ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮಗುವಿಗೆ ಸೋಲಿನ ಸಿಂಡ್ರೋಮ್‌ ಇದೆಯೆ?

Last Updated 2 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಪೇರೆಂಟಿಂಗ್‌: ನಿಮ್ಮ ಮಕ್ಕಳು ಆಟದಲ್ಲೋ ಅಥವಾ ಬೇರೆ ಯಾವ ಸ್ಪರ್ಧೆಯಲ್ಲೋ ಸೋತಾಗ ಸಿಟ್ಟಿನಿಂದ ಕೂಗಾಡುವ, ಮುನಿಸಿನಿಂದ ಮೌನವಾಗುವ ನಡವಳಿಕೆ ತೋರಿಸುತ್ತಾರೆಯೆ? ಈ ಅಪಜಯದ ಕುರಿತಾದ ಮಕ್ಕಳ ನಡವಳಿಕೆ ಅವರ ಒಟ್ಟಾರೆ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆಯೆ? ಹಾಗಾದರೆ ಅಂತಹ ಮಕ್ಕಳ ‘ಸೋಲಿನ ಸಿಂಡ್ರೋಮ್‌’ ಅನ್ನು ಕಡಿಮೆ ಮಾಡುವುದು ಹೇಗೆ?

ನಾವು ಚಿಕ್ಕಂದಿನಲ್ಲಿ ಕೇರಂ ಆಡುವಾಗ ಸೋಲುವ ಸಮಯ ಬಂದಿತೆಂದರೆ, ನನ್ನ ತಮ್ಮ ಬೋರ್ಡ್‌ನ ಮೇಲಿರುವ ಪಾನ್‌ಗಳನ್ನು ಕೆಡಿಸಿ ಓಡಿ ಹೋಗಿಬಿಡುತ್ತಿದ್ದ. ಸೋಲುವುದು ಅವನಿಗೆ ಬಹಳ ಅವಮಾನದ ವಿಷಯವಾಗಿತ್ತು.

ಕೆಲವು ಮಕ್ಕಳಿಗೆ ಸದಾ ಗೆಲ್ಲಬೇಕು ಎನ್ನುವ ತುಡಿತ ವಿರುತ್ತದೆ, ಅದು ಒಳ್ಳೆಯದೇ. ಆದರೆ ಅವರು ಸೋಲನ್ನು ಸಹಿಸಿಕೊಳ್ಳಲಾರರು, ಸೋಲುವ ಲಕ್ಷಣಗಳನ್ನು ಕಂಡಾಗ ಗಲಾಟೆ ಮಾಡಿಬಿಡುತ್ತಾರೆ, ಮತ್ತೆ ಕೆಲವು ಬಾರಿ ಅವರಿಗೆ ಗೆಲ್ಲುವ ಆತ್ಮವಿಶ್ವಾಸ ಇಲ್ಲದಿದ್ದಾಗ ಭಾಗವಹಿಸಲು ಹಿಂಜರಿ ಯುತ್ತಾರೆ, ಅವರಿಗೆ ಸೋಲನ್ನು ಕಂಡರೆ ಭಯವೆನಿಸುತ್ತದೆ. ಇಲ್ಲಿ ಸೋಲುವುದು ಒಂದು ಬೇಸರದ ವಿಷಯವಾದರೆ ಆ ಬಗ್ಗೆ ನೋಯುವುದು ಇನ್ನೂ ಹೆಚ್ಚಿನ ಸಂಗತಿಯಾಗಿರುತ್ತದೆ. ಇವೆಲ್ಲಾ ‘ಲೂಸರ್ ಸಿಂಡ್ರೋಮ್’ನ ಲಕ್ಷಣಗಳು.

ಸೋಲಿನಿಂದ ಸಿಟ್ಟೇಕೆ?

ಯಾವುದೇ ಆಟವಿರಲಿ, ಪಂದ್ಯವಿರಲಿ ಅಥವಾ ಇನ್ನಾವುದೋ ಸ್ಪರ್ಧೆ ಇರಲಿ, ಸೋತಾಗ ಅಥವಾ ಗೆಲ್ಲದಿದ್ದಾಗ ಬಹಳ ಸಿಟ್ಟು ಮಾಡಿಕೊಳ್ಳುವುದು ಅಥವಾ ತಮ್ಮ ಮನಸಿನ ಹತೋಟಿಯನ್ನೇ ಕಳೆದುಕೊಳ್ಳುವವರಿಗೆ ‘ಸೋರ್ ಲೂಸರ್’ ಅಥವಾ ‘ಸೋತು ಮನಸ್ಸು ಕೆಡಿಸಿಕೊಳ್ಳುವವರು’ ಎನ್ನಬಹುದು. ಓಟದ ಪಂದ್ಯದಲ್ಲಿ ಬಹಳ ಹಿಂದೆ ಇದ್ದಾಗ ಆಟವನ್ನೇ ಬಿಟ್ಟು ಬಿಡುವುದು, ಬೇರೆಯವರ ಮೇಲೆ ಕೂಗಾಡುವುದು ಅಥವಾ ಸಿಟ್ಟು ಮಾಡಿಕೊಳ್ಳುವುದು.. ಮೊದಲಾದ ಲಕ್ಷಣಗಳು ನಿಮ್ಮ ಮಗುವಿಗೆ ಇದೆ ಎಂದರೆ ಅವನನ್ನು ಅಥವಾ ಅವಳನ್ನು ‘ಸೋರ್ ಲೂಸರ್’ ಎನ್ನಬಹುದು ಅಥವಾ ಅವರಿಗೆ ‘ಲೂಸರ್ ಸಿಂಡ್ರೋಮ್’ ಇದೆ ಎನ್ನಬಹುದು. ಅಧ್ಯಯನಗಳ ಪ್ರಕಾರ ಮಕ್ಕಳಿರಲಿ ಅಥವಾ ದೊಡ್ಡವರಿರಲಿ ಸೋತಾಗ ಅವರಿಗೆ ಸೋತ ಬೇಸರಕ್ಕಿಂತ ಬೇರೆಯವರು ತಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ, ಗೆದ್ದಿದ್ದರೆ ನಾನೂ ಉತ್ತಮನೆನಿಸಿಕೊಳ್ಳುತ್ತಿದ್ದೆನೇನೋ ಎನ್ನುವ ಭಾವನೆಯೇ ಹೆಚ್ಚಾಗಿರುತ್ತದೆಯಂತೆ.

ಇದಕ್ಕೆ ಏನು ಮಾಡಬೇಕು?

ಯಾವ ಮಕ್ಕಳೂ ಕೂಡ ಸೋತಾಗ ಸದಾ ಜಗಳ ಆಡುವವರನ್ನು ಅಥವಾ ಸೋಲುತ್ತಾರೆಂದು ಗೊತ್ತಾದಾಗ ಮೋಸ ಮಾಡುವವರ ಅಥವಾ ಅರ್ಧಕ್ಕೆ ಆಟ ಬಿಟ್ಟು ಹೋಗುವವರ ಜೊತೆ ಆಟವಾಡಲು ಬಯಸುವುದಿಲ್ಲ.ಸೋಲನ್ನು ಅಥವಾ ಗೆಲುವನ್ನು ಸಮಾನ ಭಾವದಿಂದ ಸ್ವೀಕರಿಸುವುದು ಅಗತ್ಯ. ಮಕ್ಕಳು ಬಹಳ ಚಿಕ್ಕವರಿರುವಾಗ ಸದಾ ಗೆಲ್ಲಲು ಬಯಸುತ್ತಾರೆ ಮತ್ತು ಆಟದಲ್ಲಿ ಗೆಲ್ಲುವ ಸಲುವಾಗಿ ತಮ್ಮದೇ ನಿಯಮಗಳನ್ನು ರೂಪಿಸುತ್ತಾರೆ. ಆದರೆ ಅವರು ಬೆಳೆಯುತ್ತಿದ್ದಂತೆ ಅವರಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಅರ್ಥ ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಇಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವೆನಿಸಿಕೊಳ್ಳುತ್ತದೆ.

ಅವಕಾಶ, ಅದೃಷ್ಟ

ಗೆಲುವಿಗೆ ಅನೇಕ ಬಾರಿ ಅದೃಷ್ಟ, ಆವಕಾಶ ಅಥವಾ ನಿಮ್ಮ ಶ್ರಮವೂ ಇರಬಹುದು ಎಂದು ಅರ್ಥ ಮಾಡಿಸಿ. ಆದ್ದರಿಂದ ಸೋಲನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಅದಕ್ಕಾಗಿ ಬೇಸರ ಮಾಡಿಕೊಳ್ಳುವ ಅಗತ್ಯವೂ ಇಲ್ಲ ಎಂದು ಮನದಟ್ಟು ಮಾಡಿಸಿ.

ಯಾರನ್ನೂ ದೂಷಿಸಬೇಡಿ

ಯಾವುದೇ ಪಂದ್ಯವನ್ನು ನೋಡುವಾಗ ಆಟದಲ್ಲಿ ನಿಮ್ಮ ನೆಚ್ಚಿನ ತಂಡ ಸೋತಾಗ ಅದಕ್ಕಾಗಿ ಎದುರಾಳಿ ತಂಡವನ್ನು ಅಥವಾ ತೀರ್ಪುಗಾರರನ್ನು ದೂಷಿಸುವ ಅಗತ್ಯವಿಲ್ಲ, ನಿಮ್ಮ ಇಷ್ಟದ ತಂಡ ಗೆದ್ದಿದ್ದರೆ ಚೆನ್ನಾಗಿತ್ತು ಎನ್ನುವ ಭಾವವನ್ನು ಮಾತ್ರ ವ್ಯಕ್ತಪಡಿಸಿ.

ಅರಿವು ಮೂಡಿಸಿ

ಮಕ್ಕಳು ಸಂತೋಷದಿಂದ ಇರುವಾಗ ಆಟದಿಂದ ಆಗುವ ಸಂತೋಷದ ಬಗ್ಗೆ ಮಾತನಾಡಿ. ಸೋಲಲಿ ಅಥವಾ ಗೆಲ್ಲಲಿ ಆಟದಲ್ಲಿ ಭಾಗವಹಿಸಿದಾಗ ಅವರು ತಮ್ಮನ್ನು ತಾವು ಮತ್ತೂ ಉತ್ತಮಪಡಿಸಿಕೊಳ್ಳಬಹುದು ಎನ್ನುವುದನ್ನು ನಿಧಾನವಾಗಿ ವಿವರಿಸಿ.

ಮಕ್ಕಳು ಸೋತಾಗ ಬೇಸರ ತೋರಿಸದಿರಿ

ಅನೇಕ ಬಾರಿ ಮಕ್ಕಳು ಸೋತು ಸುಮ್ಮನಾದರೂ ಪೋಷಕರು ಅದನ್ನು ದೊಡ್ಡದು ಮಾಡುವುದುಂಟು. ಆದ್ದರಿಂದ ಮಗು ಸೋಲನ್ನು ಒಪ್ಪಿಕೊಂಡಾಗ ಸಮಾಧಾನ ಮಾಡಿ, ಸಂತಸ ವ್ಯಕ್ತ ಪಡಿಸಿ ಮತ್ತು ಸೋಲು– ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವೆನ್ನುವುದನ್ನು ನೀವು ತಿಳಿದುಕೊಂಡು, ಅವರಿಗೂ ಅರ್ಥ ಮಾಡಿಸಿ.

ಎಲ್ಲಕ್ಕಿಂತ ಮುಖ್ಯವಾಗಿ ಜೀವನದಲ್ಲಿ ಯಶಸ್ಸನ್ನು ಪಡೆದ ಆದರ್ಶ ಪುರುಷರ ಉದಾಹರಣೆ ನೀಡಿ, ಅವರೂ ಜೀವನದಲ್ಲಿ ಸೋಲನ್ನು ಅನುಭವಿಸಿದ್ದರೆನ್ನುವ ಮಾತನ್ನು ಅವರಿಗೆ ಮನದಟ್ಟು ಮಾಡಿ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವುದನ್ನು ಅರ್ಥ ಮಾಡಿಸಿ. ಆಗ ಖಂಡಿತ ನಿಮ್ಮ ಮಕ್ಕಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಕಲಿಯುತ್ತಾರೆ.

ಸೋಲುವುದನ್ನು ಅರ್ಥ ಮಾಡಿಸಿ

ಮಕ್ಕಳ ಜೊತೆ ಆಟ ಆಡುವಾಗ ಅದರಲ್ಲೂ ಬೋರ್ಡ್ ಗೇಮ್ಸ್‌ನಲ್ಲಿ, ಉದಾಹರಣೆ ಹಾವು– ಏಣಿ ಆಟದಲ್ಲಿ ಏಣಿಯನ್ನು ಹತ್ತಿದಾಗ ಆಗುವ ಸಂತೋಷದ ಜೊತೆ ಹಾವಿನಿಂದ ಇಳಿಯುವುದರಲ್ಲೂ ಮಜಾ ಇದೆ ಎಂದು ಭಾವಿಸಲು ತಿಳಿಸಿ. ಆಡುವಾಗ ನೀವೂ ಅದೇ ರೀತಿ ಮಾಡಿ, ಹಾವಿನಿಂದ ಇಳಿಯುವಾಗ ಜಾರಿದಂತೆ ಸಂಭ್ರಮಿಸಿ, ಆಗ ಮಕ್ಕಳೂ ಹಾಗೆಯೇ ಮಾಡುತ್ತಾರೆ. ಮಕ್ಕಳು ಯಾವಾಗಲೂ ತಂದೆ– ತಾಯಿಯನ್ನು ಅನುಕರಿಸುತ್ತಾರೆ. ಅವರಂತೆಯೇ ಆಗಲು ಬಯಸುತ್ತಾರೆ.

ಕೋಪ ನಿಯಂತ್ರಣ

ಸೋತಾಗ ಆಗುವ ಬೇಸರ, ಕೋಪವನ್ನು ನಿಯಂತ್ರಿಸಲು ಸಹಕರಿಸಿ. ದೀರ್ಘವಾದ ಶ್ವಾಸವನ್ನು ತೆಗೆದುಕೊಳ್ಳಲು ಹೇಳಿ ಮತ್ತು ಹತ್ತರಿಂದ ಸಂಖ್ಯೆಗಳನ್ನು ಉಲ್ಟಾ ಎಣಿಸಲು ಹೇಳಿ. ಅಷ್ಟು ಹೊತ್ತಿಗೆ ಎಲ್ಲವೂ ಸರಿ ಹೋಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT