ಮಂಗಳವಾರ, ಫೆಬ್ರವರಿ 18, 2020
23 °C

ಆನ್‌ಲೈನ್‌ ಪ್ರೇಮದ ಸಿಹಿಗೆ ವಂಚನೆಯ ಕಹಿ

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

Prajavani

ಆನ್‌ಲೈನ್‌ ಪ್ರೇಮ ಕೆಲವರಿಗೆ ಕಿಕ್‌ ಕೊಟ್ಟರೆ, ಇನ್ನು ಕೆಲವರಿಗೆ ಸಮಯ ಕೊಲ್ಲುವ ಒಂದು ಸಾಧನವಿದ್ದಂತೆ. ಆದರೆ ವಂಚಕರು ಈ ಪ್ರೀತಿ– ಪ್ರೇಮವನ್ನೇ ಆರ್ಥಿಕವಾಗಿ ಮೋಸ ಮಾಡುವ ಸಾಧನವನ್ನಾಗಿ ಬಳಸುತ್ತಿದ್ದಾರೆ. ಇಂತಹ ಮೋಸಗಾರರಿಂದ ದೂರವಿರುವುದು ಹೇಗೆ?

ಆಕೆ 28ರ ಯುವತಿ. ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗ. ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಹೆಸರು ನೊಂದಾಯಿಸಿಕೊಂಡ ಯುವಕನ ಪರಿಚಯವಾಯ್ತು. ಅದು ಪ್ರೇಮಕ್ಕೂ ತಿರುಗಿ, ಮದುವೆಯಾಗಲೂ ನಿರ್ಧಾರಕ್ಕೆ ಬಂದರು. ಯುವಕ ಅಪಾರ್ಟ್‌ಮೆಂಟ್‌ ಬಾಡಿಗೆ ಹಿಡಿಯುವ ನೆಪ ಹೇಳಿ ಆಕೆಯ ಆನ್‌ಲೈನ್‌ ಬ್ಯಾಂಕಿಂಗ್‌ ವಿವರ ಪಡೆದು ಕೆಲವು ಲಕ್ಷ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡ. ಕ್ಷಣಮಾತ್ರದಲ್ಲಿ ಒಂದೇ ಸಮನೆ ವಿವಿಧ ಖಾತೆಗಳಿಗೆ ಆಕೆಯ ಹಣ ವರ್ಗಾವಣೆಗೊಂಡಿತು. ಎಚ್ಚೆತ್ತುಕೊಂಡ ಆಕೆ ಆತನನ್ನು ಸಂಪರ್ಕಿಸಲು ಯತ್ನಿಸಿದರೆ ಫೋನ್‌ ಬಂದ್‌ ಆಗಿತ್ತು. ಮ್ಯಾಟ್ರಿಮೋನಿಯಲ್‌ನಲ್ಲಿ ಕೂಡ ಆತ ನಕಲಿ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿದ್ದ. ದೊಡ್ಡ ಮೊತ್ತದ ಹಣ ಕಳೆದುಕೊಂಡ ಯುವತಿ ಪೊಲೀಸ್‌ಗೆ ದೂರು ನೀಡಿದ್ದಾಳೆ. ಮೋಸ ಹೋಗಿದ್ದರಿಂದ ಖಿನ್ನತೆಗೆ ಒಳಗಾಗಿ ಆಪ್ತ ಸಮಾಲೋಚಕರ ಮೊರೆ ಹೋಗಿದ್ದಾಳೆ.

ಇನ್ನೊಂದು ಘಟನೆ ಕೂಡ ಬೆಂಗಳೂರಿನಲ್ಲೇ ಕೆಲವು ದಿನಗಳ ಹಿಂದೆ ಸಂಭವಿಸಿದ್ದು. ಆಕೆ 45ರ ಹರೆಯದ ವಿಚ್ಛೇದಿತ ಮಹಿಳೆ. ಚೆನ್ನಾಗಿ ನಡೆಯುತ್ತಿರುವ ಸ್ವಂತ ಬ್ಯುಸಿನೆಸ್‌. ಅಪಾರ ಆಸ್ತಿಯ ಒಡತಿ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತಾನು ಅಮೆರಿಕದಲ್ಲಿ ಎಂಜಿನಿಯರ್‌ ಎಂದು ಹೇಳಿಕೊಂಡು ಆಕೆಯ ವಿಶ್ವಾಸ ಬೆಳೆಸಿಕೊಂಡ. ಮದುವೆಯಾಗುವುದಾಗಿಯೂ ನಂಬಿಸಿದ. ಒಂದು ಬಾರಿಯೂ ಮುಖತಃ ಭೇಟಿಯಾಗದ ಆತನನ್ನು ಮದುವೆಯಾಗಲು ಒಪ್ಪಿಕೊಂಡ ಆ ಮಹಿಳೆಗೆ ಒಂದು ದಿನ ಫೋನ್‌ ಕರೆ ಮಾಡಿ ಭಾರತಕ್ಕೆ ತನ್ನಲ್ಲಿದ್ದ ಹಣವನ್ನು ವರ್ಗಾಯಿಸಲು ನಿರ್ಧರಿಸಿರುವುದಾಗಿಯೂ, ಅದಕ್ಕಾಗಿ ಸರ್ಕಾರದ ಕಾನೂನಿನ ಪ್ರಕಾರ ಹಣ ಕಟ್ಟಬೇಕೆಂದೂ ಹೇಳಿದ. ಅದನ್ನು ಭಾರತದಲ್ಲೇ ಕಟ್ಟಬೇಕು ಎಂದು ಹೇಳಿ ಭಾರತದ ಹಣಕಾಸು ಇಲಾಖೆಯ ಕೆಲವು ದಾಖಲೆಗಳನ್ನೂ ಕಳಿಸಿದ. ನಕಲಿ ದಾಖಲೆ, ಆತನ ಬಣ್ಣದ ಮಾತುಗಳನ್ನು ನಂಬಿದ ಆಕೆ ಫಂಡ್‌ ವರ್ಗಾವಣೆಗೆ ಲಕ್ಷಗಟ್ಟಲೆ ಹಣ ತೆತ್ತಳು. ಕೊನೆಗೆ ವಂಚನೆಗೆ ಒಳಗಾಗಿದ್ದು ಅರಿವಾಗಿ ಪೊಲೀಸರಿಗೆ ದೂರು ಹೋಯಿತು. ಸದ್ಯ ಆತ ಸಿಕ್ಕಿ ಬಿದ್ದು ಜೈಲು ಪಾಲಾಗಿದ್ದಾನೆ.

ಈ ಮೇಲಿನ ಘಟನೆಗಳು ಉದಾಹರಣೆ ಮಾತ್ರ. ಈ ರೀತಿಯ ಘಟನೆಗಳನ್ನು ಕೆದಕುತ್ತ ಹೋದರೆ ಸಾಕಷ್ಟು ಸಿಗುತ್ತವೆ. ಸೈಬರ್‌ ಅಪರಾಧ ವಿಭಾಗದಲ್ಲಿ ದಾಖಲಾದ ದೂರುಗಳ ಜೊತೆಗೆ ಮರ್ಯಾದೆಗೆ, ಬೆದರಿಕೆಗೆ ಅಂಜಿ ಹಾಗೇ ಹತಾಶರಾಗಿ ಕೂತವರು ಇನ್ನೆಷ್ಟು ಮಂದಿಯೋ!

ಪ್ರೀತಿಯ ನಾಟಕ

ಇಂತಹ ಪ್ರಕರಣಗಳಲ್ಲಿ ಪ್ರೀತಿ– ಪ್ರೇಮದ ನಾಟಕ, ಆನ್‌ಲೈನ್‌ ವಂಚನೆಗಳು ಎರಡೂ ಸೇರಿವೆ. ಪುರುಷರೂ ಇಲ್ಲಿ ವಂಚನೆಗೆ ಒಳಗಾಗಿದ್ದಾರೆ. ಆದರೆ ಅಂಥವು ಕಡಿಮೆ ಅಷ್ಟೆ.

ಘಟನೆಗಳ ವಿವರಗಳನ್ನು ಕೆದಕುತ್ತ ಹೋದರೆ ಡೇಟಿಂಗ್‌ ಆ್ಯಪ್‌ನಲ್ಲೋ, ಸಾಮಾಜಿಕ ಜಾಲತಾಣ ಅಥವಾ ಮ್ಯಾಟ್ರಿಮೋನಿಯಲ್‌ನಲ್ಲೋ ಪರಿಚಯವಾದ ಮಹಿಳೆಯರನ್ನು ಮೊದಲು ದೈಹಿಕ ಸಂಬಂಧಕ್ಕೆ ಬಳಸಿಕೊಂಡು ನಂತರ ಬ್ಲ್ಯಾಕ್‌ಮೇಲ್‌ ಮಾಡಿದ ಸಾಮಾನ್ಯ ಅಂಶ ಬೆಳಕಿಗೆ ಬರುತ್ತದೆ. ‘ಸಾಮಾನ್ಯವಾಗಿ ತಾವು ಆರ್ಥಿಕವಾಗಿ ಶ್ರೀಮಂತರು. ಆಸ್ತಿ, ಹಣಕಾಸು ಬೇಕಾದಷ್ಟಿದೆ. ಯಾವುದಕ್ಕೂ ಕೊರತೆಯಿಲ್ಲ. ವಿದೇಶದಲ್ಲಿ ಒಳ್ಳೆಯ ಕೆಲಸ.. ಎಂದು ತೋರ್ಪಡಿಸಿಕೊಳ್ಳುವವರನ್ನು ಸುಲಭವಾಗಿ ನಂಬಬೇಡಿ. ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಅವರು ಹಾಕಿಕೊಂಡಂತಹ ವ್ಯಕ್ತಿ ಚಿತ್ರಣವನ್ನು ಕೂಲಂಕಷವಾಗಿ ಪರಿಶೀಲಿಸಿ’ ಎನ್ನುತ್ತಾರೆ ಇಂತಹ ವೆಬ್‌ಸೈಟ್‌ ನಡೆಸುತ್ತಿರುವ ವಿಶಾಂತ್‌ ಪ್ರಭು.

ಅದರಲ್ಲೂ ತಾನು ವಿದೇಶದಲ್ಲಿದ್ದೇನೆ. ಸಾಕಷ್ಟು ಸ್ಥಿತಿವಂತ. ಭಾರತಕ್ಕೆ ಬರಲು ಅಥವಾ ತನ್ನ ಗಳಿಕೆಯನ್ನು ಇಲ್ಲಿಗೆ ವರ್ಗಾವಣೆ ಮಾಡಲು ಹಣಕಾಸು ನೆರವು ಬೇಕಾಗಿದೆ ಎಂದು ಹೇಳಿದರೆ ನಂಬದಿರುವುದೇ ಸೂಕ್ತ.

ವಂಚನೆಗೆ ಹಲವು ಮುಖಗಳು

ವಂಚನೆಗೆ ಹಲವು ಮುಖಗಳಂತೆ. ಇವುಗಳ ಜೊತೆಗೆ ಇನ್ನೊಂದು ರೀತಿಯ ಮೋಸ ನಡೆಯುತ್ತಿರುವುದು ಮಾಮೂಲು ಎಂಬಂತಾಗಿಬಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲೋ, ಮ್ಯಾಟ್ರಿಮೋನಿಯಲ್‌
ನಲ್ಲೋ ಪರಿಚಯವಾದವರು ವಿದೇಶದಿಂದ ದುಬಾರಿ ಉಡುಗೊರೆ ಕಳಿಸಿರುವುದಾಗಿಯೂ, ಇದು ಕಸ್ಟಮ್ಸ್‌ನಲ್ಲಿ ಸಿಕ್ಕಿಕೊಂಡಿದ್ದು ಅದನ್ನು ಹಣ ಕೊಟ್ಟು ಬಿಡಿಸಿಕೊಳ್ಳಬೇಕೆಂದೂ ಬೇಡಿಕೆ ಇಡುತ್ತಾರೆ. ಅದಕ್ಕೆ ಸರಿಯಾಗಿ ಕಸ್ಟಮ್ಸ್‌ ಅಧಿಕಾರಿ ಎಂದು ಹೇಳಿಕೊಂಡ ವಂಚಕನಿಂದ ಕರೆಯೂ ಬರುತ್ತದೆ. ಕೆಲವೊಮ್ಮೆ ನಕಲಿ ದಾಖಲೆಗಳನ್ನೂ ಕಳಿಸುತ್ತಾರೆ. ಆದರೆ ಹಣ ತೆತ್ತು ಪಾರ್ಸೆಲ್‌ ಬಿಡಿಸಿಕೊಂಡು ಅದರೊಳಗೆ ಏನೂ ಇಲ್ಲದಿರುವುದು ಕಂಡು ಬಂದಾಗಲೇ ವಂಚನೆಗೆ ಒಳಗಾಗಿದ್ದು ಗೊತ್ತಾಗುವುದು; ಪೊಲೀಸ್‌ ಠಾಣೆಯ ಮೆಟ್ಟಿಲೇರುವುದು.

ಹೆಚ್ಚಿನವರು ಧ್ವನಿ ಪರಿವರ್ತಿಸುವ (ವಾಯ್ಸ್‌ ಮಾಡ್ಯುಲೇಶನ್‌) ಆ್ಯಪ್‌ ಬಳಸಿ ಮಾತನಾಡುತ್ತಾರೆ ಎನ್ನುತ್ತಾರೆ ಖಾಸಗಿ ಸೈಬರ್‌ ಭದ್ರತೆ ಏಜೆನ್ಸಿ ನಡೆಸುತ್ತಿರುವ ಚೇತನ್‌ ಅಟ್ಟೂರು.

ಬೆಂಗಳೂರಿನಲ್ಲಿ 48ರ ಹರೆಯದ ವಿಚ್ಛೇದಿತ ವ್ಯಕ್ತಿಯೊಬ್ಬ ಈ ರೀತಿಯ ಪ್ರೀತಿ– ಪ್ರೇಮದ ನಾಟಕಕ್ಕೆ ಒಳಗಾಗಿ ಕೋಟಿಗಟ್ಟಲೆ ಕಳೆದುಕೊಂಡ ನಂತರ ದೂರು ಕೊಟ್ಟರು. ಪೊಲೀಸರು ಬಂಧಿಸಿದ ಆರೋಪಿ ಪುರುಷನಾಗಿದ್ದ!

ವಂಚಕರಿಂದ ದೂರವಿರಲು ಏನು ಮಾಡಬೇಕು?

# ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯನ್ನು ತಕ್ಷಣಕ್ಕೆ ನಂಬಬೇಡಿ. ನಿಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ನಂಬಿಕಸ್ಥರಿಗೆ, ಆ ವ್ಯಕ್ತಿಯ ಪರಿಚಯ ಇರುವವರ ಬಳಿ ವಿವರಗಳನ್ನು ಕಲೆಹಾಕಲು ಹೇಳಿ. ವಿವರಗಳು ಸಿಗದಿದ್ದರೆ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಹಾಗೆಯೇ ಪರಿಚಯವಾದ ವ್ಯಕ್ತಿಯ ಜೊತೆ ಸಾಮಾಜಿಕ ಜಾಲತಾಣ ಅಥವಾ ಡೇಟಿಂಗ್‌ ಆ್ಯಪ್‌ನಲ್ಲೇ ಮಾತುಕತೆ ಮುಂದುವರಿಸಿ. ಇದರ ಹೊರತಾಗಿ ತಕ್ಷಣಕ್ಕೆ ಫೋನ್‌ ನಂಬರ್‌, ಮೇಲ್‌ ಐಡಿ ನೀಡಲಿಕ್ಕೆ ಹೋಗಬೇಡಿ.

# ಯಾವುದೇ ಕಾರಣಕ್ಕೂ ಆರಂಭದಲ್ಲೇ ನಿಮ್ಮ ವೈಯಕ್ತಿಕ ವಿವರ, ಹಣಕಾಸಿನ ವಿವರ, ಬ್ಯಾಂಕ್‌ ಖಾತೆಗಳ ಬಗ್ಗೆ ಮಾಹಿತಿ ನೀಡಬೇಡಿ. ಸಂಕಷ್ಟದಲ್ಲಿರುವುದಾಗಿ ಹೇಳಿ ಹಣಕಾಸಿನ ನೆರವು ಬೇಡಿದರೆ ನಂಬಬೇಡಿ.

# ಮಾತುಕತೆಯ ಸಂದರ್ಭದಲ್ಲಿ ವಂಚನೆಯ ವಾಸನೆ ಸಿಕ್ಕರೆ ಸಂಬಂಧಪಟ್ಟ ಡೇಟಿಂಗ್‌ ಆ್ಯಪ್‌ನ ಅಡ್ಮಿನ್‌ ಗಮನಕ್ಕೆ ತರಬಹುದು. ಹಣಕಾಸು ಅಥವಾ ಲೈಂಗಿಕವಾಗಿ ವಂಚನೆಗೆ ಒಳಗಾದರೆ ಸೈಬರ್‌ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿ. ಈಗಂತೂ ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರತಿಯೊಂದು ಪೊಲೀಸ್‌ ಠಾಣೆಯಲ್ಲಿಯೂ ಈ ಬಗ್ಗೆ ದೂರು ಸಲ್ಲಿಸುವ ಅವಕಾಶ ನೀಡಲಾಗಿದೆ.

# ವ್ಯಕ್ತಿಯನ್ನು ಮುಖತಃ ಭೇಟಿ ಮಾಡುವುದಿದ್ದರೆ ಏಕಾಂತದ ಜಾಗಕ್ಕೆ ಹೋಗಬೇಡಿ. ವಿವರಗಳನ್ನು ಕುಟುಂಬದವರಿಗೆ, ನಿಕಟ ಸ್ನೇಹಿತರಿಗೆ ಮೊದಲೇ ತಿಳಿಸುವುದು ಸೂಕ್ತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು