ಸೋಮವಾರ, ಜೂನ್ 27, 2022
24 °C

ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ

ಶಶಾಂಕ ಪರಾಶರ Updated:

ಅಕ್ಷರ ಗಾತ್ರ : | |

Prajavani

ಸುಮಾರು ಒಂದು ವರ್ಷ ಕಳೆದ ನಂತರವೂ ಜಗತ್ತಿನಾದ್ಯಂತ ಸಾಕಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸದ ನಿರ್ವಹಣೆಯನ್ನು ಮುಂದುವರೆ ಸುತ್ತಿರುವುದು ಹೊಸ ವಿಷಯವಾಗಿ ಉಳಿದಿಲ್ಲ. ಇದಕ್ಕೆ ಕಾರಣ ಎಲ್ಲರಿಗೂ ತಿಳಿದಿರುವುದೇ - ಕೊರೊನಾ ಸೋಂಕು ಎಲ್ಲ ದೇಶಗಳನ್ನೂ ಬಾಧಿಸುತ್ತಿರುವುದು. ಈ ಕೊರೊನಾದ ಪ್ರಭಾವದಿಂದ ಜನರು ಮನೆಯಿಂದಲೇ ಕೆಲಸ ಮಾಡುವಂಥ ಸನ್ನಿವೇಶ ಪ್ರಾರಂಭವಾದಾಗ, ಇಂಟರ್ನೆಟ್ ಸಂಸ್ಥೆಗಳು ಒಂದು ಜಾಹೀರಾತನ್ನು ಮನೆಮನೆಗೂ ತಲುಪಿಸದ್ದನ್ನು ನೀವು ಗಮನಿಸಿರಬಹುದು. ಆ ಜಾಹೀರಾತಿನ ಸಾರಾಂಶ ಇಷ್ಟು: ಮನೆಯಿಂದಲೇ ಕೆಲಸ ಮಾಡುವವರಿಗೆ ನಮ್ಮ ಸಂಸ್ಥೆ ‘ಫೈಬರ್’ ನ ಮೂಲಕ ವೇಗದ ಇಂಟರ್ನೆಟನ್ನು ನೀಡುತ್ತದೆ.

ಇದನ್ನು ನೋಡಿದವರಲ್ಲಿ ಒಂದು ಪ್ರಶ್ನೆ ಎದ್ದಿರಬಹುದು, ‘ಈ ಫೈಬರ್ ತಂತ್ರಜ್ಞಾನ ಎಂದರೆ ಏನು’ ಎಂದು. ಈ ಫೈಬರ್‌ನ ವೈಜ್ಞಾನಿಕ ಹೆಸರು ಆಪ್ಟಿಕಲ್ ಫೈಬರ್ ಕೇಬಲ್. ಹಾಗೆಂದರೇನು ಎಂಬುದನ್ನು ನೋಡೋಣ.

ಅಂತರ್ಜಾಲ ಎಂಬುವುದನ್ನು ಸುಲಭವಾಗಿ ವಿವರಿಸಬೇಕಾದರೆ ಅದನ್ನು ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಪರಸ್ಪರ ಬೆಸೆಯುವ ಜಾಲ ಎಂದು ಹೇಳಬಹುದು. ಹೀಗೆ ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಬೆಸೆಯುವುದು ಈ ಆಪ್ಟಿಕಲ್ ಕೇಬಲ್‌ಗಳು. ಇವು ಮನುಷ್ಯನ ಕೂದಲಿನಷ್ಟು ದಪ್ಪವಿರುವ ಶುದ್ಧವಾದ ಗಾಜಿನ ಕೊಳವೆಗಳು. ಸುಮಾರು ಆಪ್ಟಿಕಲ್ ಫೈಬರ್‌ಗಳ ಒಂದು ಗುಚ್ಛವನ್ನು ಒಂದು ಫೈಬರ್ ಕೇಬಲ್‌ನ ಒಳಗೆ ಸೇರಿಸಿರುತ್ತಾರೆ.

ಈ ಆಪ್ಟಿಕಲ್ ಫೈಬರ್‌ನ ಒಳಗೆ ಬೆಳಕಿನ ಕಿರಣಗಳು ಸಾಗುವುದು ಸಂಪೂರ್ಣ ಆಂತರಿಕ ಪ್ರತಿಫಲನ (Total Internal Reflection) ಎನ್ನುವ ಒಂದು ಭೌತಶಾಸ್ತ್ರದ ನಿಯಮದ ಅನುಸಾರವಾಗಿ. ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ಅದರೊಳಗೆ ಒಂದು ಕಡ್ಡಿಯನ್ನು ಮುಳುಗಿಸಿದರೆ ಅದನ್ನು ನಾವು ನೋಡಿದಾಗ ಆ ಕಡ್ಡಿ ಡೊಂಕಾಗಿ ಕಾಣುವುದನ್ನು ನಾವೆಲ್ಲರೂ ಗಮನಿಸಿದ್ದೇವೆ ಅಲ್ಲವೇ? ಇದಕ್ಕೆ ಕಾರಣ ಎರಡು ವಿಭಿನ್ನ ಮಾಧ್ಯಮಗಳಾದ ನೀರು ಮತ್ತು ಗಾಳಿ ಸಂಧಿಸುವ ಸ್ಥಳದಿಂದ ಬೆಳಕು ಹಾದು ಹೋದಾಗ ಅದು ಬಾಗಿದಂತೆ ಕಾಣುವುದು. ಹೀಗೆ ಆಪ್ಟಿಕಲ್ ಫೈಬರ್‌ನ ಒಳಗೆ ಬೆಳಕಿನ ಕಿರಣಗಳು ಪ್ರವೇಶಿಸಿದಾಗ ಅವೂ ಬಾಗುತ್ತವೆ. ಈ ಬಾಗುವಿಕೆ ಎಷ್ಟು ತೀವ್ರವಾಗಿರುತ್ತದೆ ಎಂದರೆ, ಅದರೊಳಗೆ ನುಗ್ಗುವ ಬೆಳಕು ಸಂಪೂರ್ಣವಾಗಿ ಪ್ರತಿಫಲನಗೊಳ್ಳುತ್ತದೆ. ಇದೇ ಸಂಪೂರ್ಣ ಆಂತರಿಕ ಪ್ರತಿಫಲನ. ಹೀಗೆ ಪ್ರತಿಫಲನಗೊಳ್ಳುತ್ತ ಬೆಳಕು ಆಪ್ಟಿಕಲ್ ಫೈಬರ್‌ನಲ್ಲಿ ಸಾಗಿ ಇನ್ನೊಂದು ಬದಿಯಲ್ಲಿ ಹೊರಬರುತ್ತದೆ.

ತಾಮ್ರದ ತಂತಿಗಳ ಮೂಲಕ ಸಾಗುವ ಸಂದೇಶಗಳು ಹೊರಗಿನ ವಿದ್ಯುತ್ಕಾಂತೀಯ ಅಲೆಗಳ ಕಾರಣದಿಂದ ಹಾಗೂ ಇನ್ನೂ ಹಲವು ಕಾರಣಗಳಿಂದ ಆಪ್ಟಿಕಲ್ ಫೈಬರ್‌ನಲ್ಲಿ ಚಲಿಸುವಷ್ಟು ವೇಗವಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ನೂರಾರು ಮೈಲಿಗಳ ಆಚೆ ಇರುವ ಬೇರೆ ದೇಶಗಳನ್ನು ಸಂಪರ್ಕಿಸಲು ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಸಮುದ್ರದ ಅಡಿಯಲ್ಲಿಯೂ ಹುದುಗಿಸಿ ಸಂಪರ್ಕವನ್ನು ಸಾಧಿಸಬಹುದು. ಈ ಎಲ್ಲ ಕಾರಣಗಳಿಂದ ಆಪ್ಟಿಕಲ್ ಫೈಬರ್ ಗ್ರಾಹಕರ ಮತ್ತು ತಂತ್ರಜ್ಞರ ಅಚ್ಚುಮೆಚ್ಚಿನ ಸಂಪರ್ಕಸಾಧನವಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು