ಶುಕ್ರವಾರ, ಜೂನ್ 5, 2020
27 °C

ಮೊಬೈಲ್ ಫೋನ್ ಹ್ಯಾಂಗ್ ಆಗುತ್ತಿದೆಯೇ? ಇಲ್ಲಿದೆ ಸರಳ ಪರಿಹಾರ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

ನಮ್ಮ ದೈನಂದಿನ ಆಗುಹೋಗುಗಳಿಗೆ ಸದಾ ನಮ್ಮೊಡನಿರಬೇಕಾದ ಮೊಬೈಲ್ ಫೋನ್ ಏನಾದರೂ ಕೆಲಸ ಸ್ಥಗಿತಗೊಳಿಸಿತೋ, ಹಲವರಿಗೆ ಇನ್ನಿಲ್ಲದ ಚಡಪಡಿಕೆ, ಕೆಲವರಿಗೆ ವ್ಯವಹಾರಕ್ಕೂ ಹೊಡೆತ ಬೀಳುವ ಸ್ಥಿತಿ, ಏನು ಮಾಡುವುದೆಂಬ ಚಿಂತೆ. ಸ್ಮಾರ್ಟ್ ಆಗಿರುವ ಮೊಬೈಲ್ ಫೋನ್‌ಗಳಿಗೆ ಅಷ್ಟೊಂದು ಒಗ್ಗಿಕೊಂಡಿದ್ದೇವೆ ನಾವಿಂದು. ಇಂಥ ಪರಿಸ್ಥಿತಿಯಲ್ಲಿ, ಯಾವುದೋ ಒಂದು ಆ್ಯಪ್ ತೆರೆದಾಗಲೋ ಅಥವಾ ಸ್ಕ್ರೀನ್ ಅನ್‌ಲಾಕ್ ಮಾಡಿದಾಗಲೋ, ಫೋನ್ ಜಪ್ಪಯ್ಯ ಎಂದರೂ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ ಎಂದಾದರೆ? ಈ ರೀತಿಯ ಸಮಸ್ಯೆ ಹಲವರಿಗೆ ಎದುರಾಗಿರಬಹುದು. ಇದನ್ನು ಫೋನ್ 'ಹ್ಯಾಂಗ್ ಆಗುವುದು', 'ಫ್ರೀಜ್ ಆಗುವುದು' ಅಂತೆಲ್ಲ ಹೇಳಲಾಗುತ್ತದೆ. ಇದಕ್ಕೆ ಪರಿಹಾರವೇನು? ಹೆಚ್ಚಿನ ಸಂದರ್ಭದಲ್ಲಿ ಇದಕ್ಕಾಗಿ ನೂರಾರು ರೂಪಾಯಿ ಖರ್ಚು ಮಾಡಿ ಮೊಬೈಲ್ ದುರಸ್ತಿ ಮಾಡುವವರ ಬಳಿಗೆ ಒಯ್ಯಬೇಕಿಲ್ಲ. ನಾವೇ ಮಾಡಿ ನೋಡಬಹುದಾದ ಎರಡು ಅತ್ಯಂತ ಸರಳ ವಿಧಾನಗಳು ಇಲ್ಲಿವೆ.

ಫೋನನ್ನು ನಾವು ಸದಾ ಕಾಲ ಬಳಸುತ್ತಿರುತ್ತೇವೆ. ಫೋನ್ ಕೂಡ ಮಿನಿ ಕಂಪ್ಯೂಟರೇ ಆಗಿರುವುದರಿಂದ, ನಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರುಗಳ ಬಗ್ಗೆ ನಾವು ಎಷ್ಟು ಕಾಳಜಿ ತೋರಿಸುತ್ತೇವೋ, ನಮ್ಮ ದೈನಂದಿನ ಸಂಗಾತಿಯಾಗಿರುವ ಮೊಬೈಲ್ ಬಗ್ಗೆಯೂ ಕಾಳಜಿ ವಹಿಸಬೇಕು. ಈ ರೀತಿ ಹ್ಯಾಂಗ್ ಅಥವಾ ಫ್ರೀಜ್ ಆಗುವ ಮೊದಲೇ ನಾವು ಕೆಲವೊಂದು ಮುನ್ನೆಚ್ಚರಿಕೆ ವಹಿಸಿದರೆ ಅದರ ಬ್ಯಾಟರಿಗೂ, ಕಾರ್ಯಾಚರಣಾ ವ್ಯವಸ್ಥೆಗೂ ಅನುಕೂಲವಾಗುತ್ತದೆ.

ಮೊದಲ ವಿಧಾನವೆಂದರೆ, ನಮ್ಮ ಆಂಡ್ರಾಯ್ಡ್, ಐಒಎಸ್ ಅಥವಾ ವಿಂಡೋಸ್ ಮುಂತಾದ ಕಾರ್ಯಾಚರಣಾ ವ್ಯವಸ್ಥೆಗಳಿರುವ ಮೊಬೈಲ್ ಫೋನನ್ನು ಸುಮ್ಮನೇ ರೀಸ್ಟಾರ್ಟ್ ಮಾಡುವುದು. ಇದನ್ನು ರೀಬೂಟಿಂಗ್ ಅಂತನೂ ಕರೆಯುತ್ತಾರೆ. ಅಂದರೆ, ಫೋನ್ ಸ್ವಿಚ್ ಆಫ್ ಮಾಡಿ ಮರಳಿ ಆನ್ ಮಾಡುವುದು. ಫೋನ್‌ನ ಪವರ್ ಬಟನ್ ಅನ್ನು ಕೆಲವು ಕ್ಷಣ ಒತ್ತಿ ಹಿಡಿದುಕೊಂಡರೆ, ರೀಸ್ಟಾರ್ಟ್, ಪವರ್ ಆಫ್ ಹಾಗೂ ಹೊಸ ಫೋನ್‌ಗಳಲ್ಲಿ 'ಸ್ಕ್ರೀನ್ ಶಾಟ್' ಬಟನ್‌ಗಳು ಗೋಚರಿಸುತ್ತವೆ. ಇದರಲ್ಲಿ 'ರೀಸ್ಟಾರ್ಟ್' ಒತ್ತಿದರೆ, ತಾನಾಗಿ ಆಫ್ ಆಗಿ, ಮರಳಿ ಆನ್ ಆಗುತ್ತದೆ. ಇಲ್ಲವೇ, 'ಪವರ್ ಆಫ್' ಒತ್ತಿ, ಐದು ನಿಮಿಷದ ನಂತರ ನಾವೇ ಆನ್ ಮಾಡಬೇಕಾಗುತ್ತದೆ. ಇದನ್ನು 'ಸಾಫ್ಟ್ ರೀಸೆಟ್' ಎಂದು ತಂತ್ರಜ್ಞಾನ ಭಾಷೆಯಲ್ಲಿ ಕರೆಯಲಾಗುತ್ತದೆ. ಹೀಗೆ ಮಾಡಿದಾಗ, ನಮಗರಿವಿಲ್ಲದಂತೆಯೇ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಆ್ಯಪ್‌ಗಳು ಮುಚ್ಚಲ್ಪಟ್ಟು, ಫೋನ್‌ಗೂ ತಾಜಾತನ ದೊರೆಯುತ್ತದೆ. ಹ್ಯಾಂಗ್ ಅಥವಾ ಕಾರ್ಯಸ್ಥಗಿತಗೊಳಿಸಿದ ಫೋನ್‌ಗೆ ಪುನಶ್ಚೇತನ ದೊರೆಯುತ್ತದೆ. ಹೀಗೆ ಮಾಡಿದಾಗ ಫೋನ್‌ನಲ್ಲಿರುವ ಯಾವುದೇ ಫೈಲ್‌ಗಳಾಗಲೀ, ಆ್ಯಪ್‌ಗಳಾಗಲೀ ಅಳಿಸಿಹೋಗುವುದಿಲ್ಲ.

ಎರಡನೆಯದು ಫ್ಯಾಕ್ಟರಿ ರೀಸೆಟ್. ಅಂದರೆ, ಫ್ಯಾಕ್ಟರಿಯಿಂದ ಮಳಿಗೆಗೆ ಫೋನ್ ಬಂದಾಗ ಹೇಗಿತ್ತೋ, ಅಂತಹಾ ಸ್ಥಿತಿಗೆ ಫೋನನ್ನು ರೀಸೆಟ್ ಮಾಡುವ ವಿಧಾನವಿದು. ಹ್ಯಾಂಗ್ ಆಗುವ ಸಮಸ್ಯೆ ಸಾಮಾನ್ಯ ರೀಬೂಟಿಂಗ್‌ನಿಂದ ಪರಿಹಾರವಾಗದಿದ್ದರೆ, ಈ ವಿಧಾನ ಅನುಸರಿಸಬಹುದು. ಹೀಗೆ ಮಾಡುವ ಮುನ್ನ, ಫೋನ್‌ನಲ್ಲಿರುವ ಫೋಟೋ, ವಿಡಿಯೊ, ಎಸ್ಸೆಮ್ಮೆಸ್, ಕಾಂಟ್ಯಾಕ್ಟ್ಸ್ (ಸೇವ್ ಆಗಿರುವ ಸಂಖ್ಯೆಗಳು) - ಇವುಗಳೆಲ್ಲವನ್ನೂ ಬ್ಯಾಕಪ್ ಮಾಡಿಟ್ಟುಕೊಳ್ಳಬೇಕು. ಯಾಕೆಂದರೆ, ಪುನಃ ಫೋನ್ ಆನ್ ಆದಾಗ, ಇವ್ಯಾವುವೂ ಇರುವುದಿಲ್ಲ. ಅಳಿಸಿ ಹೋಗಿರುತ್ತದೆ.

ಹೀಗೆ ಮಾಡಿ: ಸೆಟ್ಟಿಂಗ್ಸ್ ಆ್ಯಪ್ ತೆರೆದು, ಅದರಲ್ಲಿ 'ಸಿಸ್ಟಂ' ಎಂಬಲ್ಲಿಗೆ ಹೋಗಿ, 'ರೀಸೆಟ್' ಕ್ಲಿಕ್ ಮಾಡಬೇಕು. ಹಳೆಯ ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ನಲ್ಲೇ 'ಬ್ಯಾಕಪ್ & ರೀಸೆಟ್' ಅಂತ ಇರಬಹುದು. ಇನ್ನು ಕೆಲವು ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ನಲ್ಲಿ 'ಅಡಿಶನಲ್ ಸೆಟ್ಟಿಂಗ್ಸ್' ಎಂಬಲ್ಲಿ ಈ ಆಯ್ಕೆ ಗೋಚರಿಸಬಹುದು. ಆವಾಗ, ನಮ್ಮ ವೈಫೈ, ಮೊಬೈಲ್ ಹಾಗೂ ಬ್ಲೂಟೂತ್ ಸಂಪರ್ಕಗಳನ್ನು ಮಾತ್ರ ರೀಸೆಟ್ ಮಾಡುವ, ಆ್ಯಪ್‌ಗಳಿಗೆ ನಾವು ನೀಡಿದ ಮಾಹಿತಿಗಳನ್ನು ರೀಸೆಟ್ ಮಾಡುವ ಹಾಗೂ ಎಲ್ಲ ಡೇಟಾ ಅಳಿಸಿ ಹಾಕುವ ಆಯ್ಕೆಗಳು ಗೋಚರಿಸುತ್ತವೆ. 'Erase All Data/ Factory reset' ಎಂಬುದು ನಿಮ್ಮ ಕೊನೆಯ ಆಯ್ಕೆಯಾಗಿರಲಿ. ಮರಳಿ ಆನ್ ಆದಾಗ, ಹೊಸದಾಗಿ ಫೋನ್‌ಗೆ ಆ್ಯಪ್, ಹಿಂದಿನ ಫೋಟೋ, ವಿಡಿಯೊಗಳನ್ನು ಬ್ಯಾಕಪ್‌ನಿಂದ ಮರಳಿ ಹಾಕಿಕೊಳ್ಳಬಹುದು ಅಥವಾ ಹೊಸದಾಗಿ ಸೇರಿಸಿಕೊಳ್ಳಬಹುದು. ಫೋನ್ ಕೂಡ ಹೊಸ ಚೈತನ್ಯ ಪಡೆದು ವೇಗವಾಗಿ ಕಾರ್ಯಾಚರಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು