ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ | ಏರುತಿಹುದು ದಾಂಪತ್ಯ ಕಲಹ!

Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಪಕ್ಕದ ಅಪಾರ್ಟ್‌ಮೆಂಟ್‌ನ ದಂಪತಿಯ ಅನ್ಯೋನ್ಯತೆ ಅಲ್ಲಿಯ ಇತರ ನಿವಾಸಿಗಳಿಗೆಲ್ಲ ಪರಿಚಿತವೇ. ವಾರಾಂತ್ಯ ಬಂತೆಂದರೆ ಪರಸ್ಪರ ತೋಳನ್ನು ಬೆಸೆದುಕೊಂಡು ಎದುರಿನ ಪಾರ್ಕ್‌ನಲ್ಲಿ ವಾಕ್‌ ಮಾಡುವುದು, ಬೈಕ್‌ನಲ್ಲಿ ಜೋಡಿಹಕ್ಕಿಗಳ ತರಹ ಸುತ್ತಲು ಹೋಗುವುದು.. ‘ಇದ್ದರೆ ಹೀಗಿರಬೇಕು..’ ಎಂದು ಅಕ್ಕಪಕ್ಕದವರು ಮೆಚ್ಚುಗೆ ವ್ಯಕ್ತಪಡಿಸುವವರೇ. ಆದರೆ ಈಗೊಂದು 8–10 ದಿನಗಳಿಂದ ಆ ಅನುರಾಗದ ಜಾಗದಲ್ಲಿ ಜಗಳ, ಕಿರುಚಾಟ, ಕೆಲವೊಮ್ಮೆ ಹೆಣ್ಣುಮಗಳ ಅಳು ಸಾಮಾನ್ಯವಾಗಿಬಿಟ್ಟಿದೆ. ಇವೆಲ್ಲ ‘ಸ್ವಯಂ ದಿಗ್ಬಂಧನ’ದ ಫಲ.

ವಾರಗಳಿಂದ ಮನೆಯೊಳಗೇ ಇದ್ದು ಇದ್ದು ಅದು ನಮ್ಮ ಬದುಕಿನ ಮೇಲೆ, ಸಂಬಂಧದ ಮೇಲೆ ನಿಧಾನವಾಗಿ ಕರಿನೆರಳನ್ನು ಬೀಳಿಸಲಾರಂಭಿಸಿದೆ. ಗಂಡ– ಹೆಂಡತಿ, ಮಕ್ಕಳು ಒಟ್ಟಿಗೇ ಇರುವಂತಹ ಸಮಯ ಒಮ್ಮೆಲೇ ಜಾಸ್ತಿಯಾಗಿದೆ. ಆರಂಭದ ಒಂದೆರಡು ದಿನಗಳನ್ನು ‘ಮನೆಯೊಳಗೇ ಇರುವುದು ಖುಷಿ’ ಎನ್ನುತ್ತ ನಿಭಾಯಿಸಿದರು. ಆದರೆ ಏರಿಳಿಯುವ ಭಾವನೆಗಳ ತಾಕಲಾಟ, ಮುಂದೇನಾಗುವುದೋ ಎಂಬ ಭಯ, ಅನಿಶ್ಚಿತ ಭವಿಷ್ಯದ ಚಿಂತೆಯು ಸಿಟ್ಟು, ಪರಸ್ಪರ ನಿಂದನೆ, ವಾಗ್ವಾದ, ಜಗಳ, ಪತ್ನಿಯ ಮೇಲೆ ದೌರ್ಜನ್ಯಕ್ಕೆ ಎಡೆಮಾಡಿಕೊಟ್ಟಿದೆ.

ಪ್ರೇಮದ ಬದಲು ಯುದ್ಧ

ಒಂದೇ ಮನೆಯೊಳಗೆ ದೀರ್ಘಕಾಲ ಬಂಧಿಯಂತೆ ಇದ್ದರೆ ಯಾರಿಗೆ ತಾನೇ ಒತ್ತಡ ಜಾಸ್ತಿಯಾಗುವುದಿಲ್ಲ ಹೇಳಿ! ಅದರಲ್ಲೂ ದಂಪತಿಯ ಮಧ್ಯೆ ಎಷ್ಟೇ ಅನ್ಯೋನ್ಯತೆ ಇದ್ದರೂ ಕೂಡ ಬಹಳಷ್ಟು ಸಮಯ ಬಾಹ್ಯ ಸಂಪರ್ಕವಿಲ್ಲದೇ ಒಂದೇ ಕಡೆ ಒಟ್ಟಿಗೇ ಇದ್ದಾಗ, ಒತ್ತಡ, ಆತಂಕ ಒಮ್ಮೆಲೇ ಸ್ಫೋಟವಾಗಿ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಪ್ರೇಮದ ಬದಲು ಯುದ್ಧವೆಂಬುದು ಶುರುವಾಗುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆ, ಚಿಂತನೆಯಲ್ಲಿ ಇರುವ ಭಿನ್ನತೆ.

‘ಪ್ರತಿಯೊಬ್ಬರೂ ತಮ್ಮದೇ ಆದ ಸ್ವಾತಂತ್ರ್ಯ ಬೇಡುವವರು. ಹಾಗೆಯೇ ತಮಗೆ ಬೇಕಾದಂತೆ ಇರುವ ಮನೋಭಾವ ರೂಢಿಸಿಕೊಂಡವರೇ ಹೆಚ್ಚು. ನಗರಗಳಲ್ಲಿ ಇಬ್ಬರೂ ಉದ್ಯೋಗ ಮಾಡುವವರಾದರೆ ಅಥವಾ ಪತಿಯೊಬ್ಬನೇ ಹೊರಗೆ ದುಡಿಯುವವನಾದರೆ ವಾರದಲ್ಲಿ 5–6 ದಿನಗಳ ಕಾಲ ಸಂಜೆಯಿಂದ ಬೆಳಗಿನವರೆಗೆ ಮಾತ್ರ ಮುಖ ನೋಡುವ ಅವಕಾಶ ಇರುತ್ತದೆ. ಸಿಗುವ ರಜಾ ದಿನದಂದು ಷಾಪಿಂಗ್‌, ಸುತ್ತಾಟ ಎಂದು ಕಾಲ ಕಳೆಯುವವರೇ ಅಧಿಕ. ಹೀಗಾಗಿ ಇನ್ನೊಬ್ಬರಲ್ಲಿರುವ ದೌರ್ಬಲ್ಯಗಳು ಹೆಚ್ಚು ಗೋಚರಿಸಲು ಅವಕಾಶವೇ ಇರುವುದಿಲ್ಲ. ಗೊತ್ತಿದ್ದರೂ ವಾರಾಂತ್ಯದಲ್ಲಿ ಹೆಚ್ಚು ಗಣನೆಗೂ ಬರುವುದಿಲ್ಲ’ ಎನ್ನುವ ಮನಃಶಾಸ್ತ್ರಜ್ಞೆ ಡಾ. ಎಸ್‌.ಪ್ರಮೀಳಾ, ‘ಆದರೆ ಈಗ ಕೊರೊನಾ ಸೋಂಕು ತಂದ ಆತಂಕ ಸಹಜವಾಗಿಯೇ ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ತರಿಸುತ್ತದೆ. ಇದು ಪರಸ್ಪರ ಮಾತಿನ ಯುದ್ಧಕ್ಕೆ ನಾಂದಿ ಹಾಡುತ್ತದೆ’ ಎಂದು ವಿಶ್ಲೇಷಿಸುತ್ತಾರೆ.

ಅತಿರೇಕದ ವರ್ತನೆ

ಆದರೆ ಅನಿಶ್ಚಿತ ಪರಿಸ್ಥಿತಿ ಅಥವಾ ಯಾವುದೇ ಅಪಾಯ ಸಂಭವಿಸಿದಾಗ ಮನುಷ್ಯ ಅತಿರೇಕವಾಗಿ ವರ್ತಿಸುವುದು ಸಾಮಾನ್ಯ. ಈ ಒತ್ತಡವನ್ನು ಅರ್ಥ ಮಾಡಿಕೊಳ್ಳುವುದು ಅನಿವಾರ್ಯ. ಈ ‘ಸ್ವಯಂ ದಿಗ್ಬಂಧನ’ದ ಸಮಯದಲ್ಲಿ ದಂಪತಿಯ ಮಧ್ಯೆ ಅಥವಾ ಮಕ್ಕಳ ಜೊತೆಗಿನ ವಾಗ್ವಾದವನ್ನು ಕಡಿಮೆ ಮಾಡಿ ಸಂಬಂಧ ಸುಧಾರಿಸುವತ್ತ ಗಮನ ನೀಡುವುದು ಒಳಿತು.

ವಿದೇಶಗಳಲ್ಲಂತೂ ವಿಚ್ಛೇದನದ ಪ್ರಕರಣಗಳು ಜಾಸ್ತಿಯಾಗಿವೆಯಂತೆ. ನಮ್ಮಲ್ಲಿ ಇಂತಹ ಅತಿರೇಕದ ಪ್ರಕರಣಗಳು ಸದ್ಯಕ್ಕೆ ವರದಿಯಾಗದಿದ್ದರೂ (ಕೋರ್ಟ್‌ ಕಾರ್ಯಕಲಾಪ ಕೂಡ ಬಂದ್‌ ಆಗಿದೆಯಲ್ಲ!) ಕೆಲವು ದಂಪತಿಯ ಮಧ್ಯೆ ಸಂಬಂಧ ಹಳಸಲಿಕ್ಕೆ, ಪತ್ನಿಯ ಮೇಲೆ ದೌರ್ಜನ್ಯ ಎಸಗುವುದಕ್ಕೆ ಈ ಒತ್ತಡ ಕಾರಣವಾಗಿರಬಹುದು. ಇಂತಹವುಗಳನ್ನು ತಪ್ಪಿಸಲು ಇಲ್ಲಿವೆ ಕೆಲವು ಸಲಹೆಗಳು.

* ದೀರ್ಘಾವಧಿ ಇಂತಹ ದಿಗ್ಬಂಧನ ಎದುರಿಸುವ ಸಂದರ್ಭದಲ್ಲಿ ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಹಾಗೂ ನಿಮ್ಮ ಪತಿಗೆ ಯಾವಾಗ ಏಕಾಂತ ಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಅವಕಾಶ ಕೊಡಿ. ‘ನಾನು ಕಚೇರಿಯ ಕಾನ್ಫರೆನ್ಸ್‌ ಕರೆಗಳನ್ನು ಮಾಡುವಾಗಲೇ ನನ್ನ ಪತ್ನಿ ಮನೆಗೆಲಸ ಹೇಳಲು ಶುರು ಮಾಡುತ್ತಾಳೆ. ಸಿಟ್ಟು ಬರುವುದಿಲ್ಲವೇ’ ಎಂದು ಪಕ್ಕದ ಅಪಾರ್ಟ್‌ಮೆಂಟ್‌ ಯುವಕ ತನ್ನ ಅಳಲು ತೋಡಿಕೊಳ್ಳುವುದರಲ್ಲಿ ಸತ್ಯವೂ ಇಲ್ಲದಿಲ್ಲ. ಹಾಗೆಯೇ ಮನೆಯಾಕೆ ಕಾಫಿ ಹೀರುತ್ತ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದರೆ ಅದಕ್ಕೆ ಅವಕಾಶ ಕೊಡಿ. ಪತಿ ಕಚೇರಿಯಿಂದ ಬರುವ ಕರೆಗಳಲ್ಲಿ ಬ್ಯುಸಿಯಾದರೆ ತೊಂದರೆ ಮಾಡಲು ಹೋಗಬೇಡಿ. ಪರಸ್ಪರ ಕೊಟ್ಟು– ತೆಗೆದುಕೊಳ್ಳುವುದಕ್ಕೆ ಅವಕಾಶವಿರಲಿ.

* ಮಾತನಾಡಿ ಬಗೆಹರಿಸಿಕೊಳ್ಳಿ. ಮನೆಯಲ್ಲಿ ಒಟ್ಟಿಗೇ ಇರುವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಅಂತಹ ಸಂದರ್ಭದಲ್ಲಿ ನಿಮಗೆ ಅಥವಾ ನಿಮ್ಮ ಸಂಗಾತಿಗೆ ಒತ್ತಡ ಇರಬಹುದು, ಅದಕ್ಕೇ ಕಿರಿಕಿರಿಯಾಗುತ್ತಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ. ಸಮಾಧಾನದಿಂದ ಮಾತನಾಡಿ. ಸಂಗಾತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ.

* ಬಾಹ್ಯ ಸಂಪರ್ಕವಿಲ್ಲದೇ ಮನೆಯೊಳಗೇ 3–4 ವಾರಗಳ ಕಾಲ ಇರುವುದೆಂದರೆ ಸಹಜವಾಗಿಯೇ ಕಿರಿಕಿರಿ ಉಂಟಾಗಿ ಅದು ಕೋಪಕ್ಕೆ ತಿರುಗಬಹುದು. ಆಗ ಅದನ್ನು ಸಂಗಾತಿಯ ಮೇಲೆ ತೋರಿಸಲು ಹೋಗಬೇಡಿ. ಬದಲಾಗಿ ಒಂದು ಕಡೆ ಮೌನವಾಗಿ ಕುಳಿತುಕೊಂಡು ನಿಮ್ಮನ್ನೇ ನೀವು ಅರ್ಥ ಮಾಡಿಕೊಳ್ಳಲು ಯತ್ನಿಸಿ.

* ಸಂಗಾತಿಗೆ ಅಥವಾ ಮಕ್ಕಳಿಗೆ ಇಷ್ಟವಾದ ಅಡುಗೆ ಮಾಡಿ. ಇಬ್ಬರೇ ಇದ್ದರೆ ಹಿಂದೆ ಕಳೆದ ರೋಮ್ಯಾಂಟಿಕ್‌ ದಿನಗಳನ್ನು ನೆನಪಿಸಿಕೊಳ್ಳಿ. ಇಂತಹ ಸಂದರ್ಭ ದಾಂಪತ್ಯದಲ್ಲಿ ಹೊಸತನ ತರಬಲ್ಲದು. ಸ್ವಯಂ ದಿಗ್ಬಂಧನ ಎಂದರೆ 24 ಗಂಟೆಗಳ ಕಾಲವೂ ಒಟ್ಟಿಗೇ ಇರಬೇಕೆಂದಿಲ್ಲ. ಓದುವುದು, ಬರವಣಿಗೆ, ಬಾಲ್ಕನಿಯಲ್ಲಿ ಗಾರ್ಡನಿಂಗ್‌, ಅಡುಗೆ, ಪೇಂಟಿಂಗ್‌.. ಎಂದು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.

* ಸಂಗಾತಿಯ ಆಯ್ಕೆಗೆ ಆದ್ಯತೆ ನೀಡಿ. ಟಿವಿ ನೋಡುವಾಗ ಅಥವಾ ಯಾವುದೇ ಒಳಾಂಗಣ ಆಟ ಆಡುವಾಗ ಸಂಗಾತಿಯ ಆಯ್ಕೆಗೂ ವಿಶೇಷ ಗಮನ ನೀಡಿ.

* ಇಡೀ ದಿನ ಒಟ್ಟಿಗೆ ಕಳೆಯುವಾಗ, ಅದು ಅಡುಗೆಯಿರಲಿ, ಇಬ್ಬರೂ ಜೊತೆಗೂಡಿ ಅಥವಾ ಏಕಾಂತದಲ್ಲಿ ಸಮಯ ಕಳೆಯುವುದಿರಲಿ.. ಎಲ್ಲವನ್ನೂ ಜಾಣ್ಮೆಯಿಂದ ನಿಭಾಯಿಸಿ.

* ಕೆಲವೊಮ್ಮೆ ಬೇಸರವೇ ವಾಗ್ವಾದಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ಏರುದನಿಯಲ್ಲಿ ಮಾತನಾಡುವುದು, ಪರಸ್ಪರ ದೋಷಾರೋಪಣೆ ಮಾಡುವುದನ್ನು ಬಿಟ್ಟು ಸಮಸ್ಯೆ ಎಲ್ಲಿದೆ ಎಂದು ಗುರುತಿಸಿಕೊಂಡು ಪರಿಹಾರದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ.

* ಸಂಗಾತಿಯ ಅಭಿಪ್ರಾಯವನ್ನು ಆಲಿಸಿ. ಅಗತ್ಯವಿದ್ದರೆ ಚರ್ಚಿಸಿ.

* ಸದ್ಯಕ್ಕಂತೂ ಕೆಲವು ನಕಾರಾತ್ಮಕ ಸುದ್ದಿಗಳು, ಅನಿಶ್ಚಿತ ಪರಿಸ್ಥಿತಿ ಕುರಿತ ಆಲೋಚನೆಗಳು ವ್ಯಕ್ತಿಯನ್ನು ಕುಗ್ಗಿಸಿಬಿಡುತ್ತವೆ. ಅಂತಹ ಸಮಯದಲ್ಲಿ ಸಣ್ಣಪುಟ್ಟ ಸಮಾಧಾನದ ಮಾತು, ನಡವಳಿಕೆ ಸಮಾಧಾನ ಮೂಡಿಸುತ್ತದೆ. ಹಿಂದೆ ಕಳೆದ ಮಧುರ ಕ್ಷಣಗಳು, ಕಾಯಿಲೆಯಾದಾಗ ಮಾಡಿದ ಆರೈಕೆ ಮೊದಲಾದವುಗಳನ್ನು ನೆನಪಿಸಿ. ಇದು ಅತ್ಯಂತ ಶಮನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT