ಆಸ್ತಿಯ ವಿಚಾರ ಬಂದಾಗ ಹಕ್ಕು ಸಾಧಿಸಲು ಎಲ್ಲಿದ್ದರೂ ಓಡಿ ಬರುವ ಮಗ/ಮಗಳು, ಹೆತ್ತವರನ್ನು ಸಾಕುವ ಕರ್ತವ್ಯ ಎದುರಾದಾಗ ನೆಪಗಳ ಕೊರಳಿಗೆ ಜೋತು ಬೀಳುತ್ತಾರೆ. ಹೆತ್ತವರ ಜವಾಬ್ದಾರಿಯ ಬಗ್ಗೆ ಮತ್ತೆ ಚರ್ಚೆಗಳು ಬುಗಿಲೆದ್ದ ಈ ಹೊತ್ತು ಮಗನಷ್ಟೇ ಅಲ್ಲ, ಮಗಳ ಕರ್ತವ್ಯಗಳ ಕಡೆಗೂ ಕಣ್ತೆರೆದು ನೋಡಬೇಕಾದ ಅಗತ್ಯವೆದ್ದಿದೆ.
ಸಾಂದರ್ಭಿಕ ಚಿತ್ರ
ಮಗನಿಗೆ ಹೆತ್ತವರ ಪೋಷಣೆಯ ಮನಸಿರುತ್ತದೆ, ಆದರೆ ಹೆಂಡತಿಯ ಮುಖ ನೋಡುತ್ತಾನೆ. ಮಗಳಿಗೂ ಆಸೆ ಇರುತ್ತದೆ, ಆದರೆ ಗಂಡನ ಮರ್ಜಿ ಕಾಯುತ್ತಾಳೆ. ಏಕೆಂದರೆ ಮಗ ಆರ್ಥಿಕವಾಗಿ ಸ್ವತಂತ್ರನಾದರೂ ಹಿರಿಯರ ನೋಡಿಕೊಳ್ಳುವುದನ್ನು ನಾವೇ ಅವನಿಗೆ ಕಲಿಸಿರುವುದಿಲ್ಲ. ಆರೈಕೆಯಲ್ಲಿ ಮಗಳು ನಿಪುಣೆ, ಆದರೆ ಆರ್ಥಿಕ ಸ್ವಾತಂತ್ರ್ಯ ಅಷ್ಟಾಗಿ ಇರುವುದಿಲ್ಲ. ಮಕ್ಕಳನ್ನು ಬೆಳೆಸುವಲ್ಲಿಯೇ ಈ ಎಚ್ಚರಿಕೆ ಇರಬೇಕು. ತನ್ನ ತಂದೆ-ತಾಯಿಯ ಕೆಲಸಗಳನ್ನು ಮಾಡುವಷ್ಟು ಮಗನ ಕೈ–ಮನ ಪಳಗಬೇಕು. ಹೆತ್ತವರನ್ನು ಸಾಕುವಷ್ಟು ಮಗಳ ದುಡಿಮೆ ಗಟ್ಟಿಯಾಗಿರಬೇಕು. ಹೇಗೂ ಮಗಳ ಮಮಕಾರವೇ ಒಂದು ತೂಕ ಹೆಚ್ಚಿರುವ ಕಾರಣದಿಂದಲೂ ಸರಿ, ಮಗಳು ನೋಡಿಕೊಳ್ಳಬೇಕು, ಮಗ ಆರ್ಥಿಕ ಸಹಾಯ ಮಾಡಬೇಕು. ಆಗ ಹಿರಿಯರಿಗೂ ಒಂದು ನೆಮ್ಮದಿ. ಯಾರೊ ಒಬ್ಬರ ಮೇಲೆ ಭಾರ ಹಾಕಿದೆ ಎನ್ನುವ ಸಂಕಟ ಉಳಿಯದು. ಜವಾಬ್ದಾರಿಗಳನ್ನು ಹಂಚಿಕೊಂಡಾಗ ಹೆತ್ತವರಿಗೂ ಗೌರವ, ಮಕ್ಕಳಿಗೂ ಘನತೆ.–ಲತಾ ಶ್ರೀನಿವಾಸ್, ಹಿರಿಯ ಬರಹಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.