ಭಾನುವಾರ, ಆಗಸ್ಟ್ 14, 2022
20 °C

PV Web Exclusive: ಮಹಿಳಾ ಮೀಸಲಾತಿ ಮತ್ತು ಪುರುಷರ ಅಧಿಕಾರ ದಾಹ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

‘ಗ್ರಾಮೀಣ ಪಾರ್ಲಿಮೆಂಟ್‌’ ಎಂದೇ ಕರೆಯುವ ಗ್ರಾಮ ಪಂಚಾಯಿತಿಗಳ ಅರ್ಧದಷ್ಟು ಸ್ಥಾನಗಳಿಗೆ ಮಹಿಳೆಯರು ಆಯ್ಕೆಯಾಗುತ್ತಿದ್ದರೂ, ಅವರ ಪತಿ ಇಲ್ಲವೇ ಪುತ್ರ/ ಸಹೋದರರ ನೆರಳಿನಲ್ಲೇ ಬಹುತೇಕ ಮಹಿಳಾ ಸದಸ್ಯರು ಕೆಲಸ ಮಾಡುವಂತಾಗಿದೆ. ತಾವು ಸ್ಪರ್ಧಿಸಬೇಕೆಂದಿರುವ ಸ್ಥಾನ ಮಹಿಳೆಗೆ ಮೀಸಲಾದರೆ ‘ಅವಕಾಶ ವಂಚಿತ’ರು ಪತ್ನಿ, ಪುತ್ರಿ ಅಥವಾ ತಾಯಿಯನ್ನು ಕಣಕ್ಕಿಳಿಸಿ, ಗೆದ್ದರೆ ಅವರ ಹೆಸರಿನಲ್ಲಿ ತಾವೇ ಅಧಿಕಾರ ಚಲಾಯಿಸುವುದು ಸಾಮಾನ್ಯ ಎಂಬಂತಾಗಿದೆ. ಈ ಪುರುಷ ಪ್ರಧಾನ ವ್ಯವಸ್ಥೆಯ ಮನಸ್ಥಿತಿ ಬದಲಾಗಿ, ನಿಜವಾದ ಪ್ರಮೀಳಾ ಆಡಳಿತ ಬರುವುದು ಯಾವಾಗ?

***

 
ಕರ್ನಾಟಕ ರಾಜ್ಯವು ಮೂರು ಹಂತದ ಪಂಚಾಯಿತಿ ವ್ಯವಸ್ಥೆ ಅಳವಡಿಸಿಕೊಂಡಿದೆ. ಶಾಸನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಬೇಡಿಕೆ ಇನ್ನೂ ಕೈಗೂಡಿಲ್ಲ. ಆದರೆ, ಮೂರೂ ಹಂತದ ಪಂಚಾಯಿತಿಗಳಿಗೆ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಮಾದರಿಯ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಕರ್ನಾಟಕ ಅಳವಡಿಸಿಕೊಂಡಿದೆ.

ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಿ, ಅವರೂ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಈ ಮೀಸಲಾತಿಯ ಆಶಯ.

ಪ್ರವರ್ಗವಾರು ಮೀಸಲಾತಿ ನಿಗದಿ ಮಾಡಬೇಕಿರುವುದರಿಂದ ಮಹಿಳೆಯರಿಗೆ ವಾಸ್ತವವಾಗಿ ಶೇ 50ಕ್ಕಿಂತ ಹೆಚ್ಚಿನ ಸ್ಥಾನಗಳು ಲಭ್ಯವಾಗುತ್ತಿವೆ. ಈಗ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳು ದೊರೆತಿವೆ. ಉದಾಹರಣೆಗೆ ಕಲಬುರ್ಗಿ ಜಿಲ್ಲೆಯನ್ನೇ ಪರಿಗಣಿಸುವುದಾದರೆ ಇಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಸ್ಥಾನಗಳು ಮೀಸಲಾಗಿವೆ. ಒಟ್ಟು 4,173 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆ ಪೈಕಿ ಮಹಿಳೆಯರಿಗೆ 2,144 ಸ್ಥಾನಗಳು ಮೀಸಲಾಗಿದ್ದರೆ, ಪುರುಷರಿಗೆ  2,029 ಸ್ಥಾನಗಳು ಮಾತ್ರ ಉಳಿದಿವೆ. ಅಂದರೆ, ಈ ಜಿಲ್ಲೆಯಲ್ಲಿ ಪುರುಷರಿಗಿಂತ 115 ಮಹಿಳಾ ಸದಸ್ಯ ಸ್ಥಾನಗಳು ಹೆಚ್ಚಾಗಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಇದೇ ಸ್ಥಿತಿ ಇದೆ. ಮಹಿಳಾ ಮೀಸಲಾತಿ ಪ್ರತಿಪಾದಕರಿಗೆ ಇದು ಖುಷಿಯ ವಿಚಾರವೂ ಹೌದು.

ಪಂಚಾಯಿತಿ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿರುವುದರಿಂದ ಮಹಿಳೆಯರು ರಾಜಕೀಯವಾಗಿ ಸಬಲರಾಗಿದ್ದಾರೆಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ ಅಸ್ಪಷ್ಟ.

ಮಹಿಳೆ ಗ್ರಾಮ ಪಂಚಾಯಿತಿ ಸದಸ್ಯೆ ಇರಲಿ– ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಇರಲಿ. ಅವರ ಆಡಳಿತದ ಮೇಲೆ ಆಕೆಯ ಗಂಡ ಇಲ್ಲವೆ ಮಕ್ಕಳ ನೆರಳು ಹೆಚ್ಚಾಗಿರುತ್ತದೆ ಎಂಬುದು ಎಲ್ಲರೂ ಹೇಳುವ ಮಾತು.

ಈ ವಾದಕ್ಕೆ ಸಾಕಷ್ಟು ಉದಾಹರಣೆಯನ್ನೂ ನೀಡಬಹುದು.

ಕಲಬುರ್ಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿವೆ. ಈ ಸ್ಥಾನಗಳಲ್ಲಿ ಇಬ್ಬರೂ ಮಹಿಳೆಯರೇ ಇದ್ದಾರೆ. ಕೆಲ ತಿಂಗಳ ಹಿಂದೆ ಅಧ್ಯಕ್ಷೆಯ ವಿರುದ್ಧ ಉಪಾಧ್ಯಕ್ಷೆ ಆರೋಪ ಮಾಡಿದ್ದರು. ಆ ಬಗ್ಗೆ ಮಾಹಿತಿ ಪಡೆಯಲು ಉಪಾಧ್ಯಕ್ಷೆಯ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಆ ಕರೆ ಸ್ವೀಕರಿಸಿದ್ದು ಅವರ ಪತಿ. ಇನ್ನು ಅಧ್ಯಕ್ಷೆಗೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಿದ್ದು ಅವರ ಪತಿ. ಅಚ್ಚರಿಯ ವಿಷಯ ಎಂದರೆ ಈ ಎರಡೂ ಮೊಬೈಲ್‌ ಸಂಖ್ಯೆಗಳು ಜಿಲ್ಲಾ ಪಂಚಾಯಿತಿಯವರು ನೀಡಿದ ಸಂಪರ್ಕ ಸಂಖ್ಯೆಗಳ ಪಟ್ಟಿಯಲ್ಲಿ ಇದ್ದವು.

ಇದು ಹಿಂದಿನ ಅವಧಿಯ ಮಾತು. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಸದಸ್ಯೆಯ ಜೊತೆಗೆ ಅವರ ಪುತ್ರ ಬಂದು (ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲದಿದ್ದರೂ) ಹಿಂಬದಿ ಸೀಟಿನಲ್ಲಿ ಆಸೀನರಾಗುತ್ತಿದ್ದರು. ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ತಾಯಿಗೆ ಕರೆ ಮಾಡಿ ‘ಈ ಪ್ರಶ್ನೆ ಕೇಳು’ ಎಂದು ನಿರ್ದೇಶನ ನೀಡುತ್ತಿದ್ದರು. ಮಗನ ಆಣತಿಯಂತೆ ಆ ಸದಸ್ಯೆ ನಡೆದುಕೊಳ್ಳುತ್ತಿದ್ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯೊಬ್ಬರಿಗೆ ಸುದ್ದಿಗಾಗಿ ಕರೆ ಮಾಡಬೇಕಾಗಿತ್ತು. ಸಂಬಂಧಿಸಿದವರನ್ನು ವಿಚಾರಿಸಿದಾಗ, ‘ಅಧ್ಯಕ್ಷೆ ಅಮಾಯಕಿ. ಅವರಿಗೆ ಏನೂ ಗೊತ್ತಿಲ್ಲ. ಎಲ್ಲವನ್ನೂ ಅವರ ಪತಿಯೇ ನಿರ್ವಹಿಸುತ್ತಾರೆ. ನೀವು ಅವರಿಗೇ ಕರೆಮಾಡುವುದು ಒಳಿತು’ ಎಂಬ ಉತ್ತರ ಬಂತು.

ಇನ್ನೊಂದು ಘಟನೆಯನ್ನು ಉಲ್ಲೇಖಿಸಲೇಬೇಕು. ಇದು ಕೆಲ ವರ್ಷಗಳ ಹಿಂದಿನ ಮಾತು. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಿಗೆ ಸದಸ್ಯೆಯರ ಪತಿಗೂ ಅವಕಾಶ ಕಲ್ಪಿಸಬೇಕು, ಅವರು ಸಭೆಯಲ್ಲಿದ್ದರೆ ಚರ್ಚೆಯಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಉತ್ತರ ಪಡೆಯಲು ಮತ್ತು ಕ್ಷೇತ್ರದ ಕೆಲಸ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂಬ ನಿರ್ಣಯವನ್ನು ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಸಾಮಾನ್ಯ ಸಭೆಗಳಿಗೆ ಸದಸ್ಯರು ಮತ್ತು ಅಧಿಕಾರಿಗಳಿಗಷ್ಟೇ ಅವಕಾಶ ಇದೆ. ಕಾಯ್ದೆಗೆ ವಿರುದ್ಧವಾಗಿ ಕೈಗೊಂಡ ಈ ಬೇಡಿಕೆ ತೀವ್ರ ಚರ್ಚೆಗೂ ಕಾರಣವಾಗಿತ್ತು. ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಜಗದೀಶ ಶೆಟ್ಟರ್‌, ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿಯನ್ನೇ ವಜಾ ಮಾಡುವ ಎಚ್ಚರಿಕೆ ನೀಡಿದ್ದರು. ನಿರ್ಣಯ ಜಾರಿಗೆ ಬರಲಿಲ್ಲವೇನೋ ನಿಜ. ಆದರೆ, ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಇಲ್ಲವೇ ಜಿಲ್ಲಾ ಪಂಚಾಯಿತಿ ಇರಲಿ. ಮಹಿಳಾ ಸದಸ್ಯರನ್ನು ಅವರ ನೆರಳಿನಂತೆ ಬೆಂಬತ್ತಿ ಅವರ ಕೆಲಸವನ್ನು ತಾವೇ ನಿರ್ವಹಿಸುವ ಪ್ರವೃತ್ತಿ ಅವರ ಗಂಡ ಇಲ್ಲವೇ ಮಕ್ಕಳಲ್ಲಿ ಬೆಳೆದಿರುವುದು ಪುರುಷ ಪ್ರಧಾನ ಸಮಾಜ ವ್ಯವಸ್ಥೆಯ ಬಿಂಬವಲ್ಲದೇ ಮತ್ತೇನೂ ಅಲ್ಲ.

ಎಲ್ಲ ಮಹಿಳಾ ಪ್ರತಿನಿಧಿಗಳೂ ಹೀಗೇ ಅಂತಲ್ಲ. ಪುರುಷರೇ ಬೆರಗಾಗುವಂತೆ ದಕ್ಷತೆಯಿಂದ ಅಧಿಕಾರ ಚಲಾಯಿಸಿ ಹೆಸರು ಮಾಡಿದ ಮಹಿಳೆಯರೂ ಇದ್ದಾರೆ. ಆದರೆ, ಅವರ ಸಂಖ್ಯೆ ವಿರಳ.

ಈಗ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಸ್ಪರ್ಧಿಸುವ, ಆಯ್ಕೆಯಾಗುವ ಮಹಿಳೆಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಾದರೆ ಮತ್ತು ಅವರನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವರ ಮನೆಯವರು ಬಿಟ್ಟರೆ ಮಹಿಳಾ ಮೀಸಲಾತಿ ಕಲ್ಪಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಇಲ್ಲವಾದರೆ, ‘ನನಗೆ ಸ್ಪರ್ಧಿಸಲು ಅವಕಾಶ ಇಲ್ಲವಾಗಿದೆ. ಹೀಗಾಗಿ ನನ್ನ ತಾಯಿ, ಪತ್ನಿ, ಇಲ್ಲವೆ ಪುತ್ರಿಯನ್ನು ಕಣಕ್ಕಿಳಿಸಿ ಅಧಿಕಾರದ ಸೂತ್ರವನ್ನು ನಾನೇ ಇಟ್ಟುಕೊಳ್ಳುತ್ತೇನೆ’ ಎನ್ನುವ ಪುರುಷ ಪ್ರಧಾನ ವ್ಯವಸ್ಥೆ ಹಾಗೇ ಮುಂದುವರೆಯುವ ಅಪಾಯ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಯಾರು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು