ಭಾನುವಾರ, ಮಾರ್ಚ್ 29, 2020
19 °C

ಸುತ್ತುತ್ತಾ.. ಹಂಚುತ್ತಾ..

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮೇಘನಾ ದಾಸ್‌, ಮಂಗಳೂರಿನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳು. ಬಿ.ಎ ಪದವೀಧರೆಯಾದ ಇವರು, ಹುಡುಗಿಯರಿಗೆ ಪ್ರತಿದಿನ, ಪ್ರತಿಕ್ಷಣವೂ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುವ ಫುಡ್‌ ಡೆಲಿವರಿ ಕೆಲಸದಲ್ಲಿ ತೊಡಗಿಸಿಕೊಂಡು ಎಲ್ಲರಿಂದಲೂ ಸೈ ಎನಿಸಿಕೊಂಡ ದಿಟ್ಟೆ.

‘ನಾನು ಹುಟ್ಟಿ, ಬೆಳೆದಿದ್ದು ಕುಡ್ಲ ನಗರಿಯಲ್ಲಿ. ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ ಎಂಬ ನಾಣ್ಣುಡಿ ನನ್ನ ಪಾಲಿಗೆ ಹೆಚ್ಚು ನಿಜ ಆಗಿದೆ. ಏಕೆಂದರೆ, ನನ್ನ ಜೀವನದಲ್ಲಿ ಕಷ್ಟಗಳೇ ಜಾಸ್ತಿ, ಸಿಹಿ ಕಡಿಮೆ’ ಎನ್ನುವಾಗ ಅವರ ಧ್ವನಿಯಲ್ಲಿ ವಿಷಾದದ ಛಾಯೆ ಇತ್ತು.

‘ಚಿಕ್ಕ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡೆ. ಆಡುವ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿ ಹೆಗಲೇರಿತು. ಚಿಕ್ಕಂದಿನಿಂದಲೂ ಸ್ವಾವಲಂಬಿಯಾಗಿ ಬದುಕುವ ಕನಸು ಕಂಡವಳು ನಾನು. ಸರಿದಾರಿಯಲ್ಲೇ ನಡೆದು ಬದುಕು ಕಟ್ಟಿಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ ನನಗೆ ಬೆಳಕಿಂಡಿಯಂತೆ ಕಂಡಿದ್ದು ಜೊಮ್ಯಾಟೊ’ ಎಂದರು.

‘ಡೆಲಿವರಿ ಗರ್ಲ್‌ ಕೆಲಸ ಮಾಡಲು ಹೊರಟು ನಿಂತಾಗ ನನ್ನನ್ನು ನೋಡಿ ಆಡಿಕೊಂಡವರೇ ಜಾಸ್ತಿ. ಆದರೆ, ನನ್ನ ಹೊಟ್ಟೆಹಸಿವಿನ ಸಂಕಟ ನನಗೆ ಮಾತ್ರ ಗೊತ್ತಿತ್ತು. ಹಂಗಿಸುವವರ ಮಾತಿಗೆ ಸೊಪ್ಪು ಹಾಕದೇ ಧೈರ್ಯದಿಂದ ಮುನ್ನುಗ್ಗಿದೆ. ಈ ಕೆಲಸದಲ್ಲಿ ಪ್ರತಿದಿನವೂ ಎದುರಾಗುವ ಕಷ್ಟಗಳ ಅರಿವಾಯಿತು. ಅದನ್ನು ನಿಭಾಯಿಸುವ ಛಾತಿ ಬೆಳೆಸಿಕೊಂಡೆ. ಕ್ರಮೇಣ ನನ್ನ ಕೆಲಸವನ್ನು ಜನರು ಗುರುತಿಸಿದರು. ನನ್ನನ್ನು ನೋಡಿ ಸ್ಫೂರ್ತಿಗೊಂಡ ಅನೇಕ ಯುವತಿಯರು ಇಂದು ಡೆಲಿವರಿ ಗರ್ಲ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು ಮೇಘನಾ.

ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಆಹಾರ ಪದಾರ್ಥಗಳನ್ನು ಹಸಿದಿರುವವರಿಗೆ ಸಕಾಲದಲ್ಲಿ ತಲುಪಿಸುವುದು ಕೂಡ ಶ್ರೇಷ್ಠ ಕೆಲಸ ಎಂದು ನಂಬಿದವರು ಅವರು. 

‘ಡೆಲಿವರಿ ಗರ್ಲ್‌ ಆಗಿ ಹಗಲು ರಾತ್ರಿ ಕೆಲಸ ಮಾಡುವವರಿಗೆ ಸಾಕಷ್ಟು ತೊಂದರೆಗಳಿರುತ್ತವೆ. ಕಗ್ಗತ್ತಲು, ಗುಂಪು ಗುಂಪು ಹುಡುಗರು, ನಶೆಯಲ್ಲಿ ತೇಲಾಡುವ ಪುಂಡರು.. ಇಷ್ಟೆಲ್ಲಾ ಅಡೆತಡೆಗಳನ್ನು ದಾಟಿ ಗ್ರಾಹಕರಿಗೆ ಆಹಾರ ತಲುಪಿಸುವುದು ಅತ್ಯಂತ ಸವಾಲಿನ ಸಂಗತಿ. ನಗರದೆಲ್ಲೆಡೆ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಬೇಕು’ ಎನ್ನುತ್ತಾರೆ ಅವರು.

‘ಕಷ್ಟಗಳು ನೂರಾರು ಇದ್ದರೂ ಡೆಲಿವರಿ ಗರ್ಲ್‌ ಕೆಲಸದಿಂದ ನನಗೊಂದು ಐಡೆಂಟಿಟಿ ಸಿಕ್ಕಿದೆ. ಇದೇ ನನ್ನ ಜೀವನದಲ್ಲಿ ಆದ ಅತಿದೊಡ್ಡ ಪಾಸಿಟಿವ್‌ ಬದಲಾವಣೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಅವರು.

ನೂರಾರು ಕಿ.ಮೀ. ಬೈಕ್‌ನಲ್ಲಿ ಸುತ್ತುತ್ತಾ ದಿನಕ್ಕೆ 14 ಗಂಟೆ ಕೆಲಸ ಮಾಡುವ ಮೇಘನಾ ಸಹೃದಯಿ ಹೆಣ್ಣುಮಗಳು. ತನ್ನಂತೆ ಕಷ್ಟಪಡುವ ಜನರಿಗೆ ಹೆಗಲಾಗಬೇಕು ಎಂಬ ಉದ್ದೇಶದಿಂದ, ಈಚೆಗೆ ನಡೆದ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಅಲ್ಲಿ ಅವರಿಗೆ ಗೆಲುವು ದಕ್ಕಲಿಲ್ಲ. ‘ಸೋಲು ನನಗೆ ಹೊಸದೇನಲ್ಲ’ ಎನ್ನುವ ಮೇಘನಾ ಈಗ ಮತ್ತಷ್ಟು ಉತ್ಸಾಹದಿಂದ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ, ಮುಂದೊಂದು ದಿನ ದೊಡ್ಡ ಗೆಲುವು ಸಿಗುತ್ತದೆ ಎಂಬ ಭರವಸೆಯೊಂದಿಗೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು