ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ: ತಂತ್ರಾಂಶ ಉದ್ಯಮದ ‘ಭೀಷ್ಮ ಪಿತಾಮಹ’

Last Updated 27 ನವೆಂಬರ್ 2020, 8:18 IST
ಅಕ್ಷರ ಗಾತ್ರ

ಭಾರತದಲ್ಲಿ ಮಾರುಕಟ್ಟೆ ಬಂಡವಾಳದ ಲೆಕ್ಕಾಚಾರದಲ್ಲಿ ಇಂದು ಎರಡನೆಯ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌). ಕಂಪನಿಯ ಮಾರುಕಟ್ಟೆ ಮೌಲ್ಯ ಈಗ ಅಂದಾಜು ₹ 10 ಲಕ್ಷ ಕೋಟಿ. ಇಷ್ಟು ದೊಡ್ಡ ಉದ್ಯಮದ ಸಂಸ್ಥಾಪಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಗಿದ್ದವರು ಫಕೀರ್ ಚಂದ್‌ ಕೊಹ್ಲಿ.

ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಬೀಜ ಬಿತ್ತಿದ್ದು ಕೂಡ ಕೊಹ್ಲಿ ಅವರೇ ಎಂದು ಉದ್ಯಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಕೊಹ್ಲಿ ಅವರು ಗುರುವಾರ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಕೊಹ್ಲಿ ಅವರು ಟಾಟಾ ಸಮೂಹವನ್ನು ಸೇರಿದ್ದು ಉದ್ಯಮಿ ಜೆ.ಆರ್‌.ಡಿ. ಟಾಟಾ ಅವರ ಒತ್ತಾಯಕ್ಕೆ ಮಣಿದು. ಟಾಟಾ ಸನ್ಸ್‌ನ ಈಗಿನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಕೊಹ್ಲಿ ಅವರನ್ನು ‘ನಿಜವಾದ ದಿಗ್ಗಜ’ ಎಂದು ಬಣ್ಣಿಸಿದ್ದಾರೆ. ‘ದೇಶದ ಐ.ಟಿ. ವಲಯದ ಬೆಳವಣಿಗೆಗೆ ನಾಂದಿ ಹಾಡಿದ ನಿಜವಾದ ವ್ಯಕ್ತಿ ಕೊಹ್ಲಿ. ಅವರ ಹೆಜ್ಜೆ ಗುರುತುಗಳನ್ನು ನಾವು ಅನುಸರಿಸಿದ್ದೇವೆ. ಐ.ಟಿ. ಉದ್ಯಮಕ್ಕೆ ಹಾಗೂ ಆ ಮೂಲಕ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಅಳೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ.

ಕೊಹ್ಲಿ ಅವರು ಜನಿಸಿದ್ದು 1924ರಲ್ಲಿ, ಇಂದಿನ ಪಾಕಿಸ್ತಾನದ ಪೆಶಾವರದಲ್ಲಿ. ಆರಂಭಿಕ ಶಿಕ್ಷಣ ಪಡೆದಿದ್ದು ಅಲ್ಲಿಯೇ. ನಂತರ ಲಾಹೋರ್‌ನಲ್ಲಿ ಕಾಲೇಜು ಶಿಕ್ಷಣ ಪಡೆದರು. ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕೂಡ ಅವರಿಗೆ ದೊರೆತಿತ್ತು. ಅದೇ ಸಂದರ್ಭದಲ್ಲಿ ಕೆನಡಾದ ಕ್ವೀನ್ಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನವೊಂದು ದೊರೆತು ಕೊಹ್ಲಿ ಅವರು ವ್ಯಾಸಂಗಕ್ಕೆ ಅಲ್ಲಿಗೆ ತೆರಳಿದರು. ನಂತರ, ಪ್ರತಿಷ್ಠಿತ ಮೆಸ್ಯಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿಯೂ ಅಧ್ಯಯನ ಮಾಡಿದರು. ಅವರು 1951ರಲ್ಲಿ ಟಾಟಾ ಸಮೂಹದ ಟಾಟಾ ಎಲೆಕ್ಟ್ರಿಕ್‌ ಕಂಪನಿಯನ್ನು ಸೇರಿದರು.

ದೇಶದ ಮೂರನೆಯ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿಗೆ ಕೊಹ್ಲಿ ಪಾತ್ರರಾಗಿದ್ದರು. ಅವರು 1969ರಲ್ಲಿ ಟಿಸಿಎಸ್‌ ಕಂಪನಿಯ ಜನರಲ್ ಮ್ಯಾನೇಜರ್‌ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ನಂತರದಲ್ಲಿ ಕಂಪನಿಯ ಸಿಇಒ ಕೂಡ ಆದರು. 1996ರವರೆಗೂ ಸಿಇಒ ಹುದ್ದೆಯಲ್ಲಿ ಇದ್ದರು.

ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಅವರ ದೃಷ್ಟಿಯಲ್ಲಿ ಕೊಹ್ಲಿ ಅವರು ‘ಭಾರತದ ತಂತ್ರಾಂಶ ಉದ್ಯಮದ ಭೀಷ್ಮ ಪಿತಾಮಹ’. ಇನ್ಫೊಸಿಸ್‌ ಲಿಮಿಟೆಡ್‌ನ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿದ್ದರು! ಇದು ಕೊಹ್ಲಿ ಅವರ ವ್ಯಕ್ತಿತ್ವ ಎಷ್ಟು ಎತ್ತರದ್ದಾಗಿತ್ತು ಎಂಬುದಕ್ಕೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT