ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯ ಶಾಲೆ... ಶಾಲೆಯ ಅಜ್ಜಿ...

Published 21 ಅಕ್ಟೋಬರ್ 2023, 5:41 IST
Last Updated 21 ಅಕ್ಟೋಬರ್ 2023, 5:41 IST
ಅಕ್ಷರ ಗಾತ್ರ

ಆ ಶಾಲೆಯ ಮಕ್ಕಳ ಸೌಭಾಗ್ಯವೋ ಏನೊ? ಮಧ್ಯಾಹ್ನ ಊಟದ ಗಂಟೆ ಹೊಡೆಯುತ್ತಿದ್ದಂತೆಯೇ ನೂರಾರು ಮಕ್ಕಳು ಶಾಲೆಯ ಮೈದಾನದಲ್ಲಿ ಅಜ್ಜಿಯ ಸುತ್ತುವರಿದು ಕೂಡುತ್ತಾರೆ. ಹಲವರು ಅಜ್ಜಿಯ ಕೈ ತುತ್ತಿಗಾಗಿ ಕಾಯುತ್ತಾರೆ. ಕಥೆ ಹೇಳುತ್ತ ಅಜ್ಜಿ ಊಟ ಮಾಡಿಸುವ ಪ್ರತಿ ತುತ್ತು ಮಕ್ಕಳ ಹೊಟ್ಟೆಗೆ ಹಾಗೂ ಮನಸ್ಸಿಗೆ ಹಿತ ಕೊಡುತ್ತದೆ.

ಅಜ್ಜಿ ಮಕ್ಕಳಿಗೆ ಊಟ ಮಾಡಿಸಲು ಶುರುಮಾಡಿ ಎರಡು ದಶಕಗಳೇ ಕಳೆದಿವೆ. ಇದು ಕೊಪ್ಪಳದಿಂದ 10 ಕಿ.ಮೀ. ದೂರದಲ್ಲಿರುವ ಕುಣಿಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಡುಬರುವ ಸಾಮಾನ್ಯ ಚಿತ್ರಣ. ಮಕ್ಕಳ ಪ್ರೀತಿಯ ಅಜ್ಜಿಯ ಹೆಸರು ಹುಚ್ಚಮ್ಮ ಚೌದ್ರಿ.

ಮೂಲತಃ ಕೊಪ್ಪಳ ತಾಲ್ಲೂಕಿನ ಹಂದ್ರಾಳ ಗ್ರಾಮದ ಹುಚ್ಚಮ್ಮ ಅವರನ್ನು ಕುಣಿಕೇರಿ ಗ್ರಾಮದ ಬಸಪ್ಪ ಚೌದ್ರಿ ಜೊತೆ ಮೂರು ವರ್ಷದವರಿದ್ದಾಗಲೇ ಮದುವೆ ಮಾಡಲಾಗಿತ್ತು. ಹತ್ತಾರು ವರ್ಷಗಳು ಕಳೆದರೂ ಈ ದಂಪತಿಗೆ ಮಕ್ಕಳಾಗಲಿಲ್ಲ. ಹುಚ್ಚಮ್ಮ 25 ವರ್ಷದವರಿದ್ದಾಗ ಪತಿ ಬಸಪ್ಪ ತೀರಿಕೊಂಡರು. ಬದುಕು ಒಂಟಿಯಾಯಿತು.

ಹುಚ್ಚಮ್ಮ ತಮ್ಮ ಬಳಿ ಇದ್ದ ಎರಡು ಎಕರೆ ಜಮೀನು ನೆಚ್ಚಿಕೊಂಡೇ ಬದುಕು ಸಾಗಿಸುತ್ತಿದ್ದರು. ಬೆಳಿಗ್ಗೆಯಿಂದ ಸಂಜೆ ತನಕ ಜಮೀನಿನಲ್ಲಿ ಕೆಲಸ, ಅಲ್ಲಿ ಗಳಿಸಿದ ಆದಾಯವೇ ಬದುಕಿಗೆ ಆಸರೆಯಾಗಿತ್ತು. ಆ ಭೂಮಿಯನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಬಹುದಿತ್ತು. ಅದನ್ನು ಖರೀದಿಸಿ ಕಾರ್ಖಾನೆಗೆ ಭೂಮಿ ನೀಡಲು ರಿಯಲ್‌ ಎಸ್ಟೇಟ್‌ ಎಜೆಂಟರು ತುದಿಗಾಲಿನಲ್ಲಿ ಕಾಯುತ್ತಿದ್ದರು. ಆದರೆ, ಹುಚ್ಚಮ್ಮ ಯಾರಿಗೂ ಮಾರಲಿಲ್ಲ.

ದೂರದ ಊರಿಗೆ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹುಚ್ಚಮ್ಮ ಚೌದ್ರಿ ಅವರ ಊರಿನ ಬಹಳಷ್ಟು ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಇದನ್ನು ಮನಗಂಡು ತಮ್ಮ ಎರಡು ಎಕರೆ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಿದರು. ಸರ್ಕಾರ ಇದೇ ಜಮೀನಿನಲ್ಲಿ ಸ್ವಂತ ಕಟ್ಟಡ ನಿರ್ಮಿಸಿತು. 1956ರಲ್ಲಿ ಕುಣಿಕೇರಿ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಶಾಲೆ ಹಳೆಯದಾಗಿತ್ತು. ಜಾಗವೂ ಇಕ್ಕಟ್ಟು. ಹೊಸ ಶಾಲೆ ಕಟ್ಟಲು ಯಾರೂ ಭೂಮಿ ನೀಡಲು ಮುಂದೆ ಬಾರದಿದ್ದಾಗ ಹುಚ್ಚಮ್ಮ ಧಾರಾಳ ಮನಸ್ಸಿನಿಂದ ಭೂಮಿ ಕೊಟ್ಟರು. 

ಕುಣಿಕೇರಿ ಗ್ರಾಮದಲ್ಲಿ ನೀರಾವರಿಗೆ ಅನುಕೂಲಕರವಾಗಿರುವ ಫಲವತ್ತ ಜಮೀನು ಸಾಕಷ್ಟಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಭೂಮಿ ಖರೀದಿಸಲು ಸರ್ಕಾರ ಸಿದ್ಧವಿರಲಿಲ್ಲ. ಹುಚ್ಚಮ್ಮ ನೀಡಿದ ಭೂಮಿಯಿಂದಾಗಿ ಸರ್ಕಾರಿ ಶಾಲೆಗೆ ಸ್ವಂತ ಕಟ್ಟಡ ಲಭಿಸಿತು. ಅನಕ್ಷರಸ್ಥೆ ಮತ್ತು ವಿಧವೆಯಾಗಿದ್ದ ಹುಚ್ಚಮ್ಮ 2002ರಲ್ಲಿ ಮೊದಲು ಒಂದು ಎಕರೆ ಭೂಮಿ ದಾನ ನೀಡಿದರು. ಮಕ್ಕಳ ಆಟಕ್ಕೆ  ಮೈದಾನದ ಕೊರತೆ ಕಂಡಿದ್ದರಿಂದ ಎರಡು ವರ್ಷಗಳ ಬಳಿಕ ಇನ್ನೊಂದು ಎಕರೆಯನ್ನು ಪ್ರೀತಿಯಿಂದಲೇ ನೀಡಿದರು. 

ಹುಚ್ಚಮ್ಮ ಅವರಿಗೆ ಈಗ 75 ವರ್ಷ ವಯಸ್ಸು. ತಮ್ಮ 65ನೇ ವರ್ಷದ ತನಕ ಮಾಸಿಕ ಗರಿಷ್ಠ ₹3,000 ಗೌರವ ಧನದಲ್ಲಿ ಅದೇ ಶಾಲೆಯಲ್ಲಿ ಅಡುಗೆ ತಯಾರಕರಾಗಿ ಕೆಲಸ ಮಾಡಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಕೆಲಸದಿಂದ ‘ಬಿಡುಗಡೆ’ ನೀಡಲಾಯಿತು. ಅಜ್ಜಿಯ ನೆರವಿಗೆ ಇರುವ ಸಾಕು ಮೊಮ್ಮಗಳು ದೀಪಾ ಅದೇ ಶಾಲೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಈಗ ಅಜ್ಜಿ ಬೇರೆಯವರ ಹೊಲದಲ್ಲಿ ಕೃಷಿ ಕೆಲಸದ ಜೊತೆಗೆ ಮೊಮ್ಮಗಳಿಗೆ ಅಡುಗೆ ಮಾಡಲು ನೆರವಾಗುತ್ತಿದ್ದಾಳೆ. ಶಾಲೆ ಜೊತೆ ಅವಿನಾಭಾವ ಸಂಬಂಧ ಇರುವ ಕಾರಣ ಅಜ್ಜಿ ರಜೆ ಇದ್ದರೂ ಶಾಲೆಯಲ್ಲಿಯೇ ಬಹುತೇಕ ಸಮಯ ಕಳೆಯುತ್ತಾರೆ.  

ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ದಾನವಾಗಿ ನೀಡಿದ ಬಗ್ಗೆ ‘ನಮ್ಮ ದುರದೃಷ್ಟಕ್ಕೆ ಮಕ್ಕಳಾಗಲಿಲ್ಲ. ಮೊಮ್ಮಕ್ಕಳು ನನ್ನನ್ನು ಅಜ್ಜಿ ಎಂದು ಕರೆಯಬೇಕು ಎನ್ನುವ ಆಸೆಯಿತ್ತು. ಅದು ಈಡೇರಲಿಲ್ಲ; ಅದಕ್ಕಿಂತಲೂ ಹೆಚ್ಚಿನ ಸಂಭ್ರಮ ಬದುಕಿಗೆ ಸಿಕ್ಕಿದೆ. ಶಾಲೆಗೆ ಭೂಮಿದಾನ ಕೊಟ್ಟಿದ್ದರಿಂದ ನೂರಾರು ಮಕ್ಕಳು ನಿತ್ಯ ಅಜ್ಜಿ ಎಂದು ಪ್ರೀತಿಯಿಂದ ಕರೆಯುತ್ತಾರೆ. ಊಟ ಮಾಡಿಸು ಎಂದು ಕೇಳುತ್ತಾರೆ. ಬದುಕಿನ ಕಥೆ ಹೇಳುತ್ತ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವಾಗ ಸಿಗುವ ಸುಖ, ನೆಮ್ಮದಿ ಮತ್ತು ಆತ್ಮತೃಪ್ತಿ ಬೇರೆ ಯಾವುದರಿಂದಲೂ ಸಿಕ್ಕಿಲ್ಲ. ನನಗೆ ಈಗ ನೂರಾರು ಜನ ಮೊಮ್ಮಕ್ಕಳು’ ಎಂದು ಹೇಳಿದ ಮಾತು ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಂತಿತ್ತು.

‘ನನಗೀಗ ಬೇಕಾಗಿರುವುದು ಸಾಯುವ ತನಕ ಎರಡು ಊಟ, ಒಂದು ಚಾದರ ಮಾತ್ರ. ನನ್ನ ಬದುಕಿನ ಉಳಿದ ಎಲ್ಲ ಆಸೆಗಳನ್ನು ಶಾಲೆಯ ಮಕ್ಕಳು ಈಡೇರಿಸಿದ್ದಾರೆ’ ಎಂದಾಗ ಅಜ್ಜಿಯ ಮೊಗದಲ್ಲಿ ಸಂಭ್ರಮ ಕಾಣುತ್ತಿತ್ತು.

ಭೂಮಿ ದಾನ ನೀಡಿದ ಶಾಲೆಯಲ್ಲಿ ಊಟ ಮಾಡುತ್ತಿರುವ ಹುಚ್ಚಮ್ಮ ಚೌದ್ರಿ 
ಭೂಮಿ ದಾನ ನೀಡಿದ ಶಾಲೆಯಲ್ಲಿ ಊಟ ಮಾಡುತ್ತಿರುವ ಹುಚ್ಚಮ್ಮ ಚೌದ್ರಿ 
ಭೂಮಿ ದಾನ ನೀಡಿದ ಶಾಲೆಯಲ್ಲಿ ಮಕ್ಕಳಿಗೆ ಊಟ ಮಾಡಿಸುತ್ತಿರುವ ಹುಚ್ಚಮ್ಮ ಚೌದ್ರಿ  
ಭೂಮಿ ದಾನ ನೀಡಿದ ಶಾಲೆಯಲ್ಲಿ ಮಕ್ಕಳಿಗೆ ಊಟ ಮಾಡಿಸುತ್ತಿರುವ ಹುಚ್ಚಮ್ಮ ಚೌದ್ರಿ  
ಅಜ್ಜಿಯ ಹೃದಯ ವೈಶಾಲ್ಯತೆಗೆ ಲಭಿಸಿದ ಪ್ರಶಸ್ತಿ ಸನ್ಮಾನಗಳು
ಅಜ್ಜಿಯ ಹೃದಯ ವೈಶಾಲ್ಯತೆಗೆ ಲಭಿಸಿದ ಪ್ರಶಸ್ತಿ ಸನ್ಮಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT