ಸ್ಪರ್ಧೆಗಳಲ್ಲಿ ಹೆಣ್ಣುಮಕ್ಕಳ ತೂಕದ ಬಗ್ಗೆ ಇರುವ ಅತಾರ್ಕಿಕ, ಅವೈಜ್ಞಾನಿಕ ನಿಯಮಗಳು ಬದಲಾಗಬೇಕು. ತೂಕಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆಯನ್ನು ತರಬೇಕು. ಹೆಣ್ಮಕ್ಕಳೂ ಅಷ್ಟೇ, ತಮ್ಮ ತೂಕದ ಬಗ್ಗೆ ಸಣ್ಣ ತಿಳಿವಳಿಕೆ, ಒಂದಷ್ಟು ಮುತುವರ್ಜಿ ಇದ್ದರೆ ಸಾಕು. ತೀರಾ 50 ಗ್ರಾಂ, 100 ಗ್ರಾಂಗಳ ಬಗ್ಗೆ ಚಿಂತಿಸಲು ಬದುಕೇನೂ ಓಲಂಪಿಕ್ಸ್ ಕ್ರೀಡಾಂಗಣವಲ್ಲ...
ಇವತ್ತಿನಿಂದಲ್ಲ, ಯಾವತ್ತಿನಿಂದಲೂ ಅಷ್ಟೇ, ಹೆಣ್ಣಿಗೂ ಅವಳ ತೂಕಕ್ಕೂ ಒಂದು ಅತಾರ್ಕಿಕ, ಅವೈಜ್ಞಾನಿಕ ನಂಟು ಜೋಡಿಸಲಾಗಿದೆ. ಹೆಣ್ಣು ಹೇಗಿರಬೇಕು ಎನ್ನುವುದಕ್ಕೆ ‘ತೆಳ್ಳಗೆ, ಬೆಳ್ಳಗೆ’ ಎನ್ನುವ ಸಿದ್ಧಸೂತ್ರವೇ ಇದೆಯಲ್ಲವೆ? ಆದರೆ ಎಲ್ಲರೂ, ಎಲ್ಲಾ ಸಮಯದಲ್ಲೂ ಒಂದೇ ತೂಕ ಕಾಯ್ದುಕೊಳ್ಳಲು ಹೇಗೆ ಸಾಧ್ಯ? ಯಾವಾಗ ತೂಗಿದರೂ, ಎಷ್ಟು ಸಲ ತೂಗಿದರೂ ಒಂದೇ ರೀತಿಯಾಗಿರಲು ಅವಳೇನು ಕಟೆದಿಟ್ಟ ಕಲ್ಲಿನ ಮೂರ್ತಿಯಲ್ಲ, ಟೊಮೆಟೊ ಅಥವಾ ಸೇಬು ಕೂಡ ಅಲ್ಲ. ಸ್ಪರ್ಧೆಯ ನಿರ್ಣಾಯಕರಾಗಿರುವವರೆಗೂ ಇಷ್ಟು ಮಾತ್ರದ ತಿಳಿವಳಿಕೆ ಇದ್ದೇ ಇರುತ್ತದೆ. ಆದರೂ ಅದನ್ನು ಬದಿಗೊತ್ತಿ ನಿಯಮಗಳ ಪ್ರಕಾರ ಅವಳ ತೂಕವನ್ನು ಗ್ರಾಂಗಳಲ್ಲಿ ಲೆಕ್ಕ ಹಾಕಿ ನಿರ್ಣಯ ಕೈಗೊಳ್ಳಲಾಗುತ್ತದೆ.
ಇತ್ತೀಚಿಗೆ ಒಲಂಪಿಕ್ಸ್‌ನಲ್ಲಿ 100 ಗ್ರಾಂ ತೂಕದ ಕಾರಣ ವಿನೇಶ್ ಫೋಗಟ್ ಪದಕ ವಂಚಿತರಾದರು. ಈ ಚರ್ಚೆ ಹೆಣ್ಣುಮಕ್ಕಳ ತೂಕದ ಬಗ್ಗೆ ಮತ್ತೆ ಮಾತನಾಡುವಂತೆ ಮಾಡಿದೆ. ಈ 100 ಗ್ರಾಂ ತೂಕದ ಲೆಕ್ಕಾಚಾರ ಒಲಂಪಿಕ್ಸ್‌ನಂತಹ ನಿರ್ಣಾಯಕ ಘಟ್ಟಗಳಲ್ಲಿ ಮಾತ್ರವಲ್ಲ, ಸೌಂದರ್ಯ ಸ್ಪರ್ಧೆಗಳಲ್ಲಿ, ಮಾಡಲಿಂಗ್, ಜಾಹೀರಾತು ನಟನೆಯಂಥ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ತಹತಹ ಇರುವ ಹೆಣ್ಣುಮಕ್ಕಳಿಗೂ ಮುಳುವಾಗುವುದಿದೆ.
ಕುಸ್ತಿಪಟು ವಿನೇಶ್ ಫೋಗಟ್ ಕನಸು ಭಗ್ನವಾಗಲು ಕಾರಣವಾದ ತೂಕದ ಸಂಗತಿ ಎಲ್ಲೆಡೆ ಚರ್ಚೆ ಆಗುತ್ತಿದೆ. ಆದರೆ ಎಷ್ಟೋ ಸ್ಪರ್ಧೆಗಳಲ್ಲಿ ತೂಕದ ಕಾರಣಕ್ಕೆ ಚಿನ್ನದಂತಹ ಅವಕಾಶಗಳನ್ನು ಕಳೆದುಕೊಂಡ ನೂರಾರು, ಸಾವಿರಾರು ಉದಾರಣೆಗಳು ಎಲ್ಲೊ ಮುಚ್ಚಿ ಹೋಗಿರುತ್ತವೆ.
ಋತುಚಕ್ರದ ಸಮಯದಲ್ಲಿ ಆಕೆಯ ತೂಕ ನೂರಾರು ಗ್ರಾಂ ಏರಿಳಿತವಾಗುವುದು ತೀರಾ ಸಾಮಾನ್ಯ. ಕೆಲವರಲ್ಲಿ 1ರಿಂದ 3ಕೆಜಿಯಷ್ಟು ವ್ಯತ್ಯಾಸವಾಗುವುದೂ ಇದೆ. ಇದಕ್ಕೆ ಅವಳು ಸೇವಿಸುವ ಆಹಾರ, ಪಾನೀಯ ಮಾತ್ರ ಕಾರಣವಲ್ಲ. ತನ್ನ ನಿಯಂತ್ರಣದಲ್ಲಿ ಇಲ್ಲದ, ತನ್ನ ದೇಹದಲ್ಲಿ ನಡೆಯುವ ಸ್ವಭಾವಿಕ, ಜೈವಿಕ ಬದಲಾವಣೆಗಳೂ ಕಾರಣ. ಹೆಣ್ಣು ಎನ್ನುವ ಕಾರಣಕ್ಕೆ ಉಂಟಾಗುವ ಬದಲಾವಣೆಗಳೂ ಹೇಗೆ ಅವಳ ಬದುಕು ಭವಿಷ್ಯದ ಕನಸನ್ನು ಕಸಿಯಬಲ್ಲವು ಎನ್ನುವುದಕ್ಕೆ ವಿನೇಶ್ ಫೋಗಟ್ ಒಂದು ದೃಷ್ಟಾಂತವಾಗಿ ನಿಂತಿದ್ದಾರೆ.
‘ಅವಳ ದೇಹದ ಸ್ಥಿತಿ ಹೇಗೇ ಇರಲಿ, ಸ್ಪರ್ಧೆಯ ನಿಯಮಗಳ ಪ್ರಕಾರ ದೇಹದ ತೂಕನವನ್ನು ಕಾಪಾಡಿಕೊಳ್ಳಲೇಬೇಕು’ ಎಂದು ಹೇಳಿ ಕ್ರೀಡಾ ಮಧ್ಯಸ್ಥಿತಿಕೆ ನ್ಯಾಯ ಮಂಡಳಿ (ಸಿಎಎಸ್ ) ಕೈ ತೊಳೆದುಕೊಂಡಿದೆ.
‘ಫೋಗಟ್ ಪದಕ ಕಳೆದುಕೊಂಡಿದ್ದು, ಅವರ ತೂಕ ನಿರ್ವಹಣೆಯ ವೈಫಲ್ಯದಿಂದಲೇ ಹೊರತು, ಬಾಹ್ಯ ಕಾರಣಗಳಿಂದಲ್ಲ ಅಥವಾ ನಿಯಮಗಳಲ್ಲಿನ ದೋಷದಿಂದಲೂ ಅಲ್ಲ, ಯಾರದೊ ಹಸ್ತಕ್ಷೇಪದಿಂದಲೂ ಅಲ್ಲ. ತೂಕದ ನಿಯಮ ಎಲ್ಲಾ ಕ್ರೀಡಾಪಟುಗಳಿಗೆ ಒಂದೇ ಆಗಿರುತ್ತದೆ. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ನಿಯಮಗಳ ಅನುಸರವಾಗಿ ತೂಕ ಪರೀಕ್ಷೆ ಮಾಡಲಾಗಿದೆ. ಅದರಂತೆ ಮೊದಲ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ ತೂಕ 150 ಗ್ರಾಂ. ಹೆಚ್ಚಾಗಿತ್ತು. ಇದಾದ ಬಳಿಕ 15 ನಿಮಿಷದ ಸಮಯದಲ್ಲಿ ಎರಡನೇ ಬಾರಿಗೆ ಪರೀಕ್ಷೆ ನಡೆಸಿದಾಗ ಮಿತಿಗಿಂತ 100 ಗ್ರಾಂ ತೂಕ ಹೆಚ್ಚಳ ಇತ್ತು. ಆದರೆ, ಇಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ’ ಎಂದು ಸಿಎಎಸ್ ಸ್ಪಷ್ಟಪಡಿಸಿದೆ.
ಅವಳ ತೂಕ ನಿರ್ವಹಣೆಯಲ್ಲಿ ಅವಳದಲ್ಲದ ತಪ್ಪೂ ನುಸುಳಿರ ಬಹುದು ಮತ್ತು ಅದು ಅವಳ ದೇಹದಲ್ಲಿ ನಡೆಯುವ ಹಾರ್ಮೋನು ವ್ಯತ್ಯಾಸದಿಂದ ಆಗಿರಬಹುದು ಎನ್ನುವ ಅಂಶ.
ಹೆಣ್ಣಿನ ದೇಹ ಒಂದು ಪ್ರಯೋಗಾಲಯವಿದ್ದಂತೆ. ನಿರಂತರವಾಗಿ ನೈಸರ್ಗಿಕ ಜೈವಿಕ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ಪ್ರತಿ 10 ವರ್ಷಗಳಿಗೊಮ್ಮೆ ಅವಳ ದೇಹ ಹೊಸ ಸ್ಥಿತ್ಯಂತರಗಳಿಗೆ ಸಜ್ಜುಗೊಳುತ್ತ, ಹೊಸ ಹಾರ್ಮೋನುಗಳಿಗೆ ಒಗ್ಗಿಕೊಳ್ಳುತ್ತ, ಮತ್ತೆ ತನ್ನನ್ನು ತಾನು ಸುಸ್ಥಿತಿಗೆ ತಂದುಕೊಳ್ಳುವ ಕ್ರಿಯೆ ನಿರಂತರವಾಗಿ ನಡೆದೇ ಇರುತ್ತದೆ.
ಹತ್ತನೇ ವರ್ಷಕ್ಕೆ ಕಾಲಿಟ್ಟಾಗ ಅವಳು ಹೆಣ್ಣಾಗುವ ಪ್ರಕ್ರಿಯೆ ಆರಂಭವಾಗುತ್ತದೆ. 20ನೇ ವರ್ಷಕ್ಕೆ ಹೊಸ ಹಾರ್ಮೋನುಗಳ ಜೋಡಣೆಯಾಗುತ್ತದೆ. 30ನೇ ವರ್ಷಕ್ಕೆ ಆ ಹಾರ್ಮೋನುಗಳು ದೃಢತೆಯನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆ. 40ನೇ ವರ್ಷಕ್ಕೆ ಮತ್ತೊಂದು ಪರ್ವಕಾಲ ಶುರು. ಋತುಚಕ್ರದ ಶಿಸ್ತು ಕ್ರಮೇಣ ಏರುಪೇರು ಆಗುವ ಕಾಲವದು. 50ನೇ ವರ್ಷಕ್ಕೆ ಋತುಚಕ್ರ ನಿಲ್ಲುವ ಮುನ್ನ ಹಾರ್ಮೋನುಗಳ ಏರುಪೇರು ವಿಪರೀತವಾಗುವುದುಂಟು. ಈ ಎಲ್ಲಾ ಅವಧಿಗಳಲ್ಲೂ ತೂಕದ ವ್ಯತ್ಯಾಸವೂ ಜೊತೆಗಿದ್ದೇ ಇರುತ್ತದೆ.
ಅವಳ ತೂಕ 10ವರ್ಷಕ್ಕೆ 30 ಕೆಜಿ ಇದ್ದರೆ ಸಾಕು, 20 ವರ್ಷಕ್ಕೆ 40 ಕೆಜಿ ಇದ್ದರೂ ಅಡ್ಡಿಯಿಲ್ಲ, 30 ರಿಂದ 40 ವರ್ಷಕ್ಕೆ 50 ಕೆಜಿ ದಾಟುವಂತಿಲ್ಲ. ಇದು ಉದಾಹರಣೆ ಮಾತ್ರ. ತೂಕ ಎತ್ತರಕ್ಕೆ ಅನುಗುಣವಾಗಿ ಬದಲಾಗುತ್ತಲೇ ಇರುತ್ತದೆ. 50 ವರ್ಷಕ್ಕೂ ಅದೇ ತೂಕವಿದ್ದರೆ ಇನ್ನೂ ಒಳ್ಳೆಯದು ಎಂದು ವೈದ್ಯಕೀಯ ಬಾಡಿ ಇಂಡೆಕ್ಸ್ ಸೂಚ್ಯಂಕ ಹೇಳುತ್ತದೆ.
‘ಯಾವುದೇ ಸ್ಪರ್ಧೆಯ ನಿರ್ಣಯ ಕೈಗೊಳ್ಳುವಾಗ ಆಕೆಯ ತೂಕವನ್ನು ಲೆಕ್ಕ ಹಾಕುವ ಮುನ್ನ ಆ ಸಂದರ್ಭದಲ್ಲಿ ಅವಳ ದೇಹದ ಸ್ಥಿತಿಯನ್ನು ಪರಿಗಣಿಸಲೇಬೇಕು’ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ. ಕಾಮಿನಿ ರಾವ್.
‘ಕೆಲ ಸಂದರ್ಭದಲ್ಲಿ ಹೆಣ್ಣಿನ ತೂಕ ಏರಿಳಿತವಾಗುವುದು ಸಾಮಾನ್ಯ. ಋತು ಚಕ್ರದ ಸಮಯದಲ್ಲಿ 1ರಿಂದ 3 ಕೆಜಿ ತೂಕ ವ್ಯತ್ಯಾಸವಾಗಬಹುದು. ಆ ಸಮಯದಲ್ಲಿ ಪ್ರೊಜೆಸ್ಟರಾನ್ (progesterone) ಹಾರ್ಮೋನ್ ಪರಿಣಾಮ ದೇಹದ ಸ್ನಾಯುಗಳು ಊದಿಕೊಳ್ಳುತ್ತವೆ. ಕಾಲು, ಹೊಟ್ಟೆ, ಸ್ತನಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ದೇಹದಲ್ಲಿ ನೀರಿನ ಅಂಶ ಶೇಖರಣೆಗೊಳ್ಳುವುದರಿಂದ ತೂಕ ಹೆಚ್ಚುವುದು ಸ್ವಾಭಾವಿಕ. ಋತುಚಕ್ರದ ಅವಧಿ ಮುಗಿದ ತಕ್ಷಣ ದೇಹದ ಸ್ಥಿತಿ ಹಾಗೂ ಈ ತೂಕ ಮತ್ತೆ ಸಾಮಾನ್ಯ ಸ್ಥಿತಿ ತಲುಪುತ್ತವೆ. ಇದನ್ನು ಋತುಚಕ್ರಪೂರ್ವ ಸಿಂಡ್ರೋಮ್ (premenstrual syndrome) ಇನ್ನುತ್ತೇವೆ. ಆ ಕ್ಷಣದ ಅವಳ ದೇಹದ ಪರಿಸ್ಥಿತಿಯನ್ನು ಪಕ್ಕಕ್ಕಿಟ್ಟು ಸ್ಪರ್ಧೆಗಳಿಗೆ ಅವಳ ತೂಕವನ್ನು ಪರಿಗಣಿಸುವುದು ಅಸಹಜ’ ಎನ್ನುತ್ತಾರೆ ಡಾ. ಕಾಮಿನಿ ರಾವ್.
ಸಾಂದರ್ಭಿಕ ಚಿತ್ರ
ಪ್ರತಿತಿಂಗಳು ಋತುಚಕ್ರದ ಅವಧಿಯಲ್ಲಿ ಅವಳ ದೇಹ ನಿರಂತರವಾಗಿ ಹಾರ್ಮೋನುಗಳ ಬದಲಾವಣೆಗಳಿಗೆ ಈಡಾಗುತ್ತಲೇ ಇರುತ್ತದೆ. ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಹಾರ್ಮೋನುಗಳ ಸ್ರವಿಸುವಿಕೆಯಿಂದ ತೂಕದಲ್ಲಿಯೂ ಏರಿಳಿತ ಸಾಮಾನ್ಯ. ಸಂತಾನೋತ್ಪತ್ತಿಗೆ ದೇಹವನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನಿಸರ್ಗ ಹೆಣ್ಣಿನ ದೇಹದಲ್ಲಿ ಈ ರೀತಿಯ ಹಾರ್ಮೋನ್ ಏರಿಳಿತವನ್ನು ಸೃಷ್ಟಿಸುತ್ತದೆ. ಇದು ಸೃಷ್ಟಿಯ ಮುಂದುವರಿಕೆಗೆ ಅಗತ್ಯ ಕೂಡ. ಪ್ರತಿ ತಿಂಗಳು ಮುಟ್ಟಿನ ಅವಧಿಯಲ್ಲಿ ಹೆಚ್ಚುವ ಹಾಗೂ ಅನಂತರ ಮತ್ತೆ ಸಹಜ ಸ್ಥಿತಿಗೆ ಮರಳುವ ತೂಕದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ನಿರಂತರ ತೂಕ ಹೆಚ್ಚಳ ಕಂಡು ಬಂದರೆ ಮಾತ್ರ ವೈದ್ಯರನ್ನು ಕಾಣಬೇಕು.-ಡಾ. ಚಂದ್ರಿಕಾ ಆನಂದ್, ಸರಸ್ವತಿ ಗೈನೋವರ್ಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.