ಮಂಗಳವಾರ, ಸೆಪ್ಟೆಂಬರ್ 27, 2022
21 °C
ವೈಫೈ ಇದ್ದರೆ ಡಯಲರ್ ಮೂಲಕವೇ ಕರೆ ಮಾಡಬಹುದು

ಇದೋ ಬಂದಿದೆ Wi-Fi Calling ಸೌಕರ್ಯ!

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

W-Fi Calling

ಮೊಬೈಲ್ ಸೇವಾದಾತರು ಕರೆ ಶುಲ್ಕ ಹಾಗೂ ಇಂಟರ್‌ನೆಟ್ ದರಗಳನ್ನು ಏರಿಸಿದ್ದಾರೆ. ಹೀಗಾಗಿ ಹೆಚ್ಚು ಮಾತನಾಡಿದರೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ ಎಂದು ಆತಂಕಪಡುವವರ ನೆರವಿಗೆ ಇದೋ ಬಂದಿದೆ ವಿನೂತನ ತಂತ್ರಜ್ಞಾನ. ಅದುವೇ ವೈಫೈ-ಕಾಲಿಂಗ್. ಅಂದರೆ ವೈಫೈ ಮೂಲಕ ಕರೆ ಮಾಡುವ ಸೌಕರ್ಯ. VoLTE ಎಂಬುದನ್ನು ಕೇಳಿದ್ದೀರಿ. 2016ರಲ್ಲಿ ರಿಲಯನ್ಸ್ ಜಿಯೋ ಮೊದಲ ಬಾರಿಗೆ ಈ ವಾಯ್ಸ್ ಓವರ್ ಎಲ್‌ಟಿಇ ತಂತ್ರಜ್ಞಾನವನ್ನು ಭಾರತದಲ್ಲಿ ಪರಿಚಯಿಸಿತ್ತು. ದೇಶದಲ್ಲಿ ಸದ್ಯ ಇರುವ ಅತ್ಯಾಧುನಿಕ 4ಜಿ ಸೌಕರ್ಯ ಬಂದ ಸಂದರ್ಭದಲ್ಲಿ VoLTE ಸೌಕರ್ಯ ಇರುವ ಮೊಬೈಲ್ ಫೋನ್‌ಗಳನ್ನೇ ಖರೀದಿಸಿದ್ದರೆ ಅದರ ಪ್ರಯೋಜನ ಪಡೆಯಬಹುದಾಗಿತ್ತು. ಇನ್ನು ವಾಯ್ಸ್ ಓವರ್ ವೈಫೈ (ವೈಫೈ ಮೂಲಕ ಕರೆ) ಜಮಾನ ಆಗಿರುವುದರಿಂದ ಅದರ ಸೌಲಭ್ಯ ಇರುವ ಸ್ಮಾರ್ಟ್ ಫೋನ್‌ಗಳನ್ನೇ ಖರೀದಿಸಬೇಕಾಗುತ್ತದೆ.

ಏನಿದು ವೈಫೈ ಕರೆ?
ನೇರವಾಗಿ ಹೇಳಬಹುದಾದರೆ ವೈಫೈ ಸೇವೆಯ ಮೂಲಕ ಮೊಬೈಲ್ ಕರೆ ಮಾಡುವ ಸೌಕರ್ಯವಿದು. ಉದಾಹರಣೆಗೆ, ಮನೆಯಲ್ಲಿ ಅಥವಾ ಕಚೇರಿಯಲ್ಲಿ ಬ್ರಾಡ್‌ಬ್ಯಾಂಡ್ - ವೈಫೈ ಉಪಕರಣದ ಮೂಲಕ ನಮ್ಮ ಫೋನ್‌ಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿರುತ್ತೇವೆ. ಈ ಸೌಕರ್ಯವನ್ನು ಬಳಸಿಯೇ ಯಾವುದೇ ಕರೆಗಳನ್ನು ಮಾಡಬಹುದು. ಸಿಗ್ನಲ್ ದುರ್ಬಲ ಇರುವಲ್ಲಿ, ಸ್ಪಷ್ಟವಾದ ಧ್ವನಿ ಮತ್ತು ಗುಣಮಟ್ಟದ ಕರೆಯ ಅನುಭವ ಈ ತಂತ್ರಜ್ಞಾನದ ವಿಶೇಷತೆ. ಅತ್ಯಾಧುನಿಕ ಸ್ಮಾರ್ಟ್ ಫೋನ್‌ಗಳಲ್ಲಿ ಇದರ ಸೆಟ್ಟಿಂಗ್ ಅಂತರ್ನಿರ್ಮಿತವಾಗಿಯೇ ಇರುತ್ತದೆ. ಅದನ್ನು ನಾವು ಹುಡುಕಿ ಸಕ್ರಿಯಗೊಳಿಸಬೇಕಷ್ಟೇ. ಸುಲಭವಾಗಿ ಹೇಳುವುದಾದರೆ, ಈಗ ನಾವು ಮೊಬೈಲ್ ಡೇಟಾ ಅಥವಾ ಇಂಟರ್ನೆಟ್ ಸಂಪರ್ಕದ ಮೂಲಕ ಫೇಸ್‌ಬುಕ್ ಮೆಸೆಂಜರ್, ವಾಟ್ಸ್ಆ್ಯಪ್ ಮೆಸೆಂಜರ್ ಮೂಲಕ ಹೇಗೆ ವೀಡಿಯೊ ಮತ್ತು ಆಡಿಯೋ ಕರೆ ಮಾಡುತ್ತೇವೆಯೋ, ಇನ್ನು ವೈಫೈ ಬಳಸಿ, ನೇರವಾಗಿ ಡಯಲರ್ ಮೂಲಕವೇ ಕರೆ ಮಾಡಬಹುದು.

ಏನು ಉಪಯೋಗ?
ಕರೆ ಮಾಡಲು ನೀಡುವ ಶುಲ್ಕದ ಪ್ರಮಾಣವನ್ನು ತಗ್ಗಿಸಬಹುದು ಎಂಬುದು ವೈಫೈ ಕರೆ ಸೌಲಭ್ಯದ ಹೆಚ್ಚುಗಾರಿಕೆ. ಅದೇ ರೀತಿ, ರೋಮಿಂಗ್ (ಮೊಬೈಲ್ ಸೇವಾ ಆಪರೇಟರುಗಳ ಸೇವಾ ವ್ಯಾಪ್ತಿಯಿಂದ ಹೊರಗೆ ಹೋಗುವ) ಸಂದರ್ಭದಲ್ಲಿ ಈ ಸೇವೆ ಬಳಸಿದಲ್ಲಿ ರೋಮಿಂಗ್ ಶುಲ್ಕವನ್ನೂ ಉಳಿತಾಯ ಮಾಡುವುದು ಸಾಧ್ಯ. ಸೆಲ್ಯುಲಾರ್ ಸಿಗ್ನಲ್ ತೀರಾ ದುರ್ಬಲ ಇರುವ ಪ್ರದೇಶದಲ್ಲಿ ಇಂಟರ್ನೆಟ್ ಸೌಕರ್ಯವಿದೆ ಎಂದಾದರೆ, ವೈಫೈ ಬಳಸಿ ಅಡಚಣೆಯಿಲ್ಲದೆ ಕರೆ ಮಾಡಬಹುದು.

ಯಾವ ಫೋನ್‌ಗಳಿಗೆ ಇದು ಲಭ್ಯ?
ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲಿ ಈ ಸೌಕರ್ಯ ಇರುವುದಿಲ್ಲ. ನಮ್ಮ ಮೊಬೈಲ್ ಫೋನ್ ಹಾಗೂ ದೂರಸಂಪರ್ಕ ಸೇವಾದಾತರು (ಟೆಲಿಕಾಂ ಆಪರೇಟರ್) ಬೆಂಬಲಿಸಿದರೆ ಮಾತ್ರ ಇದು ಸಾಧ್ಯ. ಸದ್ಯಕ್ಕೆ ಈ ಸೇವೆಯು ಏರ್‌ಟೆಲ್ ಹಾಗೂ ಜಿಯೋದಲ್ಲಿ ಲಭ್ಯವಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ, ಕಳೆದ ವಾರ ವೈಫೈ ಕರೆ ಸೇವೆಯನ್ನು ಆರಂಭಿಸಿದೆ ಭಾರ್ತಿ ಏರ್‌ಟೆಲ್. ಅತ್ಯಾಧುನಿಕ ಫೋನ್‌ಗಳಲ್ಲಿ ಮಾತ್ರ ಈ ಸೇವೆ ದೊರೆಯಲಿದೆ. ಸ್ಯಾಮ್‌ಸಂಗ್, ಒನ್‌ಪ್ಲಸ್, ಐಫೋನ್‌ಗಳ ಇತ್ತೀಚಿನ ಮಾಡೆಲ್‌ಗಳು ಈ ಸೇವೆಯನ್ನು ಬೆಂಬಲಿಸುತ್ತವೆ.

ಹೇಗೆ ಸಕ್ರಿಯಗೊಳಿಸುವುದು?
ಬೇರೆ ಬೇರೆ ಮೊಬೈಲ್ ತಯಾರಿಕಾ ಕಂಪನಿಗಳು ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ತಮಗೆ ಬೇಕಾದಂತೆ ಬದಲಾವಣೆ ಮಾಡಿ, ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ಸೆಟ್ಟಿಂಗ್‌ಗಳಲ್ಲಿನ ಹಂತಗಳಲ್ಲಿ ಬಳಸಿವು ಪದಗಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಆದರೆ, ಸಾಮಾನ್ಯವಾಗಿ ಮಾಡುವ ವಿಧಾನ ಹೀಗಿದೆ. ಫೋನ್‌ನ 'ಸೆಟ್ಟಿಂಗ್ಸ್'ನಲ್ಲಿ, 'ವೈಫೈ & ಇಂಟರ್ನೆಟ್' ಅಂತ ಇರುವಲ್ಲಿ, 'ಸಿಮ್ & ನೆಟ್‌ವರ್ಕ್' ಅಂತ ಇದೆಯೇ ನೋಡಿ. ಅಲ್ಲಿ, ನಿರ್ದಿಷ್ಟ ಸಿಮ್ ಆಯ್ಕೆ ಮಾಡಿದಾಗ, ಅದರ ಸೆಟ್ಟಿಂಗ್ಸ್ ಕಾಣಿಸುತ್ತದೆ. ಅಲ್ಲೇ VoLTE ಕೆಳಗೆ ವೈಫೈ ಕಾಲಿಂಗ್ ಅಂತ ಇರುತ್ತದೆ. ಬಟನ್ ಸ್ಲೈಡ್ ಮಾಡಿ, ಆನ್ ಮಾಡಿದರಾಯಿತು.

ಹೀಗಾಗಿ, ಮುಂದೆ ಫೋನ್ ಖರೀದಿಸುವಾಗ 'ವಾಯ್ಸ್ ಓವರ್ ವೈಫೈ' ಸೌಕರ್ಯ ಇದೆಯೇ ಅಂತ ಪರಿಶೀಲಿಸಿಕೊಳ್ಳಿ, ಕರೆ ಶುಲ್ಕದಲ್ಲಿ ಉಳಿತಾಯ ಮಾಡಿಕೊಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು