ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೆಯದ ಮಗಳಿಗೆ ಸ್ನೇಹಿತನಂತಿರಿ

Last Updated 12 ಜುಲೈ 2020, 19:30 IST
ಅಕ್ಷರ ಗಾತ್ರ

‘ಎಸ್ಸೆಸ್ಸೆಲ್ಸಿಯಲ್ಲಿ ಶೇಕಡ 95ರಷ್ಟು ಅಂಕ ಗಳಿಸಿದ್ದ ಮಗಳು ಶ್ರವಂತಿ ಪ್ರಥಮ ಪಿಯುಸಿಯಲ್ಲಿ ಜಸ್ಟ್ ಪಾಸ್ ಆಗಿದ್ದಾಳೆ. ಮೊದಲೆಲ್ಲಾ ನಾವು ಹೇಳಿದಂತೆ ಕೇಳುತ್ತಿದ್ದ ಅವಳು ಈಗ ಸಂಪೂರ್ಣ ಬದಲಾಗಿದ್ದಾಳೆ. ಮೊಬೈಲ್ ಕೊಡಿಸಿದ ಮೇಲಂತೂ ಕೇಳುವುದೇ ಬೇಡ. ಸದಾ ಮೊಬೈಲ್‌ನಲ್ಲೇ ಮುಳುಗಿರುತ್ತಾಳೆ. ಯಾವಾಗಲೂ ಕೋಣೆ ಬಾಗಿಲು ಹಾಕಿಕೊಂಡು ಯಾರೊಂದಿಗೋ ಮಾತನಾಡುತ್ತಿರುತ್ತಾಳೆ. ಅಲ್ಲದೇ ಲಾಕ್‌ಡೌನ್ ತೆರವುಗೊಳಿಸಿದ ಮೊದಲ ದಿನವೇ ಬೇಡವೆಂದರೂ ಕೇಳದೆ ಹೊರಗೆ ಹೋಗಿದ್ದಳು. ರಾತ್ರಿ 8 ಗಂಟೆ ಹೊತ್ತಿಗೆ ಹುಡುಗನೊಬ್ಬನ ಜೊತೆ ಬೈಕ್‌ನಲ್ಲಿ ಬಂದಿದ್ದಳು. ಅದನ್ನು ಕೇಳಿದ್ದಕ್ಕೆನಿಮಗೆ ನನ್ನ ಮೇಲೆ ನಂಬಿಕೆ ಇಲ್ಲ,ಅವನು ನನ್ನ ಸ್ನೇಹಿತನಷ್ಟೇ. ನೀವು ನನ್ನ ಮೇಲೆ ಅನುಮಾನ ಪಡುತ್ತಿದ್ದೀರಿ ಎಂದೆಲ್ಲಾ ರಂಪ ಮಾಡಿದ್ದಳು. ಅಂದಿನಿಂದ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶ್ರವಂತಿಯ ತಂದೆ ಶಂಕರ್.

ಹೆಣ್ಣುಮಕ್ಕಳು ಹರೆಯಕ್ಕೆ ಕಾಲಿರಿಸಿದಾಗ ತಂದೆ–ತಾಯಿಗಳಿಗೆ ಅವ್ಯಕ್ತ ಆತಂಕ ಮನ‌ಸ್ಸನ್ನು ಆವರಿಸುತ್ತದೆ. ಅದರಲ್ಲೂ, ಮುಚ್ಚಟೆಯಿಂದ ಬೆಳೆಸಿದ ಮಗಳ ಮೇಲೆ ಹಿಡಿ ಪ್ರೀತಿ ಹೆಚ್ಚೇ ತೋರುವ ತಂದೆಗೆ, ಮಗಳು ಎಲ್ಲಿ ದಾರಿ ತಪ್ಪುತ್ತಾಳೋ ಎಂಬ ಭಯ ಸದಾ ಕಾಡುತ್ತಿರುತ್ತದೆ. ಆ ಕಾರಣಕ್ಕೆ ಮಗಳ ಆಗು–ಹೋಗುಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಅಲ್ಲದೇ, ಮಗಳ ಬದಲಾದ ವರ್ತನೆ ಅವರಲ್ಲಿ ಭಯ ಮೂಡಿಸುತ್ತದೆ. ಆ ಕಾರಣಕ್ಕೆ ಮಗಳ ಮೇಲೆ ರೇಗುತ್ತಾರೆ, ಮಗಳಿಗೆ ಬಯ್ಯುತ್ತಾರೆ. ಇದರಿಂದಾಗಿ, ಮಗಳು ತಂದೆಯನ್ನು ಕಂಡರೆ ಆಗದವಳಂತೆ ವರ್ತಿಸಬಹುದು, ತನ್ನ ತಪ್ಪನ್ನು ತಿದ್ದಿಕೊಳ್ಳದೆ ಇರಬಹುದು.ಏಕೆಂದರೆ, ಹೇಳಿದ್ದನ್ನು ಕೇಳುವ,ತಪ್ಪಿದ್ದರೆ ತಿದ್ದಿಕೊಳ್ಳುವ ವಯಸ್ಸು ಮಗಳದ್ದಾಗಿರುವುದಿಲ್ಲ.

ಮನಸ್ಸನ್ನು ಅರಿಯಿರಿ

ಬಾಲ್ಯದಿಂದಲೂ ಪ್ರೀತಿಯಿಂದ ಬೆಳೆಸಿದ ಮಗಳು ಕೈ ತಪ್ಪುತ್ತಿದ್ದಾಳೆ ಎಂದು ತಂದೆಗೆ ಅನಿಸಿದಾಗ ಕೋಪ ಬರುವುದು ಸಹಜ. ಆ ಕೋಪ ಸ್ನೇಹಿತರಂತಿದ್ದ ಅಪ್ಪ–ಮಗಳ ಸಂಬಂಧಕ್ಕೆ ಬೇಲಿಯಾಗಬಾರದು. ‘ಮಗಳಿಗೆ ಹೊಡೆದು, ಬಡಿದು ಮಾಡುವುದಕ್ಕಿಂತ ಅವಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಉತ್ತಮ. ಅವಳೊಂದಿಗೆ ಸಮಾಧಾನದಿಂದಲೇ ಮಾತನಾಡಿ ತಪ್ಪನ್ನು ಅರ್ಥ ಮಾಡಿಸಿ. ಪ್ರೀತಿ–ಪ್ರೇಮ ವಯಸ್ಸಿನ ಆಕರ್ಷಣೆ ಅಷ್ಟೇ ಎಂಬುದನ್ನು ಬಿಡಿಸಿ ಹೇಳಿ’ ಎನ್ನುತ್ತಾರೆ 18 ವರ್ಷ ವಯಸ್ಸಿನ ವತ್ಸಲಾಳ ತಂದೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾಗೇಶ್.

ಭಾವನೆಗಳನ್ನು ಒಪ್ಪಿಕೊಳ್ಳಿ

ಹರೆಯಕ್ಕೆ ಬಂದಾಗ ಹಾರ್ಮೋನು‌ಗಳ ಬದಲಾವಣೆಯಿಂದ ಹೆಣ್ಣುಮಕ್ಕಳ ಮನೋಭಾವ ಬದಲಾಗುವುದು ಸಹಜ. ಹೊಸ ಹೊಸ ಬಯಕೆಗಳು ಹುಟ್ಟುವುದು,ಸ್ವೇಚ್ಛೆಯ ಮನೋಭಾವ ಬೆಳೆಯುವುದು ಸಾಮಾನ್ಯ.ಆದರೆ ಅದನ್ನು ಹತ್ತಿಕ್ಕುವುದು ಕಷ್ಟ. ಹಾಗಾಗಿ ಅವರ ಭಾವನೆಗಳನ್ನು ಒಪ್ಪಿಕೊಳ್ಳಿ. ಸದಾ ಅನುಮಾನದಿಂದ ನೋಡುವುದು,ಕದ್ದು ಮುಚ್ಚಿ ಹಿಂಬಾಲಿಸುವುದು ಮಾಡದಿರಿ. ದಾರಿ ತಪ್ಪುತ್ತಿದ್ದಾಳೆ ಎನ್ನಿಸಿದಾಗ ಕೂರಿಸಿಕೊಂಡು ಬುದ್ಧಿ ಹೇಳಿ ಸರಿದಾರಿಗೆ ತನ್ನಿ ಎನ್ನುತ್ತಾರೆ ನಾಗೇಶ್.

ಹೊಡೆಯುವುದು ಸಲ್ಲದು

‘ಮಗಳ ವರ್ತನೆಯಲ್ಲಿ ಬದಲಾವಣೆ ಕಂಡ ತಕ್ಷಣ ಹೊಡೆಯವುದು,ಗದರುವುದು ಫೋನ್ ಕಿತ್ತುಕೊಳ್ಳುವುದು ಮಾಡಬೇಡಿ. ಇಂದು ನೀನು ಮಾಡುವ ತಪ್ಪು ನಿನ್ನ ಭವಿಷ್ಯವನ್ನು ಹಾಳು ಮಾಡುತ್ತದೆ ಎಂಬುದನ್ನು ಉದಾಹರಣೆ ಸಹಿತ ಬಿಡಿಸಿ ಹೇಳಿ.ಹೊಡೆಯುವುದು,ಬಡಿಯುವುದು,ಕೋಣೆಯಲ್ಲಿ ಕೂಡಿ ಹಾಕುವುದು ಮಾಡಬೇಡಿ.ಇದರಿಂದ ಆಕೆಯ ಮನಸ್ಸು ವಿಚಲಿತಗೊಳ್ಳುತ್ತದೆ. ಅಲ್ಲದೇ ತನ್ನನ್ನು ಅತಿಯಾಗಿ ಪ್ರೀತಿಸಿದ ತಂದೆಯೇ ಅನುಮಾನಿಸುತ್ತಿದ್ದಾರೆ, ನಿಂದಿಸುತ್ತಿದ್ದಾರೆ ಎಂದುಕೊಂಡು ಇನ್ನಷ್ಟು ತಪ್ಪು ಮಾಡುತ್ತಾಳೆ. ಆದಷ್ಟು ಸಮಾಧಾನದಿಂದ ಮಗಳೊಂದಿಗೆ ವರ್ತಿಸಿ’ ಎನ್ನುವುದು ಹೆಣ್ಣುಮಗಳೊಬ್ಬಳ ತಂದೆ ರತ್ನಾಕರ್‌ ಅವರ ಮಾತು.

(ಬರಹದಲ್ಲಿ ಪ್ರಸ್ತಾಪವಾದ ಎಲ್ಲ ಹೆಸರುಗಳನ್ನೂ ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT