ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೆಂಬ ಶಾಲೆಯಲ್ಲಿ ಅಮ್ಮನೆಂಬ ಶಿಕ್ಷಕಿ!

Last Updated 4 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಪ್ರತಿ ಮಗುವಿಗೂ ಮೊದಲ ಶಿಕ್ಷಕಿ ಎಂದರೆ ತಾಯಿ. ಈ ಕಾರಣಕ್ಕೆ ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು’ ಎಂಬ ಮಾತು ಹುಟ್ಟಿಕೊಂಡಿದ್ದು. ಈ ಕೋವಿಡ್‌–19 ಕಾಲದಲ್ಲಿ ಬಹುತೇಕ ಮಕ್ಕಳು ಮನೆಯಿಂದಲೇ ಕಲಿಯುವುದು ಅನಿವಾರ್ಯವಾಗಿದ್ದು, ಹೋಮ್‌ ಸ್ಕೂಲಿಂಗ್‌ ಪದ್ಧತಿಗೆ ಒತ್ತು ಸಿಕ್ಕಿದೆ.

ಕೋವಿಡ್‌–19ನಿಂದಾಗಿ ಶಿಕ್ಷಣದ ಪರಿಭಾಷೆಯೇ ಬದಲಾಗಿಬಿಟ್ಟಿದೆ. ಮನೆಯಲ್ಲೇ ಇರುವ ಪುಟ್ಟ ಮಕ್ಕಳು ಕೂಡ ಆನ್‌ಲೈನ್ ಶಿಕ್ಷಣವೆಂದು ಕಂಪ್ಯೂಟರ್‌ ಮುಂದೆ ಪೋಷಕರ ಜೊತೆ ಕೂರುವಂತಹ ಪರಿಸ್ಥಿತಿ ಅನಿವಾರ್ಯ. ಆದರೆ ಆನ್‌ಲೈನ್‌ನಲ್ಲಿ ಸಿಗುವಂತಹದ್ದು ಔಪಚಾರಿಕ ಶಿಕ್ಷಣ. ಇಂತಹ ಶಿಕ್ಷಣ ಮಾತ್ರ ಸಾಕಾಗಲ್ಲ ಬೆಳೆಯುವ ಮಕ್ಕಳಿಗೆ. ಅದಕ್ಕೆಂದೇ ಹುಟ್ಟಿಕೊಂಡಿದ್ದು ಹೋಂ ಸ್ಕೂಲಿಂಗ್‌. ಮಕ್ಕಳಿಗೆ ಪಾಠದ ಜೊತೆಗೆ ಇತರ ಚಟುವಟಿಕೆಗಳನ್ನು ಕಲಿಸುವುದಕ್ಕೆ ಈ ಪದ್ಧತಿಯಲ್ಲಿ ಒತ್ತು ನೀಡಲಾಗಿದೆ. ಮನೆಯಲ್ಲೇ ಕಲಿಯುವುದು ಎಂದಾಕ್ಷಣ ಮಗುವಿಗೆ ಪೋಷಕರು ಅದರಲ್ಲೂ ತಾಯಿಯೇ ಗುರುವಾಗುತ್ತಾಳೆ. ತಂದೆಯೂ ಗುರುವಾಗಬಹುದು, ಆದರೆ ಪುಟ್ಟ ಮಕ್ಕಳ ಕೀಟಲೆ ಸಹಿಸಿಕೊಂಡು ಕಲಿಸುವಷ್ಟು ತಾಳ್ಮೆ ಅಮ್ಮನಿಗಿದ್ದಷ್ಟು ಅಪ್ಪನಿಗೆ ಇರುವುದಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ಹಳೆಯ ಪದ್ಧತಿಗೆ ಹೊಸ ರೂಪ
ಕಳೆದ ಆರು ತಿಂಗಳಲ್ಲಿ ಕೊರೊನಾದಿಂದಾಗಿ ಬಹುತೇಕ ಪೋಷಕರಿಗೆ ಹೋಮ್ ಸ್ಕೂಲಿಂಗ್ ಪದ್ಧತಿಯ ಮೇಲೆ ಒಲವು ಮೂಡಿದೆ. ತರಗತಿ ಪಾಠ ಮಾತ್ರವಲ್ಲದೇ ಜೀವನ ಪಾಠಕ್ಕೆ ಬೇಕಾಗುವ ವಿಷಯಗಳನ್ನು ಮಗುವಿಗೆ ಕಲಿಸಬೇಕು. ಮಗುವಿನ ಮೇಲೆ ಕಲಿಕೆಯ ಒತ್ತಡವನ್ನು ಹೇರದೆ ಕ್ರಿಯಾತ್ಮಕವಾಗಿ ಕಲಿಸುವ ಜವಾಬ್ದಾರಿಯನ್ನು ಷೋಷಕರು ಹೊರುವುದು ಈ ಪದ್ಧತಿಯಲ್ಲಿಯೇ. ಹಾಗೆ ನೋಡಿದರೆ ಈ ಹೋಮ್‌ ಸ್ಕೂಲಿಂಗ್‌ ಎನ್ನುವುದು ಹೊಸ ಪದ್ಧತಿಯೇನಲ್ಲ. ಹಿಂದೆ ಕಿಂಡರ್‌ ಗಾರ್ಟನ್‌ ಅಥವ ಅಂಗನವಾಡಿ ಇಲ್ಲದ ಕಾಲದಲ್ಲಿ ಮನೆಯಲ್ಲಿ ಪೋಷಕರು, ಅಜ್ಜ–ಅಜ್ಜಿ ಮಗುವಿಗೆ ಆರು ವರ್ಷ ತುಂಬುವವರೆಗೆ ಕಲಿಕೆಯ ಮೂಲ ಪಾಠಗಳನ್ನು ಹೇಳಿಕೊಡುತ್ತಿದ್ದರು. ಅಕ್ಷರಮಾಲೆ, ಮಗ್ಗಿ, ಬಾಯಿ ಲೆಕ್ಕದ ಜೊತೆಗೆ ಚಿಣ್ಣರ ಹಾಡುಗಳು, ಚಿತ್ರಗಳಿಗೆ ಬಣ್ಣ ತುಂಬುವುದು.. ಇವೆಲ್ಲ ಕಲಿಕೆಯು ಹೋಂ ಸ್ಕೂಲಿಂಗ್‌ನಲ್ಲೇ ಆಗುತ್ತಿತ್ತು. ಈಗ ಅದರ ಪರಿಷ್ಕೃತ ರೂಪ ಬಂದಿದೆ ಅಷ್ಟೆ.

ಹೋಮ್ ಸ್ಕೂಲಿಂಗ್ ಬಗ್ಗೆ ಮಂಗಳೂರಿನ ಕಾಲೇಜೊಂದಲ್ಲಿ ಪ್ರಾಧ್ಯಾಪಕಿಯಾಗಿರುವ ದಿವ್ಯಾ ‘ನನ್ನ ಮಗಳು 2ನೇ ತರಗತಿ. ನಾನು ಕಾಲೇಜು ಇದ್ದಾಗ ಮಗಳ ಮೇಲೆ ಅಷ್ಟೊಂದು ಗಮನ ಹರಿಸುತ್ತಿರಲಿಲ್ಲ.ಆದರೆ ಈಗ ಹಾಗಿಲ್ಲ. ನಾನು ಅವಳಿಗೆ ತರಗತಿ ಪಾಠದ ಜೊತೆಗೆ ಅನೌಪಚಾರಿಕ ಶಿಕ್ಷಣವನ್ನು ನೀಡುತ್ತಿದ್ದೇನೆ.ಗಿಡ ಬೆಳೆಸುವುದು, ಗಿಡಗಳಿಗೆ ನೀರು ಹಾಕುವುದು, ತರಕಾರಿ ತೊಳೆಯುವುದು ಮುಂತಾದ ಚಟುವಟಿಕೆಗಳನ್ನು ಅವಳಿಂದ ಮಾಡಿಸುತ್ತಿದ್ದೇನೆ. ಅವಳಿಗೆ ಗಾರ್ಡನಿಂಗ್ ಮೇಲೆ ತುಂಬಾನೇ ಆಸಕ್ತಿ ಇದೆ. ಆದರೆ ಅದನ್ನು ನಾನು ಗಮನಿಸಲು ಸಾಧ್ಯವಾಗಿದ್ದು ಲಾಕ್‌ಡೌನ್ ಆರಂಭವಾದ ಮೇಲೆ’ ಎನ್ನುತ್ತಾರೆ. ಔಪಚಾರಿಕ ಶಿಕ್ಷಣದಿಂದಷ್ಟೇ ಮಕ್ಕಳು ಎಲ್ಲವನ್ನೂ ಕಲಿಯುವುದಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನೂ ಅವರು ಸೇರಿಸುತ್ತಾರೆ.

‘ಮಕ್ಕಳಿಗೆ ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಕ್ರಿಯಾತ್ಮಕವಾಗಿ ಕಲಿಸುವುದು ತುಂಬಾ ಮುಖ್ಯ. ಶಾಲೆಯಲ್ಲಿ ಕಲಿಯುತ್ತಾರೆ ಬಿಡು ಎಂಬ ಮನೋಭಾವ ಸಲ್ಲದು. ಬದಲು ಮನೆಯಲ್ಲೇ ತಾಯಿಯೇ ಪ್ರತಿಯೊಂದು ವಸ್ತುವನ್ನು ತೋರಿಸಿ, ಮನೋರಂಜನಾತ್ಮಕವಾಗಿ ಕಲಿಸಿದರೆ ಮಗುವಿನ ಮನಸ್ಸಿನಲ್ಲಿ ಅದು ಹೆಚ್ಚು ದಿನಗಳ ಕಾಲ ಉಳಿಯುತ್ತದೆ. ‘ಹಿಂದೆಲ್ಲಾ ಸ್ಲೇಟ್–ಬಳಪ ಹಿಡಿದು ತಾಯಂದಿರು ಮಕ್ಕಳಿಗೆ ಕಲಿಸುತ್ತಿದ್ದರು. ಹೋಮ್‌ ಸ್ಕೂಲಿಂಗ್ ಎನ್ನುವುದು ಹಳೆಯ ಪದ್ಧತಿಯೇ. ಆದರೆ ಈಗಿನ ಉದ್ಯೋಗಸ್ಥ ಪೋಷಕರಿಗೆ ಅದು ಒಗ್ಗುವುದಿಲ್ಲ’ ಎನ್ನುತ್ತಾರೆಕಾರ್ಕಳದ ಶಿಕ್ಷಕಿ ವಂದನಾ ರೈ.

ಹೋಮ್‌ಸ್ಕೂಲಿಂಗ್‌ ಪ್ರಯೋಜನಗಳು

* ಪಠ್ಯಕ್ರಮ ಹಾಗೂ ಮಕ್ಕಳ ವೇಳಾಪಟ್ಟಿಯನ್ನು ತಾಯಿಯೇ ನಿರ್ಧರಿಸಬಹುದು.

* ಕಲಿಕೆ ಜೊತೆ ಮನರಂಜನೆಯನ್ನು ಸೇರಿಸಲು ಸಾಧ್ಯ.

* ಮಕ್ಕಳೊಂದಿಗೆ ಬಾಂಧವ್ಯ ಹೆಚ್ಚುತ್ತದೆ. ‌

* ತಮ್ಮ ಮಗು ಯಾವ ರೀತಿ ಹೇಳಿದರೆ ಕಲಿಯುತ್ತದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.

* ಮಕ್ಕಳು ಕಲಿಯುವ ವಿಷಯದಲ್ಲಿ ಪೋಷಕರು ಪಾರಂಗತರಾಗಬಹುದು.

* ಮಕ್ಕಳಲ್ಲಿರುವ ವಿಶೇಷ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT