ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಬೆನ್ನೇರಿ ಕಲ್ಪನಾ ವಿಲಾಸ...

Last Updated 17 ಮಾರ್ಚ್ 2023, 20:00 IST
ಅಕ್ಷರ ಗಾತ್ರ

ಅಂದು ಏಪ್ರಿಲ್ 25, ಅಯೋಧ್ಯೆಯಿಂದ ಆಗ್ರಾದತ್ತ ತೆರಳುವ ರಸ್ತೆಯಲ್ಲಿ ಬೈಕ್ ಹೊರಟಿತ್ತು. ಕಾಲು ಕ್ಲಚ್‌– ಗೇರ್‌ಗಳ ಲಯದಲ್ಲಿದ್ದರೆ, ಕಣ್ಣು ಆಗ್ರಾದ ಸೊಬಗನ್ನು ಆನಂದಿಸುವ ತವಕದಲ್ಲಿತ್ತು. ಲಖನೌ ಸಮೀಪ ಬಾರಾಬಂಕಿಯಲ್ಲಿ ಸ್ಕಾರ್ಪಿಯೊ ವಾಹನ ಒಮ್ಮೆಲೇ ಬಂದು ಬೈಕ್‌ಗೆ ಗುದ್ದಿದಾಗ, ಅರೆಕ್ಷಣ ಏನಾಯಿತೆಂದು ತೋಚಲಿಲ್ಲ...

ನನ್ನ ಬೈಕ್‌ ರೈಡ್ ಪಯಣದ ರೀಲ್‌ ತಿರುವಿದರೆ ಥಟ್ಟನೆ ನೆನಪಾಗುವುದೇ ಇದು. ಬೈಕ್‌ ರೈಡ್ ಕಥನ ಹುಟ್ಟಿದ್ಧೇ ಒಂದು ಆಕಸ್ಮಿಕ. ಇದು ಸಂಕಟದಿಂದ ಸಂತಸ ಹರಿಸಿದ ಒಂದರ್ಥದಲ್ಲಿ ಸಾಹಸದ ಕತೆ.

ಅಪ್ಪನಿಗೆ ಅಂಟಿಕೊಂಡ ಮಗಳಾಗಿದ್ದೆ ನಾನು. ಅಪ್ಪ ನಮ್ಮನ್ನು ಬಿಟ್ಟು ದೇವರ ಪಾದ ಸೇರಿದರು. ಜೀವತಂತು ಕಳಚಿಕೊಂಡ ಆಘಾತ ಅದು. ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯ ತ್ನಿಸಿದೆ. ದೇವರಿಗೆ ನಾನು ಜೀವಕಳೆದುಕೊಳ್ಳುವುದು ಬಹುಶಃ ಇಷ್ಟವಿರಲಿಲ್ಲ, ಬದುಕಿಸಿದ. ಅಮ್ಮ ಹೇಳಿದರು, ‘ಸಾಧಿಸಿ ತೋರಿಸು, ಸಮಾಜ ನಿನ್ನತ್ತ ತಿರುಗಿ ನೋಡುತ್ತದೆ’ ಅಂತ.

12 ವರ್ಷದವಳಿದ್ದಾಗ ಬೈಕ್ ರೈಡಿಂಗ್ ಕಲಿತಿದ್ದೆ. 18 ವರ್ಷ ಆದ ಮೇಲೆ ಪರವಾನಗಿ ಪಡೆದು ರಸ್ತೆಯಲ್ಲಿ ಬೈಕ್ ಓಡಿಸಲು ಶುರು ಮಾಡಿದ್ದೆ. ಅಪ್ಪನನ್ನು ಕಳೆದುಕೊಂಡ ವೇದನೆ, ನೋವನ್ನು ಮರೆಯಲು ಬೈಕ್ ರೈಡಿಂಗ್ ಅಭ್ಯಾಸ ಮಾಡಿಕೊಂಡೆ. ಸುತ್ತಮುತ್ತಲಿನವರು ಹುಡುಗಿಯಾಗಿ ಬೈಕ್ ಓಡಿಸುತ್ತಾಳೆಂದು ಟೀಕಿಸಿದರು. ನನ್ನ ಉತ್ಸಾಹದ ಬಲೂನಿಗೆ ಸೂಜಿಯ ಮೊನೆ ತಾಕಿತು. ಅಮ್ಮ ಬೆನ್ನಿಗೆ ನಿಂತರು, ಬೈಕ್‌ನಲ್ಲಿ ಭಾರತ ಸುತ್ತುವ ನಿರ್ಧಾರ ಮಾಡಿದೆ. ಒಂದು ವಾರದಲ್ಲಿ ಪ್ಲಾನ್ ಮಾಡಿ ವಾಹನ ದುರಸ್ತಿಯ ಪ್ರಾಥಮಿಕ ಜ್ಞಾನ ಪಡೆದು ಹೊರಟೆ. ಲಡಾಕ್ ಭಾಗಕ್ಕೆ ಹಲವರು ಹೋಗುತ್ತಾರೆ, ನನ್ನ ಪ್ರಯಾಣ ಭಿನ್ನವಾಗಿರಲೆಂದು ಈಶಾನ್ಯ ಭಾರತದತ್ತ ನನ್ನ ಯೋಜನೆ ಹೊರಳಿತು.

ಕಳೆದ ವರ್ಷ ಫೆಬ್ರುವರಿ 4ರಂದು ಕೇರಳ ಕೋಝಿಕ್ಕೋಡ್‌ನ ಕಮಿಷನರ್ ಕಚೇರಿಯಿಂದ ಶುರುವಾಯಿತು ಬೈಕ್ ಪಯಣ.

ಈಶಾನ್ಯ ಭಾರತ ಹೆಣ್ಣು ಮಕ್ಕಳಿಗೆ ಅಷ್ಟು ಸುರಕ್ಷಿತವಲ್ಲ, ಅರಣ್ಯ ನಡುವಿನ ಹಾದಿ, ನೆಟ್‌ವರ್ಕ್ ಸಿಗಲ್ಲ, ಕಚ್ಚಾರಸ್ತೆಗಳೇ ಅಧಿಕ ಎಂದು ಹಲವರು ಸಲಹೆ ನೀಡಿದರು. ಈ ನಕಾರಾತ್ಮಕ ಸಂಗತಿಗಳು ನನ್ನೊಳಗಿನ ವಿಶ್ವಾಸ ತಗ್ಗಲಿಲ್ಲ, ಇದೇ ಹಾದಿಯಲ್ಲಿ ಸಾಗಬೇಕು ಎಂದು ಪಯಣಿಸಿದೆ. ಎಲ್ಲ ಸಲಹೆಗಳು ಸುಳ್ಳಾಗಿದ್ದವು, ಈಶಾನ್ಯದವರು ನನ್ನನ್ನು ಮನೆ ಮಗಳಂತೆ ಕಂಡರು, ಮನೆಯಲ್ಲಿ ವಸತಿಗೆ ಅವಕಾಶ ಒದಗಿಸಿದರು, ಊಟ ನೀಡಿದರು, ಹಣ ಕೊಟ್ಟರು. ಅಪರಿಚಿತ ಸ್ಥಳದಲ್ಲಿ ಇದ್ದೇನೆಂಬ ಭಾವ ಮೂಡದಂತೆ ಅಕ್ಕರೆ ತೋರಿದರು. ಅವರ ಪ್ರೀತಿಗೆ ಪದಗಳಿಲ್ಲ.

ಹೀಗೆ ಹಿತಾನುಭವದ ಮೂಸೆ ಹೊತ್ತು ಊರಿಂದ ಊರಿಗೆ ತಲುಪುತ್ತಿದ್ದೆ. ಈ ಸುಂದರ ಪಯಣದ ನಡುವೆಯೇ ಬಾರಾಬಂಕಿಯಲ್ಲಿ ಅಪಘಾತವಾಗಿದ್ದು. ನನ್ನ ಕೆಟಿಎಂ ಬೈಕ್ ನುಜ್ಜಾಗಿತ್ತು. ಬೈಕ್ ಮೇಲೆ ಸಂಪೂರ್ಣ ಹಿಡಿತ ಇದ್ದಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದೆ. ಆ ವೇಳೆ ಅಲ್ಲಿನ ಜನರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ನೋವಿನಿಂದ ನರಳುತ್ತಿದ್ದರೆ, ಡಾಕ್ಟರ್‌ಗಳು ಒಂದು ಪೇನ್‌ ಕಿಲ್ಲರ್ ಕೊಡಲು ಕೂಡ ಒಪ್ಪಲಿಲ್ಲ. ಅಪಘಾತ ಪ್ರಕರಣವೆಂದು ನಿರ್ಲಕ್ಷಿಸಿದ್ದರು. ಸಾಮಾಜಿಕ ಜಾಲತಾಣ ನನ್ನ ನೆರವಿಗೆ ಬಂತು. ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್‌ ಹಾಕಿದ ಕೆಲಹೊತ್ತಿನಲ್ಲೇ ಸುತ್ತಮುತ್ತ ಇದ್ದ ಅನೇಕ ರೈಡರ್‌ಗಳು ಆಸ್ಪತ್ರೆಗೆ ಬಂದರು. ಆಸ್ಪತ್ರೆಯ ಡಾಕ್ಟರ್‌ಗಳು ಎಚ್ಚೆತ್ತುಕೊಂಡು ಚಿಕಿತ್ಸೆ ನೀಡಿದರು. ಬೈಕ್ ರೈಡರ್ಸ್ ಪವರ್ ಇದು ಅಂತ ಆಗಲೇ ಗೊತ್ತಾಗಿದ್ದು.

ಸಂಬಂಧಿಕರು ನನ್ನನ್ನು ಊರಿಗೆ ಕರೆತಂದರು, ಒಂದು ತಿಂಗಳು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದೆ. ಎಲ್ಲಿ ಅಪಘಾತವಾಗಿತ್ತೋ ಅಲ್ಲಿಂದಲೇ ಮತ್ತೆ ಪ್ರಯಾಣ ಮುಂದುವರಿಸಲು ನಿರ್ಣಯಿಸಿದೆ. ಬಿಎಂಡಬ್ಲ್ಯು ಬೈಕ್ ಖರೀದಿಸಿ, ಅದಕ್ಕೆ ಬ್ಯಾಗ್, ಜಿಪಿಎಸ್ ಎಲ್ಲವನ್ನೂ ಅಣಿಗೊಳಿಸಿ, ಟ್ರಾನ್ಸ್‌ಪೋರ್ಟ್ ಮೂಲಕ ಉತ್ತರ ಪ್ರದೇಶಕ್ಕೆ ಕಳುಹಿಸಿದೆ. ಬಾರಾಬಂಕಿಯಿಂದಲೇ ಮತ್ತೆ ಪ್ರಯಾಣ ಆರಂಭಿಸಿದೆ. ನೆರೆಯ ಬಾಂಗ್ಲಾದೇಶ, ಮಾಯನ್ಮಾರ್, ನೇಪಾಳ ಎಲ್ಲ ಸುತ್ತಿ 23,000 ಕಿ.ಮೀ ಬೈಕ್‌ ರೈಡ್‌ನೊಂದಿಗೆ ಪ್ರಯಾಣ ಮುಕ್ತಾಯಗೊಂಡಿತು.

ಬೈಕ್‌ ರೈಡಿಂಗ್‌ ವೇಳೆ ಹಲವು ಕಡೆಗಳಲ್ಲಿ ಸೈನಿಕರನ್ನು ಭೇಟಿಯಾದೆ. ದೇಶಕ್ಕಾಗಿ ಅವರ ತ್ಯಾಗ, ಹೆಪ್ಪುಗಟ್ಟುವ ಚಳಿಯಲ್ಲಿ ಕೆಚ್ಚೆದೆಯಿಂದ ದೇಶ ಕಾಯುವ ಅವರ ಸೇವೆಗೆ ನನ್ನದೊಂದು ಸಲಾಂ, ನನ್ನ ಇಡೀ ರೈಡ್ ಅನ್ನು ಅವರಿಗೆ ಅರ್ಪಿಸಿದ್ದೇನೆ.

ನನಗೆ ಅಂತರರಾಷ್ಟ್ರೀಯಮಟ್ಟದ ಬೈಕ್ ರೈಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವ ಬಯಕೆ ಇದೆ. ಯಾರಾದರೂ ಪ್ರಾಯೋಜನೆ ಮಾಡಿದರೆ, ಡರ್ಟ್‌ ರ‍್ಯಾಲಿ, ಆಫ್‌ ರೋಡ್ ರೈಡಿಂಗ್ ಮಾಡುತ್ತೇನೆ. ಸದ್ಯ ವಿಶ್ವ ಕೊಂಕಣಿ ಕೇಂದ್ರ ₹ 3.6 ಲಕ್ಷದ ವಿದ್ಯಾರ್ಥಿ ವೇತನ ನೀಡಿದೆ. ಮುಂದಿನ ತರಬೇತಿಗಾಗಿ ಈ ಮೊತ್ತವನ್ನು ನೀಡಿರುವ ಸಂಸ್ಥೆಯೊಂದಿಗೆ ಒಡಂಬಡಿಕೆಯೂ ಆಗಿದೆ. ಈ ವಿದ್ಯಾರ್ಥಿ ವೇತನ ನನ್ನ ತರಬೇತಿಗೆ ಮತ್ತು ಕೌಶಲ್ಯ ವೃದ್ಧಿಗೆ ನೆರವಾಗಲಿದೆ. ದೇಶದ ಯುವ ಸಮುದಾಯಕ್ಕೆ ಪ್ರೇರಣೆಯಾಗುವ ಕಾರ್ಯವನ್ನು ಮಾಡುವೆ.

ಬೈಕ್ ರೈಡಿಂಗ್‌ನಲ್ಲಿ ಆಸಕ್ತಿ ಇರುವ ಹುಡುಗಿಯರು ಅನೇಕರಿದ್ದಾರೆ. ಸಮಾಜಕ್ಕೆ ಹೆದರಿ ಆಸೆಯನ್ನು ಅದುಮಿಕೊಳ್ಳುತ್ತಾರೆ. ಹಿಂದೆ ಯಾರು ನನ್ನನ್ನ ಮೂದಲಿಸು ತ್ತಿದ್ದರೋ ಅವರೇ ಈಗ ಕೈಕುಲಕಿ ಹಾರೈಸುತ್ತಾರೆ. ಚೌಕಟ್ಟಿನಾಚೆ ಹೆಜ್ಜೆಯಿಟ್ಟು ಹೆಣ್ಣು ತನ್ನ ಅಸ್ಮಿತೆಯನ್ನು ಸಾಬೀತುಪಡಿಸಬೇಕು.

ನಿರೂಪಣೆ: ಸಂಧ್ಯಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT