ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ದನಿಗೆ ಕಾನೂನಿನ ಸಾಥ್‌

Last Updated 6 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಆಕೆ ದೇವತೆಯಂತೆ ಎಂದರು; ಪೂಜಾರ್ಹಳು ಎಂದರು. ಆದರೂ ಆಕೆಯ ಮೇಲೆ ಎಷ್ಟೊಂದು ದೌರ್ಜನ್ಯಗಳು! ನಿತ್ಯ ನಡೆಯುವ ಅಸಂಖ್ಯಾತ ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮರ್ಯಾದಾ ಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಬಲವಂತದ ಬಾಲ್ಯವಿವಾಹ, ವೈವಾಹಿಕ ಮತ್ತು ಕೌಟುಂಬಿಕ ಹಿಂಸೆ, ಆ್ಯಸಿಡ್‌ ದಾಳಿ, ಬಲವಂತದ ವೇಶ್ಯಾವಾಟಿಕೆ, ಜನನಾಂಗ ಛೇದ.. ಇಂತಹ ಹಿಂಸೆಯಿಂದ ದೇಶದ ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಅರ್ಧದಷ್ಟಿರುವ ಹೆಣ್ಣುಮಕ್ಕಳು ನಲುಗಿ ಹೋಗಿದ್ದಾರೆ.

ಇಂತಹ ಪ್ರಸಂಗಗಳು ಪದೆಪದೆ ನಾಗರಿಕ ಸಮಾಜದಲ್ಲಿ ನಡೆದಷ್ಟೂ, ಮಹಿಳೆಯರ ನೈತಿಕ ಸ್ಥೈರ್ಯ ಕುಗ್ಗುತ್ತಾ ಹೋಗುತ್ತದೆ. ಸ್ತ್ರೀ–ಪುರುಷರಿಬ್ಬರೂ ಸೃಷ್ಟಿಯ ಮೂಲವಾಗಿರುವಾಗ ಸಾಮಾಜಿಕ ವ್ಯವಸ್ಥೆಯ ನಡುವೆಯೂ ಈ ಸಮಾನತೆ, ಸಾಮರಸ್ಯ ಸದಾ ಇರಲೇಬೇಕು.

ಹೆಣ್ಣುಮಕ್ಕಳ ಸರಾಸರಿ ಪ್ರಮಾಣ ಕ್ಷೀಣಿಸುತ್ತಿರುವ ಆತಂಕ ಒಂದೆಡೆಯಾದರೆ, ತಾನು ಏನನ್ನು ಬೇಕಾದರೂ ಸಾಧಿಸಬಲ್ಲೆ ಎನ್ನುವ ಛಲ, ಮುನ್ನುಗ್ಗುವ ಛಾತಿ ಹೆಣ್ಣುಮಕ್ಕಳಲ್ಲಿ ಹೆಚ್ಚಿರುವುದು ಧನಾತ್ಮಕ ಬೆಳವಣಿಗೆ. ಇಂದು ಮಹಿಳೆಯರು ಕಾಲಿರಿಸದ ಕ್ಷೇತ್ರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಾಧನೆಯತ್ತ ಮುಖ ಮಾಡಿದ್ದಾರೆ, ಇದರ ನಡುವೆಯೂ ಶೋಷಣೆಗೆ ಒಳಗಾದ, ಶೋಷಿತರಾಗಿಯೂ ಸುಮ್ಮನೆ ಕುಳಿತಿರುವ, ದನಿ ಎತ್ತಲು ಹಿಂಜರಿಯುವ ಹೆಣ್ಣುಮಕ್ಕಳಿಗೊಂದು ಕಾನೂನು ದಿಕ್ಸೂಚಿ ಇದ್ದೇ ಇದೆ ಎನ್ನುವುದನ್ನು ಮರೆಯುವಂತಿಲ್ಲ.

ಕೌಟುಂಬಿಕ ಹಿಂಸೆ

ಮಹಿಳಾ ಪೀಡನೆ ಆರಂಭವಾಗುವುದು ಮೊದಲು ಮನೆ ಎಂಬ ನಾಲ್ಕು ಗೋಡೆಗಳ ಮಧ್ಯದಲ್ಲಿ. ವರದಕ್ಷಿಣೆ ಕಿರುಕುಳ, ತಾರಕಕ್ಕೇರುವ ಕೌಟುಂಬಿಕ ಕಲಹ, ಪತಿಯ ಪೀಡನೆ, ಕುಟುಂಬ ಸದಸ್ಯರ ದೌರ್ಜನ್ಯ.. ಇಂತಹವುಗಳನ್ನು ಹಲವು ಮಹಿಳೆಯರು ತಮ್ಮ ತಮ್ಮ ಮನೆಯಲ್ಲಿ ಅನುಭವಿಸಿ, ಆ ದುಃಖವನ್ನು ನುಂಗಿಕೊಂಡು ಬದುಕು ನಡೆಸುವ ಅನೇಕ ಉದಾಹರಣೆಗಳು ನಮ್ಮ ಸಮಾಜದಲ್ಲಿ ಇವೆ. ಕೆಲವೊಮ್ಮೆ ಮರ್ಯಾದೆಗೆ ಹೆದರಿ, ಇನ್ನು ಹಲವು ಸಲ ಕಾನೂನಿನ ಅರಿವಿಲ್ಲದೆ ದೌರ್ಜನ್ಯ ಅನುಭವಿಸುವ ಮಹಿಳೆಯರು ಕೊನೆಗೆ ಆತ್ಮಹತ್ಯಾ ಮಾರ್ಗ ಹಿಡಿದಿರುವ ಪ್ರಕರಣಗಳೂ ಇಲ್ಲದಿಲ್ಲ. ಯಾವುದೇ ಮದುವೆಯಾದ ಯುವತಿ ಮದುವೆಯಾದ ಹೊಸದರಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ವರದಕ್ಷಿಣೆ ಸಾವು ಎಂದು ಅನುಮಾನಿಸುವ ಸಾಧ್ಯತೆಗಳು ಹೆಚ್ಚು. ಈ ಮಧ್ಯೆ ಯಶಸ್ವಿಯಾಗಿ ಬದುಕು ಕಟ್ಟಿಕೊಂಡ ಪ್ರಕರಣಗಳು ಅಲ್ಲಲ್ಲಿ ಕಾಣಸಿಗುತ್ತವೆ. ಇದರ ನಡುವೆ ಅಕಸ್ಮಾತ್ ಗರ್ಭಪಾತ ಮಾಡಿಸಲು ಪತಿ ಅಥವಾ ಯಾರೇ ಒತ್ತಾಯಿಸಿದರೂ ಸಹ ಕಾನೂನಿನ ಮೊರೆಹೋಗಲು ಅವಕಾಶವಿದೆ.

ಕಚೇರಿಯಲ್ಲಿ ಕಿರುಕುಳ

ಒಂದು ಕಚೇರಿಯಲ್ಲಿ ಕೆಲವು ಮಹಿಳಾ ಸಿಬ್ಬಂದಿ ಇದ್ದಾರೆ ಎಂದ ತಕ್ಷಣ ಅಲ್ಲಿ ಒಂದಿಷ್ಟು ರಾಜಕೀಯ ಶುರುವಾಗುತ್ತದೆ. ಮಹಿಳೆಯರನ್ನು ನೋಡುವ ವಿಧಾನ, ಮಾತನಾಡಿಸುವ ಶೈಲಿ, ಪುರುಷರಿಗೆ ಸಿಗುವ ಪ್ರಾಮುಖ್ಯತೆ ಮತ್ತು ಇವೆರಡರ ನಡುವೆ ಲೈಂಗಿಕ ಕಿರುಕುಳ. ಇವೆಲ್ಲವನ್ನೂ ಮೆಟ್ಟಿನಿಂತು ಮಹಿಳೆ ತನ್ನ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲೂಬೇಕು, ತನ್ನನ್ನು ತಾನು ರಕ್ಷಿಸಿಕೊಳ್ಳಲೂ ಬೇಕು. ಆದರೆ ತುಂಬಾ ಹೆಣ್ಣುಮಕ್ಕಳು ಇಂತಹ ಸಂದರ್ಭದಲ್ಲಿ ವಿಫಲರಾಗುವ ಸಂದರ್ಭಗಳು ಒದಗಿಬಿಡುತ್ತವೆ. ಅಂತಹ ಸಮಯದಲ್ಲಿ ಮಹಿಳಾ ಕಾನೂನು ಸಹಾಯಕ್ಕೆ ಬರುತ್ತದೆ. ಇದರ ಜೊತೆಗೆ ಹೆರಿಗೆ ರಜೆ ಕೊಡಲು ಏನಾದರೂ ಕಿರಿಕಿರಿ ಮಾಡಿದರೆ ಆಗ ಕೂಡ ಕಾನೂನು ಸಹಾಯ ತೆಗೆದುಕೊಳ್ಳಬಹುದು.

ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ

ಎಷ್ಟೇ ತಿಳಿಹೇಳಿದರೂ ಸಮಾಜದಲ್ಲಿ ಮಹಿಳೆಯರನ್ನು ಭೋಗವಸ್ತುವಂತೆ ನೋಡುವವರು ಇದ್ದೇ ಇರುತ್ತಾರೆ. ಇಂತಹವರ ಹಾವ– ಭಾವ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜೊತೆ ಅಸಭ್ಯ ವರ್ತನೆ, ಸದಾ ಕಾಮದ ಕಣ್ಣಿಂದ ನೋಡುವ ದೃಷ್ಟಿಕೋನ ಇವೆಲ್ಲವೂ ಒಂಟಿ ಮಹಿಳೆಯರನ್ನು ಛೇಡಿಸುವ, ಲೈಂಗಿಕತೆಗೆ ಪ್ರಚೋದಿಸುವ ಸಲುವಾಗಿ ನಡೆಯುತ್ತಿರುತ್ತವೆ, ಆದರೆ ಅಂತಹ ಸಂದರ್ಭದಲ್ಲಿ ಮಹಿಳೆ ಸಂಯಮ ಕಳೆದುಕೊಳ್ಳದೆ ತಂತ್ರಜ್ಞಾನದ ಉಪಯೋಗ, ಪೊಲೀಸ್ ಸಹಾಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವಕಾಶವಿದೆ. ಅದಕ್ಕೆ ಸಂಬಂಧಿಸಿದ ಮೊಬೈಲ್ ಆ್ಯಪ್ ಕೂಡ ಈಗ ಲಭ್ಯವಿದೆ. ಆದರೆ ಆ ಕ್ಷಣದಲ್ಲಿ ಧೈರ್ಯ ತೋರುವ ಜಾಣ್ಮೆ ಬೆಳೆಸಿಕೊಳ್ಳಬೇಕು.

ಕೌಟುಂಬಿಕ ನ್ಯಾಯಾಲಯ

ಅನೇಕ ಕುಟುಂಬಗಳಲ್ಲಿ ವ್ಯಾಜ್ಯಗಳ ಜೊತೆಗೆ ಹಲವು ರೀತಿಯ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುತ್ತವೆ. ಈ ಪ್ರಕರಣಗಳು ಬಹುತೇಕ ಸಮಯದಲ್ಲಿ ನ್ಯಾಯಾಲಯದವರೆಗೂ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯಗಳು ತ್ವರಿತ ಗತಿಯಲ್ಲಿ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಪ್ರಸಂಗಗಳೂ ಇರುತ್ತವೆ. ಇದರ ಜೊತೆಗೆ ನ್ಯಾಯಾಲಯಕ್ಕೆ ಹೋಗಲು ಇಚ್ಛೆ ಪಡದವರಿಗೆ ಗೌಪ್ಯತೆಯನ್ನು ಕಾಪಾಡಲು ಕೌಟುಂಬಿಕ ನ್ಯಾಯಾಲಯಗಳು ಸಹಾಯ ಮಾಡುತ್ತವೆ. ಆದ ಕಾರಣ ಧೈರ್ಯವಾಗಿ ತಮಗಾದ ದೌರ್ಜನ್ಯದ ವಿರುದ್ಧ ದನಿ ಎತ್ತಲು ಕಾನೂನಿನಲ್ಲಿ ಅವಕಾಶವಿದೆ ಎನ್ನುವುದರ ಕುರಿತು ಅರಿಯುವುದು ಮುಖ್ಯ.

ಮಹಿಳೆಯರಿಗೆ ಆಸ್ತಿ ಹಕ್ಕು

ಮಹಿಳೆಯರಿಗೂ ಆಸ್ತಿಯಲ್ಲಿ ಹಕ್ಕಿದೆ. ಆದರೆ ಸಮಾನ ಆಸ್ತಿ ಹಕ್ಕುಗಳು ಎಂದ ತಕ್ಷಣ ಅದಕ್ಕಿರುವ ನಿಬಂಧನೆಗಳು ಮತ್ತು ಕಾನೂನಿನ ಅರಿವು ಬೆಳಸಿಕೊಂಡರೆ ಕುಟುಂಬಗಳ ಆಸ್ತಿ ವ್ಯಾಜ್ಯಗಳಲ್ಲಿ ನ್ಯಾಯ ದೊರಕಿಸಿಕೊಂಡು ತಮ್ಮ ಆಸ್ತಿಯನ್ನು ಪಡೆದುಕೊಳ್ಳಬಹುದು.

ಅವಾಚ್ಯ/ ಅಶ್ಲೀಲ ಪದಬಳಕೆ

ಮಹಿಳಾ ದೌರ್ಜನ್ಯ ಅಂದರೆ ಕೇವಲ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ ಮಾತ್ರವಲ್ಲ, ಅಸಹ್ಯ, ಅಸಭ್ಯ ಮತ್ತು ಅಶ್ಲೀಲ ಪದಬಳಕೆ ಕೂಡ ಈ ವ್ಯಾಪ್ತಿಗೆ ಬರುತ್ತದೆ. ಯಾರಾದರೂ ವಿನಾಕಾರಣ ಅ‍ಶ್ಲೀಲ ಪದ ಬಳಸಿದರೆ, ನಿಮ್ಮ ವ್ಯಕ್ತಿತ್ವಕ್ಕೆ, ಘನತೆಗೆ ಧಕ್ಕೆಯಾಗುವಂತಹ ಭಾಷಾ ಪ್ರಯೋಗ ಮಾಡಿದರೆ ಖಂಡಿತಾ ನೀವು ಕಾನೂನು ಹೋರಾಟ ಮಾಡಬಹುದು. ಸದಾ ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ಕಾನೂನು ಕೆಲಸ ಮಾಡುತ್ತದೆ ಎನ್ನುವ ಅರಿವು ನಮಗಿರಬೇಕು.

ಇವು ಕೇವಲ ಒಂದೆರಡು ಉದಾಹರಣೆ ಮಾತ್ರ, ಹಿರಿಯ ನಾಗರಿಕರ ಮೇಲೆ ನಡೆಯುವ ದೌರ್ಜನ್ಯ, ಮಕ್ಕಳು ಪೋಷಕರನ್ನು ಆಶ್ರಮಕ್ಕೆ ಸೇರಿಸಿ ಕೈತೊಳೆದುಕೊಳ್ಳುವ ಘಟನೆ ಇವೆಲ್ಲವೂ ಇನ್ನೂ ಮಹಾ ಕ್ರೂರ. ಒಂದು ಹೆಣ್ಣಿನ ಮನಸ್ಸಿನ ಮೇಲೆ ಆಗುವಂತಹ ಗಂಭೀರ ಪರಿಣಾಮಗಳು. ಇವೆಲ್ಲವನ್ನು ಮೆಟ್ಟಿ ನಿಲ್ಲಲು ಮಹಿಳಾ ಕಾನೂನು ಇದ್ದೇ ಇದೆ. ಆದರೆ ಉಪಯೋಗಿಸಿಕೊಳ್ಳಲು ಮಹಿಳೆಯರು ಮನಸ್ಸು ಮಾಡಬೇಕಷ್ಟೆ. ಏಕೆಂದರೆ ದೌರ್ಜನ್ಯ ನಡೆದಾಗ ಮಹಿಳೆ ಕಾನೂನು ಮೊರೆ ಹೋಗುವುದಕ್ಕಿಂತ ಮಾನಸಿಕವಾಗಿ ಕುಗ್ಗುವ ಸಂದರ್ಭಗಳೇ ಹೆಚ್ಚು,

ಸಹಾಯವಾಣಿ

ಮಹಿಳೆಯರ ಸುರಕ್ಷತೆಗೆವನಿತಾ ಸಹಾಯವಾಣಿ,ಮಕ್ಕಳ ಸಹಾಯವಾಣಿ,ಸುರಕ್ಷಾ ಮೊಬೈಲ್ ಆ್ಯಪ್‌, ಪೊಲೀಸ್ ಠಾಣೆ ಸಾಂತ್ವನ ಕೇಂದ್ರಗಳು,ಮಹಿಳಾ ಆಯೋಗ ಮೊದಲಾದವುಗಳಿವೆ. ಇವುಗಳ ಮೊರೆ ಹೋಗಬಹುದು.

(ಲೇಖಕಿ ಬೆಂಗಳೂರಿನಲ್ಲಿ ವಕೀಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT