ಭಾನುವಾರ, ಮೇ 29, 2022
21 °C
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ, ಆಯ್ದ ಕೆಲವು 'ಗುಟ್ಕಾ ಮ್ಯಾನ್‌' ಮೀಮ್ಸ್‌ಗಳು ಇಲ್ಲಿವೆ.

ಎಲೆಯಡಿಕೆ ತಿನ್ನುತ್ತಿದ್ದೆ: 'ಗುಟ್ಕಾ ಮ್ಯಾನ್‌' ಅಪಖ್ಯಾತಿಗೆ ಒಳಗಾದವನ ಅಳಲು!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಬಾಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿರುವಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೊ ಮತ್ತು ಫೋಟೊಗಳು ಭಾರಿ ವೈರಲ್‌ ಆಗಿತ್ತು. ವಿವಿಧ ರೀತಿಯಲ್ಲಿ ನೆಟ್ಟಿಗರು ಟ್ರೋಲ್‌ ಮಾಡಿದ್ದರು.

ಗ್ರೀನ್‌ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಟ್ಕಾ ಜಗಿಯುವ ಭಂಗಿಯಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ 'ಗುಟ್ಕಾ ಮ್ಯಾನ್‌' ಎಂದೇ ಪರಿಚಿತರಾದರು. ಮಾಜಿ ಕ್ರಿಕೆಟಿಗ ವಾಸಿಮ್‌ ಜಾಫರ್‌, ಡಾ. ಕುಮಾರ್‌ ವಿಶ್ವಾಸ್‌ ಸೇರಿದಂತೆ ಕೆಲವು ಪ್ರಸಿದ್ಧ ವ್ಯಕ್ತಿಗಳು ಕೂಡ 'ಗುಟ್ಕಾ ಮ್ಯಾನ್‌'ನ ಮೀಮ್ಸ್‌ ಹಂಚಿಕೊಂಡಿದ್ದರು.

'ಗುಟ್ಕಾ ಮ್ಯಾನ್‌' ಎಂದು ಅಪಖ್ಯಾತಿಗೆ ಒಳಗಾದ ವ್ಯಕ್ತಿಯನ್ನು ಕಾನ್ಪುರದ ಮಹೇಶ್ವರಿ ಮಹೋಲ್‌ ನಿವಾಸಿ ಶೋಬಿತ್‌ ಪಾಂಡೆ ಎಂದು ಗುರುತಿಸಲಾಗಿದೆ. 'ಪಂದ್ಯದ ವೇಳೆ ಗುಟ್ಕಾ ಜಗಿಯುತ್ತಿರಲಿಲ್ಲ, ಎಲೆಯಡಿಕೆ ತಿನ್ನುತ್ತಿದ್ದೆ' ಎಂದು ಎಎನ್‌ಐಗೆ ಶೋಬಿತ್‌ ಸ್ಪಷ್ಟಪಡಿಸಿದ್ದಾರೆ.

'ಮೊದಲನೆಯದಾಗಿ ನಾನು ತಂಬಾಕು ಸೇವನೆ ಮಾಡುತ್ತಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ನಾನು ವೀಳ್ಯದೆಲೆ ಅಡಿಕೆ ತಿನ್ನುತ್ತಿದ್ದೆ. ಆ ಸಂದರ್ಭದಲ್ಲಿ ನನ್ನ ಸ್ನೇಹಿತನ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಅವನು ಕೂಡ ಅದೇ ಪಂದ್ಯವನ್ನು ಸ್ಟೇಡಿಯಂನ ಮತ್ತೊಂದು ಬದಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದ. ಕೇವಲ ಸುಮಾರು 10 ಸೆಕೆಂಡ್‌ನ ಫೋನ್‌ ಕಾಲ್‌ ಅಷ್ಟೇ. ಅದು ವೈರಲ್‌ ಆಯಿತು. ಫೋನ್‌ನಲ್ಲಿ ಮಾತನಾಡುತ್ತಿದ್ದ ಅದೇ ಸ್ನೇಹಿತ ವಿಡಿಯೊ ವೈರಲ್‌ ಆಗಿರುವ ಬಗ್ಗೆ ತಿಳಿಸಿದ. ವಿಡಿಯೊ ಕಾಡ್ಗಿಚ್ಚಿನಂತೆ ಹರಡಿದೆ' ಎಂದು ಶೋಬಿತ್‌ ವಿವರಿಸಿದ್ದಾರೆ.

ಶೋಬಿತ್‌ಗೆ ವೈಯಕ್ತಿಕ ಕಿರಿಕಿರಿಗಿಂತ ಹೆಚ್ಚಾಗಿ ತನ್ನ ಸಹೋದರಿಯೂ ಆ ವಿಡಿಯೊದಲ್ಲಿರುವುದು ಚಿಂತೆಗೀಡು ಮಾಡಿದೆ. ಕೆಲವು ಕಿಡಿಗೇಡಿಗಳು ಅಶ್ಲೀಲ ಕಮೆಂಟ್‌ಗಳನ್ನು ಹರಿಯಬಿಡುತ್ತಿರುವುದರಿಂದ ಮಾನಸಿಕ ಹಿಂಸೆಯಾಗಿದೆ ಎಂದು ಶೋಬಿತ್‌ ಅಳಲು ತೋಡಿಕೊಂಡಿದ್ದಾರೆ.

'ನಾನೇನು ತಪ್ಪು ಮಾಡಿಲ್ಲ. ಇದರಿಂದ ನನಗೇನು ಭಯ ಅಥವಾ ಮುಜುಗರ ಎಂದೆನಿಸುತ್ತಿಲ್ಲ. ಆದರೆ ನನ್ನ ಸಹೋದರಿಯ ವಿರುದ್ಧ ಕೆಲವು ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್‌ಗಳು ಮಾಡುತ್ತಿರುವುದರಿಂದ ಬೇಸರವಾಗಿದೆ. ಮತ್ತೊಂದು ಕಡೆ ಮಾಧ್ಯಮಗಳಿಂದ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿದ್ದು, ಕಿರಿಕಿರಿ ಎಂದೆನಿಸುತ್ತಿದೆ' ಎಂದು ಶೋಬಿತ್‌ ಹೇಳಿದ್ದಾರೆ.

ಇದನ್ನೂ ಓದಿ...  ಡ್ರಗ್ಸ್​ ಪ್ರಕರಣದಲ್ಲಿ ಸಿಕ್ಕಿಬಿದ್ದ ಮಗನ ಜತೆ ಪೋಸ್ ಕೊಟ್ಟ ತಂದೆ: ವಿಡಿಯೊ ವೈರಲ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು