ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಯುವ ತ್ವಚೆಗೆ ಜೇಡ್ ರೋಲ್‌ ಮಸಾಜ್‌

Last Updated 21 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಸುಂದರ, ಕಾಂತಿಯುತ ತ್ವಚೆ ತಮ್ಮದಾಗಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ.ಹೆಣ್ಣುಮಕ್ಕಳಂತೂ ಅಂತಹ ಅನುಪಮ ಸೌಂದರ್ಯ ಹೊಂದಲು ಸೋಪ್‌, ಕ್ರೀಮ್‌, ಲೋಷನ್‌ ಅಲ್ಲದೇ ಆಯುರ್ವೇದ, ಗಿಡಮೂಲಿಕೆ ಔಷಧಿಗಳ ಮೊರೆ ಹೋಗುವುದು ಸಹಜವೇ. ಕಳೆದ ಎರಡು ದಶಕಗಳಿಂದ ಸೌಂದರ್ಯವರ್ಧಕಗಳ ಮಾರುಕಟ್ಟೆ ಬೆಳೆಯುತ್ತಿದ್ದು, ವಿದೇಶಗಳ ಖ್ಯಾತ ಬ್ರ್ಯಾಂಡ್‌ಗಳ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವುದೇ ಕ್ರೀಮ್‌ ಉಜ್ಜುವ ತೊಂದರೆಯಿಲ್ಲದೇ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಇಂದಿನ ಹೆಣ್ಣುಮಕ್ಕಳು ಮೊರೆ ಹೋಗಿರುವುದು ಜೇಡ್ ರೋಲರ್‌ಗೆ.

ಏನಿದು ಜೇಡ್‌ ರೋಲರ್‌?

ಯುಟ್ಯೂಬ್ ಅಥವಾ ಫೇಸ್‌ಬುಕ್‌ನಲ್ಲಿ ಬಣ್ಣ ಬಣ್ಣದ ಕಲ್ಲುಗಳ ಸಹಾಯದಿಂದ ಮಸಾಜ್‌ ಮಾಡಿಕೊಳ್ಳುವ ವಿಡಿಯೊವನ್ನು ನೀವು ನೋಡಿರಬಹುದು. ಆ ವಿಡಿಯೊಗಳಲ್ಲಿ ಕಾಣುವ ಹಿಡಿಕೆಗೆ ಜೋಡಿಸಲಾಗಿರುವ ಹಸಿರು ರಂಗಿನ ಉರುಟಾದ ಕಲ್ಲು ಜೇಡ್‌. ಚೀನಾದಲ್ಲಿ ಪ್ರಾಚೀನ ಕಾಲದಿಂದಲೂ ಫೇಶಿಯಲ್‌ಗಾಗಿ ಈ ಕಲ್ಲನ್ನು ಬಳಸುತ್ತಿದ್ದರು. ಈ ಕಲ್ಲಿನ ರೋಲರ್‌ ಬಳಸಿ ಮುಖಕ್ಕೆ ಮಸಾಜ್ ಮಾಡಿಕೊಂಡರೆ ಹಳೆಯ ಚರ್ಮದ ಪದರ ಉದುರಿ ತಾಜಾ ಪದರ ಹೊಳೆಯುತ್ತದೆ. ಇವು ಅಮೆಜಾನ್, ಫ್ಲಿಪ್‌ಕಾರ್ಟ್‌ನಂತರ ಆನ್‌ಲೈನ್‌ ಮಾರುಕಟ್ಟೆಯ ತಾಣಗಳಲ್ಲೂ ಲಭ್ಯ.

ಇನ್ನೊಂದು ಚಪ್ಪಟೆಯಾಕಾರದ ಜೇಡ್‌ ಕಲ್ಲು ಗುವಾ ಶಾ. ಇದನ್ನು ಕೂಡ ಮುಖದ ಮೇಲೆ ನಯವಾಗಿ ಉಜ್ಜುತ್ತ ಹೋದರೆ ಸತ್ತ ಜೀವಕೋಶಗಳನ್ನು ತೆಗೆದು ಹಾಕಬಹುದು.

ಉಪಯೋಗ

ಜೇಡ್ ಹಾಗೂ ಗುವಾ ಶಾ ಕಲ್ಲು ಬಳಸಿ ಮುಖಕ್ಕೆ ಫೇಶಿಯಲ್ ಮಾಡಿಕೊಳ್ಳುವುದರಿಂದಮುಖದ ಸ್ನಾಯುಗಳಲ್ಲಿ ರಕ್ತಸಂಚಾರ ಸುಗಮಗೊಳ್ಳುತ್ತದೆ.

ಕಳೆಗುಂದಿದ ಚರ್ಮವು ಸ್ವಚ್ಛಗೊಂಡು ಕಾಂತಿ ಹೆಚ್ಚುತ್ತದೆ.

ಮುಖದ ರಕ್ತನಾಳಗಳಲ್ಲಿ ರಕ್ತ ಸಂಚಾರ ಹೆಚ್ಚುವಂತೆ ಮಾಡುವುದಲ್ಲದೇ ದುಗ್ಧನಾಳದೊಳಗಿನ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತದೆ.

ಚರ್ಮದ ಜೀವಕೋಶಗಳಲ್ಲಿ ಆಮ್ಲಜನಕ ಸೇರುವಂತೆ ಮಾಡಿ ಅಂಗಾಂಶಗಳನ್ನು ಆರೋಗ್ಯವಾಗಿರಿಸುತ್ತದೆ.

ಮುಖದ ಮೇಲಿರುವ ಸುಕ್ಕು ಹಾಗೂ ವಯಸ್ಸಾದಂತೆ ಮೂಡುವ ಗೆರೆಗಳನ್ನು ಮರೆ ಮಾಚುತ್ತದೆ.

ಜೇಡ್ ಹಾಗೂ ಗುವಾ ಶಾ ಕಲ್ಲಿನ ಥೆರಪಿಯು ಸ್ನಾಯು ಹಾಗೂ ಗಂಟುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿವಾರಣೆ ಮಾಡುತ್ತದೆ. ಜೊತೆಗೆ ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಕಾಡುವ ಆತಂಕ, ನಿದ್ರಾಹೀನತೆಯಂತಹ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ ಎನ್ನುತ್ತಾರೆ ತಜ್ಞರು.

ಬಳಸಿದ ನಂತರ ಈ ಕಲ್ಲನ್ನು ಮೊದಲು ಟಿಶ್ಯೂ ಪೇಪರ್ ಸಹಾಯದಿಂದ ಸ್ವಚ್ಛ ಮಾಡಬೇಕು. ನಂತರ ಸೋಪ್ ನೀರಿನಿಂದ ತೊಳೆಯಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಹದಿನೈದು ದಿನಕ್ಕೊಮ್ಮೆ ಈ ಫೇಶಿಯಲ್ ಮಾಡಿಕೊಳ್ಳಬೇಕು.

ಬಳಸುವುದು ಹೇಗೆ?

ಇಷ್ಟೆಲ್ಲಾ ಸಮಸ್ಯೆಗೆ ಪರಿಹಾರ ನೀಡುವ ‌‌ಜೇಡ್‌ ರೋಲರ್‌ನಿಂದ ಮಸಾಜ್ ಮಾಡಿಕೊಳ್ಳುವ ಮುನ್ನ ಕೆಲವೊಂದು ಅಂಶವನ್ನು ತಿಳಿದಿರಬೇಕು.

ಮಸಾಜ್‌ ಮಾಡುವ ಮುಖದ ಜಾಗಕ್ಕೆ ಕ್ರೀಮ್‌ ಅಥವಾ ಲೋಶನ್‌ ಹಚ್ಚಿಕೊಳ್ಳಿ.

ಮಸಾಜ್‌ ಅನ್ನು ಕುತ್ತಿಗೆಯಿಂದ ಪ್ರಾರಂಭಿಸಿ ಮೇಲ್ಮುಖವಾಗಿ ಮುಖದವರೆಗೂ ಮಸಾಜ್ ಮಾಡಬೇಕು.

ರೋಲರ್ ಮೂಲಕ ಮಸಾಜ್ ಮಾಡಿಕೊಳ್ಳುವುದು ಸುಲಭ. ಮಸಾಜ್ ಆರಂಭಿಸಿದ ಮೇಲೆ ಒಮ್ಮೆ ಹೊರ ಮುಖವಾಗಿ ಇನ್ನೊಮ್ಮೆ ಮೇಲ್ಮುಖವಾಗಿ ಮಸಾಜ್ ಮಾಡಿಕೊಳ್ಳಬೇಕು. ಆದರೆ ಕುತ್ತಿಗೆಯ ಬಳಿ ಮಾತ್ರ ಕೆಳಮುಖವಾಗಿ ಮಸಾಜ್ ಮಾಡಿಕೊಳ್ಳಬೇಕು.

ಮುಖದಲ್ಲಿ ಸಣ್ಣ ಸಣ್ಣ ಗುಳ್ಳೆಗಳಿದ್ದರೆ ಮೊಡವೆ, ಕಜ್ಜಿಗಳಾಗಿದ್ದು, ಗಾಯಗಳಾಗಿದ್ದರೆ ಅದರ ಮೇಲೆ ಉಜ್ಜಬೇಡಿ.

ಜೇಡ್‌ ರೋಲರ್‌ನಿಂದ ಜೋರಾಗಿ ಉಜ್ಜಬೇಡಿ. ಮುಖದ ಮೇಲೆ ಕಲ್ಲಿನ ಚಲನೆಯು ಸೂಕ್ಷ್ಮ ಹಾಗೂ ಮೃದುವಾಗಿರಲಿ.

ಕಲ್ಲನ್ನು ಸದಾ ತಣ್ಣಗಿರುವ ಜಾಗದಲ್ಲಿ ಇರಿಸಿ.

ಇದರಿಂದ ಫೇಶಿಯಲ್ ಮಾಡುವಾಗ ನಿಮಗೆ ನೋವು ಕಾಣಿಸಿಕೊಂಡರೆ ನೀವು ಸರಿಯಾದ ಕ್ರಮ ಅನುಸರಿಸುತ್ತಿಲ್ಲ ಎಂದು ಅರ್ಥ ಎನ್ನುತ್ತಾರೆ ಸೌಂದರ್ಯ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT