ಅನಿವಾರ್ಯ ಸಂದರ್ಭಗಳು ನಮ್ಮೊಳಗಿರುವ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಡುತ್ತವೆ. ಗೌರಿ ನಾಯ್ಕ, ಗಟ್ಟಿ ಮನಸ್ಸು ಮಾಡಿ ಬಾವಿ ತೋಡಿ ಯಶಸ್ವಿಯಾದರು. ಆನಂತರ ಒಂದರ ಹಿಂದೆ ಒಂದರಂತೆ ನಾಲ್ಕು ಬಾವಿಗಳನ್ನು ತೋಡಿದ್ದಾರೆ.

ಗಿಡಗಳು ಬಾಯಾರಿದಾಗ ಒಂದು, ಕುಟುಂಬ ದಾಹ ಎಂದಾಗ ಮತ್ತೊಂದು, ಅಂಗನವಾಡಿ ಮಕ್ಕಳು ನೀರು ಕೇಳಿದಾಗ ಮಗದೊಂದು, ಪವಿತ್ರಸ್ನಾನ ಮಾಡಬೇಕು ಅನಿಸಿದಾಗ ಇನ್ನೊಂದು...ಹೀಗೆ ನಾಲ್ಕು ಬಾವಿಗಳನ್ನು ಏಕಾಂಗಿಯಾಗಿ ತೋಡಿದವರು ಗೌರಿ ನಾಯ್ಕ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣದ ಸೆರಗಿನಲ್ಲಿರುವ ಸೌಲಭ್ಯ ವಂಚಿತ ಪ್ರದೇಶ ಗಣೇಶನಗರದಲ್ಲಿ 58 ವರ್ಷದ ಗೌರಿ ನಾಯ್ಕ ವಾಸಿಸುತ್ತಾರೆ.

ಗೌರಿ ಅವರ ಮನೆ ಚಿರೇಕಲ್ಲಿನಂಥ ಗುಡ್ಡದ ಮೇಲಿದೆ. ಸುತ್ತ 150 ಅಡಿಕೆ, ಬಾಳೆ ಸಸಿಗಳಿದ್ದವು. ಬೇಸಿಗೆ ಬಿಸಿಲಿಗೆ ಅವುಗಳೆಲ್ಲ ಸಾಯುವ ಸ್ಥಿತಿಯಲ್ಲಿದ್ದವು. ದೂರದಿಂದ ನೀರು ಹೊತ್ತು ಅವುಗಳನ್ನು ಬದುಕಿಸುವುದು ಕಷ್ಟವಾಗಿತ್ತು. ನೀರಿಗಾಗಿ ಕಾಸು ಕೊಡುವಷ್ಟು ಶಕ್ತಿ ಇರಲಿಲ್ಲ. ಹೀಗಾಗಿ ಮನಸು ಗಟ್ಟಿ ಮಾಡಿದರು. 2017ರಲ್ಲಿ ಮನೆ ಹಿಂಭಾಗದಲ್ಲಿ ಎಂಟು ಅಡಿ ಅಗಲ, ಅರವತ್ತು ಅಡಿ ಆಳದ ಬಾವಿಯನ್ನು ಎರಡು ತಿಂಗಳಲ್ಲಿ ತೋಡಿಯೇಬಿಟ್ಟರು! ಮಗ ಬಯ್ಯುತ್ತಾನೆ ಎನ್ನುವ ಕಾರಣಕ್ಕಾಗಿ ಈ ವಿಷಯವನ್ನು ಗುಟ್ಟಾಗಿರಿಸಿದ್ದರು. ಬಳಿಕ ತೋಟದ ಗಿಡಗಳ ನೀರಿನ ಬಾಯಾರಿಕೆ ನೀಗಿತು. ಹಸಿರಿನಿಂದ ನಳನಳಿಸಿ ನಕ್ಕವು.

2020ರಲ್ಲಿ ಇಡೀ ಜಗತ್ತು ಕೋವಿಡ್ಗೆ ಬೆದರಿ ಮನೆಯೊಳಗೆ ಕುಳಿತಿತ್ತು. ಆದರೆ ಗೌರಿ ಮಾತ್ರ ಸುಮ್ಮನೆ ಕೂರಲಿಲ್ಲ. ಮನೆ ಮಂದಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎನ್ನುವ ಅಪೇಕ್ಷೆಯಿಂದ ಎರಡನೇ ಬಾವಿ ತೋಡಲು ನಿರ್ಧರಿಸಿದರು. ಅದಕ್ಕಾಗಿ ಮನೆ ಹಿಂಭಾಗದಲ್ಲಿದ್ದ ಗುಡ್ಡವನ್ನು ಸಮತಟ್ಟು ಮಾಡಿ ಬಾವಿ ತೋಡಲು ಆರಂಭಿಸಿದರು. ಐದು ಅಡಿ ಅಗಲ, 60 ಅಡಿ ಆಳದ ಬಾವಿಯನ್ನು ಒಬ್ಬರೇ ತೆಗೆದು ಮುಗುಳ್ನಕ್ಕರು.

ಬಾವಿ ತೋಡಲು ಮೂರರಿಂದ ನಾಲ್ಕು ಮಂದಿ ಬೇಕು. ಆದರೆ ಇವರು ದಿನದಲ್ಲಿ 200ಕ್ಕೂ ಹೆಚ್ಚು ಬಾರಿ ಬಾವಿ ಹತ್ತಿಳಿಯುತ್ತಲೇ ತೋಡಿ ಮುಗಿಸಿದ್ದರು. ಬಾವಿ ತೆಗೆಯಲು ಗುದ್ದಲಿ, ಹಾರೆ, ಚಾಣ, ಸುತ್ತಿಗೆ, ಪಿಕಾಸಿ, ಎರಡು ಬಕೆಟ್ಗಳನ್ನು ಬಳಕೆ ಮಾಡಿದ್ದರು. ‘ಎರಡು ತಿಂಗಳ ಬೆವರಹನಿಯ ಪ್ರತಿಫಲವಾಗಿ 60 ಅಡಿ ಆಳದ ಬಾವಿಯಲ್ಲಿ 7 ಅಡಿ ಜೀವಜಲ ಸದಾ ತುಂಬಿರುತ್ತದೆ’ ಎಂದು ಆ ಬಾವಿಯನ್ನು ತೋರಿಸಿದರು.

ಪ್ರಸ್ತುತ ಈ ಬಾವಿ ಇರುವ ಜಾಗವನ್ನು ಮಾರಾಟ ಮಾಡಿದ್ದಾರೆ.

ಗೌರಿ ಮಾತನಾಡುತ್ತಲೇ ಸಮೀಪದ ಅಂಗನವಾಡಿ ಕೇಂದ್ರದ ಬಳಿ ಕರೆದೊಯ್ದರು. ಅಲ್ಲಿರುವ ಬಾವಿ ತೋರಿಸುತ್ತ, ‘ಬಾವಿ ತೋಡುವುದು ಇನ್ನು ಸಾಕು ಅನಿಸಿ ಸುಮ್ಮನಿದ್ದೆ. ಅದಾಗಲೇ ಹಲವೆಡೆ ಸನ್ಮಾನ, ಗೌರವಗಳು ತಾವಾಗಿಯೇ ಹುಡುಕಿ ಬಂದಿದ್ದವು. ಆಗ ಮನಸ್ಸಲ್ಲಿ ಈ ಸನ್ಮಾನಗಳಿಗೆ ಯೋಗ್ಯಳಲ್ಲ ಎಂಬ ಭಾವನೆ ಬಂತು. ಆಗ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಆಸೆ ಮೊಳಕೆಯೊಡೆಯಿತು. ಆ ವೇಳೆಗೆ (2024) ಸರಿಯಾಗಿ ಮನೆ ಬಳಿ ಇರುವ ಅಂಗನವಾಡಿಗೆ ನೀರಿನ ಕೊರತೆ ಇದೆಯೆಂಬ ವಿಷಯ ಕಿವಿಗೆಬಿತ್ತು. ಸಮೀಪದ ಹುತ್ಗಾರ ಗ್ರಾಮ ಪಂಚಾಯಿತಿಯಿಂದ ಆಗೊಮ್ಮೆ ಈಗೊಮ್ಮೆ ಬರುವ ನೀರು. ಅದು ಬಿಟ್ಟರೆ ಶಿಕ್ಷಕಿಗೆ ದೂರದ ಬಾವಿಯಿಂದ ಕೊಡ ಹೊತ್ತು ನೀರು ತರುವ ಶಿಕ್ಷೆ. ಮೊಮ್ಮಗನನ್ನು ಅಂಗನವಾಡಿಗೆ ಬಿಡಲು ಹೋದ ನನ್ನ ಮನಸ್ಸಿಗೆ ಬಂದ ಯೋಚನೆಯೊಂದೇ, ಅದು ಬಾವಿ ತೋಡುವುದು.’

ಗೌರಿ ನಾಯ್ಕ ಕೂಡಲೇ ಶಿಕ್ಷಕಿ ಮತ್ತು ಗ್ರಾಮ ಪಂಚಾಯಿತಿ ಮುಖ್ಯಸ್ಥರ ಬಳಿ ಮಾತನಾಡಿದರು. ಮರುದಿನ ಬೆಳ್ಳಂಬೆಳಿಗ್ಗೆ ಅಂಗನವಾಡಿ ಹಿಂದೆ ಜಾಗ ಗುರುತು ಮಾಡಿದರು. ಮನೆಯ ಮೂಲೆಯಲ್ಲಿ ಪೇರಿಸಿಟ್ಟ ಪಿಕಾಸಿ, ಗುದ್ದಲಿ, ಹಾರೆ, ಬಕೆಟ್ಗಳನ್ನು ತಂದು ಭೂಮಿ ಅಗೆತ ಆರಂಭಿಸಿದರು. ಸೂರ್ಯ ನೆತ್ತಿಗೇರುವ ಮುನ್ನವೇ ಮೂರಡಿ ಆಳದಲ್ಲಿ ಪಿಕಾಸಿ ಅಗೆತದ ಸದ್ದು ಕೇಳಿಸುತ್ತಿತ್ತು. ವಾರ ಕಳೆಯುವುದರಲ್ಲಿ 15 ಅಡಿ ಬಾವಿ ತೋಡಿದ್ದರು. ಆಗ ವಿಘ್ನವೊಂದು ಎದುರಾಯಿತು. ಬಾವಿ ತೆಗೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುಮತಿ ಪಡೆದಿಲ್ಲ ಎಂಬ ತಕರಾರು. ಸ್ವಾರ್ಥವಿಲ್ಲದೇ ಪುಟ್ಟ ಮಕ್ಕಳಿಗೆ ನೀರುಣಿಸಲು ಮುಂದೆ ಬಂದ ಇವರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಬೆಂಬಲಕ್ಕೆ ನಿಂತರು. ಅಲ್ಲಿಗೆ ಗೌರಿ ಅವರ ಉತ್ಸಾಹ ನೂರ್ಮಡಿಸಿತ್ತು. ಮತ್ತೆ ವಾರ ಕಳೆಯುವುದರಲ್ಲಿ 30 ಅಡಿ ಆಳದಿಂದ ಒಂಟಿಯಾಗಿಯೇ ಮಣ್ಣೆತ್ತಿ ನೀರ ಸೆಲೆ ಹುಡುಕುತ್ತಿದ್ದರು. ಈ ಬಾವಿಯು 60 ಅಡಿಯಷ್ಟು ಆಳ ಕಂಡಾಗ ಗಂಗೆ ಉಕ್ಕಿದಳು. ಈ ಬಾವಿಗೆ ಕಟ್ಟೆ ಕಟ್ಟಿಸಿಕೊಟ್ಟಿದ್ದೂ ಇವರೇ.

‘ಗಂಗೆ ಅಂದ್ರ ಪವಿತ್ರ ನೀರು. ಅದನ್ ಎಲ್ ಮಿಂದ್ರೂ ಪುಣ್ಯ ಬರ್ತೈತಿ. ಯಾರೀಗ್ ಕೊಟ್ರೂ ಜೀವ್ನ ಪಾವನ ಆಗ್ತೈತಿ. ನಸೀಬದಾಗ್ ಬರದ್ರ ಮಾತ್ರ ಗಂಗೆ ಸಂಗ ಆಗ್ತೈತಿ. ನನ್ ನಸೀಬ್ ಚೊಕ್ಕಿತ್ತು ಹಂಗಾಗೇ ನಾನು ನಾಲ್ಕು ಬಾವಿ ತೋಡಿದಾಗ್ಲೂ ಸಂಗ ಬಿಡ್ದೆ ನನ್ ಕೈಹಿಡಿದ್ಲು ಆಕೀ’.... ಹೀಗೆ ಮಾತಾಡುತ್ತಲೇ ಅವರು ತಾವು ನೆಟ್ಟ ಅಡಿಕೆ ಗಿಡಗಳಿಗೆ ಬಾವಿಯಿಂದ ನೀರೆತ್ತಿ ಉಣಿಸುತ್ತಿದ್ದರು.

ಬಾವಿಗೆ ನೀರು ಸೇದಲು ಬಿಟ್ಟ ಕೊಡ ‘ಡುಡುಂ.. ಡುಡುಂ..’ ಸಪ್ಪಳ ಮಾಡುತ್ತಿತ್ತು. ಮಾತು ಮುಂದುವರೆಸಿದ ಅವರು, ‘ದೂರದಲ್ಲಿ ಮಹಾ ಕುಂಭಮೇಳ ನಡೀತೈತಿ ಅನ್ನೋದು ಗೊತ್ತಿತ್ತು. ಅಲ್ಲಿಗೆ ಹೋಗೋದು ಅಂದ್ರ ರೊಕ್ಕನೂ ಬೇಕು, ಶಕ್ತಿನು ಬೇಕು. ನನ್ ಹತ್ರ ಶಕ್ತಿ ಒಂದೇ ಇತ್ತು. ಪವಿತ್ರಸ್ನಾನ ಮಾಡುವ ಇಚ್ಛೆ ಮನಸಲ್ ಗಟ್ಟಿಯಾಗಿತ್ತು. ಹೆಂಗೂ ಗಂಗೆ ಜತೆ ಹಳೆ ನಂಟು ಇತ್ತು ನಂದು. ಹಂಗಾಗ್ ಆಕಿ ನನ್ ಕೈಬಿಡೂದಿಲ್ಲಾ ಅನ್ನೋ ನಂಬ್ಕಿ ಮ್ಯಾಲೆ ಒಂಟಿಯಾಗೇ ಬಾವಿ ತೋಡ್ದೆ. ನೀರೂ ಬಂತು, ನನ್ ಪವಿತ್ರ ಸ್ನಾನಾನೂ ಆತು. ಕುಂಭಕ್ ಹೋಗ್ದೇ ಗಂಗೆ ಸ್ನಾನ ಮಾಡಿದ್ ಪುಣ್ಯ ನನಗೆ ಬಂತು. ಈ ಬಾರಿ ಶಿವರಾತ್ರಿ ದಿನ ಇದೇ ಬಾವಿ ನೀರ್ನಿಂದ ಶಿವನಿಗೂ ಅಭಿಷೇಕ ಮಾಡಿಸಿದೆ. ನಾ ತೋಡಿದ್ ನಾಲ್ಕನೇ ಬಾವ್ಯಾಗ್ ಮಹಾಕುಂಭ, ಶಿವರಾತ್ರಿ ನೆನಪೈತಿ’ ಅನ್ನುವಾಗ ಗೌರಿ ಭಾವುಕರಾದರು.

ತುಂಬಿದ ಕೊಡವನ್ನು ಸರಸರನೆ ಎತ್ತಿ ಮನೆಯ ಬಚ್ಚಲು ಹಂಡೆಗೆ ನೀರು ಸುರಿದ ಅವರು ತಾವು ತೋಡಿದ ಬಾವಿಗಳ ಘಟನಾವಳಿಗಳನ್ನು ನೆನಪಿಸಿಕೊಂಡು ಪುಳಕಗೊಂಡರು.

‘ನನ್ನ ಸಂಗಾತಿಗಳು ಅಂದ್ರೆ ಗುದ್ದಲಿ, ಬಕೆಟ್, ಹಗ್ಗ, ಪಿಕಾಸಿ, ಹಾರೆ, ಚಾಣ. ಬಾವಿ ತೋಡುವ ಕೆಲಸ ಗಂಡಸರಿಗೆ ಮಾತ್ರ ಸೀಮಿತವಲ್ಲ. ದೈಹಿಕ ಸಾಮರ್ಥ್ಯ, ಛಲವಿದ್ದರೆ ಹೆಂಗಸರೂ ಮಾಡಬಹುದು. ಈ ಹಿಂದೆ ನಿತ್ಯ ಆರೆಂಟು ತಾಸು ಕೆಲಸ ಮಾಡಿ ಬಾವಿ ತೆಗೆದಿದ್ದೆ. ಆಗ ತೋಡಿದ ಬಾವಿಯಲ್ಲಿ ಈಗಲೂ ಏಳು ಅಡಿ ನೀರು ಇದೆ. ನನ್ನ ತೋಟದ ಗಿಡಗಳಿಗೆ ಈ ನೀರೇ ಆಸರೆಯಾಗಿದೆ. ಅದೇ ರೀತಿ ಅಂಗನವಾಡಿ ಹಿಂಭಾಗ ನಾನೇ ಜಾಗ ಹುಡುಕಿಕೊಂಡು ತೆಗೆದ ಬಾವಿಯಲ್ಲಿ ನೀರು ಬಂದು ಈಗ ಅಲ್ಲಿನ ಮಕ್ಕಳು ಅದೇ ನೀರು ಕುಡಿಯುತ್ತಿದ್ದಾರೆ. ನನಗೆ ಅದನ್ನು ನೋಡುವುದಕ್ಕಿಂತ ಖುಷಿ ಬೇರೊಂದಿಲ್ಲ’ ಎನ್ನುವಾಗ ಅವರ ಕಣ್ಣಂಚಲ್ಲಿ ನೀರು ಚಿಮ್ಮಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.