾಗಿದೆ. 

‘ಕಚ್ಚಾ ತೈಲ ಆಮದು ಶೇ 10 ಕಡಿತ’
ಬೆಂಗಳೂರು: ದೇಶದಲ್ಲಿ ಶೇ 2022 ರ ವೇಳೆಗೆ ಶೇ 10 ರಷ್ಟು ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

‘ಪೆಟ್ರೋಲಿಯಂ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನದ ಬಳಕೆ ಹೆಚ್ಚಿಸಬೇಕಾಗಿದೆ’ ಎಂದರು.

ವಿದ್ಯಾರ್ಥಿಗಳ ಕಲರವ, ಮೋದಿ ಮೌನ
ಬೆಂಗಳೂರು:
ಹಸಿರು ಹೊದ್ದು ನಿಂತ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಭಾಗಗಳಿಂದ ಬಂದ ವಿಜ್ಞಾನಿಗಳು, ವಿಜ್ಞಾನಸಕ್ತರು ಮತ್ತು ವಿದ್ಯಾರ್ಥಿಗಳ ಕಲರವ ತುಂಬಿತ್ತು.

ಬೆಳಿಗ್ಗೆ ಉದ್ಘಾಟನೆ ವೇಳೆಯಲ್ಲಿ ಪೊಲೀಸ್‌ ಸರ್ಪಗಾಲಿನ ವಾತಾವರಣವಿದ್ದರೂ ಬಳಿಕ ಜನ ಜಂಗುಳಿಯಿಂದ ಕೂಡಿತ್ತು. ಪ್ರಧಾನಿಯವರ ಉದ್ಘಾಟನಾ ಭಾಷಣದ ಸಂದರ್ಭದಲ್ಲಿ ಪ್ರಧಾನ ಮಂಟಪವು ಜನರಿಂದ ಭರ್ತಿಯಾಗಿತ್ತು. ಅದರಲ್ಲಿ ಬಹುಪಾಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ತುಂಬಿದ್ದರು.

ಉದ್ಘಾಟನೆ ವೇಳೆ ಪ್ರಧಾನಿ ವೇದಿಕೆಗೆ ಬಂದಾಗ ವಿದ್ಯಾರ್ಥಿಗಳಿಂದ ಮೋದಿ, ಮೋದಿ ಎಂಬ ಕೂಗು ಕೇಳಿಬಂದಿತು. ಆದರೆ, ಮೋದಿ ಅವರಲ್ಲಿ ಎಂದಿನ ಉತ್ಸಾಹ ಕಂಡು ಬರಲಿಲ್ಲ. ವಿದ್ಯಾರ್ಥಿಗಳ ಹರ್ಷೋದ್ಗಾರಕ್ಕೆ ಪ್ರತಿಕ್ರಿಯೆ ನೀಡಲಿಲ್ಲ.

ಆಟಿಕೆ ಅಲ್ಲ, ಸೇನಾ ರೋಬಾಟ್‌ಗಳು!
ಬೆಂಗಳೂರು:
ನೋಡಿದಾಗ ಆಟಿಕೆಯ ಯುದ್ಧದ ಟ್ಯಾಂಕರ್‌ನಂತೆ ಕಂಡರೂ ದೇಶದ ಗಡಿಯಲ್ಲಿ, ಯುದ್ಧ ಭೂಮಿಯಲ್ಲಿ ಸೇನಾ ಪಡೆಗಳಿಗೆ ಸಾಕಷ್ಟು ನೆರವಿಗೆ ಬರುತ್ತವೆ. ಇವು ಸೇನಾ ಪಡೆಯ ರಹಸ್ಯ ಕಾರ್ಯಾಚರಣೆಯ ಪ್ರಮುಖ ಸಾಧನವೂ ಹೌದು.

ಮಾಹಿತಿ ಸಂಗ್ರಹ, ಚಿತ್ರಗಳನ್ನು ಸೆರೆ ಹಿಡಿಯವುದು ಮತ್ತು ನಕ್ಷೆ ತಯಾರಿಸುವ ಕೆಲಸವನ್ನು ಇವು ಬಹು ಚತುರತೆಯಿಂದ ಮಾಡುತ್ತವೆ. ಕೆಲವು ಹಾವಿನಂತೆ, ಇನ್ನು ಕೆಲವು ಏಡಿಗಳಂತೆ, ಯುದ್ಧದ ಟ್ಯಾಂಕರ್‌ಗಳ ಮಾದರಿಯಲ್ಲೂ ಇವೆ. ಪುಟ್ಟ ಗಾತ್ರದ ಇವು ಆಟಿಕೆಗಳಲ್ಲ, ಸೇನಾ ಉದ್ದೇಶದ ಸಂಚಾರಿ ರೋಬಾಟ್‌ಗಳು.

ಡಿಆರ್‌ಡಿಓ ಅಭಿವೃದ್ಧಿಪಡಿಸಿರುವ ಈ ರೋಬಾಟ್‌ಗಳು ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಆಕರ್ಷಣೀಯ ಎನಿಸಿವೆ. ಇವುಗಳಲ್ಲಿ ಎರಡು ಮಾದರಿಯನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ರಿಮೋಟ್‌ ಮೂಲಕ ಕಾರ್ಯ ನಿರ್ವಹಿಸಲಾಗುತ್ತದೆ. ಜಿಪಿಎಸ್‌, ಐಎಂಯು, ಲಿಡಿಆರ್‌ ಮತ್ತು ವಿಷನ್‌ ಸೆನ್ಸರ್‌ಗಳನ್ನು ಒಳಗೊಂಡಿವೆ. ಇವು ತಮ್ಮ ದಾರಿಯನ್ನು ತಾವೇ ಸೃಷ್ಟಿಸಿಕೊಳ್ಳುತ್ತವೆ, ನಕಾಶೆಯನ್ನು ರೂಪಿಸಿಕೊಂಡು ಹುಡುಕಾಟ ನಡೆಸುತ್ತವೆ. ಎದುರಾಗುವ ಅಡ್ಡಿಗಳನ್ನೂ ಅವೇ ನಿವಾರಿಸಿಕೊಳ್ಳುತ್ತವೆ ಎಂದು ಡಿಆರ್‌ಡಿಓ ಅಧಿಕಾರಿಗಳು ಮಾಹಿತಿ ನೀಡಿದರು.

ಸಂವಾದ ನಡೆಸುವ ರೋಬಾಟ್‌
ಈ ರೋಬಾಟ್‌ಗಳ ವಿಶೇಷತೆ ಎಂದರೆ, ಇವುಗಳ ನಿಯಂತ್ರಣ ಹೊಂದಿರುವವರ ಜತೆ ಸಂವಾದ ನಡೆಸುತ್ತವೆ. 

ರಿಮೋಟ್‌ ಮೂಲಕ ನಿಯಂತ್ರಣ ಹೊಂದಿರುವ ವ್ಯಕ್ತಿಗೆ ತಾನು ಎಲ್ಲಿದ್ದೇನೆ, ತನ್ನ ಸುತ್ತ ಏನೇನಿದೆ, ಹೇಗೆ ಮುಂದಕ್ಕೆ ಹೋಗಬೇಕು, ಎಲ್ಲಿಗೆ ಹೋಗಬೇಕು ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತವೆ.

ನಿಯಂತ್ರಣ ಸಾಧಿಸುತ್ತಿರುವ ವ್ಯಕ್ತಿ ಅದಕ್ಕೆ ಉತ್ತರ ನೀಡುವ ಮೂಲಕ ಸೂಕ್ತ ಸೂಚನೆಗಳನ್ನು ನೀಡಲಾಗುತ್ತದೆ. ಅದರ ಪ್ರಕಾರವೇ ಮುಂದುವರಿಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು