ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ ಜೀವನಕ್ಕೆ ಸ್ವಪ್ರೀತಿಯ 12 ಸೂತ್ರಗಳು

Published 10 ಫೆಬ್ರುವರಿ 2024, 0:00 IST
Last Updated 10 ಫೆಬ್ರುವರಿ 2024, 0:00 IST
ಅಕ್ಷರ ಗಾತ್ರ

ಈ ವರ್ಷದ ಮೊದಲ ತಿಂಗಳು ಮುಗಿಯುತ್ತಿರುವಾಗ, ಹೊಸ ವರ್ಷದ ಶುಭಾಶಯ ಕೋರುವ ಮೆಸೇಜೊಂದು ಮತ್ತೆ ಮತ್ತೆ ಎಲ್ಲ ಹೆಂಗಳೆಯರಿಗೂ ಸೆಳೆಯುತ್ತಿದೆ.

ಹೊಸವರ್ಷದ ಶುಭಾಶಯ, ಸಂಕಲ್ಪಗಳೆಲ್ಲವೂ ಕ್ಯಾಲೆಂಡರಿನ ದೂಳಿನೊಂದಿಗೆ ಮಸುಕಾಗುವಾಗ, ಸಾಮಾಜಿಕ ಜಾಲತಾಣದಲ್ಲಿ ವೈದ್ಯರೊಬ್ಬರ ಸಲಹೆ ಇದು ಎಂದು ಹೇಳುತ್ತಲೇ ಮತ್ತೆಮತ್ತೆ ಮಿಂಚತೊಡಗಿದೆ.

ಇಷ್ಟಕ್ಕೂ ಈ ಸಂದೇಶ ಹೇಳುವುದೇನು? ನಿಮ್ಮನ್ನು ನೀವು ಪ್ರೀತಿಸಿ, ನಿಮಗಾಗಿ ನೀವು ಬದುಕಲು ಆರಂಭಿಸಿ ಎಂದು ಹೇಳುತ್ತ ಹತ್ತು ಸಲಹೆಗಳನ್ನು ನೀಡಿದೆ.

1. ಒಂದೇ ದಿನ, ನೀವೊಬ್ಬರೇ ಮನೆಯ ಎಲ್ಲ ಕೆಲಸಗಳನ್ನೂ ಪೂರೈಸಲೇಬೇಕೆಂಬ ಹಟ ಹಿಡಿಯಬೇಡಿ. ಹೀಗೆ ಎಲ್ಲವನ್ನೂ ಮಾಡಿದವರು ಯಾರೂ ಇಲ್ಲ. ಇದ್ದರೂ ಅವರೀಗ ರೋಗಿಗಳಾಗಿದ್ದಾರೆ ಅಥವಾ ಗೋರಿಗಳಲ್ಲಿ ವಿಶ್ರಮಿಸುತ್ತಿದ್ದಾರೆ.

2. ವಿರಮಿಸಲು ಸಮಯ ಮಾಡಿಕೊಳ್ಳಿ. ಕೆಲವೊಮ್ಮೆ ಸುಮ್ಮನೆ ಕೂರುವುದು ಅಪರಾಧವೇನಲ್ಲ. ಚೂಡಾದೊಂದಿಗೆ ಚಹಾ ಸವಿಯುತ್ತ, ಪುಸ್ತಕ ಓದುತ್ತ, ಪಾಪ್‌ಕಾರ್ನ್‌ ಮಾಡಿಕೊಂಡು ತಿನ್ನುತ್ತ ಟೀವಿ ನೋಡುವುದೋ, ಆರಾಮವಾಗಿ ಓದುವೂದೊ ಯಾವುದೂ ತಪ್ಪಲ್ಲ. ಸಮಯ ಮಾಡಿಕೊಳ್ಳದೇ ಇರುವುದು ತಪ್ಪು. ನಮಗಾಗಿ ಸಮಯ ಮಾಡಿಕೊಳ್ಳದೇ ಇದ್ದಾಗ, ಉಳಿದವರಿಗಾಗಿಯೇ ಜೀವ ಸವೆಸುತ್ತಿದ್ದೇವೆ ಎಂಬ ಭಾವ ಬಂದರೆ ಮನಸು ತಪ್ತವಾಗುತ್ತದೆ. ಅದರ ಬದಲಿಗೆ ನಿಮಗಾಗಿ ಚೂರು ಆರಾಮ ಮಾಡಿ. ಖುಷಿಯಾಗಿರಿ.

3. ಒಂತುಸು ಕಣ್ಮುಚ್ಚಿ. ಆಗಾಗ ಕಾಡುವ ತಲೆನೋವು ಓಡಿಹೋಗುತ್ತದೆ. ಸಣ್ಣದಾಗಿ ತಲೆ ಸಿಡಿಯುವ, ಸಿಡಿಮಿಡಿಗೊಳ್ಳುವ ನಮಗೆ, ಸಣ್ಣದೊಂದು ನಿದ್ದೆಯ ಅಗತ್ಯವೂ ಇರುತ್ತದೆ. ಕಣ್ಮುಚ್ಚಬೇಕೆನಿಸಿದಾಗ ಸಣ್ಣದೊಂದು ನಿದ್ದೆ ಮಾಡಿ.

4. ನಿದ್ದೆಗೆಡುವವರು, ನಿದ್ದೆಗಾಗಿ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಅವು ನಿಮ್ಮ ನೆನಪಿನ ಶಕ್ತಿಯನ್ನು, ತಾರ್ಕಿಕ ಶಕ್ತಿಯನ್ನು ಕ್ಷೀಣಗೊಳಿಸುತ್ತವೆ. ಕ್ರಮೇಣ ಮರೆವು ಉಂಟಾಗುತ್ತದೆ. ಸುಖ ನಿದ್ದೆಗಾಗಿ, ಮೆದುಳಿಗೆ ವಿಶ್ರಾಂತಿ ನೀಡಿ. ಚಿಂತೆ ಕಡಿಮೆ ಮಾಡಿ, ಹೆಚ್ಚು ಹೆಚ್ಚು ಮುಗುಳ್ನಗುತ್ತಿರಿ. ನಗುನಗುತ್ತಲಿರಿ. ಎಲ್ಲ ಸಮಸ್ಯೆಗಳೂ ಸಮಯದೊಂದಿಗೆ ಪರಿಹಾರ ಪಡೆಯುತ್ತಲೇ ಬರುತ್ತವೆ.

5. ಕೆಲವೊಮ್ಮೆ ಮನೆಯಿಂದಾಚೆ ಬನ್ನಿ. ತಾರಸಿ ಅಥವಾ ಬಾಲ್ಕನಿಯಲ್ಲಿ ಸುಮ್ಮನೆ ಕೂರಿ. ಸೃಷ್ಟಿಕರ್ತನ ಸೋಜಿಗವನ್ನು ಗಮನಿಸಿ. ಆಕಾಶವನ್ನು ನೋಡಿ, ಬಾಹ್ಯಜಗತ್ತಿನ ಧಾವಂತವನ್ನು ಗಮನಿಸಿ. ನೋಡುತ್ತಲಿರಿ. ತಾಜಾ ಗಾಳಿಯನ್ನು ನಿಧಾನವಾಗಿ ಉಸಿರಾಡುತ್ತ, ಜಗತ್ತಿನ ಆಗುಹೋಗುಗಳನ್ನು ನೋಡುತ್ತಲಿರಿ. ಆಗ ಉತ್ಸಾಹವನ್ನು ಒಳಗೆಳೆದುಕೊಳ್ಳುತ್ತ, ನಿರಾಸಕ್ತಿಯನ್ನು ನಿಶ್ವಾಸದೊಂದಿಗೆ ಆಚೆ ದಬ್ಬಬಹುದು.

6. ಕನ್ನಡಿಯ ಮುಂದೆ ನಿಮ್ಮ ಬಿಂಬ ನೋಡಿ, ನಿಮ್ಮ ನಗೆಯನ್ನು ಮೋಹಿಸಿ. ಕೆಲವು ಹೆಜ್ಜೆಗಳನ್ನು ಹಾಕಿ, ಹಾಡು ಹಾಡಿ. ಇವೆಲ್ಲವೂ ಸಂತಸವನ್ನು ಹುಟ್ಟುಹಾಕುತ್ತವೆ. ಜೊತೆಗೆ ನಿಮ್ಮ ಸುತ್ತಲೂ ಸಕಾರಾತ್ಮಕವಾದ ಪ್ರಭಾವಳಿಯನ್ನು ಸೃಷ್ಟಿಸುತ್ತವೆ.

7. ವಾರದಲ್ಲಿ ಒಮ್ಮೆಯಾದರೂ ನಿಮಗಿಷ್ಟದ ತಿಂಡಿಯನ್ನು ಮಾಡಿ ತಿನ್ನಿ. ನಿಮಗಿಷ್ಟದ ಪಾನೀಯವನ್ನು ಸೇವಿಸಿ. ನಿಮಗಾಗಿ ಏನಾದರೂ ಮಾಡಿ, ಇದು ತಲೆಭಾರವನ್ನು, ಭಾವನಾತ್ಮಕವಾದ ಭಾರವನ್ನು ಕಡಿಮೆಗೊಳಿಸುತ್ತದೆ.

8. ಬಲುಮುಖ್ಯವಾಗಿ ನಿಮಗೆ ಅಗತ್ಯವಿರುವ ಗ್ಯಾಡ್ಜೆಟ್ಸ್ ಗಳನ್ನು ಖರೀದಿಸಿ. ಮನೆ ಕೆಲಸ ಹಗುರವಾಗಿಸಿಕೊಳ್ಳಿ. ವಾಷಿಂಗ್‌ ಮಷಿನ್‌, ಡಿಷ್‌ ವಾಷರ್‌, ವ್ಯಾಕ್ಯುಮ್‌ ಕ್ಲೀನರ್‌ ಇಂಥವುಗಳನ್ನು ಖರೀದಿಸಿ. ನಿಮ್ಮ ಕೆಲಸ ಮುಗಿಸುವ ಧಾವಂತ ಮತ್ತು ಒತ್ತಡವನ್ನು ಇವು ಕಡಿಮೆ ಮಾಡುತ್ತವೆ. ಇವನ್ನೆಲ್ಲ ಬಳಸುವುದು ಮನೆಯ ಎಲ್ಲ ಸದಸ್ಯರೂ ಕಲಿತಿರಲಿ. ನೀವು ಖರೀದಿಸಿದ್ದು, ನಿಮ್ಮದೇ ಜವಾಬ್ದಾರಿ ಆಗದಿರಲಿ.

9. ಒಂದು ವೇಳೆ ನಿಮಗೆ ಹುಷಾರಿರದಿದ್ದಲ್ಲಿ, ಇರುಸು ಮುರುಸು ಆಗುತ್ತಿದ್ದಲ್ಲಿ, ಮನೆಯ ಸದಸ್ಯರೊಂದಿಗೆ ಮುಕ್ತವಾಗಿ ಮಾತಾಡಿ. ಅವರೇ ಅರ್ಥ ಮಾಡಿಕೊಳ್ಳಲಿ ಎಂದು ಕಾಯಬೇಡಿ. ನಿರೀಕ್ಷಿಸಬೇಡಿ. ಮಾತಾಡುವದರಿಂದ ಮನಸು ಹಗುರ ಆಗುವುದು ಅಷ್ಟೇ ಅಲ್ಲ, ಸಕಾಲದಲ್ಲಿ ಚಿಕಿತ್ಸೆ, ಸಹಾಯ ಎಲ್ಲವೂ ದೊರೆಯುತ್ತದೆ. ಈ ಜೀವ ನಿಮ್ಮದು. ದೇಹವೂ ನಿಮ್ಮದು. ನಿಮ್ಮ ನೋವನ್ನು ನೀವೇ ಅನುಭವಿಸಬೇಕೆ ಹೊರತು ಇನ್ನೊಬ್ಬರಿಗೆ ಎರವಲು ನೀಡಲು ಆಗದು. ಕೂಡಲೇ ಮನೆಯ ಸದಸ್ಯರಿಗೆ ಹೇಳಿ. ವೈದ್ಯರ ಬಳಿ ಹೋಗಲು ವಿಳಂಬ ಮಾಡಬೇಡಿ.

10. ಆಗಾಗ ರಕ್ತದ ಏರೊತ್ತಡ, ಮಧುಮೇಹ, ಥೈರಾಯ್ಡ್‌, ಬಿ 12, ವಿಟಾಮಿನ್‌ ಡಿ ಇವುಗಳನ್ನು ತಪಾಸಣೆ ಮಾಡಿಸಿಕೊಳ್ಳಿ. ಸಾಮಾನ್ಯವಾಗಿ ಮಹಿಳೆಯರು ಇಂಥ ತಪಾಸಣೆಗಳಿಂದ ದೂರ ಇರುತ್ತಾರೆ. ಹುಷಾರಿರಲಿ, ಬಿಡಲಿ ಆಗಾಗ ತಪಾಸಣೆಗೆ ಒಳಪಡುವುದರಿಂದ ದೊಡ್ಡ ದೊಡ್ಡ ಅಪಾಯಗಳಿಂದ ಮಹಿಳೆಯರು ಪಾರಾಗಿರುವ ಉದಾಹರಣೆಗಳು ಸಾಕಷ್ಟಿವೆ.

11. ಆಗಾಗ ರಜೆ ಹಾಕಿ. ಸ್ನೇಹಿತೆಯರನ್ನು ಭೇಟಿ ಮಾಡಿ. ನಿಮ್ಮ ದಿನನಿತ್ಯದ ಬದುಕಿನಿಂದ ಬಿಡುವು ಮಾಡಿಕೊಳ್ಳಿ. ಪ್ರವಾಸ ಕೈಗೊಳ್ಳಿ. ಮನೆಯವರು ನಿಮ್ಮನ್ನು ಮಿಸ್‌ ಮಾಡಿಕೊಂಡಾಗಲೇ ನಿಮ್ಮ ಕುರಿತು ಪ್ರೀತಿ, ಗೌರವವೂ ಹೆಚ್ಚುತ್ತದೆ. ಅವಲಂಬನೆಯೂ ಕಡಿಮೆ ಆಗುತ್ತದೆ.

12. ಉಳಿದೆಲ್ಲರಂತೆ ಮಹಿಳೆಯರದ್ದೂ ಒಂದು ಜೀವ. ಒಂದೇ ಜೀವನ. ನೆಮ್ಮದಿಯಾಗಿ ಕಳೆಯಲು ಜೀವನಪ್ರೀತಿ ಬೆಳೆಸಿಕೊಳ್ಳಲು, ಜೀವ ಖುಷಿಯಾಗಿರಲು, ಸದಾ ಸುಖಿಯಾಗಿರಲು ಈ ಹನ್ನೊಂದು ಸೂತ್ರಗಳನ್ನು ಮರೆಯಬೇಡಿ ಎಂಬುದೇ ಹನ್ನೆರಡನೆಯ ಸೂತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT