ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಬುತ್ತಿಯಲಿ ಬರಿದಲ್ಲ ಈ ತವರು

Last Updated 9 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಶ್ರಾವಣವೆಂದರೆ ಬರಿ ಮಾಸವಲ್ಲ, ಅದೊಂದು ಋತುವಿಲಾಸ, ಸೋಜಿಗ, ಸೊಬಗು, ಸೌಂದರ್ಯದ ಖನಿ ಎಂದರು ಬೇಂದ್ರೆ. ಕವಿಮನಸಿನ ಹೆಣ್ಣುಮಕ್ಕಳಿಗೂ ಶ್ರಾವಣವೆಂದರೆ ಅಷ್ಟೇ ಸಂಭ್ರಮ; ಶ್ರಾವಣವೆಂದರೆ ಮನಸು ಮಲ್ಲಿಗೆ, ಕನಸು ಕೆಂಗುಲಾಬಿ. ಶ್ರಾವಣದಲ್ಲಿ ಸಾಲುಗಟ್ಟುವ ತವರಿನ ನೆನಪುಗಳ ಎಷ್ಟು ಹಾಡಿ–ಹೊಗಳಿದರೂ ಕಡಿಮೆಯೇ.

‘ತವರು’ ಎನ್ನುವ ಪದವೇ ಅಂಥದ್ದು. ಅದೆಷ್ಟು ಅಪ್ಯಾಯಮಾನ, ಅದೆಂತಹ ಸೆಳೆತ, ಅದೆಷ್ಟು ಸೊಗಸು! ಕೇಳಿದೊಡನೆ ಮೈ–ಮನವನ್ನು ಆವರಿಸಿಕೊಳ್ಳುವ ಮಾಂತ್ರಿಕ ಶಕ್ತಿಯಿದೆ ಅದರಲ್ಲಿ. ಮನದಲ್ಲಿ ಖುಷಿ ತುಂಬಿ, ಕಣ್ಣಲ್ಲಿ ಹೊಸದೊಂದು ಮಿಂಚು ಹರಿಸಿ, ಎದೆಯಲ್ಲಿ ನೆನಪಿನ ಬುಗ್ಗೆಗಳನ್ನೆಬ್ಬಿಸುವ ಹಿತವಾದ, ತಂಪಾದ ಹೆಸರದು.

ತವರು ಎನ್ನುವುದೊಂದು ಊರೇ, ಮನೆಯೇ, ನಂಬಿಕೆಯೇ, ಅನುಬಂಧವೇ... ಬಹುಶಃ ಇದೆಲ್ಲ ಸೇರಿಯೇ ತವರೆನ್ನುವ ಪದ ಹುಟ್ಟಿಕೊಂಡಿರಬಹುದು.ಇದನ್ನೂ ಮೀರಿದ ಪ್ರೇಮದ, ಅಕ್ಕರೆಯ, ಮಮತೆಯ ಸೌಧವದು.ಹುಟ್ಟಿದೂರು, ಓಡಾಡಿದ ನೆಲ, ಆಡಿ ಬೆಳೆದ ಬಳಗ, ತುತ್ತಿಟ್ಟ ಅವ್ವ, ಶಿಸ್ತು ಕಲಿಸಿದ ಅಪ್ಪ, ರಂಪಕ್ಕೆ ಜತೆಯಾದ ಅಕ್ಕ, ಅಕ್ಕರೆಯ ತಂಪೆರೆದ ಅಣ್ಣ...ಎಲ್ಲರೂ... ಎಲ್ಲವೂ ಸೇರಿಯೇ ತವರೆನ್ನುವ ಭಾವವುಕ್ಕುವುದಲ್ಲವೆ?

ಆಷಾಢದಲ್ಲೇ ತವರಿನ ಜಪ

ಆ ಕಾಲವೊಂದಿತ್ತು, ಆಷಾಢ ಅಷ್ಟು ದೂರವಿರುವಾಗಲೇ ತವರಿನ ಜಪ ಶುರುವಾಗೋದು. ಶ್ರಾವಣದ ಮೊದಲ ಹಬ್ಬ ಪಂಚಮಿಗೆ ಮಗಳು ಮನೆಗೆ ಬರಬೇಕು. ರಾಖಿ ಹಬ್ಬಕ್ಕೆ ಒಂದಿನವಾದರೂ ಬಂದು ಹೋಗಬೇಕು, ದೀಪಾವಳಿಗೂ ಅವಳು ಜೊತೆಗಿರಬೇಕು. ಹೀಗೆ ಶ್ರಾವಣದಲ್ಲಿ ಶುರುವಿಡುವ ಸಾಲುಸಾಲು ಹಬ್ಬಗಳಲ್ಲಿ ತವರಿಗೆ ಬರುವ ತವಕ, ತಡೆಯುವರಿರಲಿಲ್ಲ.

ಕಾಲ ಬದಲಾಯಿತು. ಸಂಸಾರದ ಜವಾಬ್ದಾರಿಯಲ್ಲಿ ಅವಳದೂ ಸಮಪಾಲು. ಹಬ್ಬಕ್ಕೆಂದು ಸುಲಭಕ್ಕೆ ತವರಿನ ದಾರಿ ಹಿಡಿಯುವ ಹಾಗಿಲ್ಲ. ತನಗೆ ರಜೆ ಸಿಕ್ಕಿದಾಗ, ಮಕ್ಕಳ ಶಾಲೆಯ ರಜೆಯೂ, ಪತಿಯ ಕೆಲಸದ ಬಿಡುವೂ ಕೂಡಿ ಬರಬೇಕು. ಅವಳು ಹೋಗಲಣಿಯಾದರೂ ಕರೆಯುವವರು ಬೇಕಲ್ಲ. ಬದಲಾದ ಸಂಬಂಧಗಳಲ್ಲಿ ಬೆಸುಗೆಗಳು ಕೊಂಡಿ ಕಳಚಿಕೊಳ್ಳುತ್ತಿರುವುದೇನೂ ಸುಳ್ಳಲ್ಲ. ಹಬ್ಬವಿದೆಯೊ–ಇಲ್ಲವೊ, ಕರೆಯುವವರಿದ್ದಾರೊ ಇಲ್ಲವೊ ತವರಿನ ದಾರಿ ಮಾತ್ರ ಯಾವತ್ತಿಗೂ ಹಿತವೇ.

‘ಈ ದಿನ ಅಮ್ಮನ ಮನೆಗೆ ಹೋಗುವುದು’ ಎಂದು ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿದ ದಿನದಿಂದ ಹತ್ತಿಪ್ಪತ್ತು ಬಾರಿಯಾದರೂ ಕಣ್ಣು ಕ್ಯಾಲೆಂಡರ್‌ನತ್ತ ಹೋಗಿ ಬರುತ್ತದೆ. ಇನ್ನೂ ಎಂಟು ದಿನ, ಏಳು ದಿನ, ಐದು ದಿನ... ಎಣಿಕೆ ಆರಂಭ. ಕಾಯ್ದಷ್ಟೂ ಓಡದ ದಿನಗಳು, ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತವೆ. ಹತ್ತಿರ ಬಂದಂತೆ ಒಂದೊಂದು ದಿನವೂ ಹೊರಲಾರದಷ್ಟು ಭಾರವಾಗುತ್ತದೆ.

ಅಂತೂ ಬಂದೇ ಬಿಟ್ಟಿತಲ್ಲ ಆ ದಿನ... ಮನೆ–ಕಚೇರಿಯಲ್ಲೆಲ್ಲ ಎಂದೂ ಇಲ್ಲದ ಸಡಗರದ ನಡಿಗೆ, ಮುಖದಗಲ ನಗು, ಸುಖಾಸುಮ್ಮನೇ ರಂಗು ಸೂಸುವ ಕಣ್ಣು, ಬ್ಯಾಗಿಗೆ ಬಟ್ಟೆ ತುರುಕುತ್ತ ಅಮ್ಮನೆದುರು ಹೇಳಬೇಕಿರುವ ಮಾತುಗಳ ಮೂಟೆ ತುಂಬುತ್ತದೆ ಮನದೊಳಗೆ. ಅದೇ ಸಮಯಕ್ಕೆ ಹಾಜರಾಗುವ ಅಕ್ಕನೆದುರು ಏನು ಹೇಳಬೇಕು ಏನು ಬೇಡ ಎನ್ನುವ ಲೆಕ್ಕಾಚಾರ. ಮದುವೆಯಾದ ಮೇಲೆ ಮರೆತೇ ಬಿಟ್ಟ ಅಣ್ಣನ ಮೇಲಿನ ಮುನಿಸಿಗೂ ಇದೇ ಸಕಾಲ. ಬಸ್ಸೊ–ರೈಲೊ ಹತ್ತಿ ಕುಳಿತರೆ ಸಾಕು, ಅಲ್ಲಿಯವರೆಗೂ ಅಜ್ಞಾತ ವಾಸದಲ್ಲಿ ಅವಿತು ಕುಳಿತ ಬೆಚ್ಚಗಿನ ಭಾವಗಳೆಲ್ಲ ಎದ್ದು ಬಂದು ಎದೆಗೆ ನುಗ್ಗುವ ಗಳಿಗೆಯದು.

ತವರಿನ ಕೊಂಡಿ ಕಳಚಿಕೊಂಡಾಗ...

ಅಷ್ಟಕ್ಕೂ ತವರೆಂದರೆ ಯಾವುದು? ಅಮ್ಮ–ಅಪ್ಪ ಇರುವುದಷ್ಟೇ ತವರಾ... ಚಿಕ್ಕಂದಿನಿಂದಲೂ ಅಮ್ಮನಂತೆ ಪೊರೆದವಳು ಅಕ್ಕ– ಅವಳ ಮನೆಯೂ ತವರಾಗುವುದೆ? ಅಮ್ಮ–ಅಪ್ಪನ ಆಸ್ತಿಗೂ–ಜವಾಬ್ದಾರಿಗೂ ವಾರಸುದಾರ ಅಣ್ಣ– ಅವನ ಮನೆ ತವರಾದೀತೆ? ನೋವು ಮಡುಗಟ್ಟಿ ನಿಂತಾಗ ಎದೆಗವುಚಿಕೊಂಡು ಸಂತೈಸಿದವಳು ಗೆಳತಿ– ಅವಳ ಮನೆಯನ್ನು ತವರೆಂದುಕೊಳ್ಳುವುದೆ?ಅವರವರ ಭಾವಕ್ಕೆ ದಕ್ಕುವುದೇ ತವರೇನೊ.

‘ಅಮ್ಮ–ಅಪ್ಪ ಇರುವತನಕ ಅಷ್ಟೆ ತವರು. ಅನಂತರ ತವರೆನ್ನುವುದು ನೆನಪು ಮಾತ್ರ. ಅವರು ಹೋದ ಮೇಲೆ ಮನೆಯ ಮೂಲ ಸ್ವರೂಪವೂ ಬದಲಾಗಿದೆ, ನನ್ನ ಬಾಲ್ಯದ ನೆನಪುಗಳೂ ಸಿಗದು ಅಲ್ಲೀಗ...’ ಎನ್ನುವ ಕುಮಟಾದ ಕಲಾವತಿ. ‘ಅಣ್ಣನ ಮನೆಯಲ್ಲಿ ಅಪ್ಪ, ಅಕ್ಕನ ಮನೆಯಲ್ಲಿ ಅಮ್ಮ ಹಂಚಿ ಹೋಗಿದ್ದಾರೆ. ಯಾವುದನ್ನು ನನ್ನ ತವರೆನ್ನಲಿ?’ ಎನ್ನುವ ಭಟ್ಕಳದ ಪ್ರತಿಭಾ. ‘ಅಪ್ಪನ ಮಾತು ಮೀರಿ, ಅಮ್ಮನ ಮನಸು ನೋಯಿಸಿ ಆ ಮನೆಯ ಹೊಸಿಲು ದಾಟಿದ ದಿನವೇ ನನ್ನ ಪಾಲಿಗೆ ತವರಿನ ಬಾಗಿಲು ಮುಚ್ಚಿದೆ. ಈಗೇನಿದ್ದರೂ ಹಬ್ಬಕ್ಕೊಂದು ದಿನ ಜೀವದ ಗೆಳತಿಯ ಮನೆಯೇ ಆಸರೆ’ ಎನ್ನುವ ಬೆಳಗಾವಿಯ ಅನುಷಾ... ಒಬ್ಬೊಬ್ಬರದು ಒಂದೊಂದು ಕತೆ. ತವರಿನ ಕೊಂಡಿ ಕಳಚಿಕೊಂಡಾಗ ಪರ್ಯಾಯಕ್ಕಾಗಿ ತಡಕಾಡುವ ಮನ.

ಯಾರಿದ್ದರೂ–ಇಲ್ಲದಿದ್ದರೂ, ಯಾರು ಕರೆದರೂ–ಕರೆಯದೇ ಹೋದರೂ, ಉಸಿರಲ್ಲಿ ಉಸಿರಾಗಿ ಬೆರೆತ ತವರಿನ ಒರತೆ ಯಾವತ್ತಿಗೂ ಬರಿದಾಗದು.

***

ನಿಲುಕದ ತವರ ನೆನೆದು ಕಣ್ಣೀರಾಗುವುದೇಕೆ? ಇದ್ದೂರಲ್ಲೇ ಇದ್ದರೂ ವರ್ಷಗಳಿಂದ ಭೇಟಿಯಾಗದ ಗೆಳತಿಯ ಮನೆಗೆ ಲಗ್ಗೆ ಇಡಬಹುದು. ಇಷ್ಟದ ನಾಯಕ–ನಾಯಕಿಯ ಸಿನಿಮಾ ಬಂದಿದ್ದರೆ ಆ ದಿನದ ಮೂರು ಗಂಟೆ ಮೋಸವಿಲ್ಲದೆ ಕಳೆಯುತ್ತದೆ. ಅದೂ ಇಲ್ಲವೆನ್ನಿ, ಊರ ತುಂಬಾ ಮಾಲ್‌ಗಳಿವೆಯಲ್ಲ, ಸುಮ್ಮನೇ ಒಂದು ಸುತ್ತು ಅಡ್ಡಾಡಿಕೊಂಡು ಬರಲು ಅಡ್ಡಿಯಿಲ್ಲ. ಅದೂ ಬೇಡವಾದರೆ, ಇಳಿಸಂಜೆಗೆ ನಳನಳಿಸುವ ಉದ್ಯಾನದಲ್ಲೊ, ಸೊಗಸಾದ ಕೆರೆದಂಡೆಯ ಮೇಲೊ ಕೂತೆದ್ದು ಬರಬಹುದಲ್ಲವೆ?

***

ಅತ್ತ ಆಷಾಢದ ತಂಗಾಳಿ ಸುಂಯ್ಗುಟ್ಟಿ ಕಾಲು ಕೀಳುತ್ತಿದ್ದಂತೆ ಇತ್ತ ಮೈಮುರಿದು ಮೇಲೇಳುವ ಶ್ರಾವಣ ತಾನಷ್ಟೇ ಬರುವುದಿಲ್ಲ, ಮನದ ಮೂಲೆಯಲ್ಲಿ ಬೆಚ್ಚಗಿದ್ದ ಭಾವಗಳನ್ನೂ ಗುಳೆ ಹೊಡೆದುಕೊಂಡು ಬರುತ್ತದೆ. ಅದರಲ್ಲಿ ಹೆಣ್ಮಕ್ಕಳ ಎದೆಯಾಳದಿಂದ ಹೊರಹೊಮ್ಮುವ ತವರೆನ್ನುವ ತನ್ನೂರು–ತನ್ನ ಮನೆಯ ನೆನಪುಗಳದ್ದೇ ಒಂದು ಸೊಬಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT