ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಉಕ್ರೇನ್‌ ಸಂಘರ್ಷ | ಅತ್ತ ಶಾಂತಿ ಮಾತುಕತೆ; ಇತ್ತ ದಾಳಿ–ಪ್ರತಿದಾಳಿ

ಉಕ್ರೇನ್ ವೈಮಾನಿಕ ದಾಳಿಗೆ ರಷ್ಯಾದ ಇಂಧನ ಸಂಗ್ರಹಾಗಾರ ಧ್ವಂಸ
Last Updated 2 ಏಪ್ರಿಲ್ 2022, 1:55 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ 37 ದಿನಗಳನ್ನು ಪೂರೈಸಿದೆ. ಸಂಘರ್ಷ ಶಮನಗೊಳಿಸಲು ಉಭಯ ರಾಷ್ಟ್ರಗಳ ರಾಜತಾಂತ್ರಿಕರ ನಡುವೆ ಶಾಂತಿ ಮಾತುಕತೆ ಒಂದೆಡೆ ನಡೆಯುತ್ತಿದ್ದರೆ, ಪರಸ್ಪರರ ಆಯಕಟ್ಟಿನ ಸೇನಾ ತಾಣಗಳ ಮೇಲೆ ದಾಳಿ– ಪ್ರತಿ ದಾಳಿಇನ್ನೊಂದೆಡೆ ನಿರಂತರವಾಗಿ ನಡೆಯುತ್ತಿದೆ.

ರಷ್ಯಾದ ಬೆಲ್‌ಗೊರೊಡ್‌ ಪಟ್ಟಣದ ಇಂಧನ ಸಂಗ್ರಹಾಗಾರದ ಮೇಲೆ ಉಕ್ರೇನ್‌ ವೈಮಾನಿಕ ದಾಳಿ ನಡೆಸಿದ್ದು, ಬಾಂಬ್‌ ಸ್ಫೋಟಕ್ಕೆ ಸಂಗ್ರಹಾಗಾರ ಹೊತ್ತಿ ಉರಿದಿದೆ. ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಗವರ್ನರ್ ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಶಸ್ತ್ರಾಸ್ತ್ರ ಸಂಘರ್ಷದಲ್ಲಿ ಉಕ್ರೇನ್‌, ಇದೇ ಮೊದಲ ಬಾರಿಗೆರಷ್ಯಾ ನೆಲದಲ್ಲಿ ಘಾತಕ ವೈಮಾನಿಕ ದಾಳಿ ನಡೆಸಿದೆ. ಭಾರೀ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯದ ವಿಡಿಯೊ ತುಣುಕನ್ನು ರಷ್ಯಾದ ತುರ್ತು ಸೇವೆ ಸಚಿವಾಲಯ ಬಿಡುಗಡೆ ಮಾಡಿದೆ.

‘ಉಕ್ರೇನಿನಎರಡು ಸೇನಾ ಹೆಲಿಕಾಪ್ಟರ್‌ಗಳು ನಡೆಸಿದ ವಾಯು ದಾಳಿಯಿಂದಾಗಿ ಪೆಟ್ರೋಲ್ ಸಂಗ್ರಹಾಗಾರದಲ್ಲಿ ಬೆಂಕಿ ಹೊತ್ತಿದೆ. ಹೆಲಿಕಾಪ್ಟರ್‌ಗಳು ಕಡಿಮೆ ಎತ್ತರದಲ್ಲಿ ರಷ್ಯಾದ ವಾಯುಪ್ರದೇಶವನ್ನು ಪ್ರವೇಶಿಸಿವೆ’ ಎಂದು ಬೆಲ್‌ಗೊರೊಡ್ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಟೆಲಿಗ್ರಾಮ್‌ನಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಈ ಸಂಗ್ರಹಾಗಾರವು ರಷ್ಯಾದ ತೈಲ ದೈತ್ಯ ಕಂಪನಿ ರೋಸ್ನೆಪ್ಟ್‌ ಒಡೆತನದ್ದು. ಘಟನಾ ಸ್ಥಳದಿಂದ ಕಂಪನಿಯು ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ.

ಬೆಲ್‌ಗೊರೊಡ್‌ನಲ್ಲಿ ರಷ್ಯಾ ಸೇನೆಯ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿಈ ವಾರದ ಆರಂಭದಲ್ಲಿ ಭಾರೀ ಸ್ಫೋಟಗಳು ಕೇಳಿಬಂದಿದ್ದವು. ಆದರೆ, ಸೇನಾ ಅಧಿಕಾರಿಗಳು ಸ್ಫೋಟಗಳಿಗೆ ಸ್ಪಷ್ಟ ವಿವರಣೆ ನೀಡಿರಲಿಲ್ಲ.‌

ಉಕ್ರೇನಿನಿಂದ ಕ್ಷಿಪಣಿ ದಾಳಿ ನಡೆದಿರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು.

ರಷ್ಯಾ ರಕ್ಷಣಾ ಸಚಿವಾಲಯ ಪ್ರತ್ಯೇಕ ಹೇಳಿಕೆಯಲ್ಲಿ, ‘ಉಕ್ರೇನಿನಲ್ಲಿ ಐದು ಶಸ್ತ್ರಾಸ್ತ್ರ ಸಂಗ್ರಾಹಾಗಾರ, ಕ್ಷಿಪಣಿಗಳು ಮತ್ತು ಫಿರಂಗಿಗಳು ಸೇರಿ ಆರು ಸೇನಾ ಸೌಲಭ್ಯಗಳ ತಾಣಗಳನ್ನು ನಾಶಪಡಿಸಲಾಗಿದೆ’ ಎಂದು ಹೇಳಿದೆ.‌

ನಾಗರಿಕರ ಸ್ಥಳಾಂತರ ಕಷ್ಟ: ರಷ್ಯಾದ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರನ್ನು ಯುದ್ಧಪೀಡಿತ ಸ್ಥಳ ಗಳಿಂದ ಸ್ಥಳಾಂತರಿಸಲು ಸಾಧ್ಯವಾಗಲಿದೆಯೇ ಎಂಬುದನ್ನು ಖಚಿತಪಡಿಸ ಲಾಗದು ಎಂದು ರೆಡ್ ಕ್ರಾಸ್ ಸಂಸ್ಥೆಯ ಅಂತರರಾಷ್ಟ್ರೀಯ ಸಮಿತಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಮರಿಯುಪೊಲ್‌ ನಗರಕ್ಕೆ ನೆರವು ಕಲ್ಪಿಸುವುದನ್ನು ಖಾತ್ರಿಪಡಿಸಲಾಗದು ಎಂದಿದೆ.

37ನೇದಿನದಬೆಳವಣಿಗೆಗಳು

l ಮುತ್ತಿಗೆ ಹಾಕಿರುವಮರಿಯುಪೊಲ್‌ ಸೇರಿ ದೇಶದ ಪೂರ್ವ ಮತ್ತು ದಕ್ಷಿಣದಲ್ಲಿ ಭಾರೀ ದಾಳಿ ನಡೆಸಲು ರಷ್ಯಾ ತನ್ನ ಸೇನಾ ಪಡೆಗಳನ್ನು ಮರುಸಂಯೋಜಿಸಿ ಬಲಗೊಳಿಸುತ್ತಿದೆ. ಮರಿಯುಪೊಲ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಮತ್ತಷ್ಟು ಹೊಸ ಪ್ರಯತ್ನ ಮಾಡಲಾಗುವುದು– ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ

l ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭಾರತವು ನ್ಯಾಯ ಮತ್ತು ತರ್ಕಬದ್ಧ ನೀತಿ ಹೊಂದಿದೆ. ಉಕ್ರೇನ್‌ ಬಿಕ್ಕಟ್ಟು ಪರಿಹರಿಸಲು ಭಾರತ ಸಶಕ್ತವಾಗಿದೆ. ಭಾರತ ಅಮೆರಿಕದ ಪ್ರಭಾವಕ್ಕೆ ಒಳಗಾಗುವುದಿಲ್ಲ – ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್‌ ಹೇಳಿಕೆ

l ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದಲ್ಲಿ ರಷ್ಯಾ ಪಡೆಗಳಿಗೆ ನಾಯಕತ್ವ ಕೊರತೆ ಇದೆ. ಭೂ, ವಾಯು, ನೌಕಾ ಪಡೆಗಳ ನಡುವೆ ಸಮನ್ವಯವೂ ಇಲ್ಲ. ಜತೆಗೆಕಳಪೆ ಯುದ್ಧತಂತ್ರಗಳಿಂದ ಸುಮಾರು 7,000 ದಿಂದ 15,000 ಸೈನಿಕರನ್ನು ರಷ್ಯಾ ಕಳೆದುಕೊಂಡಿದೆ– ಅಮೆರಿಕ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳ ವಿಶ್ಲೇಷಣೆ

l ಬ್ರಸೆಲ್ಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಉಕ್ರೇನ್‌ ಬಿಕ್ಕಟ್ಟು ಪ್ರಮುಖ ಚರ್ಚೆಯ ವಿಷಯವಾಗಿತ್ತು.ರಷ್ಯಾಗೆ ಸಹಾಯ ಮಾಡದಂತೆ ಐರೋಪ್ಯ ಒಕ್ಕೂಟವು ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಅವರಿಗೆ ಮನವಿ ಮಾಡಿತು

l ಉಕ್ರೇನ್‌ನಲ್ಲಿ ಯುದ್ಧಕ್ಕೆ ಅಮೆರಿಕ ಪ್ರಚೋದನೆ ನೀಡುತ್ತಿದೆ. ಸೋವಿಯತ್ ಒಕ್ಕೂಟದ ವಿಭಜನೆಯ ಬಳಿಕ ನ್ಯಾಟೊ ಕೂಡ ವಿಸರ್ಜಿಸಬೇಕಿತ್ತು
– ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್

l ಯುರೋಪ್‌ಗೆ ಅನಿಲ ಪೂರೈಕೆಯನ್ನು ರಷ್ಯಾ ಸ್ಥಗಿತಗೊಳಿಸುವುದಿಲ್ಲ ಎಂದು ಕ್ರೆಮ್ಲಿನ್‌ ವಕ್ತಾರ ಪೆಸ್ಕೊವ್‌ ಹೇಳಿದ್ದಾರೆ

l ಆಸ್ಟ್ರೇಲಿಯಾದ ಸಂಸತ್‌ ಉದ್ದೇಶಿಸಿ ಭಾವನ್ಮಾತಕ ಭಾಷಣ ಮಾಡಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ‘ರಷ್ಯಾ ನಿಜವಾಗಿಯೂ ಆಸ್ಟ್ರೇಲಿಯಾಕ್ಕೂ ಅಪಾಯಕಾರಿ’ ಎಂದು ಎಚ್ಚರಿಸಿದ್ದಾರೆ

l 10 ಸಾವಿರ ಉಕ್ರೇನ್‌ ನಿರಾಶ್ರಿತರಿಗೆ ಆಶ್ರಯ ನೀಡಲು ಸಿದ್ಧತೆಯಲ್ಲಿರುವ ಅಮೆರಿಕವು, ಆಫ್ರಿಕಾದ ನಿರಾಶ್ರಿತರನ್ನು ಬಲವಂತವಾಗಿ ಗಡೀಪಾರು ಮಾಡಲು ಸಜ್ಜಾಗಿದೆ ಎಂದು ಆಫ್ರಿಕಾದ ನಿರಾಶ್ರಿತರು ಆರೋಪಿಸಿದ್ದಾರೆ

l ರಷ್ಯಾದ ಪಡೆಗಳು ಚೆರ್ನೊಬಿಲ್ ಅಣು ವಿದ್ಯುತ್ ಸ್ಥಾವರ ತೊರೆದಿದ್ದು, ಸ್ಥಾವರನ್ನು ಉಕ್ರೇನ್‌ ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ರಷ್ಯಾಯೋಧರು ಹಾನಿ ಮಾಡಿದ್ದಾರೆಯೇ ಎನ್ನುವುದನ್ನು ವಿಶ್ವಸಂಸ್ಥೆಯ ಅಣು ಏಜೆನ್ಸಿ ಜೊತೆಗೂಡಿ ಪರಿಶೀಲಿಸಲಾಗುವುದು– ಉಕ್ರೇನ್ ವಿದೇಶಾಂಗ ಸಚಿವಡಿಮಿಟ್ರಿ ಕುಲೆಬಾ

l ರಷ್ಯಾದ ಪಡೆಗಳನ್ನು ಕೀವ್‌ನಿಂದ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ, ರಾಜಧಾನಿಗೆ ಸಮೀಪವಿರುವ ಕೆಲವು ಪ್ರದೇಶಗಳಲ್ಲಿ ಹೋರಾಟ ತೀವ್ರಗೊಂಡಿದೆ– ಉಕ್ರೇನ್‌ ಅಧಿಕಾರಿಗಳ ಹೇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT