ಸೋಮವಾರ, ಜನವರಿ 24, 2022
20 °C

ಹುಡುಗರು ಉದ್ವೇಗದಿಂದ ಹೀಗೆ ಮಾಡುತ್ತಾರೆ: ಲಂಕಾ ಪ್ರಜೆ ಹತ್ಯೆ ಬಗ್ಗೆ ಪಾಕಿಸ್ತಾನ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಾಹೋರ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಕಳೆದ ಶುಕ್ರವಾರ ನಡೆದ ಶ್ರೀಲಂಕಾ ಪ್ರಜೆ ಪ್ರಿಯಾಂತ ಕುಮಾರ್‌ ದಿಯಾವಾದಾನ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ರಕ್ಷಣಾ ಸಚಿವ ಪರ್ವೇಜ್‌ ಖಾತಕ್‌, 'ಹುಡುಗರು ಉದ್ವೇಗಕ್ಕೆ ಒಳಗಾಗಿ ಹೀಗೆಲ್ಲ ಮಾಡುತ್ತಾರೆ' ಎಂದಿದ್ದಾರೆ.

'ಧಾರ್ಮಿಕ ಭಾವೋದ್ರೇಕದಿಂದ ಹುಡುಗರು ಹೀಗೆಲ್ಲ ಮಾಡುತ್ತಾರೆ. ನಾನೇ ಆಗಿದ್ದರೂ ಧಾರ್ಮಿಕ ವಿಚಾರಕ್ಕೆ ಬಂದಾಗ ಉದ್ರಿಕ್ತನಾಗಿ ತಪ್ಪು ಮಾಡುತ್ತಿದ್ದೆ. ಇದಕ್ಕೆ ಸರ್ಕಾರವನ್ನು ಹೊಣೆಯಾಗಿಸುವುದು ಸರಿಯಲ್ಲ. ಸರ್ಕಾರವನ್ನು ದೂಷಿಸುವ ಬದಲು ಮಾಧ್ಯಮಗಳು ಜನರಿಗೆ ಇಂತಹ ಘಟನೆ ಯಾಕೆ ನಡೆಯಿತು ಎಂಬುದನ್ನು ತಿಳಿಸಿಕೊಡಬೇಕು. ಅದು ಮಾಧ್ಯಮಗಳ ಜವಾಬ್ದಾರಿ' ಎಂದು ಪರ್ವೇಜ್‌ ಖಾತಕ್‌ ಹೇಳಿದ್ದಾರೆ.

ಒಂದೆಡೆ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಕೃತ್ಯದಲ್ಲಿ ಭಾಗಿಯಾದವರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿದ ಬೆನ್ನಲ್ಲೇ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ‘ಶ್ರೀಲಂಕಾ ಪ್ರಜೆಯ ಹತ್ಯೆಗೆ ನ್ಯಾಯ ದೊರೆಯಲಿದೆ. ಉದ್ರಿಕ್ತ ಗುಂಪಿನ ಆರೋಪಿಗಳಿಗೆ ಯಾವುದೇ ಕರುಣೆಯಿಲ್ಲದೆ ಶಿಕ್ಷೆ ನೀಡಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರಿಗೆ ಭರವಸೆ ನೀಡಿದ್ದಾರೆ’ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.

ಇಮ್ರಾನ್‌ ಖಾನ್‌ ಅವರು ರಾಜಪಕ್ಸೆ ಅವರಿಗೆ ದೂರವಾಣಿ ಕರೆ ಮಾಡಿದ್ದು, ಘಟನೆ ಸಂಬಂಧ ಇದುವರೆಗೆ 113 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿರುವುದಾಗಿ ಕಚೇರಿ ಹೇಳಿದೆ.

ಪ್ರಿಯಾಂತ ಕುಮಾರ್‌ ದಿಯಾವಾದಾನ ಅವರು ಇಸ್ಲಾಮ್‌ನ ಪವಿತ್ರ ಶ್ಲೋಕಗಳುಳ್ಳ ಪೋಸ್ಟರ್‌ ಒಂದನ್ನು ಹರಿದು ಹಾಕುವ ಮೂಲಕ ಧರ್ಮ ನಿಂದನೆ ಮಾಡಿದ್ದಾರೆ ಎಂಬ ವರದಿಯಿಂದ ಉದ್ರಿಕ್ತ ಗುಂಪು ತೀವ್ರ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಕೊಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು