ಗುರುವಾರ , ಆಗಸ್ಟ್ 11, 2022
23 °C

Pv Web Exclusive| ಬದುಕು ಹೊಲಿದ ಖತ್ಮುನ್ನಿಸಾಗೆ ಎಂಜಿನಿಯರ್‌ಗಳಷ್ಟು ಆದಾಯ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಈ ಗ್ರಾಮೀಣ ಮಹಿಳೆ ಕನಸು ಕಂಡಿದ್ದು ಕಮರ್ಷಿಯಲ್‌ ಪ್ರಾಕ್ಟೀಸ್‌ನಲ್ಲಿ ಡಿಪ್ಲೊಮಾ ಮಾಡಬೇಕೆಂದು. ಅದೇನೋ ನನಸಾಗಲಿಲ್ಲ. ಕೌಟುಂಬಿಕ ಸಮಸ್ಯೆಗಳಿಂದಾಗಿ ಓದು ಅಲ್ಲಿಗೇ ನಿಂತಿತು. ಆದರೆ ಜೀವನದಲ್ಲಿ ಸ್ವಾವಲಂಬನೆ ಸಾಧಿಸಬೇಕಾದ ಅನಿವಾರ್ಯ ಉಂಟಾಯಿತು. ಹೀಗಾಗಿ ಹೊಲಿಗೆ ಕಲಿಯಲು ಶುರು ಮಾಡಿದರು. ಅದು ಗಟ್ಟಿಯಾಗಿ ಅವರ ಕೈಹಿಡಿಯಿತು. ಕೈತುಂಬ ಕಾಸು ನೀಡಿತು.

ಹರಿಹರ ತಾಲ್ಲೂಕಿನ ಭಾನುವಳ್ಳಿ ಎಂಬ ಗ್ರಾಮದ ಖತ್ಮುನ್ನಿಸಾ ಅವರ ಕಥೆಯಿದು. ಓದಿನ ಕನಸು ನನಸಾಗದಿದ್ದರೂ ‘ಹೊಲಿಗೆ’ ಅವರ ಜೀವನವನ್ನು ಹಸನಾಗಿಸಿದೆ. ಚಿಕ್ಕ ಉದ್ಯೋಗವೂ ಕಷ್ಟಪಟ್ಟು ಮಾಡಿದರೆ ಉತ್ತಮ ಫಲ ನೀಡುತ್ತದೆ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ.


ಖತ್ಮುನ್ನಿಸಾ

ಅವರು ಹೊಲಿಗೆಗೆ ಕೈಹಾಕಿ 20 ವರ್ಷಗಳಾಗಿವೆ. ಆರಂಭದಲ್ಲಿ ಹೊಲಿಗೆ ಕರಗತವಾದ ಕೂಡಲೇ ಅವರು ಮಾಡಿದ ಮೊದಲ ಕೆಲಸವೆಂದರೆ ಹತ್ತಿರದ ಹಳ್ಳಿಗಳಲ್ಲಿ ಕೊಠಡಿಗಳನ್ನು ಬಾಡಿಗೆ ಪಡೆದು ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಿದ್ದು. ತಮ್ಮದೇ 10 ಹೊಲಿಗೆ ಯಂತ್ರಗಳನ್ನು ವ್ಯವಸ್ಥೆ ಮಾಡಿಕೊಂಡ ಅವರು ಹರಿಹರ ತಾಲ್ಲೂಕಿನ ಭಾನುವಳ್ಳಿ, ನಂದಿತಾವರೆ, ಬೆಳ್ಳೋಡಿ, ವಾಸನ ಮೊದಲಾದ ಗ್ರಾಮಗಳಲ್ಲಿ 6 ತಿಂಗಳ ಹೊಲಿಗೆ ತರಬೇತಿ ಕೋರ್ಸ್‌ಗಳನ್ನು ನಡೆಸಿದರು. ಬೇಗನೆ ಗ್ರಹಿಸುವವರು 4 ತಿಂಗಳಲ್ಲೇ ಕಲಿತದ್ದೂ ಆಯಿತು. ಅವರಿಂದ ತರಬೇತಿ ಪಡೆದ ಮಹಿಳೆಯರೂ ಈಗ ಹೊಲಿಗೆಯಿಂದ ತಮ್ಮ ಜೀವನಕ್ಕೂ ಒಂದಿಷ್ಟು ಆದಾಯ ಮಾಡಿಕೊಂಡಿದ್ದಾರೆ.

2012ರಲ್ಲಿ ಡಿಎಸ್‌ಟಿ (ಡೊಮೆಸ್ಟಿಕ್‌ ಸ್ಕಿಲ್‌ ಟ್ರೇನರ್‌) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಹೀಗಾಗಿ ರುಡ್‌ಸೆಟ್‌ ಹಾಗೂ ಕೆನರಾ ಬ್ಯಾಂಕ್‌ನ ಆರ್‌ಸೆಟಿ (ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಯೋಜನೆಗಳಲ್ಲಿ ಹೊಲಿಗೆ ತರಬೇತಿ ನೀಡಲು ಅವಕಾಶ ಲಭಿಸಿತು. ಈಗ ರುಡ್‌ಸೆಟ್‌ ಹಾಗೂ ಆರ್‌ಸೆಟಿ ನಡೆಸುವ ಒಂದು ತಿಂಗಳ ಹೊಲಿಗೆ ತರಬೇತಿ ಪರೀಕ್ಷೆಯ ಎಕ್ಸಾಮಿನರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ರಾಯಚೂರು, ಗದಗ, ಹಾರೋಹಳ್ಳಿ, ಸಣ್ಣಳ್ಳಿಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೊಲಿಗೆ ಪರೀಕ್ಷೆಗಳ ಅಸೆಸ್ಸರ್‌ ಆಗಿ ಹೋಗುತ್ತಿದ್ದಾರೆ ಖತ್ಮುನ್ನಿಸಾ.

‘ವರ್ಷಕ್ಕೆ 7–8 ಹೊಲಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತೇನೆ. ಇದರಿಂದಲೇ ₹ 1.50 ಲಕ್ಷದಿಂದ ₹ 2 ಲಕ್ಷದವರೆಗೆ ಆದಾಯ ಗಳಿಸುತ್ತೇನೆ. ಮನೆಯಲ್ಲಿದ್ದಾಗ ನಿತ್ಯದ ಹೊಲಿಗೆಯಿಂದಲೇ ದಿನಕ್ಕೆ ₹ 1,000ದಿಂದ ₹ 1,500ರವರೆಗೆ ಆದಾಯ ಬರುತ್ತದೆ. ಗ್ರಾಹಕರು ಬಯಸಿದ ರೀತಿಯಲ್ಲಿ ಹೊಸ ಫ್ಯಾಷನ್‌ನ ಬಟ್ಟೆಗಳನ್ನೂ ಹೊಲಿದು ಕೊಡುವೆ. ವಿಶೇಷ ವಿನ್ಯಾಸಗಳಿರುವಂಥದ್ದು, ಕಸೂತಿ ಇರುವ ಬಟ್ಟೆಗಳನ್ನು ಹೊಲಿದು ಕೊಡುವಂತೆ ಬೇಡಿಕೆಗಳು ಬರುತ್ತವೆ. ವಿವಾಹ ಅಥವಾ ಸಮಾರಂಭಗಳಿಗಾಗಿ ಬಟ್ಟೆಗಳನ್ನು ವಿನ್ಯಾಸ ಮಾಡಿಸಿಕೊಂಡು ಹೋದವರೂ ಇದ್ದಾರೆ. ಹೊಲಿಗೆ ಕಲಿತಿದ್ದಕ್ಕೆ ನನಗೆ ತುಂಬಾ ಸಂತೋಷವಿದೆ. ಇದರ ಆದಾಯದಿಂದಲೇ ನಾನು 1 ಎಕರೆ ಜಮೀನು, ಒಂದು ಸೈಟ್‌ ಖರೀದಿಸಿದ್ದೇನೆ. ಎಂಜಿನಿಯರ್‌ ಒಬ್ಬರು ಗಳಿಸುವ ಮಟ್ಟಿಗೆ ನನ್ನ ದುಡಿಮೆಯಿದೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಗ್ರಾಮದ ‘ಈಶ್ವರ ಅಲ್ಲಾ ಸ್ತ್ರೀಶಕ್ತಿ ಸಂಘ’ದ ಪ್ರತಿನಿಧಿ ಆಗಿರುವ ಖತ್ಮುನ್ನಿಸಾ ಆ ಸಂಘದ ಸದಸ್ಯರಿಗೆ ಹೊಲಿಗೆ ತರಬೇತಿ ನೀಡಿದ್ದಾರೆ. ಕೋವಿಡ್‌ ಆರಂಭದ ದಿನಗಳಲ್ಲಿ ಮಾಸ್ಕ್‌ಗಳನ್ನು ಹೊಲಿಯುವುದನ್ನು ಕಲಿಸಿದರು. ಸಂಘದ ವತಿಯಿಂದ 5,000ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗಿದೆ. ಮಾಸ್ಕ್‌ ಸಿದ್ಧಪಡಿಸುವ ವಿಧಾನದ ವಿಡಿಯೊ ಮಾಡಿ ಜಿಲ್ಲಾ ಪಂಚಾಯಿತಿಗೆ ನೀಡಿದ್ದಾರೆ.

2000ಕ್ಕೂ ಹೆಚ್ಚು ಮಂದಿಗೆ ತರಬೇತಿ

2000ನೇ ಇಸ್ವಿಯಿಂದ ಹೊಲಿಗೆ ತರಬೇತಿ ನೀಡಲು ಆರಂಭಿಸಿದ ಖತ್ಮುನ್ನಿಸಾ ಇಲ್ಲಿಯವರೆಗೆ ದಾವಣಗೆರೆ ಜಿಲ್ಲೆಯ 2000ಕ್ಕೂ ಹೆಚ್ಚು ಮಂದಿಗೆ ಹೊಲಿಗೆ, ಕಸೂತಿ ಹೇಳಿಕೊಟ್ಟಿದ್ದಾರೆ. ಅವರಲ್ಲಿ 1500ರಷ್ಟು ಮಹಿಳೆಯರು ಹೊಲಿಗೆಯಲ್ಲೇ ಜೀವನ ರೂಪಿಸಿಕೊಂಡಿದ್ದಾರೆ.

‘ಆರ್ಥಿಕ ಸಮಸ್ಯೆ ಇರುವವರು, ಕೌಟುಂಬಿಕ ದೌರ್ಜನ್ಯ ಎದುರಿಸಿದವರು, ವಿಧವೆಯರು, ಪತಿಯಿಂದ ಪರಿತ್ಯಕ್ತರಾದವರು, ಒಂಟಿಯಾಗಿ ಬಾಳಬೇಕಾದವರು... ಹೀಗೆ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಾದ ಅನಿವಾರ್ಯ ಇರುವ ಮಹಿಳೆಯರೇ ಹೆಚ್ಚಾಗಿ ಹೊಲಿಗೆ ಕಲಿಯಲು ಬಂದಿದ್ದಾರೆ. ಅದರಲ್ಲೇ ಸಂತೃಪ್ತಿ ಕಂಡು ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಗ್ರಾಮಗಳಲ್ಲೂ ಹೊಲಿಗೆಯಿಂದಲೇ ಜೀವನ ಕಟ್ಟಿಕೊಳ್ಳುವುದು ಕಷ್ಟವಲ್ಲ. ಯಾವುದೇ ಸಿದ್ಧ ಉಡುಪು ಕೊಂಡರೂ ಅದನ್ನು ದೇಹಕ್ಕೆ ತಕ್ಕಂತೆ ಫಿಟ್‌ ಮಾಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಒಂದು ಡ್ರೆಸ್‌ ಫಿಟ್‌ ಮಾಡಿಸಿಕೊಳ್ಳಲು ಹಳ್ಳಿಗಳಲ್ಲಿ ಕನಿಷ್ಠ ₹ 30 ರಿಂದ ₹ 50 ಪಡೆಯುತ್ತಾರೆ. ಇಷ್ಟೇ ಅಲ್ಲದೇ ಹಳೇಬಟ್ಟೆಗಳನ್ನು ಹೊಲಿದೇ ಸಾಕಷ್ಟು ಆದಾಯ ಗಳಿಸಬಹುದು. ಕಸೂತಿ, ಜರ್ದೋಸಿ, ಕಾಸ್ಟ್ಯೂಮ್‌ ಜುವೆಲರಿ ಸಹ ಮಾಡುತ್ತೇನೆ. ಇದರ ತರಬೇತಿ ಶಿಬಿರವನ್ನೂ ಆಗಾಗ ಮಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು