ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿಯ ಆಚರಣೆ | ಮುದ ತರುವ ಮೆಹೆಂದಿ

Published 5 ಏಪ್ರಿಲ್ 2024, 23:30 IST
Last Updated 5 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮೆಹೆಂದಿ ಸಂಭ್ರಮದ ಸಂಕೇತ. ಖುಷಿಯ ಆಚರಣೆ ವೇಳೆ ಮಹಿಳೆಯರು ಮೆಹೆಂದಿ ಹಚ್ಚಿ ಸಂಭ್ರಮಿಸುತ್ತಾರೆ. ರಂಜಾನ್ ಹಬ್ಬದಲ್ಲೂ ಹೆಂಗಳೆರ ಸಂಭ್ರಮ, ಆಚರಣೆ ಆರಂಭವಾಗುವುದು ಮೆಹೆಂದಿ ಹಚ್ಚುವುದರಿಂದಲೇ. ಆಗಸದಲ್ಲಿ ಈದ್‌ನ ಚಂದ್ರ ಮೂಡುವಾಗ, ಹೆಣ್ಣುಮಕ್ಕಳ ಕೈಯಲ್ಲಿ ಮೆಹೆಂದಿ ಅರಳಲು ಶುರುವಾಗುತ್ತದೆ.

ಮೆಹೆಂದಿ ಹಚ್ಚುವುದು ಕೂಡ ರಂಜಾನ್ ಸಂಭ್ರಮದ ಭಾಗ. ಪುಟ್ಟ ಮಕ್ಕಳಿಂದ ಹಿಡಿದು, ಹಿರೀಕರು ಕೂಡ ಕೈಗೆ ಹೆನ್ನಾ ಹಚ್ಚಿ ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸುತ್ತಾರೆ. ಮಸೀದಿಯ ಮಿನಾರಗಳಲ್ಲಿ ಮೊಳಗುವ ಈದ್‌ನ ಸಂಭ್ರಮದ ಅಲೆಗಳಿಗೆ ಕಾದು ಮೆಹೆಂದಿ ಹಚ್ಚಿ ನಗು ಬೀರುವ ಪುಟ್ಟ ಮಕ್ಕಳದ್ದು ಇನ್ನೊಂದು ಬಗೆಯ ಸಂಭ್ರಮ.

ಹಬ್ಬದ ಒಂದು ವಾರದ ಮೊದಲೇ ಮಾರುಕಟ್ಟೆಯಿಂದ ತಂದಿಟ್ಟ ಮೆಹೆಂದಿ ಕೋನ್‌ಗಳನ್ನು, ಹಬ್ಬದ ಹಿಂದಿನ ದಿನದ ರಾತ್ರಿ ಹಚ್ಚಿಕೊಳ್ಳುವ ವಾಡಿಕೆ ಈಗ ವಿರಳ. ವೃತ್ತಿಪರ ಮೆಹೆಂದಿ ಕಲಾವಿದರಿಂದಲೇ ಕೈಕಾಲುಗಳನ್ನು ಸಿಂಗರಿಸಿಕೊಳ್ಳುವುದು ಹೆಚ್ಚಾಗಿದೆ. ರಾಸಾಯನಿಕ ರಹಿತ, ಸಾವಯವ ಮೆಹೆಂದಿ ಹೆಚ್ಚಿನ ಜನ ಇಷ್ಟಪಡುತ್ತಾರೆ. ತಮ್ಮಿಷ್ಟದ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಂಡು ಕೈಗಳಲ್ಲಿ ಚಿತ್ತಾರ ಮೂಡಿಸುತ್ತಾರೆ.

ಹಬ್ಬದ ಎರಡು–ಮೂರು ದಿನಕ್ಕೂ ಮುಂಚೆ ಮೆಹೆಂದಿ ಹಚ್ಚಿಸಿಕೊಳ್ಳುವ ಸಂಭ್ರಮ ಪ್ರಾರಂಭವಾಗುತ್ತದೆ. ಹಬ್ಬದ ಚಂದ್ರ ಕಂಡ ಮೇಲೆ ಮೆಹೆಂದಿ ಹಚ್ಚುವ ಖುಷಿ ವೇಗ ಪಡೆದುಕೊಳ್ಳುತ್ತದೆ. ಸಾಂಪ್ರದಾಯಿಕ ವಿನ್ಯಾಸಗಳ ಬದಲಿಗೆ, ಚಂದ್ರ, ನಕ್ಷತ್ರ, ಲಾಂದ್ರ ಮುಂತಾದ ಹಬ್ಬದ ಥೀಮ್‌ಗಳು ಜನರ ನೆಚ್ಚಿನ ಆಯ್ಕೆಗಳು. ಭಾರತೀಯ ಶೈಲಿಯ ವಿನ್ಯಾಸ, ಹೂವಿನ ಶೈಲಿಗಳನ್ನೂ ಜನ ಇಷ್ಟಪಡುತ್ತಾರೆ. ಹಲವರಿಗೆ ಸರಳ ವಿನ್ಯಾಸ ಇಷ್ಟವಾಗುತ್ತದೆ. ಅದ್ಧೂರಿ ವಿನ್ಯಾಸ ಬಯಸುವವರೂ ಇದ್ದಾರೆ. ಮದುವೆಯಾದವರ ಮೊದಲ ಹಬ್ಬವಾಗಿದ್ದರೆ, ಮತ್ತೆ ಮದುವಣಗಿತ್ತಿಯರಂತೆ ಕೈ–ಕಾಲುಗಳಿಗೆ ಮೆಹೆಂದಿ ಹಾಕಿಸಿಕೊಳ್ಳುತ್ತಾರೆ ಎನ್ನುವುದು ಮೆಹೆಂದಿ ಡಿಲೈಟ್‌ನ ಸಾನಿಯಾ ಅಮ್ರಿನ್ ಅವರ ಮಾತು.

ಮಕ್ಕಳು ಬೇಗ ಕಲೆಸಿಕೊಳ್ಳುವುದಿಂದ, 15–20 ನಿಮಿಷದಲ್ಲಿ ಬಣ್ಣ ಬರುವ ವಿಶೇಷ ಮೆಹೆಂದಿಯೂ ಇದೆ. ಹಣ್ಣಿನ ಸಾರಗಳಿಂದ ತಯಾರಿಸಿದ ಈ ಮೆಹೆಂದಿಯಿಂದ ಬೇಗನೆ ಬಣ್ಣ ಬರುತ್ತದೆ. ತುರಿಕೆ ಹಾಗೂ ದುದ್ದು ಸಮಸ್ಯೆ ಇಲ್ಲ. ಆದರೆ ಬಾಳಿಕೆ ಕಡಿಮೆ. ಸಾಮಾನ್ಯ ಮೆಹೆಂದಿ 3–4 ಗಂಟೆ ಹಚ್ಚಿಕೊಂಡರೆ ಗಾಢ ಬಣ್ಣ ಬರುತ್ತದೆ. ರಾಸಾಯನಿಕ ರಹಿತ ಮೆಹೆಂದಿ ಹಚ್ಚುವುದರಿಂದ ಚರ್ಮದ ಸಮಸ್ಯೆ ಬರುವುದಿಲ್ಲ. ಗರ್ಭಿಣಿಯರೂ ಯಾವುದೇ ಭಯ ಇಲ್ಲದೆ ಬಳಸಬಹುದು.

ಗಾಢ ಬಣ್ಣ ಬರುವ ಮೆಹೆಂದಿ ಹಚ್ಚಿದರೆ ಚರ್ಮದ ಬಣ್ಣ ಫರಕು ಬೀಳದು. ಕೈ ವಿನ್ಯಾಸಕ್ಕೆ ತಕ್ಕಂತೆ ಮೆಹೆಂದಿಯ ವಿನ್ಯಾಸವೂ ಬದಲಾಗುತ್ತದೆ. ವಿವಿಧ ವಯೋಮಾನದವರ ವಿನ್ಯಾಸ ಆಯ್ಕೆ, ಶೈಲಿ ವಿಭಿನ್ನವಾಗಿರುತ್ತದೆ. ಯುವತಿಯುರು ಟ್ರೆಂಡಿಂಗ್ ವಿನ್ಯಾಸಗಳನ್ನು ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ. ಗಂಟೆಗಟ್ಟಲೆ ಕುಳಿತು ಮೆಹೆಂದಿ ಹಚ್ಚಿಕೊಳ್ಳಲು ಪುರುಸೊತ್ತು ಇಲ್ಲ ಎನ್ನುವವರಿಗೆ ಅಚ್ಚುಗಳೂ ಇದ್ದು (ಡೂ ಇಟ್ ಯುವರ್‌ಸೆಲ್ಫ್ ಕಿಟ್), ಅದನ್ನು ಕೈಗೆ ಅಂಟಿಸಿ ಖುದ್ದಾಗಿ ಬಿಡಿಸಿಕೊಳ್ಳಬಹುದು.

ಕೋನ್‌ ಮೂಲಕ ಬೆರಳ ತುದಿಗೆ ಹಚ್ಚಿಕೊಳ್ಳುವುದು ಕಷ್ಟ ಎನಿಸುವವರಿಗೆ ಇನ್‌ಸ್ಟಂಟ್‌ ಡಿಪ್ ಕ್ಯಾಪ್‌ಗಳೂ ಸಿಗುತ್ತವೆ. ಇದು ಕೆಂಪು ಹಾಗೂ ಕಡುಗೆಂಪು ಬಣದಲ್ಲಿ ಲಭ್ಯ. ಕಡಿಮೆ ಅವಧಿ ಬಾಳಿಕೆ ಬರುವ ನೇಲ್ ಪಾಲಿಶ್ ಹೆನ್ನಾ ಕೂಡ ಇದ್ದು, ಇದು ಬೇಗನೇ ಬಣ್ಣ ಬರುವುದದಲ್ಲದೇ, ಒಮ್ಮೆ ನೀರಿನಿಂದ ತೊಳೆದರೆ ಅಳಿಸಿಹೋಗುತ್ತದೆ. ನಿತ್ಯ ನೇಲ್ ಪಾಲಿಶ್ ಮಾಡಿಕೊಳ್ಳುವವರಿಗೆ ಇದು ಉತ್ತಮ ಆಯ್ಕೆ. ಕಪ್ಪು, ಕೆಂಪು, ಗಾಢ ಕೆಂಪು, ಗಾಢ ಕಂದು ಬಣ್ಣಗಳಲ್ಲಿ ಸಿಗುತ್ತದೆ.

ರಾಸಾಯನಿಕ ರಹಿತವಾಗಿ ತಯಾರಿಸಿದ ಮೆಹೆಂದಿ, 10–15 ದಿನಗಳ ಕಾಲ ಇರುತ್ತದೆ. ದೇಹದ ಉಷ್ಣಾಂಶ ಹೆಚ್ಚಿರುವವರಿಗೆ ಮೆಹೆಂದಿ ಗಾಢ ಬಣ್ಣ ಬರುತ್ತದೆ. ಹೆಚ್ಚು ದಿನ ಉಳಿಯುತ್ತದೆ. ತಂಪು ದೇಹದವರಿಗೆ ಹಚ್ಚಿದ ಮೆಹೆಂದಿ ಹೆಚ್ಚು ಬಣ್ಣ ಬರುವುದಿಲ್ಲ. ಬಾಳಿಕೆಯೂ ಕಡಿಮೆ. ಈಗ ‘ಆಫ್ಟರ್‌ ಅಪ್ಲೈ ಕೇರ್’ ಉತ್ಪನ್ನಗಳೂ ಇದ್ದು, ಇವು ಗಾಢ ಬಣ್ಣ ಬರಿಸುವ ಜೊತೆಗೆ ದೀರ್ಘ ಕಾಲ ಉಳಿಯುತ್ತವೆ. ಮನೆ ಕೆಲಸ ಮಾಡುವಾಗ ಕೈಗವಸು ಹಾಕಿಕೊಂಡು, ನೀರು ತಾಗದಂತೆ ನೋಡಿಕೊಂಡರೆ, ಬಣ್ಣ, ಬಾಳಿಕೆ ಎರಡೂ ಅಧಿಕ ಎನ್ನುತ್ತಾರೆ ಸಾನಿಯಾ ಅಮ್ರಿನ್.

ಮನೆಯಲ್ಲಿಯೇ ಸಾವಯವ ಮೆಹೆಂದಿ ತಯಾರಿಸಿ, ಅವುಗಳನ್ನು ಕೋನ್‌ನಲ್ಲಿ ತುಂಬಿ ಮಾರಾಟ ಮಾಡಿ ಸ್ವಾಲಂಬಿಗಳಾದ ಮಹಿಳೆಯರು ಹಲವರಿದ್ದಾರೆ. ಮೆಹೆಂದಿ ಬಿಡಿಸುವುದು ಗೊತ್ತಿದ್ದರೆ ಬೋನಸ್. ಮನೆಯಲ್ಲಿ ಸಮಯ ಇದ್ದಾಗ ಮೆಹೆಂದಿ ಕೋನ್‌ಗಳನ್ನು ತಯಾರಿಸುತ್ತಿದ್ದೆ. ಸಾಮಾಜಿಕ ಜಾಲತಾಣಗಳ ಮೂಲಕ ಅವುಗಳನ್ನು ಮಾರಾಟ ಮಾಡಲು ಆರಂಭಿಸಿದೆ. ಹಬ್ಬ ಹಾಗೂ ಮದುವೆ ಋತುವಿನಲ್ಲಿ ಬೇಡಿಕೆ ಹೆಚ್ಚು. ವಿದೇಶಗಳಲ್ಲಿರುವವರೂ ಕೂಡ ಮೆಹೆಂದಿಗೆ ಆರ್ಡರ್ ನೀಡುತ್ತಾರೆ. ಮೆಹೆಂದಿ ಬಿಡಿಸಲೂ ಕರೆಯುತ್ತಾರೆ. ಟ್ರೆಂಡಿಂಗ್ ವಿನ್ಯಾಸಗಳನ್ನು ಯೂಟ್ಯೂಬ್ ನೋಡಿ ಕಲಿಯುತ್ತೇನೆ. ಮನೆಯಲ್ಲಿ ಸುಮ್ಮನಿದ್ದ ನನಗೆ ಈಗ ಆದಾಯದ ಮೂಲವೂ ಆಗಿದೆ. ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಅಲಂಗಾರ್‌ನ ಫರೀದಾ ಶಾಹಿದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT