ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಜೂಕು ನಾರಿ... ಯಾಕೋ ಭಯಾರಿ...

ಕೀಟಗಳಿಗಂಜುವ ಲತಾಂಗಿಯೇ ಇಲ್ಲಿ ಕೇಳು...
Published : 2 ಫೆಬ್ರುವರಿ 2024, 23:57 IST
Last Updated : 2 ಫೆಬ್ರುವರಿ 2024, 23:57 IST
ಫಾಲೋ ಮಾಡಿ
Comments

ನಿಶ್ಚಿತಾರ್ಥ ಮುಗಿದು ಬೀಗರು ವಾಪಸ್ಸು ಹೊರಡಲನುವಾಗಿದ್ದರು. ಧೈರ್ಯ ಸಾಹಸಕ್ಕೆ ಹೆಸರಾಗಿದ್ದ ಕನ್ಯಾಮಣಿ ಗಗನಸಖಿ. ಔಪಚಾರಿಕ ಮಾತುಕತೆಯ ನಂತರ ತನ್ನ ರೂಮಿಗೆ ಹೋಗಿದ್ದ ಹುಡುಗಿ, ಅಲ್ಲಿ ಜೇಡರ ಹುಳು ಕಂಡು, ಅರೆಕ್ಷಣದಲ್ಲಿಯೇ ಅರಚುತ್ತ ಆಚೆ ಓಡಿ ಬಂದಳು. ಕ್ಷಣಮಾತ್ರದಲ್ಲಿಯೇ ಅವಳ ಮೈಯೆಲ್ಲಾ ದದ್ದುಗಳೆದ್ದವು, ಬೆದರಿ ಬೆವತು ಹೋಗಿದ್ದಳು. ‘ಹುಡುಗಿ ತುಸು ನಾ... ಜೂಕು...’ ಅಂದರು ಮನೆಯವರು.

***

ಇಂತಹ ನಾಜೂಕು ನಾರಿಯರ ಈ ಕೀಟ ಪೀಡೆಯ ಬಗ್ಗೆ ಕೇಳಿದ್ದೀರ? ಅನೇಕರು, ತಮ್ಮ ಮನೆಯಲ್ಲಿ, ಬಂಧುಗಳಲ್ಲಿ ಅಥವಾ ಸ್ನೇಹಿತರಲ್ಲಿ ಇಂತಹ ನಾಜೂಕು ಕಣ್ಮಣಿಗಳನ್ನು ನೋಡೇ ಇರುತ್ತಾರೆ. ಸಿನಿಮಾ–ಧಾರಾವಾಹಿಗಳಲ್ಲಂತೂ ಇಂತಹ ಸೀನ್‌ ಒಂದಿಲ್ಲ ಒಂದು ಕಡೆ ಬಂದೇ ಬರುತ್ತದೆ. ಅವರೆಲ್ಲಾ ಅಂಜುಬುರುಕರೇನಲ್ಲ. ಯಾವುದಕ್ಕೂ ಹೆದರದವರೂ ಈ ಪುಟ್ಟ ಕೀಟಗಳಿಗೆ ಭಯಭೀತರಾಗುವುದು ಯಾಕೆ ?

ಇದಕ್ಕೆ ಅರಾಕ್ನೋಫೋಬಿಯಾ (Arachnophobia) ಎನ್ನುತ್ತಾರೆ ಮನೋವೈದ್ಯರು. ಆಡುಮಾತಿನಲ್ಲಿ ‘ಸ್ಪೈಡರ್ ಫೋಬಿಯಾ’ ಅಂದರೂ ಇದು ಕೇವಲ ಜೇಡರ ಹುಳುವಿಗಷ್ಟೇ ಸೀಮಿತವಾದ ಭಯವಲ್ಲ. ಜಿರಳೆ, ಹಲ್ಲಿ, ಹೇನು, ಉಣ್ಣೆಯಂಥ ಯಾವುದೇ ಕೀಟ ಕಂಡರೂ ಕಿಟಾರನೇ ಕಿರುಚುವುದು, ಓಡಿ ಹೋಗುವುದು, ನಡುಗುವುದು ಸೇರಿದಂತೆ ವಿಚಿತ್ರ ವರ್ತನೆ ತೋರುತ್ತಾರೆ. ಈ ಭಯದ ತೀವ್ರತೆಯಲ್ಲಿಯೂ ಹಲವಾರು ಬಗೆಗಳಿವೆ. ಕೆಲವರು ಕೀಟಗಳನ್ನು ಕಂಡಾಗ ಮಾತ್ರ ಈ ವರ್ತನೆ ತೋರಿದರೆ, ಇನ್ನೂ ಕೆಲವರು ಇಂತಹ ಕೀಟಗಳ ಚಿತ್ರ ನೋಡಿದಾಗಲೂ, ಅವುಗಳ ಬಗ್ಗೆ ಯೋಚಿಸಿದಾಗಲೂ ಭಯಭೀತರಾಗುತ್ತಾರೆ. ಅರಾಕ್ನೋಫೋಬಿಯಾ ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು, ಆದರೆ ಹೆಣ್ಮಕ್ಕಳಲ್ಲಿಯೇ ಹೆಚ್ಚು. ಯಾಕೆ ಹೀಗೆ ಎಂದು ಪತ್ತೆ ಮಾಡಲು ಕೆಲ ಸಂಶೋಧನೆಗಳು ಯತ್ನಿಸಿವೆ. ಕೀಟಗಳನ್ನು ಕಂಡಾಗ ಆಂತರಿಕ ಭಯ ಹುಟ್ಟಿಸುವ ಹಾರ್ಮೋನುಗಳು ಮಹಿಳೆಯರಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದೇ ಇದಕ್ಕೆ ಕಾರಣ. ಈ ಭಯದ ಬೇರು ಕೇವಲ ಮಾನಸಿಕವಾಗಿರಬಹುದು, ನಂಬಿಕೆಯಲ್ಲಿರಬಹುದು, ಹಾರ್ಮೋನ್‌ನ ವ್ಯತ್ಯಾಸದಲ್ಲಿರಬಹುದು ಅಥವಾ ಮಿದುಳಿನಾಳದಲ್ಲಿ ತಳ ಊರಿರಬಹುದು. ಅದರ ಮೂಲ ಪತ್ತೆ ಹಚ್ಚಿ, ಭಯವನ್ನು ಗೆಲ್ಲಲು, ಸಣ್ಣ ಪ್ರಯತ್ನ, ಗಟ್ಟಿ ಮನಸು ಬೇಕಷ್ಟೇ.

‘ಇದೂ ಒಂದು ರೋಗವೆ? ಇದೊಳ್ಳೆ ಅಂಜುಬುರುಕರ ಕಥೆಯಾಯ್ತಲ್ಲ...’ ಅಂತ ಮಾತು ತೇಲಿ ಬಿಡಬೇಡಿ. ಇದು ಮನೆಯೊಳಗಿನ ವಾತಾವರಣವನ್ನು ಬಿಗಡಾಯಿಸಬಹುದು. ಮನೆಗೆಲಸಕ್ಕೂ ಅಡ್ಡಿಯಾಗಬಹುದು. ಈ ಭಯ ಕೇವಲ ಭಯ ವಾಗಿರದೇ ಅವಳ ಮನೆ, ಮನಸು, ಜೀವನಗುಣಮಟ್ಟವನ್ನೂ ತಟ್ಟಬಹುದು!

‘ಇದು ಮೇಲ್ನೋಟಕ್ಕೆ ಸಣ್ಣ ಸಂಗತಿಯಾಗಿ ಕಂಡರೂ ಅನುಭವಿಸುವವರಿಗೆ ಭಯಾನಕವಾಗಿರುತ್ತದೆ. ಕೇವಲ ಭಾವನಾತ್ಮಕ ಸಂಗತಿಯೇ ಅಲ್ಲದೆ, ಕೆಲವೊಮ್ಮೆ ದೈಹಿಕ ಹಾವ–ಭಾವಗಳಲ್ಲೂ, ವರ್ತನೆಯಲ್ಲಿಯೂ, ಸಂವೇದನೆಯ ರೂಪದಲ್ಲಿಯೂ ಪ್ರಕಟ ವಾಗಬಹುದು. ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಈ ಪುನರಾವರ್ತಿತ ಭಯದ ಸಂವೇದನೆಗಳು ಹೃದಯ ಬಡಿತವನ್ನು ಹೆಚ್ಚಿಸಲು ಕಾರಣವಾಗುತ್ತವೆ, ಉಸಿರಾಟದ ತೊಂದರೆ, ಬಾಯಿ ಒಣಗುವುದು, ತಲೆತಿರುಗುವುದು, ವಾಕರಿಕೆ, ಬೆವರುವಿಕೆ, ನಡುಕ, ಜಠರದಲ್ಲಿ ಉರಿತ, ಹೊಟ್ಟೆ ಉಬ್ಬುವುದು, ಮತ್ತೆಮತ್ತೆ ಶೌಚಾಲಯಕ್ಕೆ ಹೋಗುವುದು, ಸಮತೋಲನದ ಕೊರತೆ ಸೇರಿ ದೈಹಿಕ ಪ್ರತಿಕ್ರಿಯೆಗಳು ಅವರ ಜೀವನ ಕ್ರಮದ ಮೇಲೆ ಪರಿಣಾಮ ಬೀರಬಹುದು’ ಎನ್ನುತ್ತಾರೆ ಮನಶಾಸ್ತ್ರಜ್ಞರಾದ ಡಾ. ಶಿವದೇವ್ ಎಂ.

ಯಾಕೆ ಹೀಗೆ?

ಭಾರತದಂತಹ ದೇಶಗಳಲ್ಲಿ ಈ ಕೀಟಗಳ ಬಗೆಗಿರುವ ಕೆಲವು ಸಾಂಸ್ಕೃತಿಕ ಅಥವಾ ಧಾರ್ಮಿಕ ನಂಬಿಕೆಗಳು, ಆನುವಂಶಿಕ, ಕೌಟುಂಬಿಕ ಅಂಶಗಳೂ ಈ ಭೀತಿಗೆ ಕಾರಣವಾಗಬಹುದು. ಉದಾಹರಣೆಗೆ ಹಲ್ಲಿ ದೇಹದ ಕೆಲ ಭಾಗಗಳ ಮೇಲೆ ಬಿದ್ದರೆ ಅಶುಭ ಎನ್ನುವ ನಂಬಿಕೆ, ಜೇಡ ಮೈಮೇಲೆ ಹರಿದಾಡಿದರೆ ಅಪಶಕುನ ಎನ್ನುವ ನಂಬಿಕೆಗಳೂ ಅರಾಕ್ನೋಫೋಬಿಯಾಗೆ ಕಾರಣ. ಅಂತೆಯೇ ಪೋಷಕರು ಈ ರೀತಿಯ ಸಮಸ್ಯೆಯನ್ನು ಹೊಂದಿರುವಾಗ ಅಂಥ ಮಕ್ಕಳು ಬಾಲ್ಯದಿಂದಲೇ ಭೀತಿಯನ್ನು ಮೈಗೂಡಿಸಿಕೊಂಡು ಬೆಳೆಯುವ ಸಾಧ್ಯತೆ ಇರುತ್ತದೆ.

ಸಮಸ್ಯೆ ಇದೆ ಅಂತಾದರೆ ಅದಕ್ಕೆ ಪರಿಹಾರವೂ ಇರಲೇಬೇಕಲ್ಲವೆ?‌ ಇದಕ್ಕೂ ಚಿಕಿತ್ಸೆ ಇದೆ ಮನಸು ಮಾಡಿದರೆ ಈ ಭೀತಿಯಿಂದ ಹೊರಬರಬಹುದು. ಸಾಧ್ಯವಾಗದೇ ಇದ್ದಾಗ ತಜ್ಞರ ನೆರವು ಪಡೆಯಬೇಕು ಎನ್ನುತ್ತಾರೆ ಡಾ. ಶಿವದೇವ್.

ಮನೆಯ ಸದಸ್ಯರು ಯಾವುದಕ್ಕೂ ಕೊಂಕು ಆಡದೆ, ಲೇವಡಿ ಮಾಡದಿರಿ. ಆಗ ಇಂಥ ಸಮಸ್ಯೆಗಳಿದ್ದರೆ ಹಿಂಜರಿಕೆಯಿಲ್ಲದೆ ಹಂಚಿಕೊಳ್ಳ ಬಹುದಾದ ಪರಿಸರ ಸೃಷ್ಟಿಸಿದಂತಾಗುತ್ತದೆ. ಮನೆಯ ಸದಸ್ಯರ ಬಳಿ ಇಂಥ ಭೀತಿಯನ್ನು ಹಂಚಿಕೊಂಡಾಗ ಅಥವಾ ಕಂಡು ಬಂದಲ್ಲಿ ಮನೋವೈದ್ಯರು ಅಥವಾ ಸಮಾಲೋಚಕರ ಬಳಿಯಾದರೂ ಚರ್ಚಿಸುವುದು ಒಳಿತು. ಇಷ್ಟಕ್ಕೂ ಮನೆಯ ಮಹಿಳೆಯರ ಮನದಲ್ಲಿ ಸಂತಸ, ಸಂಭ್ರಮಗಳಿರಬೇಕೆ ಹೊರತು ಭಯ ಮತ್ತು ಭೀತಿಗಳಲ್ಲವಲ್ಲ. ಅದೂ ಇಂಥ ಕ್ಷುದ್ರ ಜೀವಿಗಳಿಂದಲಂತೂ ಅಲ್ಲವೇ ಅಲ್ಲ. 

ಸಮಸ್ಯೆಗೆ ಪರಿಹಾರ ಹೀಗಿರಲಿದೆ

  • ಆರಂಭಿಕ ಹಂತದಲ್ಲಿದ್ದರೆ ಈ ಪರಿಸ್ಥಿತಿಯನ್ನು ಎದುರಿಸಲು ನಿಮ್ಮನ್ನು ನೀವೇ ಸಿದ್ಧಪಡಿಸಿಕೊಳ್ಳಿ.

  • ನಿಮಗಿರುವ ಭೀತಿಯ ಮೂಲವನ್ನು ಪತ್ತೆ ಮಾಡಿ, ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. (ಅಂದರೆ ಮನೆಯವರ ಸಹಾಯದಿಂದ ಆ ಜೇಡರ ಹುಳುವಿನ ಹತ್ತಿರಕ್ಕೆ ಹೋಗುವುದು, ಅದನ್ನು ಸಮೀಪದಿಂದ ದಿಟ್ಟಿಸುವುದು, ಅದು ಅಪಾಯ ತರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.)

  • ಆಲೋಚನೆಯನ್ನು ಗುರುತಿಸಿ, ಮರುಮೌಲ್ಯಮಾಪನ ಮಾಡಿಕೊಳ್ಳಿ, ಅದನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ.

  • ಇಂತಹ ಸ್ಥಿತಿಯಿಂದ ತಪ್ಪಿಸಿಕೊಳ್ಳುವ, ನುಣುಚಿಕೊಳ್ಳುವ ಬದಲು ಅದನ್ನು ಎದುರಿಸುವುದನ್ನು ಕಲಿಯಿರಿ.

  • ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವು ಪಡೆಯಬಹುದು. ಔಷಧಿ, ಥೆರಪಿ ಹಾಗೂ ತರಬೇತಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. (ಈ ಥೆರಪಿಯಲ್ಲಿ ಅವರನ್ನು ಭೀತಿಗೆ ಕಾರಣವಾಗುವ ವಾತಾವರಣದಲ್ಲಿ ಬಿಡಲಾಗುತ್ತದೆ ಹಾಗೂ ಆ ವಾತಾವರಣವನ್ನು ಒಪ್ಪಿಕೊಳ್ಳುವಂತೆ ಹಾಗೂ ಎದುರಿಸುವಂತೆ ತರಬೇತಿ ನೀಡಲಾಗುತ್ತದೆ.)

  • ಒಂದು ವೇಳೆ ಈ ಭಯ ನರಮಂಡಲದ ಆಳದಲ್ಲಿ ಬೇರೂರಿದ್ದರೆ ಕೆಲವು ನಿರ್ದಿಷ್ಟ ಚಿಕಿತ್ಸೆ ಹಾಗೂ ಔಷಧಗಳ ಸಹಾಯ ಪಡೆಯಬೇಕಾಗುತ್ತದೆ. ಅದಕ್ಕಾಗಿ ಶಮನಕಾರಿ ಔಷಧಗಳನ್ನು ಸೂಚಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT