ಶನಿವಾರ, ನವೆಂಬರ್ 28, 2020
25 °C
ವರ್ಜಿನ್ ಹೈಪರ್‌ಲೂಪ್ ಕಂಪನಿಯಿಂದ ಮಾನವಸಹಿತ ಪ್ರಯಾಣ ಯಶಸ್ವಿ

PV Web Exclusive: ಹೈಪರ್‌ಲೂಪ್ ಓಟ ಸನ್ನಿಹಿತ

ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

100 ಕಿಲೋಮೀಟರ್ ದೂರ ಪ್ರಯಾಣಿಸಲು ಎಷ್ಟು ಸಮಯ ಬೇಕು? ರೈಲು ಅಥವಾ ಕಾರಿನಲ್ಲಿ ಹೋದರೆ ಒಂದು ಗಂಟೆಯಿಂದ ಎರಡು ಗಂಟೆ ಹಿಡಿಯಬಹುದು. ಆದರೆ ಕೆಲವೇ ನಿಮಿಷಗಳಲ್ಲಿ ಇಷ್ಟು ದೂರ ಕ್ರಮಿಸಲು ಸಾಧ್ಯವಿದ್ದರೆ ಹೇಗೆ? ಹೌದು, ಹೈಪರ್‌ಲೂಪ್ ಎಂಬ ವಿನೂತನ ಮಾದರಿಯ ಸಾರಿಗೆ ತಂತ್ರಜ್ಞಾನ ಇದನ್ನು ಸಾಧ್ಯವಾಗಿಸಿದೆ. ಅತಿ ವೇಗವಾಗಿ, ಅತ್ಯಂತ ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳ ತಲುಪುವುದು ಇದರ ಹೆಗ್ಗಳಿಕೆ. ಇತ್ತೀಚಿನ ಕೆಲವು ವರ್ಷಗಳಿಂದ ಪ್ರಚಲಿತದಲ್ಲಿದ್ದ ಹೈಪರ್‌ಲೂಪ್ ತಂತ್ರಜ್ಞಾನ ಸಾಕಾರವಾಗುವ ಸುದ್ದಿ ಬಂದಿದೆ. 

ಸಾಹಸಿ ಉದ್ಯಮಿ ರಿಚರ್ಡ್ ಬ್ರಾನ್ಸನ್‌ ಅವರ ಕನಸಿನ ಕೂಸು ‘ವರ್ಜಿನ್ ಹೈಪರ್‌ಲೂಪ್’ ಸಂಸ್ಥೆಯು‌ ಈ ವಿನೂತನ ಸಾರಿಗೆ ವ್ಯವಸ್ಥೆಯ ಮಹತ್ವದ ಮಜಲಿಗೆ ಕಾಲಿರಿಸಿದೆ. ಅಮೆರಿಕದ ನೆವಾಡದ ಮರಳುಗಾಡಿನಲ್ಲಿ ಮಾನವಸಹಿತ ಮೊದಲ ಪಯಣ ಭಾನುವಾರ ಯಶಸ್ವಿಯಾಗಿದೆ. ಸಂಸ್ಥೆಯ ಇಬ್ಬರು ಅಧಿಕಾರಿಗಳು ಮೊದಲ ಪಯಣದಲ್ಲಿ ಪ್ರಯಾಣಿಕರಾಗಿದ್ದರು. ಇದರ ಬೆನ್ನಲ್ಲೇ ಮಂಗಳವಾರ ನಡೆದ ಮತ್ತೊಂದು ಪರೀಕ್ಷೆಯಲ್ಲಿ ತನಯ್ ಮಂಜ್ರೇಕರ್ ಇದ್ದರು. ಹೈಪರ್‌ಲೂಪ್‌ನಲ್ಲಿ ಪ್ರಯಾಣಿಸಿದ ಮೊದಲ ಭಾರತೀಯ ಎಂಬ ಖ್ಯಾತಿ ಅವರಿಗೆ ಸಂದಿದೆ. ಅವರು ಸಂಸ್ಥೆ ಪವರ್ ಎಲೆಕ್ಟ್ರಾನಿಕ್ಸ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. 


ಪಾಡ್ ಸಂಚರಿಸುವ ಕೊಳವೆ ಮಾರ್ಗ

ಪಾಡ್‌ (ಮೆಟ್ರೊ ಬೋಗಿ ತರಹದ್ದು) ಕೇವಲ 15 ಸೆಕೆಂಡ್‌ಗಳಲ್ಲಿ 500 ಮೀಟರ್ ಸಂಚರಿಸಿತು. ಅಂದರೆ ಗಂಟೆಗೆ 160 ಕಿಲೋಮೀಟರ್‌ ವೇಗದಲ್ಲಿ ಸಂಚರಿಸಿತು. ಇದು ಕೇವಲ ಪ್ರಯೋಗವಷ್ಟೇ. ಗಂಟೆಗೆ ಗರಿಷ್ಠ 1,220 ಕಿಲೋಮೀಟರ್ ವೇಗದಲ್ಲಿ ಓಡುವ ಹೈಪರ್‌ಲೂಪ್ ಅಭಿವೃದ್ಧಿಪಡಿಸುವುದು ವರ್ಜಿನ್ ಗುರಿ.

ವಾಯುನಿಯಂತ್ರಿತ ಪಾಡ್‌ಗಳನ್ನು ಅಂಡರ್‌ಗ್ರೌಂಡ್‌ನಲ್ಲಿ ಕೊಳವೆ ರೀತಿಯ ಮಾರ್ಗದಲ್ಲಿ ಅಳವಡಿಸಲಾಗಿರುತ್ತದೆ. ಇವು ಬಹುತೇಕ ತೇಲುತ್ತಾ ವೇಗವಾಗಿ ಸಾಗುತ್ತವೆ. ಇಲ್ಲಿ ಕುಳಿತ ಪ್ರಯಾಣಿಕರಿಗೆ ವೇಗದ ಹಾಗೂ ಆರಾಮದಾಯಕ ಅನುಭೂತಿ ನೀಡುವ ಸಾರಿಗೆಯನ್ನು ಒದಗಿಸುವುದು ಸಂಸ್ಥೆಯ ಧ್ಯೇಯ. ಭಾನುವಾರ ನಡೆದ ಪರೀಕ್ಷೆ ಅಷ್ಟು ಸುಲಭದ್ದಾಗಿರಲಿಲ್ಲ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸಾಗಿಸಬಹುದೇ ಎಂಬುದನ್ನು ಪರೀಕ್ಷಿಸಲು ಈ ಮುನ್ನ 400 ಪರೀಕ್ಷೆಗಳನ್ನು ನಡೆಸಲಾಗಿತ್ತು. 

ಈಗ ನಡೆದ ಪರೀಕ್ಷೆಯು ಮಹತ್ವಾಕಾಂಕ್ಷೆಯ ಆರಂಭ ಮಾತ್ರ. ಒಂದು ಪಾಡ್‌ನಲ್ಲಿ 23 ‍ಜನರು ಪ್ರಯಾಣಿಸಬಹುದು. 15ರಿಂದ 18 ಅಡಿ ಉದ್ದದ ಪಾಡ್ 2.5 ಟನ್ ತೂಕ ಹೊಂದಿರುತ್ತದೆ. ಬೋಗಿಯೊಳಗಿನ ಪ್ರಯಾಣ ಆರಾಮದಾಯಕ, ಆಪ್ತ ಎನಿಸುವಂತೆ ವಿನ್ಯಾಸ ಮಾಡಲಾಗಿದೆ. ಪ್ರಯಾಣವನ್ನು ಖುಷಿಯಿಂದ ಅನುಭವಿಸಬೇಕೇ ವಿನಾ ರೋಲರ್‌ ಕೋಸ್ಟರ್ ರೀತಿ ಭೀತಿ ಹುಟ್ಟಿಸುವಂತಿರಬಾರದು ಎಂಬುದು ಸಂಸ್ಥೆಯ ನಿಲುವು. 


 ಪಾಡ್‌ನ ಒಳಾಂಗಣ ವಿನ್ಯಾಸ

‘ವಿಮಾನವು ಟೇಕ್‌ಆಫ್ ಆದ ಅನುಭವವೇ ಹೈಪರ್‌ಲೂಪ್ ಹೊರಟಾಗ ಉಂಟಾಗುತ್ತದೆ. ಮ್ಯಾಗ್ನೆಟಿಕ್ ಲೆವಿಟೇಷನ್ ತಂತ್ರಜ್ಞಾನಕ್ಕೆ ಧನ್ಯವಾದಗಳು. ಶಾಂಘೈನಲ್ಲಿ ಹೈಸ್ಪೀಡ್ ರೈಲುಗಳಿಗೆ ಈ ತಂತ್ರಜ್ಞಾನ ಬಳಸಲಾಗಿದೆ’ ಎಂದು ಸಂಸ್ಥೆಯ ಸಹಸ್ಥಾಪಕ ಜೀಗೆಲ್ ಹೇಳಿದ್ದಾರೆ. 

ತ್ರಾಸದಾಯಕ ರಸ್ತೆ ಪ್ರಯಾಣವನ್ನು ತಪ್ಪಿಸುವುದು ಹೈಪರ್‌ಲೂಪ್ ಸೃಷ್ಟಿ ಹಿಂದಿನ ಉದ್ದೇಶ. ಉದಾಹರಣೆಗೆ ಅಮೆರಿಕದ ಉತ್ತರ ಕರೋಲಿನಾದ ರೇಲಿ ಮತ್ತು ಡರ್ಹಾಮ್‌ ನಡುವಿನ 46 ಕಿಲೋಮೀಟರ್ ದೂರವನ್ನು ಹೈಪರ್‌ಲೂಪ್ ಕೇವಲ 9 ನಿಮಿಷಗಳಲ್ಲಿ ಕ್ರಮಿಸುತ್ತದೆ. ರಸ್ತೆ ಮೂಲಕ ಹೋದರೆ ಈ ದೂರ ಕ್ರಮಿಸಲು 40 ನಿಮಿಷಗಳು ಬೇಕು.

ಹೈಪರ್‌ಲೂಪ್ ಎಷ್ಟು ಸುರಕ್ಷಿತ ಎಂಬುದಕ್ಕೆ ಇಂದಿನ ಪ್ರಾಯೋಗಿಕ ಪರೀಕ್ಷೆಯ ಮೂಲಕ ಉತ್ತರ ನೀಡಿದ್ದೇವೆ ಎಂದು ಸಂಸ್ಥೆಯ ಸಿಇಒ ಜೇ ವಾಲ್ಡರ್ ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದು, ಅದನ್ನು ಮೂರನೇ ವ್ಯಕ್ತಿಗಳಿಂದ ಪ್ರಮಾಣೀಕರಿಸಲೂ ಸಂಸ್ಥೆ ಬದ್ಧವಾಗಿದೆ ಎಂದವರು ತಿಳಿಸಿದ್ದಾರೆ. 

ಹೈಪರ್‌ಲೂಪ್ ವಿಧಾನದ ಸಾರಿಗೆಯನ್ನು ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಗಳಲ್ಲಿ ವರ್ಜಿನ್ ಒಂದೇ ಇಲ್ಲ. ಆದರೆ ಜನರ ಪ್ರಯಾಣವನ್ನು ಪರೀಕ್ಷಿಸಿದ ಮೊದಲ ಕಂಪನಿ ಎಂಬುದು ವರ್ಜಿನ್ ಹೆಗ್ಗಳಿಕೆ. 


ಹೈಪರ್‌ಲೂಪ್‌ನ ಮೊದಲ ಪಯಣಿಗರು

ಬೆಂಗಳೂರು, ಪುಣೆಯಲ್ಲೂ ಹೈಪರ್‌ಲೂಪ್: ಹೈಪರ್‌ಲೂಪ್‌ ಭಾರತಕ್ಕೂ ಕಾಲಿಟ್ಟಿದೆ. ಮುಂಬೈ ಹಾಗೂ ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್‌ ಸಂಚರಿಸಲಿದೆ. ಆರಂಭಿಕವಾಗಿ, 5,000 ಕೋಟಿ ರೂ. ವೆಚ್ಚದಲ್ಲಿ 11.8 ಕಿ.ಮೀ. ದೂರದ ಹೈಪರ್‌ಲೂಪ್‌ ನಿರ್ಮಿಸಿ ಪ್ರಾಯೋಗಿಕ ಸಂಚಾರ ನಡೆಸಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ ಹೈಪರ್‌ಲೂಪ್ ಓಡಿಸುವ ಪ್ರಸ್ತಾವ ಇದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೈಪರ್‌ಲೂಪ್ ಓಡಿಸುವ ಸಂಬಂಧ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕಳೆದ ತಿಂಗಳಷ್ಟೇ ಸಂಸ್ಥೆ ಜೊತೆ ಒಪ್ಪಂದ ಏರ್ಪಟ್ಟಿದೆ. ವರ್ಜಿನ್ ಸಂಸ್ಥೆಯು ಪಂಜಾಬ್ ಸರ್ಕಾರದ ಜತೆಗೂ ಒಪ್ಪಂದ ಮಾಡಿಕೊಂಡಿದ್ದು ಚಂಡೀಗಡ ಮತ್ತು ಅಮೃತಸರದ ಮಧ್ಯೆ ಸಂಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರು, ಪುಣೆ ಯೋಜನೆಗಳಿಗೆ ಶೀಘ್ರ ಒಪ್ಪಿಗೆ ಸಿಕ್ಕರೆ 2029ರ ವೇಳೆಗೆ ಹೈಪರ್‌ಲೂಪ್ ಸಾಕಾರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು