ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಅವಳ ‘ಅಸ್ಮಿತೆ’ ಅವಳಿಗಿರಲಿ

ಮಗಳು ಸದಾ ಮಗಳಾಗಿಯೇ ಇರುತ್ತಾಳೆ
Last Updated 14 ಸೆಪ್ಟೆಂಬರ್ 2020, 7:20 IST
ಅಕ್ಷರ ಗಾತ್ರ

ಮೊನ್ನೆ ಫೇಸ್‌ಬುಕ್ ನೋಡ್ತಾ ಇದ್ದಾಗ ಸ್ನೇಹಿತೆಯೊಬ್ಬರು ತಮ್ಮ ವಾಲ್‌ನಲ್ಲಿ ಹಾಕಿದ್ದ ಪೋಸ್ಟ್‌ವೊಂದು ಗಮನ ಸೆಳೆಯಿತು. ಗಂಡನ ಮನೆಗೆ ಹೋದಾಕ್ಷಣ ಹೆಣ್ಣು ತನ್ನ ಹೆಸರಿನಿಂದ ಹಿಡಿದು ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವ ಮತ್ತು ಹೆಸರಿನಲ್ಲಿ ಅಡಗಿರುವ ಜಾತಿಯ ಗುರುತಿಸುವಿಕೆ ಕುರಿತ ಪೋಸ್ಟ್ ಅದಾಗಿತ್ತು. ಸದ್ಯಕ್ಕೆ ಜಾತಿಯ ವಿಷಯ ಬದಿಗಿಟ್ಟು... ಅವಳ ಹೆಸರಿನ ಬಗ್ಗೆ ಯೋಚಿಸೋಣ...

***

ಆತ್ಮೀಯ ಗೆಳತಿಯೊಬ್ಬಳನ್ನು ಭೇಟಿ ಮಾಡಲು ಅವಳ ಮನೆಗೆ ಹೋಗಿದ್ದೆ. ಮದುವೆಯಾಗಿ ಎರಡು ಮಕ್ಕಳಿದ್ದ ಅವಳು ದೊಡ್ಡಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಳು. ಮನೆಗೆ ಹೋದಾಗ ಅಡುಗೆ ಮನೆಯಲ್ಲಿದ್ದ ಅವಳಿಗೆ ನಾನು ಬಂದಿದ್ದು ಗೊತ್ತಾಗಿರಲಿಲ್ಲ. ಬಾಲ್ಯದಲ್ಲಿ ಕರೆಯುತ್ತಿದ್ದಂತೆಯೇ ಅವಳ ಹೆಸರು ಹಿಡಿದು ಕರೆದೆ.

ಹಾಲ್‌ನಲ್ಲಿ ಕುಳಿತಿದ್ದ ಅವರತ್ತೆ, ‘ಅಯ್ಯೋ ಅವಳಿಗೆ ಆ ಹೆಸರಿನಿಂದ ಕರೆಯಲ್ಲಮ್ಮಾ, ಮದುವೆಯಾದ್ಮೇಲೆ ಅವಳ ಹೆಸರು ಬದಲಿಸಿದ್ದೇವೆ. ಮದುವೆ ಸಮಯದಲ್ಲಿ ಅವಳಿಗೂ, ನನ್ನ ಮಗನಿಗೂ ಜಾತಕ ಕೂಡಿ ಬಂದಿರಲಿಲ್ಲ ಅಂತ ಹೆಸರು ಬದಲಾಯಿಸಲು ಹೇಳಿದ್ರು... ಅಂದ್ರು...’ ಅಷ್ಟರೊಳಗೆ ಅಡುಗೆ ಮನೆಯಿಂದ ಹೊರಬಂದ ಗೆಳತಿ, ‘ಅಯ್ಯೋ ಜಾಸ್ತಿ ಮಾತನಾಡಬೇಡ. ಸುಮ್ನೇ ಬಾ ರೂಂನಲ್ಲಿ ಹೋಗಿ ಮಾತಾಡೋಣ’ ಅಂತ ನನ್ನ ಕರೆದೊಯ್ದಳು. ಹೆಸರು ಯಾಕೆ ಬದಲಿಸಿದ್ರಿ ಅಂತ ಹೇಳೋಕೆ ಹೊರಟವಳು ಗೆಳತಿಯ ಮುಖ ನೋಡಿ ಬಾಯ್ಮುಚ್ಚಿಕೊಂಡಿದ್ದೆ. ‌

***

ಭಾರತದ ಬಹುತೇಕ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ತಮ್ಮ ಹೆಸರು ಬದಲಾಯಿಸುವುದು ಮೇಲ್ನೋಟಕ್ಕೆ ಸರಳವೆನಿಸಿದರೂ, ಆ ಬದಲಾವಣೆ ಪ್ರಕ್ರಿಯೆ ಅವಳ ‘ಅಸ್ಮಿತೆ’ಯನ್ನೇ ಪ್ರಶ್ನಿಸುವಂತಿರುತ್ತಿದೆ.

ಹೌದಲ್ಲ. ಹೆಣ್ಣೊಬ್ಬಳು ತವರು ಮನೆಯಿಂದ ಗಂಡನ ಮನೆಗೆ ಬಂದಾಗ ಹೆಸರಿನಿಂದ ಹಿಡಿದು ತನ್ನನ್ನು ಎಷ್ಟೆಲ್ಲಾ ದೈಹಿಕ–ಮಾನಸಿಕ ಬದಲಾವಣೆಗೆ ಒಡ್ಡಿಕೊಳ್ಳಬೇಕು? ಹೆತ್ತ ತಂದೆ–ತಾಯಿ ಮುದ್ದಾಗಿ ಇಟ್ಟಿದ್ದ ಅಷ್ಟು ಚಂದದ ತನ್ನ ಹೆಸರನ್ನೇ ಮರೆಮಾಚುವಷ್ಟು ಕ್ರೂರಿಯೇ ಗಂಡ ಮತ್ತು ಗಂಡನ ಮನೆಯ ಪ್ರೀತಿ? ಅಷ್ಟು ವರ್ಷಗಳ ಆ ಹೆಸರಿನಿಂದ ಬದುಕಿದ್ದವಳಿಗೆ, ಶಾಲೆ–ಕಾಲೇಜು, ಬಂಧು–ಬಳಗ, ಸ್ನೇಹಿತರು ಅವಳನ್ನು ಅವಳ ಹೆಸರಿನಿಂದಲೇ ಕರೆಯುತ್ತಿದ್ದ ರೀತಿ ತಾನಿನ್ನು ವಿವಾಹಿತೆ ಅನ್ನುವ ಕಾರಣಕ್ಕಾಗಿ ಬದಲಿಸಿಕೊಳ್ಳಬೇಕೆ? ಹೊಸ ಹೆಸರಿನಿಂದ ಗಂಡನ ಮನೆಯವರು ಕರೆದಾಗ ಇಷ್ಟವಿಲ್ಲದಿದ್ದರೂ ಅದನ್ನು ಮುಖದ ಮೇಲಿನ ನಗುವಿನ ಆಭರಣದಂತೆ ಕೃತಕವಾದರೂ ಸರಿಯೇ ಸ್ಪಂದಿಸುವುದನ್ನು ರೂಢಿಸಿಕೊಳ್ಳಬೇಕೆ?.... ಹೀಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳೆ ಅವಳೆದೆಯ ‘ಅಗ್ನಿಕುಂಡ’ದಲ್ಲಿ ...

ಹೆಸರು ಬದಲಾವಣೆಯ ನೆಪದಲ್ಲಿ ಈ ಹಿಂದಿದ್ದ ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವ ಪ್ರಕ್ರಿಯೆಗೆ ವಿವಾಹಿತೆ ಅಣಿಯಾಗಬೇಕಿದೆ. ಆದರೆ, ಇಂಥ ಬದಲಾವಣೆ ವಿವಾಹಿತನಿಗಿಲ್ಲ. ಮದುವೆ ಎಂಬುದು ಎರಡು ಮನಸುಗಳ ಮೌನ ಬೆಸುಗೆಯಷ್ಟೇ ಅಲ್ಲ ಎರಡು ಕುಟುಂಬಗಳ ಸಮ್ಮಿಲನವಾಗಬೇಕೆಂಬ ಆಶಯ, ಅವಳ ಹೆಸರು ಬದಲಿಸುವಿಕೆಯಿಂದಲೇ ಮುರಿದುಬೀಳುತ್ತದೆ. ಅದು ಪ್ರೇಮ ವಿವಾಹವೇ ಇರಲಿ, ಮನೆಯವರು ನೋಡಿ ಮಾಡಿದ ಮದುವೆಯೇ ಇರಲಿ, ಇಲ್ಲಿ ಬದಲಾವಣೆಗೆ ಒಗ್ಗಿಕೊಳ್ಳಬೇಕಿರುವುದು ಅವಳಷ್ಟೇ!

ತಾಳಿ, ಕಾಲುಂಗುರ, ಬೈತಲೆಯಲಿ ಸಿಂಧೂರ... ಅವಳನ್ನು ನೀನಿನ್ನು ವಿವಾಹಿತೆ ಅನ್ನುವುದನ್ನು ಪದೇಪದೇ ನೆನಪಿಸುವ ಸಂಕೇತಗಳಾದರೆ, ಅವನಿಗೆ ಮಾತ್ರ ಇದ್ಯಾವುದರ ಹಂಗಿಲ್ಲ. ಕೆಲವೊಮ್ಮೆ ಅವನಾಗಿಯೇ ಹೇಳಿಕೊಂಡರೆ ಇಲ್ಲವೇ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಮ್ಯಾರೀಡ್ ಅಂತ ನಮೂದಿಸಿದರೆ ಮಾತ್ರ ಅವನು ವಿವಾಹಿತ! (ಬಹುತೇಕ ಗಂಡಂದಿರ ಪ್ರೊಫೈಲ್‌ನಲ್ಲಿ ಸಿಂಗಲ್ ಅಂತಲೇ ಇರುತ್ತದೆ, ಮ್ಯಾರೀಡ್ ಅನ್ನುವ ಬಗ್ಗೆ ನಮೂದಿಸಿಯೇ ಇರುವುದಿಲ್ಲ!)

ವಿವಾಹವಾದ ನಂತರ ಅವಳು ಶ್ರೀಮತಿ, ಇಂಥವರ ಹೆಂಡತಿ ಎಂದು ತನ್ನ ಮೂಲಸ್ವರೂಪವನ್ನೇ ಬದಲಾಯಿಸಿಕೊಳ್ಳುವಷ್ಟು ಬದಲಾಗುತ್ತಾಳೆ. ಇಲ್ಲಿ ಹೆಣ್ಣಿನ ಹೆಸರಷ್ಟೇ ಅಲ್ಲ ಅವಳ ಸರ್‌ನೇಮ್ (ಉಪನಾಮ) ಕೂಡಾ ಬದಲಾಗಬೇಕಾಗುತ್ತದೆ. ಆ ಮೂಲಕ ಅವಳು ಇಂಥ ಕುಟುಂಬಕ್ಕೆ ಸೇರಿದವಳು ಅನ್ನುವುದು ಅವಳ ಗುರುತಾಗುತ್ತದೆ.

ಆಕೆ ಎಂಥದ್ದೇ ಉನ್ನತ ಹುದ್ದೆಯಲ್ಲಿದ್ದರೂ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರದಲ್ಲಿದ್ದರೂ ಮದುವೆಯಾದ ಮೇಲೆ ತನ್ನ ಹೆಸರಿನೊಂದಿಗಿನ ಸರ್‌ನೇಮ್ ಅನ್ನಾದರೂ ಬದಲಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಒಂದು ವೇಳೆ ಬದಲಿಸಿಕೊಳ್ಳದಿದ್ದಲ್ಲಿ ಅವಳನ್ನು ಅಹಂನ ಕೋಟೆಯಲ್ಲಿರಿಸಲಾಗುತ್ತದೆಯೋ ಹೊರತು, ಅದು ಅವಳ ಸ್ವಾಭಿಮಾನ, ಆತ್ಮಾಭಿಮಾನ ಎಂದು ಗೌರವಿಸುವುದು ಅಷ್ಟಕಷ್ಟೇ. ಇದಕ್ಕೆ ಹೊರತುಪಡಿಸಿದ ನಿದರ್ಶನಗಳು ಇದ್ದರೂ ಅವುಗಳ ಸಂಖ್ಯೆ ತೀರಾ ಕಮ್ಮಿ.

ಹಾಗಂತ, ಈ ಬದಲಾವಣೆ ಎಲ್ಲ ಮಹಿಳೆಯರಿಗೆ ಅನ್ವಯಿಸದು. ಕೆಲ ಕುಟುಂಬಗಳು ಮದುವೆಯಾಗಿ ತಮ್ಮನೆಗೆ ಬರುವ ಸೊಸೆಯನ್ನು ಮಗಳಾಗಿಯೇ ಸ್ವೀಕರಿಸಿವೆ. ಅತ್ತೆ–ಸೊಸೆ ಬಾಂಧವ್ಯ ತಾಯಿ–ಮಗಳು ಇಲ್ಲವೇ ಗೆಳತಿಯರ ನಡುವಿನ ಬಾಂಧವ್ಯದಂತೆ ಹಚ್ಚಹಸಿರಾಗಿರುವುದೂ ಉಂಟು. ಮಾವನಿಂದ ಅಪ್ಪನಷ್ಟೇ ಗೌರವ, ಪ್ರೀತಿ ಪಡೆದ ಹೆಣ್ಣುಮಕ್ಕಳೂ ಇದ್ದಾರೆ.

ಬಹುತೇಕ ಹೆಣ್ಣು ಮಕ್ಕಳು ತಮ್ಮ ಗಂಡನ ಮೇಲಿನ ಪ್ರೀತಿಗಾಗಿ ತನ್ನ ಹೆಸರಿನೊಂದಿಗೆ ಅವನ ಹೆಸರನ್ನು ಸೇರಿಸಿಕೊಂಡಿದ್ದೇವೆ ಎನ್ನುತ್ತಾರೆ. ಹಾಗಿದ್ದರೆ ಗಂಡನೂ ಅವಳ ಮೇಲಿನ ಪ್ರೀತಿಗಾಗಿ ತನ್ನ ಹೆಸರಿನ ಮುಂದೆ ಹೆಂಡತಿ ಹೆಸರು ಹಾಕಿಕೊಳ್ಳಬಹುದಲ್ಲ ಅಂತ ಪ್ರಶ್ನಿಸಿದರೆ ಅದಕ್ಕೆ ಬಹುತೇಕ ನೀರೆಯರು ‘ನಿರುತ್ತರೆಯರು’. ಈ ಪ್ರಶ್ನೆ ಬರೀ ಗಂಡನ ಹೆಸರನ್ನು ತನ್ನ ಹೆಸರಿನೊಂದಿಗೆ ಬಳಸಿಕೊಳ್ಳುವ ಪ್ರಶ್ನೆಗೆ ಮಾತ್ರ ಸೀಮಿತವಲ್ಲ. ತಂದೆಯ ಹೆಸರನ್ನು ಮಗಳ ಹೆಸರಿನೊಂದಿಗೆ ಜೋಡಿಸುವಲ್ಲೂ ಏಳುತ್ತದೆ. ನಾವ್ಯಾಕೆ ಅಪ್ಪನ ಹೆಸರನ್ನೇ ನಮ್ಮ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತೇವೆ. ಮನೆಯೊಳಗೂ, ಮನೆಹೊರಗೂ ದುಡಿಯುವ ಅಮ್ಮನ ಹೆಸರನ್ನೇಕೆ ಇಟ್ಟುಕೊಳ್ಳುವುದಿಲ್ಲ? ಉತ್ತರ ಮಾತ್ರ ನಮ್ಮ ನಮ್ಮ ಮನಸುಗಳಲ್ಲಿ ಜೋಪಾನವಾಗಿದೆ!

ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಆಸ್ತಿಯ ಭಾಗವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ಗಂಡಿನ ಆಸೆ–ಆಕಾಂಕ್ಷೆಗಳಿಗೆ ತಕ್ಕಂತೆ ಆಕೆಯ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಈ ರೀತಿ ಹಾಸುಹೊಕ್ಕಾಗಿರುವ ಸಿಕ್ಕುಗಳಲ್ಲಿ ಸಿಲುಕಿರುವ ಹೆಣ್ಣು ತನ್ನ ಮೂಲ ‘ಅಸ್ಮಿತೆ’ಯ ಹುಡುಕಾಟದಲ್ಲಿದ್ದಾಳೆ.

ಹಾಗಿದ್ದರೆ ಮದುವೆಯಾದ ತಕ್ಷಣ ಹೆಣ್ಣು ಗಂಡ, ಗಂಡನ ಮನೆಯ ಸ್ವತ್ತೇ? ಅನ್ನುವ ಪ್ರಶ್ನೆಗೆ ಉತ್ತರವೆಂಬಂತೆ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ‘ಮಗಳು ಸದಾ ಮಗಳಾಗಿಯೇ ಇರುತ್ತಾಳೆ. ಆದರೆ, ಮಗ ಮದುವೆ ಆಗುವವರೆಗೆ ಮಾತ್ರ ಮಗನಾಗಿ ಇರುತ್ತಾನೆ’ ಎನ್ನುವ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರ ಒಂದು ಸಾಲಿನ ಈ ಮಾತು, ಹೆಣ್ಣುಮಕ್ಕಳ ಅಸ್ತಿತ್ವವನ್ನು ಬೆಂಬಲಿಸುವಂಥದ್ದು.

‘ಅಷ್ಟಕ್ಕೂ ಈ ಹೆಸರಿನಲ್ಲೇನಿದೆ ಬಿಡಿ’ ಅನ್ನುವ ಶೇಕ್ಸ್‌ಪಿಯರ್‌ನ ಪ್ರಶ್ನೆ ನಿಮ್ಮದೂ ಆಗಿದ್ದರೆ, ‘ಹೆಸರಿನಲ್ಲಿ ನಮ್ಮ ಗುರುತಿದೆ, ಅಸ್ತಿತ್ವವಿದೆ’ ಅನ್ನುವ ಉತ್ತರ ಈಗಿನ ಹೆಣ್ಣುಮಕ್ಕಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT