ಭಾನುವಾರ, ಜೂನ್ 13, 2021
22 °C

ವಿಶ್ವ ತಾಯಂದಿರ ದಿನ: ಅಮ್ಮಾ.. ಬಾ ಹತ್ತಿರ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಅಮ್ಮನೆಂದರೆ ಎಣೆಯಿಲ್ಲದ ಪ್ರೀತಿ, ಅಮ್ಮನೆಂದರೆ ವಿಸ್ಮಯ, ಅವಳೆಂದರೆ ಅದ್ಭುತ. ನವಮಾಸ ಕಂದನನ್ನು ಹೊಟ್ಟೆಯಲ್ಲಿಟ್ಟುಕೊಂಡು ಬಸಿರು, ಬಾಣಂತನದ ನೋವು ಹಾಗೂ ಖುಷಿ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಾ ತನ್ನೆಲ್ಲಾ ಜವಾಬ್ದಾರಿಯೊಂದಿಗೆ ಮಗುವನ್ನು ಜತನ ಮಾಡುವ ತಾಯಿ ಎಂದರೆ ಕರುಣಾಸಾಗರಿಯೇ ಸರಿ. ಆದರೆ ತಾಯಿ ತನ್ನ ಮಗುವನ್ನು ಸಲಹಿ ಬೆಳೆಸಲು ಎದುರಿಸುವ ಸವಾಲುಗಳು ಹಲವಾರು. ಅದರಲ್ಲೂ ದುಡಿಯುವ ತಾಯಂದಿರಿಗೆ ಮಕ್ಕಳ ಲಾಲನೆ–ಪಾಲನೆ ಮಾಡುವ ಕಷ್ಟ ಒಂದು ತೂಕ ಹೆಚ್ಚೇ.

ಈ ಕೋವಿಡ್‌ ಸಂದರ್ಭದಲ್ಲಂತೂ ಮನೆಯಿಂದ ಹೊರಗೆ ದುಡಿಯುವ ತಾಯಂದಿರಿಗೆ ತಮ್ಮ ಮಕ್ಕಳನ್ನು ನಿಭಾಯಿಸುವುದು ನಿಜಕ್ಕೂ ಅತ್ಯಂತ ಕಠಿಣವಾದ ಸವಾಲು. ಪುಟ್ಟ ಕಂದಮ್ಮನನ್ನು ಅಪ್ಪಿ ಮುದ್ದಾಡಲೂ ಸಾಧ್ಯವಾಗದಂತಹ ಸಂದರ್ಭವಿದು. ಕಣ್ಣೆದುರೇ ಕಂದನಿದ್ದರೂ ದೂರದಲ್ಲಿ ನಿಂತು ನೋಡಿ ಸಮಾಧಾನ ಮಾಡಿಕೊಳ್ಳುವುದು ಎಷ್ಟೋ ಅಮ್ಮಂದಿರಿಗೆ ಅನಿವಾರ್ಯವಾಗಿ ಬಿಟ್ಟಿದೆ.

ಈ ದಿನಗಳಲ್ಲಿ ಉದ್ಯೋಗಸ್ಥ ತಾಯಂದಿರು ತಮ್ಮ ಮಕ್ಕಳ ಮೇಲಿನ ಪ್ರೀತಿ– ವಾತ್ಸಲ್ಯ, ಮಮಕಾರಗಳನ್ನು ಬದಿಗಿಟ್ಟು ದುಡಿಯುತ್ತಿದ್ದಾರೆ. ಕರ್ತವ್ಯ ಹಾಗೂ ಮಕ್ಕಳು ಎರಡನ್ನೂ ನಿಭಾಯಿಸುವುದರ ನಡುವೆ ಹಲವು ರೀತಿಯ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವೈದ್ಯೆಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು.. ಹೀಗೆ ಮುಂಚೂಣಿಯಲ್ಲಿರುವವರು ಕಣಕ್ಕಿಳಿದು ಕೋವಿಡ್‌ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಶಿಕ್ಷಕಿಯರದ್ದು ಇನ್ನೊಂದು ಬಗೆಯ ಹೊಣೆಗಾರಿಕೆ. ಮನೆಯೊಳಗೆ ಮಕ್ಕಳನ್ನು ನೋಡಿಕೊಳ್ಳುತ್ತ, ಆನ್‌ಲೈನ್‌ ತರಗತಿ, ಫೋನ್‌ ಕರೆಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತ ಅವರ ಶಿಕ್ಷಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ.

ಆದರೆ ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತ, ಒಬ್ಬ ತಾಯಿಯಾಗಿ ದುಡಿಮೆ ಹಾಗೂ ಮಕ್ಕಳು ಎರಡೂ ಬಗೆಯ ಕರ್ತವ್ಯ ನಿಭಾಯಿಸುವ ಬಗೆ ಹೇಗೆ ಎಂಬುದರ ಬಗ್ಗೆ ವಿವಿಧ ಕ್ಷೇತ್ರಗಳ ತಾಯಂದಿರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ಮಕ್ಕಳ ಸುರಕ್ಷತೆಯ ಭಯ’

‘ನಾನು 2020 ರ ಮಾರ್ಚ್‌ನಿಂದ ಕೋವಿಡ್ ಡ್ಯೂಟಿ ಮಾಡುತ್ತಿದ್ದೇನೆ. ನನ್ನ ಮಕ್ಕಳಿನ್ನೂ ಚಿಕ್ಕವರು. ಅವರನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ಮನಸ್ಸಿನಲ್ಲಿ ಬೇಸರ ಕಾಡುತ್ತದೆ. ಕೆಲಸಕ್ಕೆ ಹೋಗಿ ಬಂದ ತಕ್ಷಣ ಮಕ್ಕಳ ಜೊತೆ ಬೆರೆಯಲು ಆಗುವುದಿಲ್ಲ. ನನ್ನ ಮಗ ನಾನು ಮನೆಗೆ ಬಂದ ತಕ್ಷಣ ತಬ್ಬಿಕೊಳ್ಳಲು ಬರುತ್ತಾನೆ. ಅವನು ಚಿಕ್ಕವನಾದ ಕಾರಣ ಅವನಿಗೆ ಪರಿಸ್ಥಿತಿ ಅರ್ಥ ಆಗುವುದಿಲ್ಲ. ಆ ಕಾರಣಕ್ಕೆ ನಾನೇ ಅವನಿಂದ ದೂರ ಹೋಗುತ್ತೇನೆ. ಬಂದ ಕೂಡಲೇ ಸ್ನಾನ ಮಾಡಿ ಸ್ಯಾನಿಟೈಸ್ ಮಾಡಿಕೊಳ್ಳುತ್ತೇನೆ. ಮಲಗುವಾಗ ದೂರ ಮಲಗುತ್ತೇನೆ. ಮನೆಯಲ್ಲಿ ಇರುವಾಗಲೂ ಮಾಸ್ಕ್ ಧರಿಸುತ್ತೇನೆ. ಆಕಸ್ಮಿಕವಾಗಿ ನನ್ನಿಂದ ಮಕ್ಕಳಿಗೆ ರೋಗ ತಗಲಿದರೆ ಎಂಬ ಭಯ ಇರುವ ಕಾರಣದಿಂದ ಆದಷ್ಟು ದೂರವೇ ಇರುತ್ತೇನೆ. ಇದೊಂಥರಾ ಮಾನಸಿಕ ಹಿಂಸೆ. ನಮ್ಮ ಕ್ಷೇತ್ರದಲ್ಲಿ ಹಲವು ತಾಯಂದಿರು ವೃತ್ತಿಯ ಸಲುವಾಗಿ ಮಗುವಿಗೆ ಹಾಲೂಡಿಸುವುದನ್ನು ಬಿಟ್ಟಿದ್ದಾರೆ. ಆದರೆ ಈ ಕೆಲಸದಲ್ಲಿ ನಮ್ಮ ಮಕ್ಕಳು, ಕುಟುಂಬದ ಸುರಕ್ಷತೆಯ ಭಯವಿದ್ದರೂ ಆತ್ಮತೃಪ್ತಿ ಇದೆ’ ಎನ್ನುತ್ತಾರೆ ಬೆಂಗಳೂರಿನ ಬಿಎಂಸಿಆರ್‌ಐ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿರುವ ಸರಿತಾ ಬಿ.ಆರ್‌.

ಮಗನ ಜೊತೆ ಸಮಯ ಕಳೆಯಲಾಗದ ಅಳಲು

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯೆ ಡಾ. ಸುಷ್ಮಾ ಎಚ್‌.ಆರ್‌. ತಮ್ಮ ಅನುಭವ ಹೇಳಿಕೊಂಡಿದ್ದು ಹೀಗೆ– ‘ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ರೋಗಿಗಳ ಸೇವೆ ಮಾಡಲೇಬೇಕು. ದಿನವಿಡೀ ಕೋವಿಡ್‌ ರೋಗಿಗಳ ಜೊತೆ ಕಾಲ ಕಳೆಯುವ ನಮಗೆ ಮನೆಗೆ ಬಂದ ತಕ್ಷಣ ಮಗುವಿನ ಜೊತೆ ಬೆರೆಯಲು ಆಗುವುದಿಲ್ಲ. ಎಷ್ಟೋ ಬಾರಿ ‘ಅಮ್ಮಾ..’ ಎಂದು ಓಡಿ ಬರುವ ಕಂದನನ್ನು ನೋಡಿದಾಗ ಕರುಳು ಕಿವುಚುತ್ತದೆ. ಆದರೆ ಒಬ್ಬ ವೈದ್ಯೆಯಾಗಿ ಹಾಗೂ ತಾಯಿಯಾಗಿ ನನ್ನ ಮಗನನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ. ಆ ಕಾರಣಕ್ಕೆ ನಾನು ಅವನನ್ನು ತಕ್ಷಣಕ್ಕೆ ಹತ್ತಿರ ಸೇರಿಸುವುದಿಲ್ಲ. ಮನೆಯಲ್ಲಿ ನನಗೆ ಪತಿ ಹಾಗೂ ಮನೆಯವರ ಸಹಕಾರವಿರುವುದರಿಂದ ಮಗನನ್ನು ನಿಭಾಯಿಸುವುದು ಅಷ್ಟೊಂದು ಕಷ್ಟ ಎನ್ನಿಸುವುದಿಲ್ಲ. ಆದರೂ ತಾಯಿಯಾಗಿ ಮಗುವಿನ ಜೊತೆ ಸಮಯ ಕಳೆಯಲು ಆಗುವುದಿಲ್ಲ ಎಂಬ ಅಳಲಿದೆ’.

ಆನ್‌ಲೈನ್‌ ಪಾಠದ ಜೊತೆಗೆ ಮಕ್ಕಳಿಗೂ ಓದಿಸಬೇಕು..

‘ಒಬ್ಬ ಶಿಕ್ಷಕಿಯಾಗಿ ಮನೆಯ ಮಕ್ಕಳು ಹಾಗೂ ನನ್ನ ವಿದ್ಯಾರ್ಥಿಗಳನ್ನು ನಿಭಾಯಿಸುವುದು ಸವಾಲೇ ಸರಿ. ನಾನು ಗ್ರಾಮೀಣ ಭಾಗದಲ್ಲಿ ಶಿಕ್ಷಕಿಯಾಗಿರುವ ಕಾರಣ ತಂತ್ರಜ್ಞಾನದ ಮೂಲಕ ಮಕ್ಕಳನ್ನು ತಲುಪುವುದು ಕಷ್ಟ. ನಾನು ಗೂಗಲ್ ಡಾಕ್ಯುಮೆಂಟ್ ಮೂಲಕ, ಫೋನ್‌ ಕರೆಯ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ಬಹಳ ಸಮಯ ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ಕಳೆಯಬೇಕಾಗುತ್ತದೆ. ಅಂತಹ ಸಮಯದಲ್ಲಿ ನನ್ನ ಮಕ್ಕಳೊಂದಿಗೆ ಸಮಯ ಕಳೆಯಲು ಕಷ್ಟವಾಗುತ್ತದೆ. ಪಾಠ ಬೋಧನೆ ಹಾಗೂ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ವೇಳೆ ನನ್ನ ಮಕ್ಕಳನ್ನು ಸುಮ್ಮನಿರಿಸಬೇಕು. ಅವರಿಗೂ ಬೇಸರವಾಗದಂತೆ ನೋಡಿಕೊಳ್ಳಬೇಕು. ಬಿಡುವಿನ ವೇಳೆ ಅವರಿಗೆ ಪಾಠ ಓದಿಸುವ ಜೊತೆಗೆ ಕೆಲ ಹೊತ್ತು ಅವರೊಂದಿಗೆ ಬೆರೆಯುತ್ತೇನೆ. ಇದರಿಂದ ಅವರಿಗೂ ಸಂತಸವಾಗುತ್ತದೆ’ ಎನ್ನುತ್ತಾರೆ ಪಿರಿಯಾಪಟ್ಟಣ ತಾಲ್ಲೂಕಿನ ಚಿಕ್ಕನೇರಳೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಹೆಗ್ಡೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು